ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

New technology innovation by youth: ಶಿರಸಿಯ ಯುವಕರಿಂದ ಹೊಸ ತಂತ್ರಜ್ಞಾನ ಆವಿಷ್ಕಾರ :‌ ಇನ್ಮುಂದೆ ಕಾನನದಲ್ಲೂ ಕಾಣಲಿದೆ 4ಜಿ ನೆಟ್‌ವರ್ಕ್

ಪಶ್ಚಿಮ ಘಟ್ಟದ ಭಾಗದಲ್ಲಿ ಅದರಲ್ಲೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊಬೈಲ್ ನೆಟ್‌ವರ್ಕ್‌ಗಾಗಿ ಮರವನ್ನೇರಿ ಪರದಾಡುವುದು, ಗುಡ್ಡಬೆಟ್ಟವನ್ನು ಸಹ ಹತ್ತಿ ಕುಳಿತುಕೊಳ್ಳುವುದು ಸಾಮಾನ್ಯ ವಾಗಿದೆ. ಇ-ಕೆವೈಸಿ ಹಾಗೂ ಇನ್ನಿತರ ಆನ್‌ಲೈನ್ ಸೇವೆಗಾಗಿ ಜನರು ದಿನಗಟ್ಟಲೇ ನಿಂತು ಸಂಕಷ್ಟ ಅನುಭವಿಸುವುದು ನಿತ್ಯದ ಪರದಾಟವಾಗಿದೆ.

ಇನ್ಮುಂದೆ ಕಾನನದಲ್ಲೂ ಕಾಣಲಿದೆ 4ಜಿ ನೆಟ್‌ವರ್ಕ್

-

Profile
Ashok Nayak Oct 29, 2026 11:54 PM

ಕಾರವಾರ: ಪಶ್ಚಿಮ ಘಟ್ಟ(Western Ghats) ಭಾಗದ ಭಾಗದಲ್ಲಿ ಮೊಬೈಲ್ ನೆಟ್‌ವರ್ಕ್(Mobile Network) ಸರಿಪಡಿಸಬೇಕೆಂಬ ಬೇಡಿಕೆ ಬಹಳ ದಿನಗಳಿಂದಲೂ ಕೇಳಿಬರುತ್ತಿದೆ. ಆ ನಿಟ್ಟಿನಲ್ಲಿ ಕೇಂದ್ರ ಸರಕಾರವು ಹಲವಾರು ಪ್ರಯತ್ನಗಳನ್ನು ಮಾಡಿದ್ದರೂ ಈವರೆಗೂ ಯಾವುದೇ ಫಲ ದೊರೆತಿರಲಿಲ್ಲ. ಆದರೆ ಇದೀಗ ಶಿರಸಿಯ ಮೂವರು ಯುವಕರ ತಂಡ ಹೊಸ ತಂತ್ರಜ್ಞಾನವನ್ನು ಅಭಿವೃದ್ದಿಗೊಳಿಸಿದ್ದು, ಕಾಡುಪ್ರದೇಶ ದಲ್ಲಿ ಇದ್ದರೂ ನೆಟ್‌ವರ್ಕ್(Network) ಹಾಗೂ ಇಂಟರ್‌ನೆಟ್(Internet) ಬಳಸಲು ಸುಲಭ ಮಾಡಿದೆ.

ಪಶ್ಚಿಮ ಘಟ್ಟದ ಭಾಗದಲ್ಲಿ ಅದರಲ್ಲೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊಬೈಲ್ ನೆಟ್‌ವರ್ಕ್‌ಗಾಗಿ ಮರವನ್ನೇರಿ ಪರದಾಡುವುದು, ಗುಡ್ಡಬೆಟ್ಟವನ್ನು ಸಹ ಹತ್ತಿ ಕುಳಿತುಕೊಳ್ಳುವುದು ಸಾಮಾನ್ಯ ವಾಗಿದೆ. ಇ-ಕೆವೈಸಿ ಹಾಗೂ ಇನ್ನಿತರ ಆನ್‌ಲೈನ್ ಸೇವೆಗಾಗಿ ಜನರು ದಿನಗಟ್ಟಲೇ ನಿಂತು ಸಂಕಷ್ಟ ಅನುಭವಿಸುವುದು ನಿತ್ಯದ ಪರದಾಟವಾಗಿದೆ.

