ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಡ್ರಗ್ಸ್‌ಗೆ ನೋ, ಕನಸುಗಳಿಗೆ ಹೌದು ಹೇಳಿ; ಯುವಜನತೆಗೆ ಶಾಸಕ ಭೀಮಣ್ಣ ನಾಯ್ಕ ಕಿವಿಮಾತು

Sirsi News: ಸಹನೆ ಮತ್ತು ತಾಳ್ಮೆಯನ್ನು ಜೀವನದಲ್ಲಿ ಅಳವಡಿಸಿಕೊಂಡು, ಯಾವುದೇ ವ್ಯಸನಕ್ಕೆ ದಾಸರಾಗದೆ ಸಹಬಾಳ್ವೆಯ ಬದುಕು ಸಾಗಿಸಿದಾಗ ಮಾತ್ರ ನಮ್ಮ ಪೂರ್ವಜರು ಕಂಡ ರಾಮರಾಜ್ಯದ ಕನಸು ನನಸಾಗುತ್ತದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ಮಾದಕ ವ್ಯಸನ ವಿರುದ್ಧ ಜಾಗೃತಿ: ಯುವಜನತೆಗೆ ಶಾಸಕ ಭೀಮಣ್ಣ ನಾಯ್ಕ ಕಿವಿಮಾತು

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Jul 31, 2026 3:00 PM

ಶಿರಸಿ: ಸಹನೆ ಮತ್ತು ತಾಳ್ಮೆಯನ್ನು ಜೀವನದಲ್ಲಿ ಅಳವಡಿಸಿಕೊಂಡು, ಯಾವುದೇ ವ್ಯಸನಕ್ಕೆ ದಾಸರಾಗದೆ ಸಹಬಾಳ್ವೆಯ ಬದುಕು ಸಾಗಿಸಿದಾಗ ಮಾತ್ರ ನಮ್ಮ ಪೂರ್ವಜರು ಕಂಡ ರಾಮರಾಜ್ಯದ ಕನಸು ನನಸಾಗುತ್ತದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಅವರು ಶುಕ್ರವಾರ ನಗರದ ಎಂಇಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ, ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಶಿಕ್ಷಣ ಇಲಾಖೆ ಹಾಗೂ ಎಂಇಎಸ್ ವಾಣಿಜ್ಯ ಮಹಾವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ಡ್ರಗ್ಸ್ ವ್ಯಸನ ಮುಕ್ತ ಆಪರೇಷನ್ ರೈಸ್ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.

ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಪೊಲೀಸ್ ಇಲಾಖೆಯೊಂದರ ಪ್ರಯತ್ನ ಸಾಕಾಗುವುದಿಲ್ಲ. ಪ್ರತಿಯೊಬ್ಬ ನಾಗರಿಕರೂ ತಮ್ಮ ಜವಾಬ್ದಾರಿಯನ್ನು ಅರಿತು ಕೈಜೋಡಿಸಬೇಕು. ಗೃಹ ಸಚಿವ ಪ್ರಿಯಾಂಕ ಖರ್ಗೆ ಅಧಿಕಾರ ಸ್ವೀಕರಿಸಿದ ಬಳಿಕ ರಾಜ್ಯಾದ್ಯಂತ ಆಪರೇಷನ್ ರೈಸ್ ಕಾರ್ಯಕ್ರಮದ ಮೂಲಕ ಯುವಜನರಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮದ ಕುರಿತು ವ್ಯಾಪಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಭಾರತವು ಸಂಸ್ಕೃತಿ ಹಾಗೂ ಸಂಪತ್ತಿನ ದೇಶವಾಗಿದ್ದು, ಎಲ್ಲ ವರ್ಗದ ಜನರು ಪ್ರೀತಿ, ವಿಶ್ವಾಸ ಮತ್ತು ಸಹಬಾಳ್ವೆಯಿಂದ ಬದುಕಬೇಕು. ಯುವಕರು ಉತ್ತಮ ಶಿಕ್ಷಣ ಪಡೆದು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಡಿಎಸ್ಪಿ ಗೀತಾ ಪಾಟೀಲ ಮಾತನಾಡಿ, ಡ್ರಗ್ಸ್ ಸೇವನೆಯಿಂದ ಮಕ್ಕಳ ಹಾಗೂ ಯುವಕರ ಆರೋಗ್ಯ ಮಾತ್ರವಲ್ಲದೆ ಮಾನಸಿಕ ಸ್ಥಿತಿಯ ಮೇಲೂ ಗಂಭೀರ ಪರಿಣಾಮ ಉಂಟಾಗುತ್ತದೆ. ಡ್ರಗ್ಸ್ ಸಾಗಾಟ ಅಥವಾ ಮಾರಾಟದ ಬಗ್ಗೆ ಮಾಹಿತಿ ದೊರೆತರೆ ತಕ್ಷಣವೇ ಪೊಲೀಸ್ ಇಲಾಖೆಗೆ ತಿಳಿಸಬೇಕು. ಮಾಹಿತಿ ನೀಡಿದವರ ಗುರುತನ್ನು ಸಂಪೂರ್ಣ ಗೌಪ್ಯವಾಗಿಡಲಾಗುವುದು ಎಂದು ಹೇಳಿದರು.

