ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕುಟುಂಬಕ್ಕೆ ತಿಳಿಸದೆ ಲಂಡನ್‌ನಿಂದ ರಹಸ್ಯವಾಗಿ ಭಾರತಕ್ಕೆ ಮರಳಿದ ಮಹಿಳೆ ಶವವಾಗಿ ಪತ್ತೆ: ಫುಡ್ ಡೆಲಿವರಿ ವಹಿವಾಟಿನಿಂದ ಬಯಲಾಯ್ತು ರಹಸ್ಯ

woman found dead: ಕೆಲವು ತಿಂಗಳ ಹಿಂದೆಯಷ್ಟೇ ಕುಟುಂಬದವರಿಗೆ ತಿಳಿಸದೆ ಲಂಡನ್‌ನಿಂದ ಭಾರತಕ್ಕೆ ಮರಳಿದ 34 ವರ್ಷದ ಮಹಿಳೆಯೊಬ್ಬರು ಮಹಾರಾಷ್ಟ್ರದ ಪುಣೆಯ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆಹಾರ ವಿತರಣಾ ಸೇವೆಯ ಮೂಲಕ ನಡೆದ ವಹಿವಾಟಿನ ಮೂಲಕ ಅವರು ಭಾರತದಲ್ಲಿರುವ ಸುಳಿವು ಕುಟುಂಬದವರಿಗೆ ಸಿಕ್ಕಿದೆ.

ಲಂಡನ್‌ನಿಂದ ರಹಸ್ಯವಾಗಿ ಮರಳಿದ ಮಹಿಳೆ ಶವವಾಗಿ ಪತ್ತೆ

ಮೃತ ಮುಗ್ಧಾ ದೇಶಮುಖ್ (ಸಂಗ್ರಹ ಚಿತ್ರ) -

Priyanka P
Priyanka P Oct 31, 2026 3:52 PM

ಮುಂಬೈ, ಅ. 31: ಕೆಲವು ತಿಂಗಳ ಹಿಂದೆಯಷ್ಟೇ ಕುಟುಂಬದವರಿಗೆ ತಿಳಿಸದೆ ಇಂಗ್ಲೆಂಡ್‌ನ ಲಂಡನ್‌ನಿಂದ ಭಾರತಕ್ಕೆ ಮರಳಿದ 34 ವರ್ಷದ ಮಹಿಳೆಯೊಬ್ಬರು ಪುಣೆ (Pune)ಯ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆಹಾರ ವಿತರಣಾ ಸೇವೆಯ ಮೂಲಕ ನಡೆದ ವಹಿವಾಟು ಮೂಲಕ ಅವರು ಭಾರತದಲ್ಲಿರುವ ಸುಳಿವು ಕುಟುಂಬದವರಿಗೆ ಸಿಕ್ಕಿದೆ. ಇದಾದ ಕೆಲವೇ ದಿನಗಳ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.

ಛತ್ರಪತಿ ಸಂಭಾಜಿನಗರ ಮೂಲದ ಮುಗ್ಧಾ ದೇಶಮುಖ್ ಕಳೆದ ವರ್ಷ ಜುಲೈನಲ್ಲಿ ಎಂಬಿಎ ವ್ಯಾಸಂಗಕ್ಕಾಗಿ ಬ್ರಿಟನ್‌ಗೆ ತೆರಳಿದ್ದರು. ಅಲ್ಲಿ ಒಬ್ಬರೇ ವಾಸಿಸುತ್ತಿದ್ದ ಅವರು ಅರೆಕಾಲಿಕ ಕೆಲಸಗಳನ್ನೂ ಮಾಡುತ್ತಿದ್ದರು. ಮುಗ್ಧಾ ಅವರ ಕುಟುಂಬದವರು ಫೋನ್ ಕರೆಗಳು ಮತ್ತು ಸಂದೇಶಗಳ ಮೂಲಕ ಅವರೊಂದಿಗೆ ಸಂಪರ್ಕದಲ್ಲಿದ್ದರು.

ಅಕ್ಟೋಬರ್ 24ರಂದು ಮುಗ್ಧಾ, ಕುಟುಂಬದವರ ಕರೆ ಮತ್ತು ಸಂದೇಶಗಳಿಗೆ ಪ್ರತಿಕ್ರಿಯಿಸಿರಲಿಲ್ಲ. ಬಳಿಕ ಅವರ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು. ಇದರಿಂದ ಆತಂಕಗೊಂಡ ಪೋಷಕರು ಲಂಡನ್‌ನಲ್ಲಿದ್ದ ಅವರ ಸ್ನೇಹಿತರೊಬ್ಬರನ್ನು ಸಂಪರ್ಕಿಸಿದ್ದಾರೆ. ಅಕ್ಟೋಬರ್ 22ರಂದು ಸಂದೇಶಗಳ ಮೂಲಕ ಕೊನೆಯ ಬಾರಿಗೆ ಮುಗ್ಧಾ ಅವರೊಂದಿಗೆ ಮಾತನಾಡಿದ್ದಾಗಿ ಸ್ನೇಹಿತರು ತಿಳಿಸಿದ್ದಾರೆ.