ವರ್ಕ್‌ಫ್ರಂ ಹೋಮ್(Work from Home) ಪಡೆದುಕೊಂಡ ಅದೆಷ್ಟೋ ಉದ್ಯೋಗಿಗಳು ಗುಡ್ಡದ ಠಿಕಾಣಿ ಹೂಡಿದ್ದಾರೆ. ಪಶ್ಚಿಮ ಘಟ್ಟದ ಜಿಲ್ಲೆಗಳಲ್ಲಿ ಬಿಎಸ್‌ಎನ್‌ಎಲ್, ಏರ್‌ಟೆಲ್, ಐಡಿಯಾ, ರಿಲಿಯ ಹೀಗೆ ಯಾವುದೇ ಮೊಬೈಲ್ ಕಂಪನಿಯ ಸಿಮ್ ತೆಗೆದುಕೊಳ್ಳಲಿ ನಗರ ಪ್ರದೇಶದಿಂದ ಹಿಡಿದು ಹಳ್ಳಿಗಳವರೆಗೆ ನೆಟ್‌ವರ್ಕ್ ಸಮಸ್ಯೆಯೇ ಹೆಚ್ಚು. ಹಲವು ಹಳ್ಳಿಯಲ್ಲಿ ಮೊಬೈಲ್ ಟವರ್ ಇದ್ದರೂ ಸಿಗ್ನಲ್ ಸಿಗಲ್ಲ. ಕಾರವಾರ ನಗರದ ಕೆಲವು ಬಡಾವಣೆಗಳಲ್ಲಿ ನೆಟ್ ವರ್ಕ್ ಈಗಲೂ ಇಲ್ಲ. ಆದರೆ, ಇದೀಗ ಕುಗ್ರಾಮದಲ್ಲಿ ಇರಲಿ, ಮನೆಯ ಒಳಗೆ ನೆಟ್‌ವರ್ಕ್ ಬಾರದಿರಲಿ, ಕುಳಿತ ನೆಟ್‌ವರ್ಕ್ ಸಮಸ್ಯೆ ಇದ್ದರೂ 4ಜಿ ನೆಟ್ ವರ್ಕ್(4G Network) ಬಳಸಿ ಕರೆ ಹಾಗೂ ಇಂಟರ್‌ನೆಟ್ ಸುಲಭವಾಗಿ ಬಳಸುವಂತಹ ತಂತ್ರಜ್ಞಾನವನ್ನು ಶಿರಸಿಯ ಅಭಯ, ಸುದರ್ಶನ್, ಸಮರ್ಥ ಎಂಬ ಮೂರು ಜನ ಯುವಕರು ಅಭಿವೃದ್ಧಿಗೊಳಿಸಿದ್ದಾರೆ.

