ಚಿನ್ನದ ಪದಕದ ಬದಲು ಚೆಕ್ ನೀಡಲು ಮುಂದಾದ ತುಮಕೂರು ವಿವಿ; ವಿದ್ಯಾರ್ಥಿಗಳ ಪ್ರತಿಭಟನೆ
Tumkur News: ತುಮಕೂರು ವಿಶ್ವವಿದ್ಯಾಲಯದ 19ನೇ ಘಟಿಕೋತ್ಸವದಲ್ಲಿ ಗೋಲ್ಡ್ ಮೆಡಲಿಸ್ಟ್ ವಿದ್ಯಾರ್ಥಿಗಳಿಗೆ ಚಿನ್ನದ ಪದಕದ ಬದಲು ವಿವಿ ವತಿಯಿಂದ ಚೆಕ್ ನೀಡಲು ಮುಂದಾದಾಗ ವಿದ್ಯಾರ್ಥಿಗಳು ಚೆಕ್ ವಾಪಸ್ ನೀಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಚಾರ ಭಾರಿ ಸದ್ದು ಮಾಡುತ್ತಿದೆ.
ತುಮಕೂರು ವಿವಿಯಲ್ಲಿ ಪ್ರತಿಭಟನೆ ನಡೆಯಿತು -
ತುಮಕೂರು, ಜೂ. 4: ತುಮಕೂರು ವಿಶ್ವವಿದ್ಯಾಲಯದ 19ನೇ ಘಟಿಕೋತ್ಸವದಲ್ಲಿ (Tumkur News) ಗೋಲ್ಡ್ ಮೆಡಲಿಸ್ಟ್ ವಿದ್ಯಾರ್ಥಿಗಳಿಗೆ ಚಿನ್ನದ ಪದಕದ ಬದಲು ವಿವಿ ವತಿಯಿಂದ ಚೆಕ್ ನೀಡಲು ಮುಂದಾದಾಗ ವಿದ್ಯಾರ್ಥಿಗಳು ಚೆಕ್ ವಾಪಾಸ್ ನೀಡಿ ಪ್ರತಿಭಟಿಸಿ, ಅಸಮಾಧಾನ ವ್ಯಕ್ತಪಡಿಸಿದರು. ಮಧ್ಯ ಪ್ರದೇಶದ ಇಂದೋರ್ ಮೂಲದ ವಿಪುಲ್ ಜೈನ್ ಎಂಬಾತ ಪ್ರತಿ ಬಾರಿ ಟೆಂಡರ್ ಪಡೆದು ಚಿನ್ನದ ಪದಕಗಳನ್ನು ತಯಾರಿಸಿ ನೀಡುತ್ತಿದ್ದರು. ಆದರೆ ಈ ಬಾರಿ ಹಣ ಪಡೆದು ಚಿನ್ನದ ಪದಕ ತಯಾರಿಸುವ ನಿರ್ಲಕ್ಷ ವಹಿಸಿ ವಿಳಂಬ ಮಾಡಿದ ಹಿನ್ನೆಲೆಯಲ್ಲಿ 19ನೇ ಘಟಿಕೋತ್ಸವ ಗೊಂದಲಕ್ಕೆ ಕಾರಣವಾಯಿತು.
ಹಲವು ವರ್ಷಗಳಿಂದ ಕಠಿಣ ಶ್ರಮವಹಿಸಿ ಅಧ್ಯಯನ ಮಾಡಿ ಚಿನ್ನದ ಪದಕ ಪಡೆಯುವ ಆಸೆಯಲ್ಲಿದ್ದ ವಿದ್ಯಾರ್ಥಿಗಳು ವಿಶ್ವ ವಿದ್ಯಾಲಯದ ಯಡವಟ್ಟಿನಿಂದಾಗಿ ಕೊನೆ ಕ್ಷಣದಲ್ಲಿ ಚಿನ್ನದ ಪದಕದ ಬದಲಿಗೆ 5,499 ರುಪಾಯಿ ಚೆಕ್‌ಗಳನ್ನು ನೀಡಲು ಮುಂದಾದ ವಿವಿ ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದರು.