ಬೆಂಗಳೂರಿನ ಹೊಟೇಲ್‌ನ ಈಜುಕೊಳದಲ್ಲಿ ಎಲೆಕ್ಟ್ರಿಕ್ ಶಾಕ್​​: ಇಬ್ಬರು ವಿದೇಶಿಗರ ಸಾವು

ಬಳಿಕ ಆ ಸ್ನೇಹಿತರು ಲಂಡನ್ ಪೊಲೀಸರನ್ನು ಸಂಪರ್ಕಿಸಿ ಮುಗ್ಧಾ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ. ಆದರೆ, ಅವರು ಆಗಸ್ಟ್ ಅಂತ್ಯದ ವೇಳೆಯೇ ಬ್ರಿಟನ್ ತೊರೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದಾದ ಬಳಿಕ ಮುಗ್ಧಾ ಅವರ ಕುಟುಂಬದವರು ಅವರನ್ನು ಪತ್ತೆಹಚ್ಚಲು ನೆರವು ಕೋರಿ ಭಾರತೀಯ ಅಧಿಕಾರಿಗಳು ಮತ್ತು ಭಾರತೀಯ ಹೈಕಮಿಷನ್ ಅನ್ನು ಸಂಪರ್ಕಿಸಿದ್ದಾರೆ.

ಈ ನಡುವೆ, ಮುಗ್ಧಾ ಅವರ ತಂದೆ ಬ್ಯಾಂಕ್ ವಹಿವಾಟಿನ ವಿವರಗಳನ್ನು ಪರಿಶೀಲಿಸಿದಾಗ ಅಕ್ಟೋಬರ್ 8ರಿಂದ 25ರವರೆಗೆ ಹಲವು ಆಹಾರ ವಿತರಣಾ ವಹಿವಾಟುಗಳು ನಡೆದಿರುವುದು ಕಂಡುಬಂದಿದೆ. ಅವುಗಳಲ್ಲಿ ಕೆಲವು ಛತ್ರಪತಿ ಸಂಭಾಜಿನಗರದ ಉಸ್ಮಾನ್‌ಪುರ ಪ್ರದೇಶದಿಂದ ನಡೆದಿದ್ದವು. ಇದರಿಂದ ಮುಗ್ಧಾ ಭಾರತದಲ್ಲೇ ಇರುವ ಸಾಧ್ಯತೆಯಿದೆ ಎಂದು ಕುಟುಂಬದವರು ಶಂಕಿಸಿದ್ದರು.

ಪೊಲೀಸರು ತನಿಖೆ ಆರಂಭಿಸಿ, ಮುಗ್ಧಾ ಅವರ ಸ್ಥಳವನ್ನು ಪುಣೆಯ ಗಹುಂಜೆ ಪ್ರದೇಶದಲ್ಲಿರುವ ಲೋಧಾ ಬೆಲ್ಮೊಂಡೊ ವಸತಿ ಸಮುಚ್ಚಯದಲ್ಲಿ ಪತ್ತೆಹಚ್ಚಿದ್ದಾರೆ. ಬಳಿಕ ಪೊಲೀಸರು ಅಲ್ಲಿಗೆ ತೆರಳಿದಾಗ, ಅಪಾರ್ಟ್‌ಮೆಂಟ್‌ನಲ್ಲಿ ಮುಗ್ಧಾ ಅವರ ಮೃತದೇಹ ಪತ್ತೆಯಾಗಿದೆ.

ಇದ್ದಕ್ಕಿದ್ದಂತೆ ಬದಲಾದ ಜೀವನ ಶೈಲಿ, ಐಷಾರಾಮಿ ಬದುಕು; ಮನೆಯೊಳಗೆ ಹೂತಿಟ್ಟ ಡ್ರಮ್‌ನಲ್ಲಿ ಪತ್ತೆಯಾಯ್ತು ಕೋಟಿ ಕೋಟಿ ರೂಪಾಯಿ

ಛತ್ರಪತಿ ಸಂಭಾಜಿನಗರ ಪೊಲೀಸರು ಮುಗ್ಧಾ ಅವರ ಸ್ಥಳವನ್ನು ಗಹುಂಜೆಯ ಲೋಧಾ ಬೆಲ್ಮೊಂಡೊ ವಸತಿ ಸಮುಚ್ಚಯದಲ್ಲಿ ಪತ್ತೆಹಚ್ಚಿದ್ದರು. “ನಾವು ಅವರು ವಾಸವಿದ್ದ ಫ್ಲ್ಯಾಟ್‌ಗೆ ತೆರಳಿ, ಬಾಗಿಲು ತೆರೆದು ಒಳಗೆ ಪ್ರವೇಶಿಸಿದೆವು. ಈ ವೇಳೆ ಅವರು ಒಳಗೆ ಮೃತಪಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾದರು” ಎಂದು ಪಿಂಪ್ರಿ ಚಿಂಚ್‌ವಾಡ್‌ನ ಶಿರ್ಗಾಂವ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್‌ಸ್ಪೆಕ್ಟರ್ ದೇವೇಂದ್ರ ಚವ್ಹಾಣ್ ತಿಳಿಸಿದ್ದಾರೆ.

ಮುಗ್ಧಾ ಅವರ ದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆಯ ವೇಳೆ ಮುಗ್ಧಾ, ಏಪ್ರಿಲ್‌ನಲ್ಲೇ ಈ ಅಪಾರ್ಟ್‌ಮೆಂಟ್ ಅನ್ನು ಬಾಡಿಗೆಗೆ ಪಡೆದಿದ್ದರು. ಆದರೆ, ಆಗಸ್ಟ್‌ನಿಂದ ಅಲ್ಲಿ ವಾಸಿಸಲು ಆರಂಭಿಸಿದ್ದರು ಎಂಬುದು ತಿಳಿದುಬಂದಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.