WhatsApp Image 2026-07-31 at 2.12.37 PM

ಅಬಕಾರಿ ಡಿಎಸ್ಪಿ ದಿವ್ಯಾ ಶೆಟ್ಟಿ ಮಾತನಾಡಿ, ಒಮ್ಮೆ ಡ್ರಗ್ಸ್ ವ್ಯಸನ ಅಂಟಿಕೊಂಡರೆ ಅದರಿಂದ ಹೊರಬರುವುದು ಅತ್ಯಂತ ಕಷ್ಟಕರ. ವ್ಯಸನದಿಂದ ವ್ಯಕ್ತಿಯಷ್ಟೇ ಅಲ್ಲ, ಇಡೀ ಕುಟುಂಬ ಸಂಕಷ್ಟಕ್ಕೆ ಸಿಲುಕುತ್ತದೆ. ಶಿರಸಿ ಸುಸಂಸ್ಕೃತ ನೆಲೆಯಾಗಿದ್ದು, ಇಲ್ಲಿನ ಯುವಕರು ತಮ್ಮ ಗುರಿ ಸಾಧನೆಯತ್ತ ಗಮನ ಹರಿಸಬೇಕು ಎಂದರು. ತಾಲೂಕು ಆರೋಗ್ಯಾಧಿಕಾರಿ ಡಾ. ಮಧುಕರ ಪಾಟೀಲ ಮಾತನಾಡಿ, ಮಾದಕ ವಸ್ತುಗಳು ದೇಹದ ಪ್ರತಿಯೊಂದು ಅಂಗದ ಮೇಲೂ ದುಷ್ಪರಿಣಾಮ ಬೀರುತ್ತವೆ. ರೋಗನಿರೋಧಕ ಶಕ್ತಿ ಕುಗ್ಗಿ ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತವೆ. ಆದ್ದರಿಂದ ಜೀವನದಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಂಡು ವ್ಯಸನಗಳಿಂದ ದೂರವಿರಬೇಕು ಎಂದರು.

Sirsi News: ಮಳೆ ಮಾಪನ ಕೇಂದ್ರಗಳ ವೈಫಲ್ಯ: ಹವಾಮಾನ ಆಧಾರಿತ ಬೆಳೆ ವಿಮೆ ವಂಚನೆ ಖಂಡಿಸಿ ಶಿರಸಿಯಲ್ಲಿ ರಾಜ್ಯಪಾಲರಿಗೆ ಮನವಿ

ತಾಪಂ ಕಾರ್ಯನಿರ್ವಹಣಾಧಿಕಾರಿ ಚನ್ನಬಸಪ್ಪ ಹಾವಣಗಿ ಮಾತನಾಡಿ, ಪ್ರತಿಯೊಬ್ಬರೂ ಡ್ರಗ್ಸ್‌ನ್ನು ತಿರಸ್ಕರಿಸುವ ಮೂಲಕ ಸಮಾಜದಲ್ಲಿ ಅದರ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕು. ವ್ಯಸನಕ್ಕೆ ಒಳಗಾದವರನ್ನು ಆ ಚಟದಿಂದ ಹೊರತರಲು ಎಲ್ಲರೂ ಸಹಕರಿಸಬೇಕು ಎಂದರು. ಕಾಲೇಜಿನ ಉಪನ್ಯಾಸಕ ಡಾ. ಅಭಯಕುಮಾರ ಗಸ್ತಿ ಮಾತನಾಡಿ, ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಯುವಜನರನ್ನು ಹೊಂದಿರುವ ದೇಶವಾಗಿದೆ. ಸದೃಢ ಸಮಾಜ ನಿರ್ಮಾಣದಲ್ಲಿ ಯುವಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಒಟಿಟಿ ವೇದಿಕೆಗಳಲ್ಲಿ ಅತಿಯಾದ ಹಿಂಸಾತ್ಮಕ ಹಾಗೂ ಅಪರಾಧಾಧಾರಿತ ವಿಷಯಗಳ ಪ್ರಭಾವ ಕಡಿಮೆಯಾಗಬೇಕಿದ್ದು, ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.

ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ ಸಂತೋಷಕುಮಾರ ಎಂ. ವಿದ್ಯಾರ್ಥಿಗಳಿಗೆ ವ್ಯಸನಮುಕ್ತ ಸಮಾಜ ನಿರ್ಮಾಣದ ಪ್ರತಿಜ್ಞಾವಿಧಿ ಬೋಧಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ಮಧುಕರ ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ನಾಯ್ಕ, ಶಿರಸಿ ಗ್ರಾಮೀಣ ಠಾಣೆಯ ಪಿಐ ರಮೇಶ ಹೂಗಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಸಿಪಿಐ ಇ.ಸಿ. ಸಂಪತ್ ಸ್ವಾಗತಿಸಿದರು. ಬನವಾಸಿ ಪೊಲೀಸ್ ಠಾಣೆಯ ಸಿಬ್ಬಂದಿ ಎಂ.ಎಸ್. ನಾರಾಯಣ ನಿರೂಪಿಸಿದರು.