ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Abu Dhabi Big Ticket: ಉಡುಪಿ ಯುವಕನಿಗೆ ಒಲಿದ ಅದೃಷ್ಟ; ಅಬುಧಾಬಿ ಲಾಟರಿಯಲ್ಲಿ ಸಿಕ್ತು 49 ಕೋಟಿ ಬಹುಮಾನ!

Shantanu Shetty: ಉಡುಪಿ ಜಿಲ್ಲೆ ಕಾಪು ತಾಲೂಕು ಕಟಪಾಡಿ ಮಟ್ಟು ಮೂಲದ ಶಾಂತನು ಶೆಟ್ಟಿ ಎಂಬ ಯುವಕನಿಗೆ ಅಬುಧಾಬಿ ಬಿಗ್‌ ಟಿಕೆಟ್‌ ಡ್ರಾನಲ್ಲಿ 49 ಕೋಟಿ ರೂ. ಬಹುಮಾನ ಸಿಕ್ಕಿದೆ. ಸ್ನೇಹಿತನೊಟ್ಟಿಗೆ ಟಿಕೆಟ್‌ ಖರೀದಿಸಿದ್ದರಿಂದ, ಅರ್ಧ ಹಣವಾದ 24.5 ಕೋಟಿ ರೂ.ಗಳನ್ನು ಸ್ನೇಹಿತನಿಗೆ ನೀಡುವುದಾಗಿ ಯುವಕ ತಿಳಿಸಿದ್ದಾರೆ.

ಅಬುಧಾಬಿ ಲಾಟರಿಯಲ್ಲಿ 49 ಕೋಟಿ ರೂ. ಗೆದ್ದ ಉಡುಪಿ ಯುವಕ!

ಅಬುಧಾಬಿ ಬಿಗ್‌ ಟಿಕೆಟ್‌ ವಿಜೇತ ಶಾಂತನು ಶೆಟ್ಟಿ. -

Prabhakara R
Prabhakara R Feb 5, 2026 7:16 PM

ಉಡುಪಿ: ಜಿಲ್ಲೆಯ ಯುವಕನೊಬ್ಬನಿಗೆ ಅಬುಧಾಬಿಯಲ್ಲಿ ಬಂಪರ್‌ ಲಾಟರಿ ಹೊಡೆದಿದೆ. ಕಾಪು ತಾಲೂಕು ಕಟಪಾಡಿ ಮಟ್ಟು ಮೂಲದ ಶಾಂತನು ಶೆಟ್ಟಿಗೆ (Shantanu Shetty) ಅಬುಧಾಬಿ ಬಿಗ್‌ ಟಿಕೆಟ್‌ ಡ್ರಾನಲ್ಲಿ (Abu Dhabi Big Ticket) 49 ಕೋಟಿ ರೂ. ಬಹುಮಾನ ಸಿಕ್ಕಿದ್ದು, ಇದರಿಂದ ಯುವಕನ ಮನೆಯಲ್ಲಿ ಸಂಭ್ರಮ ಮನೆಮಾಡಿದೆ. ಬಂಪರ್‌ ಲಾಟರಿ ಗೆದ್ದ ಯುವಕ, ಓಮನ್‌ ಶಾಪಿಂಗ್ ಮಾಲ್‌ನ ಸೇಲ್ಸ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾನೆ.

33 ವರ್ಷದ ಶಾಂತನು ಶೆಟ್ಟಿ ಜನವರಿ 20 ರಂದು ಬಿಗ್‌ ಟಿಕೆಟ್‌ ಖರೀದಿ ಮಾಡಿದ್ದರು. ಇವರ ಲಾಟರಿ ಟಿಕೆಟ್‌ ಸಂಖ್ಯೆ 305810 ಆಗಿತ್ತು. ಫೆಬ್ರವರಿ 3 ರಂದು ಲಾಟರಿ ಡ್ರಾ ಮಾಡಿದ್ದು, ಶಾಂತನು ಹಾಗೂ ಇವರ ಸ್ನೇಹಿತನಿಗೆ ಅದೃಷ್ಟ ಖುಲಾಯಿಸಿದೆ. ಸ್ನೇಹಿತನೊಟ್ಟಿಗೆ ಟಿಕೆಟ್‌ ಖರೀದಿಸಿದ್ದರಿಂದ, ಅರ್ಧ ಹಣವಾದ 24.5 ಕೋಟಿ ರೂ.ಗಳನ್ನು ಸ್ನೇಹಿತನಿಗೆ ನೀಡುವುದಾಗಿ ಶಾಂತನು ಶೆಟ್ಟಿ ತಿಳಿಸಿದ್ದಾರೆ.

