ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

P S Sadananda: ಲೋಕಧ್ವನಿ ಪತ್ರಿಕೆ ಮಾಜಿ ಸಂಪಾದಕ ಪಿ.ಎಸ್‌. ಸದಾನಂದ ಹೃದಯಾಘಾತದಿಂದ ನಿಧನ

ಹಿರಿಯ ಪತ್ರಕರ್ತ ಪಿ.ಎಸ್. ಸದಾನಂದ ಅವರು ಮುಂಡಗೋಡ ತಾಲೂಕಿನ ನ್ಯಾಸರ್ಗಿ ಗ್ರಾಮದವರು. ಇವರು ಸುಮಾರು 35 ವರ್ಷಗಳಿಗೂ ಹೆಚ್ಚು ಕಾಲ ಲೋಕಧ್ವನಿ ಪತ್ರಿಕೆಯಲ್ಲಿ ವರದಿಗಾರರಾಗಿ ಹಾಗೂ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ನಿಧನಕ್ಕೆ ಗಣ್ಯರು ಸೇರಿ ಹಲವು ಪತ್ರಕರ್ತರು ಸಂತಾಪ ಸೂಚಿಸಿದ್ದಾರೆ.

ಲೋಕಧ್ವನಿ ಮಾಜಿ ಸಂಪಾದಕ ಪಿ.ಎಸ್‌. ಸದಾನಂದ ನಿಧನ

ಲೋಕಧ್ವನಿ ಪತ್ರಿಕೆ ಮಾಜಿ ಸಂಪಾದಕ ಪಿ.ಎಸ್‌. ಸದಾನಂದ. -

Prabhakara R
Prabhakara R Jun 9, 2026 6:01 PM

ಮುಂಡಗೋಡ: ಹಿರಿಯ ಪತ್ರಕರ್ತ ಹಾಗೂ ಲೋಕಧ್ವನಿ ಪತ್ರಿಕೆಯ ಮಾಜಿ ಸಂಪಾದಕ ಪಿ.ಎಸ್‌. ಸದಾನಂದ (75) (P S Sadananda) ಅವರು ಇಂದು ಸಂಜೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಮೃತರು ಪತ್ನಿ, ಪುತ್ರಿ, ಪುತ್ರ ಹಾಗೂ ಬಂಧು ಬಳಗದವರನ್ನು ಅಗಲಿದ್ದಾರೆ.

ಪಿ.ಎಸ್. ಸದಾನಂದ ಅವರು ಮುಂಡಗೋಡ ತಾಲೂಕಿನ ನ್ಯಾಸರ್ಗಿ ಗ್ರಾಮದವರು. ಲೋಕಧ್ವನಿ ಪತ್ರಿಕೆ ಸಂಸ್ಥಾಪಕರಾದ ಗೋಪಾಲಕೃಷ್ಣ ಆನವಟ್ಟಿಯವರ ಕಾಲದಿಂದಲೂ ಪಿ.ಎಸ್‌. ಸದಾನಂದ ಅವರು ಸಂಸ್ಥೆಯಲ್ಲಿ ವರದಿಗಾರರಾಗಿ, ಸಂಪಾದಕರಾಗಿ 35 ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ.

ಇವರು ಪತ್ರಿಕೋದ್ಯಮ ಕ್ಷೇತ್ರಕ್ಕೆ ನೀಡಿದ ಸೇವೆಗೆ ರಾಜ್ಯ, ಜಿಲ್ಲಾ ಹಾಗೂ ತಾಲೂಕಾ ಮಟ್ಟದ ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಇವರ ನಿಧನಕ್ಕೆ ವಿವಿಧ ಗಣ್ಯರು ಸೇರಿ ಪತ್ರಕರ್ತರು ಸಂತಾಪ ಸೂಚಿಸಿದ್ದಾರೆ.

ಸುದ್ದಿಮನೆಯ ಒಬ್ಬ ಅಪ್ಪಟ ಕರ್ಮಯೋಗಿ ಪಿ.ಎಸ್‌. ಸದಾನಂದ: ವಿಶ್ವೇಶ್ವರ ಭಟ್‌ ಸಂತಾಪ

ಹಿರಿಯ ಪತ್ರಕರ್ತ ಪಿ.ಎಸ್‌. ಸದಾನಂದ ಅವರ ನಿಧನಕ್ಕೆ ವಿಶ್ವವಾಣಿ ಪತ್ರಿಕೆ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್‌ ಅವರು ಸಂತಾಪ ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ನಮ್ಮ ಶಿರಸಿಯ “ಲೋಕಧ್ವನಿ” ದೈನಿಕದಲ್ಲಿ ಸುಮಾರು ಮೂವತ್ತೈದು ವರ್ಷಗಳಿಗಿಂತ ಅಧಿಕ ಕಾಲ ವರದಿಗಾರರಾಗಿ, ನಂತರ ಸಂಪಾದಕರಾಗಿ ಸೇವೆ ಸಲ್ಲಿಸಿದ ಪಿ. ಎಸ್. ಸದಾನಂದ ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದು ಅತ್ಯಂತ ದುಃಖದ ಸಂಗತಿ.