ಕೇಂದ್ರದಿಂದ ಪ್ರಾಯೋಗಿಕ ಪರೀಕ್ಷೆಗೆ ಅವಕಾಶ: ತಾವು ಅಭಿವೃದ್ಧಿಪಡಿಸಿದ ಮೈಕ್ರೋ ಸೆಲ್ ಹಾಗೂ ಫೆಮ್ಟೋಸೆಲ್ ಅನ್ನು ಕೇಂದ್ರ ಸರಕಾರದ ದೂರಸಂಪರ್ಕ ಸಚಿವಾಲಯಕ್ಕೆ ತಿಳಿಸಿದರು. ಖುದ್ದು ಕೇಂದ್ರ ಸಚಿವರು ಇವರ ಸಾಧನೆಗೆ ಬಿಎಸ್‌ಎನ್‌ಎಲ್(BSNL) ಸಹಯೋಗದಲ್ಲಿ ಉತ್ತರಪ್ರದೇಶದ ಆಗ್ರ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಯೋಗಿಕ ಪರೀಕ್ಷೆ ನಡೆಸಲು ಅವಕಾಶ ಮಾಡಿಕೊಟ್ಟರು. ಇದರ ಫಲವಾಗಿ ಇದೀಗ ಯಲ್ಲಾಪುರ ಭಾಗದ ಆನಗೋಡದಲ್ಲಿ ಪರೀಕ್ಷೆ ಯಶಸ್ವಿ ಕಂಡಿದೆ. ಆಗ್ರಾದ ಜನನಿಬಿಡ ಪ್ರದೇಶದಲ್ಲಿ ಸಹ ಫೆಮ್ಟೋಸೆಲ್ ಪರೀಕ್ಷೆ ನಡೆಸಲಾಗುತ್ತಿದ್ದು, ಇದೀಗ ಪ್ರಾಯೋಗಿಕ ಪರೀಕ್ಷೆ ಮುಕ್ತಾಯದ ಘಟ್ಟ ತಲುಪಿದೆ. ಶೀಘ್ರ ಅತೀ ಕಡಿಮೆ ಬೆಲೆಯಲ್ಲಿ ಜನರ ಕೈಗೂ ಸಿಗುವ ಭರವಸೆ ವ್ಯಕ್ತಪಡಿಸುತ್ತಾರೆ ಈ ಉತ್ಸಾಹಿ ಯುವಕರು.

ಸಾರ್ವಜನಿಕರಿಂದ ಭಾರೀ ಮೆಚ್ಚುಗೆ: ಗ್ರಾಮೀಣ ಪ್ರದೇಶದ ನೆಟ್‌ವರ್ಕ್ ಸಮಸ್ಯೆಯನ್ನೇ ಕೇಂದ್ರವಾಗಿರಿಸಿ ಕೊಂಡು ಈ ಮೂರು ಜನ ಯುವಕರು ನೆಕ್ಸಸ್ಸೆರಿಕಲ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ (NexusSpherical Technologies Pvt. Ltd ) ಎಂಬ ಸಂಸ್ಥೆಯನ್ನು ಕಟ್ಟಿದ್ದಾರೆ. ಇವರಿಗೆ ಸಹಕಾರವಾಗಿ ಹಾರ್ಡ್‌ʼವೇರ್ ಅನ್ನು ಬೆಂಗಳೂರು ಮೂಲದ ಲೆಖಾ ವೈರ್ಲೆಸ್ ಸೊಲ್ಯೂಷನ್ಸ್ ಪ್ರೈವೆಟ್ ಲಿಮಿಟೆಡ್ ನೀಡುತ್ತಿದೆ. ಈ ಸಂಸ್ಥೆ ಮೂಲಕ ಈಗಿರುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿ 4ಜಿ ನೆಟ್‌ವರ್ಕ್ ಹಾಗೂ ಇಂಟರ್‌ನೆಟ್‌ಗಾಗಿ ಮೈಕ್ರೋ ಸೆಲ್ ಮತ್ತು ಫೆಮ್ಟೋಸೆಲ್ ಎಂಬ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ.