ಚಿನ್ನದ ಪದಕ ನೀಡಬೇಕಾದ ಗುತ್ತಿಗೆದಾರ ನಿರ್ಲಕ್ಷ್ಯ
ತುಮಕೂರು ವಿವಿ ಆಡಳಿತ ಮಂಡಳಿಯು ಚಿನ್ನದ ಪದಕಗಳ ತಯಾರಿಕೆ ಮತ್ತು ವಿತರಣೆಗಾಗಿ ಮಧ್ಯ ಪ್ರದೇಶ ಮೂಲದ ವಿಪುಲ್ ಜೈನ್ ಎಂಬಾತನಿಗೆ ಗುತ್ತಿಗೆ ನೀಡಲಾಗಿತ್ತು. ಸುಮಾರು 7 ಲಕ್ಷ 90 ಸಾವಿರ ರುಪಾಯಿ ವೆಚ್ಚದಲ್ಲಿ 119 ಚಿನ್ನ ಲೇಪಿತ ಬೆಳ್ಳಿ ಪದಕಗಳನ್ನು ತಯಾರಿಸುವ ಜವಾಬ್ದಾರಿ ನೀಡಲಾಗಿತ್ತು. ಆದರೆ ಘಟಿಕೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಗುತ್ತಿಗೆದಾರ ಸಂಪರ್ಕಕ್ಕೆ ಸಿಗದೇ ನಿರ್ಲಕ್ಷವಹಿಸಿದ್ದು, ಪರಿಣಾಮವಾಗಿ ಪದಕಗಳು ವಿಶ್ವವಿದ್ಯಾಲಯಕ್ಕೆ ತಲುಪಲೇ ಇಲ್ಲ. ಆದ್ದರಿಂದ ಆಡಳಿತ ಮಂಡಳಿ ಪದಕಗಳ ಬದಲಿಗೆ ಹಣದ ಚೆಕ್ ನೀಡಲು ಮುಂದಾದಾಗ ಚೆಕ್ ವಾಪಾಸ್ ನೀಡಿ ವಿದ್ಯಾರ್ಥಿಗಳು ವೇದಿಕೆಯ ಮೇಲೆಯೇ ಆಕ್ರೋಶ ವ್ಯಕ್ತಪಡಿಸಿ, ನಮಗೆ ಹಣ ಬೇಡ, ನಾವು ಗಳಿಸಿದ ಚಿನ್ನದ ಪದಕವೇ ಬೇಕು ಎಂದು ಪಟ್ಟು ಹಿಡಿದರು. ಗುತ್ತಿಗೆದಾರನ ವಂಚನೆ, ತುಮಕೂರು ವಿವಿ ಆಡಳಿತ ಮಂಡಳಿ ಯಡವಟ್ಟಿನಿಂದಾಗಿ ನಮಗೆ ಅನ್ಯಾಯವಾಗಿದೆ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು.
ತುಮಕೂರು ವಿವಿ ಆಡಳಿತ ಮಂಡಳಿ ಚಿನ್ನದ ಪದಕಗಳ ತಯಾರಿಕೆಗೆ ಮಧ್ಯಪ್ರದೇಶ ಮೂಲದ ವ್ಯಕ್ತಿಗೆ ಗುತ್ತಿಗೆ ನೀಡಿರುವುದು ಇದೀಗ ಹಲವು ಅನುಮಾನಕ್ಕೆ ಕಾರಣವಾಗಿದೆ. ಕರ್ನಾಟಕದಲ್ಲೇ ಹಲವು ಸಂಸ್ಥೆಗಳು, ಗುತ್ತಿಗೆದಾರರು ಲಭ್ಯವಿದ್ದರೂ ಅನ್ಯರಾಜ್ಯದ ವ್ಯಕ್ತಿಗೆ ಟೆಂಡರ್ ನಡೆಯುವುದು ಸಮಂಜಸವಲ್ಲ ಎಂದು ವಿದ್ಯಾರ್ಥಿಗಳು, ಪೋಷಕರು ಕಿಡಿಕಾರಿದರು.
76ನೇ ವರ್ಷದಲ್ಲಿ LLMನಲ್ಲಿ 4ನೇ ರ‍್ಯಾಂಕ್ ಪಡೆದ ನಿವೃತ್ತ ಅಧಿಕಾರಿ ವಿ. ತಿಪ್ಪೇಸ್ವಾಮಿ
ಮಧ್ಯ ಪ್ರದೇಶದ ವಿಪುಲ್ ಜೈನ್ ಚಿನ್ನದ ಪದಕಗಳನ್ನು ತಯಾರಿಸಿಕೊಂಡು ಜೂನ್ 5ರಂದು ಆಗಮಿಸುವ ನಿರೀಕ್ಷೆಯಿದ್ದು, ವಿದ್ಯಾರ್ಥಿಗಳಿಗೆ ಚಿನ್ನದ ಪದಕ ವಿತರಿಸಲಾಗುವುದೆಂದು ವಿವಿ ಆಡಳಿತ ಮಂಡಳಿ ತಿಳಿಸಿದೆ. ಪ್ರತಿ ಬಾರಿ ಸರಿಯಾದ ಸಮಯಕ್ಕೆ ಪದಕ ನೀಡುತ್ತಿದ್ದ ವಿಪುಲ್ ಜೈನ್ ಈ ಬಾರಿ ನಿರ್ಲಕ್ಷ ವಹಿಸಿರುವ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಂಡು ಕರ್ನಾಟಕ ಮೂಲದ ವ್ಯಕ್ತಿಗೆ ಟೆಂಡರ್ ನೀಡುವಂತೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.