ಶಾಲಾ-ಕಾಲೇಜು ಅವಧಿಗೆ ಬಸ್ ವ್ಯವಸ್ಥೆ ಆಗ್ರಹಿಸಿ ವಿದ್ಯಾರ್ಥಿಗಳ ದಿಢೀರ್ ಹೆದ್ದಾರಿ ತಡೆ
ಕಳ್ಳಿಪಾಳ್ಯ ಗೇಟ್‌ನಿಂದ ಗುಬ್ಬಿ ಮತ್ತು ತುಮಕೂರು ಕಡೆಗೆ ಶಾಲೆ ಮತ್ತು ಕಾಲೇಜಿಗೆ ತೆರಳುವ ನೂರಾರು ವಿದ್ಯಾರ್ಥಿಗಳು ಬೆಳಿಗ್ಗೆ 7 ರಿಂದ 9 ಗಂಟೆಯವರೆಗೆ ಕಾದರೂ ಬಸ್ಸು ಬಾರದ ಹಿನ್ನಲೆ ಆಕ್ರೋಶಗೊಂಡ ವಿದ್ಯಾರ್ಥಿಗಳು ದಿಢೀರ್ ರಸ್ತೆಗಿಳಿದು ಸ್ಥಳೀಯ ಸಾರ್ವಜನಿಕರ ಸಹಕಾರದಲ್ಲಿ ಕೆಲಕಾಲ ಚತುಷ್ಪಥ ಹೆದ್ದಾರಿ ತಡೆದು ಶಾಲಾ ವೇಳೆಗೆ ಬಸ್ ಸಂಚಾರಕ್ಕೆ ಒತ್ತಾಯಿಸಿದರು.
-
ಗುಬ್ಬಿ: ಶಾಲಾ ಕಾಲೇಜು ಸಮಯಕ್ಕೆ ಸರಿಯಾಗಿ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಗುಬ್ಬಿ ತಾಲೂಕಿನ ಕಳ್ಳಿಪಾಳ್ಯ ಗೇಟ್ ಸಮೀಪ ರಾಷ್ಟ್ರೀಯ ಹೆದ್ದಾರಿ-73 ತಡೆದ ವಿದ್ಯಾರ್ಥಿಗಳು ರಸ್ತೆ ಮೇಲೆ ಕುಳಿತು ಸಕಾಲಕ್ಕೆ ಬಸ್ ವ್ಯವಸ್ಥೆ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಕಳ್ಳಿಪಾಳ್ಯ ಗೇಟ್‌ನಿಂದ ಗುಬ್ಬಿ ಮತ್ತು ತುಮಕೂರು ಕಡೆಗೆ ಶಾಲೆ ಮತ್ತು ಕಾಲೇಜಿಗೆ ತೆರಳುವ ನೂರಾರು ವಿದ್ಯಾರ್ಥಿಗಳು ಬೆಳಿಗ್ಗೆ 7 ರಿಂದ 9 ಗಂಟೆಯವರೆಗೆ ಕಾದರೂ ಬಸ್ಸು ಬಾರದ ಹಿನ್ನಲೆ ಆಕ್ರೋಶಗೊಂಡ ವಿದ್ಯಾರ್ಥಿಗಳು ದಿಢೀರ್ ರಸ್ತೆಗಿಳಿದು ಸ್ಥಳೀಯ ಸಾರ್ವಜನಿಕರ ಸಹಕಾರದಲ್ಲಿ ಕೆಲಕಾಲ ಚತುಷ್ಪಥ ಹೆದ್ದಾರಿ ತಡೆದು ಶಾಲಾ ವೇಳೆಗೆ ಬಸ್ ಸಂಚಾರಕ್ಕೆ ಒತ್ತಾಯಿಸಿದರು.