ಒಂದು ಸಂಸ್ಥೆಗೆ ಅಷ್ಟು ಸುದೀರ್ಘ ಅವಧಿಗೆ ಬದ್ಧರಾಗಿ ಸೇವೆ ಸಲ್ಲಿಸಿದ್ದು, ಅವರ ಕಾರ್ಯನಿಷ್ಠೆಗೆ ನಿದರ್ಶನ. ಎರಡು ವರ್ಷಗಳ ಹಿಂದೆ, ವಯೋಸಹಜ ಕಾರಣ ನೀಡಿ ಅವರು ನಿವೃತ್ತರಾಗಬೇಕೆಂದು ಬಯಸಿದಾಗ, ಅವರ ಮನವೊಲಿಸಲು ನಾನು ಬಹಳ ಪ್ರಯತ್ನಿಸಿದೆ. ಆದರೆ ಅವರು ಪ್ರತಿ ದಿನ ಮುಂಡಗೋಡದಿಂದ ಶಿರಸಿಗೆ ಪ್ರಯಾಣ ಮಾಡಬೇಕಿತ್ತು. ಈ ಕಾರಣ ನೀಡಿ ಅವರು ನಿವೃತ್ತಿ ಬಯಸಿದರು. ನಂತರವೂ ಪತ್ರಿಕೆಯ ಜತೆ ಉತ್ತಮ ಸಂಬಂಧವನ್ನು ಇರಿಸಿಕೊಂಡಿದ್ದ ಅವರು ಆಗಾಗ ಲೇಖನಗಳನ್ನು ಬರೆದು ಕಳಿಸಿಕೊಡುತ್ತಿದ್ದರು. ಒಂದು ತಿಂಗಳ ಹಿಂದೆಯೂ, ಪತ್ರಿಕೆಯ ಕಾರ್ಯಾಲಯಕ್ಕೆ ಆಗಮಿಸಿದ್ದರು.



ಸದಾನಂದ ಅವರು ಡೆಸ್ಕಿನಲ್ಲಿದ್ದರೆ, ಸುದ್ದಿ ಆಯ್ಕೆ, ನಿರೂಪಣೆ, ಪುಟ ವಿನ್ಯಾಸ, ಶೀರ್ಷಿಕೆ, ಕರಡುದೋಷ.. ಹೀಗೆ ಯಾವ ವಿಷಯದ ಬಗ್ಗೆಯೂ ತಲೆಕೆಡಿಸಿಕೊಳ್ಳಬೇಕಿರಲ್ಲ. ಅವರ ಮೇಲೆ ಸಂಪೂರ್ಣ ಭರವಸೆ ಇಡಬಹುದಾಗಿತ್ತು. ಪತ್ರಿಕೆಯನ್ನು ಸುಂದರವಾಗಿ ರೂಪಿಸುವ ಕಲೆ ಅವರಿಗೆ ಸಿದ್ಧಿಸಿತ್ತು. ಅವರಿಗೆ ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿರುತ್ತಿದ್ದರು. “ತಾವಾಯಿತು, ತಮ್ಮ ಕೆಲಸವಾಯಿತು” ಎಂಬ ಧೋರಣೆಯ ಸದಾನಂದ ಅವರು, ಸುದ್ದಿಮನೆಯ ಒಬ್ಬ ಅಪ್ಪಟ ಕರ್ಮಯೋಗಿ. “ಲೋಕಧ್ವನಿ” ಪತ್ರಿಕೆಯ ಆರಂಭದಿಂದಲೂ ಜತೆಯಾಗಿದ್ದ ಸದಾನಂದ ಅವರ ಅನುಪಮ ಸೇವೆಯನ್ನು ನೆನೆಯುತ್ತಾ, ಅವರಿಗೆ ಸದ್ಗತಿ ಸಿಗಲಿ ಎಂದು ಕೋರುವೆ. ಓಂ ಶಾಂತಿ! ಎಂದು ತಿಳಿಸಿದ್ದಾರೆ.