ನೆಟ್‌ವರ್ಕ್ ಇರದ ಪ್ರದೇಶದಲ್ಲಿ ಟವರ್ ಹಾಕದೇ ಮೈಕ್ರೋ ಸೆಲ್ ಅನ್ನು ಅಳವಡಿಸಿ ನೆಟ್‌ವರ್ಕ್ ಹಾಗೂ ಇಂಟರ್‌ನೆಟ್ ಬಳಸಬಹುದು. ಹಾಗೆಯೇ ಫೆಮ್ಟೋಸೆಲ್‌ನಲ್ಲಿ ಟವರ್ ಇದ್ದರೂ ನೆಟ್ ವರ್ಕ್ ಬರದ ಮನೆಗಳಿಗೆ ಅಳವಡಿಸಿ ನೆಟ್‌ವರ್ಕ್ ಪಡೆಯಬಹುದು. ಇದರಿಂದ ಗ್ರಾಮೀಣ ಭಾಗದ ಸಹಕಾರ ಸಂಘಗಳು, ನ್ಯಾಯಬೆಲೆ ಅಂಗಡಿಗಳು, ಎಟಿಎಂಗಳು ಹಾಗೂ ಆನ್‌ಲೈನ್ ಶಿಕ್ಷಣಕ್ಕೂ ಉಪಯೋಗ ಆಗಲಿದೆ. ಇದನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಜನರಿಗೆ ನೀಡುವ ಗುರಿಯನ್ನು ಹೊಂದಿದ್ದು, ಸದ್ಯ ಈ ವ್ಯವಸ್ಥೆ ಕೇವಲ ಬಿಎಸ್‌ಎನ್‌ಎಲ್‌ನಲ್ಲಿ ಮಾತ್ರ ನೀಡಲಾಗುತ್ತಿದೆ. ಮುಂದಿನ ದಿನದಲ್ಲಿ ಎಲ್ಲ ನೆಟ್‌ವರ್ಕ್ ಕಂಪನಿಗಳ ಜತೆ ಒಡಂಬಡಿಕೆ ಮಾಡಿಕೊಂಡು ನೀಡುವ ಗುರಿ ಹೊಂದಲಾಗಿದೆ. ಸದ್ಯ ಇದೀಗ ಯಪುರ ಭಾಗದಲ್ಲಿ ಈ ಪ್ರಯೋಗ ಯಶಸ್ವಿಯಾಗಿದ್ದು, ಮೊಬೈಲ್ ಸಿಗ್ನಲ್ ಬಾರದ, ಇಂಟರ್‌ನೆಟ್ ಇಲ್ಲದ ಪ್ರದೇಶದಲ್ಲಿ ಇದನ್ನು ಬಳಸಿ ಜನ ತಮ್ಮ ಕಾರ್ಯಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈ ಯುವಕರ ಸಾಧನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಉದ್ಯೋಗ ಬಿಟ್ಟು ಅಧ್ಯಯನ

ಟೆಲಿಕಾಮ್ ಟೆಕ್ನಲಾಜಿ ಓದಿ ಉತ್ತಮ ಸಂಬಳಕ್ಕೆ ಉದ್ಯೋಗದಲ್ಲಿ ಇದ್ದ ಅಭಯ್, ಸುದರ್ಶನ್, ಸಮರ್ಥ ಕೋವಿಡ್ ಸಮಯದಲ್ಲಿ ಊರಿಗೆ ಬಂದಾಗ ತಮ್ಮೂರಿನ ನೆಟ್‌ವರ್ಕ್ ಸಮಸ್ಯೆಗೆ ಪರಿಹಾರ ನೀಡುವ ಸಂಕಲ್ಪ ಮಾಡಿದರು. ಈಗಿರುವ ಟೆಕ್ನಾಲಜಿಯನ್ನು ಅಭಿವೃದ್ಧಿಪಡಿಸಿ ಹಳ್ಳಿಗಳಲ್ಲಿ 4ಜಿ ನೆಟ್‌ವರ್ಕ್ ಕೊಡುವ ಕನಸು ಹೊತ್ತು ಕಳೆದ ಒಂದೂವರೆ ವರ್ಷದಿಂದ ಉದ್ಯೋಗ ಬಿಟ್ಟು ಇದರ ಬಗ್ಗೆ ಅಧ್ಯಯನ ನಡೆಸಿ ಕೊನೆಗೂ ಈ ಸಮಸ್ಯೆಗೆ ಪರಿಹಾರ ಹುಡುಕಿದ್ದಾರೆ