ಇದನ್ನೂ ಓದಿ: Gubbi News: ಸರ್ವ ರೋಗಕ್ಕೂ ಸಿರಿಧಾನ್ಯವೇ ಮದ್ದು : ಆಹಾರ ತಜ್ಞ ಡಾ.ಖಾದರ್
ಪ್ರತಿದಿನ ಈ ಮಾರ್ಗದಲ್ಲಿ ಹತ್ತಾರು ಬಸ್ಸುಗಳು ಓಡಾಡುತ್ತವೆ. ಆದರೆ ಸಂಚರಿಸುವ ಎಲ್ಲಾ ಕೆಎಸ್‌ಆರ್‌ಟಿಸಿ ಬಸ್‌ಗಳು ಕಳ್ಳಿಪಾಳ್ಯ ಗೇಟ್ ಬಳಿಯ ನಿಲ್ದಾಣದಲ್ಲಿ ವಿದ್ಯಾರ್ಥಿಗಳನ್ನು ಹತ್ತಿಸಿ ಕೊಳ್ಳದೆ ವೇಗವಾಗಿ ತೆರಳುತ್ತಿವೆ. ಕೊನೆಯಲ್ಲಿ ಯಾವುದಾದರೂ ಒಂದು ಬಸ್ ನಿಲ್ಲಿಸಿದರೆ ಅತಿ ಯಾದ ಜನಸಂದಣಿ ಇರುವುದರಿಂದ ವಿದ್ಯಾರ್ಥಿಗಳು ಪ್ರತಿನಿತ್ಯ ಶಾಲಾ-ಕಾಲೇಜುಗಳಿಗೆ ಸಮಯಕ್ಕೆ ಸರಿಯಾಗಿ ತಲುಪಲು ಪರದಾಡುವ ಪರಿಸ್ಥಿತಿ ಎದುರಾಗಿದೆ ಎಂದು ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡರು.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಜೆಡಿಎಸ್ ಮುಖಂಡ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ ಕಳ್ಳಿಪಾಳ್ಯ, ಅಡಗೂರು, ಧೂಳನಹಳ್ಳಿ, ಹೊಸಪಾಳ್ಯ ಸೇರಿದಂತೆ ಐದಾರು ಹಳ್ಳಿಗಳಿಂದ ನಿತ್ಯ ನೂರಾರು ವಿದ್ಯಾರ್ಥಿಗಳು ಗುಬ್ಬಿ ಮತ್ತು ತುಮಕೂರಿಗೆ ಶಾಲೆಗೆ ತೆರಳುತ್ತಾರೆ. ಬಹುತೇಕ ಕೂಲಿ ಕಾರ್ಮಿಕರ ಬಡ ಮಕ್ಕಳು ಸರ್ಕಾರಿ ಬಸ್ ವಿದ್ಯಾಭ್ಯಾಸಕ್ಕೆ ಹೋಗುತ್ತಾರೆ. ಸರ್ಕಾರಿ ಬಸ್ ಸಿಗದೇ ಹೋದರೆ ಮಕ್ಕಳು ಬೇರೆ ವಾಹನ ಇಲ್ಲಿ ಸಿಗುವುದಿಲ್ಲ.
ನಿತ್ಯ ಶಾಲಾ ಕಾಲೇಜು ತಡವಾಗಿ ಹೋಗಿ ಮಕ್ಕಳು ಬೈಗುಳ ಕೇಳಿದ್ದಾರೆ. ವರ್ಗಾವಣೆ ಪತ್ರ ತೆಗೆದುಕೊಂಡು ಹೋಗಲು ಶಾಲಾ ಕಾಲೇಜುಗಳಲ್ಲಿ ಹೇಳಿದ್ದಾರೆ. ಈ ಪರಿಸ್ಥಿತಿಯಲ್ಲಿ ಮಕ್ಕಳು ಶಿಕ್ಷಣ ಮೊಟಕು ಆಗುತ್ತದೆ. ಗ್ಯಾರಂಟಿ ಹೆಸರಿನ ಬಿಟ್ಟಿ ಭಾಗ್ಯ ಯೋಜನೆ ಫಲ ನಮ್ಮ ಮಕ್ಕಳಿಗೆ ಸಮಯಕ್ಕೆ ಬಸ್ ವ್ಯವಸ್ಥೆ ಇಲ್ಲವಾಗಿದೆ ಸಂಬಂಧಪಟ್ಟ ಸಾರಿಗೆ ಸಂಸ್ಥೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.
ನಂತರ ಮಾಹಿತಿ ಆಧರಿಸಿ ಸ್ಥಳಕ್ಕೆ ಆಗಮಿಸಿದ ಗುಬ್ಬಿ ಸಿಪಿಐ ರಾಘವೇಂದ್ರ ನೇತೃತ್ವದ ಪೊಲೀಸ್ ತಂಡ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಬಸ್ ವ್ಯವಸ್ಥೆ ಮಾಡಲು ಸಾರಿಗೆ ಅಧಿಕಾರಿಗಳ ಜೊತೆ ಮಾತನಾಡುವ ಭರವಸೆ ನೀಡಿದ ಬಳಿಕ ವಿದ್ಯಾರ್ಥಿಗಳು ಪತಿಭಟನೆ ಹಿಂಪಡೆದರು.