ಶಾಂತನು ಎಂಟು ವರ್ಷಗಳಿಂದ ಒಮಾನ್‌ ರಾಜಧಾನಿಯಲ್ಲಿ ವಾಸಿಸುತ್ತಿದ್ದಾರೆ. ಆರಂಭದಲ್ಲಿ ಇಲ್ಲಿನ ಸಹೋದ್ಯೋಗಿಗಳು ಬಿಗ್ ಟಿಕೆಟ್‌ ಖರೀದಿ ಮಾಡುತ್ತಿದ್ದರು. ಇದನ್ನು ಕಂಡು ನಾನು ಖರೀದಿಸಬೇಕು ಎಂದುಕೊಂಡ ಶಾಂತನು ಅವರು ಮೊದಲು ಒಬ್ಬರೇ 15 ಸಾವಿರ ರೂ. ಕೊಟ್ಟು ಟಿಕೆಟ್‌ ಖರೀದಿ ಮಾಡುತ್ತಿದ್ದರು. ಆ ಬಳಿಕ ಖರ್ಚು ಹೆಚ್ಚಾಗುತ್ತದೆ ಎಂದು ಗೆಳೆಯರೊಟ್ಟಿಗೆ ಸೇರಿ ಖರೀದಿಸುತ್ತಿದ್ದರಂತೆ.

ಈ ಗೆಲುವನ್ನು ನನಗೆ ತಂದುಕೊಟ್ಟ ಟಿಕೆಟ್ ಅನ್ನು ನಾನು ಮತ್ತು ನನ್ನ ಗೆಳೆಯ ಒಟ್ಟಿಗೆ ಖರೀದಿಸಿದ್ದೆವು. ನಾವು ಗೆಲ್ಲುತ್ತೇವೆ ಎಂದು ಊಹೆಯನ್ನೂ ಮಾಡಿರಲಿಲ್ಲ. ಸದ್ಯ ಕೋಟ್ಯಂತರ ರೂ ಹಣ ಬರಲಿದ್ದು, ಸಂತಸವಾಗಿದೆ ಎಂದು ಶಾಂತನು ಹೇಳಿದ್ದಾರೆ.

ರಾತ್ರೋರಾತ್ರಿ ಕೋಟ್ಯಧಿಪತಿಯಾದ ಚಾಲಕ; 10 ಕೋಟಿ ರೂ. ಬಂಪರ್ ಲಾಟರಿಯಿಂದ ಬದುಕೇ ಚೇಂಜ್‌

1992ರಲ್ಲಿ ಯುಎಇನಲ್ಲಿ ಬಿಗ್‌ ಟಿಕೆಟ್‌ ಪ್ರಾರಂಭವಾಯಿತು. ಆರಂಭದಲ್ಲಿ 2 ಕೋಟಿ ಬಹುಮಾನದಿಂದ ಆರಂಭವಾದ ಲಾಟರಿ ಇದೀಗ 49 ಕೋಟಿ ರೂ.ಗೆ ಏರಿಕೆಯಾಗಿದೆ. ದೇಶದ ಪ್ರಮುಖ ಲಾಟರಿ ಡ್ರಾಗಳಲ್ಲಿ ಒಂದೆನಿಸಿಕೊಂಡಿದೆ. ಇದೀಗ ಈ ಲಾಟರಿಯಲ್ಲಿ ಕರ್ನಾಟಕದ ಯುವಕನಿಗೆ ಅದೃಷ್ಟ ಖುಲಾಯಿಸಿದೆ. ಇದರ ಜತೆಗೆ ಐದು ಮಂದಿಗೆ 10 ದಿರ್ಹಮ್‌ ಜತೆಗೆ ಐಷಾರಾಮಿ ಕಾರು ಬಹುಮಾನ ಸಿಕ್ಕಿದೆ. .