ಬರ ಪೀಡಿತ ತಾಲೂಕು ಘೋಷಣೆಯಲ್ಲಿ ಸರ್ಕಾರದ ನಿರ್ಲಕ್ಷ್ಯ; ಇಂಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ರಾಜೀನಾಮೆ
Yashavant Rayagoud Patil: ಬರ ಪೀಡಿತ ತಾಲೂಕು ಘೋಷಣೆಯಲ್ಲಿ ಸರ್ಕಾರದ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸಿ ವಿಜಯಪುರ ಜಿಲ್ಲೆಯ ಜಿಲ್ಲೆಯ ಇಂಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ಸಲ್ಲಿಸಿದ್ದಾರೆ. ಈ ಹಿಂದೆ ಸಚಿವ ಸ್ಥಾನದ ವಿಚಾರವಾಗಿಯೂ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಅವರ ಮನವೊಲಿಸಲಾಗಿತ್ತು.
ಯಶವಂತರಾಯಗೌಡ ಪಾಟೀಲ್ ಮತ್ತು ರಾಜೀನಾಮೆ ಪತ್ರ -
ವಿಜಯಪುರ, ಸೆ. 23: ಬರ ಪೀಡಿತ ತಾಲೂಕು ಘೋಷಣೆಯಲ್ಲಿ ಸರ್ಕಾರದ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸಿ ಜಿಲ್ಲೆಯ ಇಂಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ್ (Yashavant Rayagoud Patil) ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಹಿಂದೆ ಸಚಿವ ಸ್ಥಾನದ ವಿಚಾರವಾಗಿಯೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಯಶವಂತರಾಯಗೌಡ ಅವರನ್ನು ಬಳಿಕ ಪಕ್ಷದ ಹಿರಿಯ ನಾಯಕರ ಮನವೊಲಿಸಿದ್ದರು. ಇದೀಗ ಬರ ಪೀಡಿತ ತಾಲೂಕು ಘೋಷಿಸುವಲ್ಲಿ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ರಾಜೀನಾಮೆ ಪತ್ರವನ್ನು ವಿಧಾನಸಭೆ ಸಭಾಧ್ಯಕ್ಷ ಜಿ.ಎಸ್. ಪಾಟೀಲ್ ಅವರಿಗೆ ಸಲ್ಲಿಸಿದ್ದಾರೆ.
ʼʼವಿಜಯಪುರ ಜಿಲ್ಲೆಯ ನಾನು ಪ್ರತಿನಿಧಿಸುವ ಇಂಡಿ ತಾಲೂಕು 2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತೀವ್ರ ಬರಗಾಲಕ್ಕೆ ತುತ್ತಾಗಿದ್ದು, ಆರಂಭದಲ್ಲಿ ಸ್ವಲ್ಪ ಮಳೆ ಬಿದ್ದ ಪ್ರಯುಕ್ತ ರೈತರು ಸಾಲಮಾಡಿ ಬೀಜ, ಗೊಬ್ಬರಗಳನ್ನು ಖರೀದಿಸಿ, ಬಿತ್ತನೆ ಮಾಡಿದ್ದಾರೆ. ಆದರೆ, ಸಕಾಲಕ್ಕೆ ಮಳೆಯಾಗದ ಕಾರಣ ಬೆಳೆಗಳು ಬತ್ತಿಹೋಗಿದ್ದು, ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯುಂಟಾಗಿರುತ್ತದೆʼʼ ಎಂದು ಯಶವಂತರಾಯಗೌಡ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಯಶವಂತರಾಯಗೌಡ ಪಾಟೀಲರಿಗೆ ಸಚಿವ ಸ್ಥಾನ ನೀಡಲು ಹೈಕಮಾಂಡ್ʼಗೆ ಆಗ್ರಹ
ಮುಂದುವರಿದು, ʼʼಈ ಬಗ್ಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗೆ ಆಗಸ್ಟ್ 28ರಂದು ಪತ್ರ ಸಲ್ಲಿಸಿ, ಇಂಡಿ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸುವಂತೆ ಮನವಿ ಮಾಡಲಾಗಿತ್ತು. ಆದರೆ ವಿಜಯಪುರ ಜಿಲ್ಲೆಯ ಒಟ್ಟು 13 ತಾಲೂಕುಗಳ ಪೈಕಿ ನಾನು ಪ್ರತಿನಿಧಿಸುವ ಇಂಡಿ ಮತ್ತು ಚಡಚಣ ಸೇರಿ ಈ 2 ತಾಲೂಕುಗಳನ್ನು ಹೊರತುಪಡಿಸಿ, ಇದುವರೆಗೂ ರಾಜ್ಯದ 188 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆʼʼ ಎಂದಿದ್ದಾರೆ.
ʼʼನಾನು ಆಡಳಿತ ಪಕ್ಷದ ಶಾಸಕನಾಗಿದ್ದು, ಸರ್ಕಾರಕ್ಕೆ ಮುಜಗರವಾಗಬಾರದೆಂದು ಸೂಕ್ಷ್ಮಮತಿಯನಾಗಿ ಹಲವು ಬಾರಿ ಮನವಿ ಮಾಡಿಕೊಂಡಿದ್ದೇನೆ. ಆದರೂ ನಮ್ಮ ಮಾತಿಗೆ, ನಮ್ಮ ಭಾವನೆಗಳಿಗೆ ಬೆಲೆ ಇಲ್ಲದಂತಾಗಿದ್ದು, ಈಗಿನ ರಾಜಕೀಯ ವಾತವರಣದಲ್ಲಿ ಬಲಾಡ್ಯರಿಗೆ, ಒತ್ತಡ ತಂತ್ರಗಳನ್ನು ಎಣಿಯುವವರಿಗೆ ಮನ್ನಣೆ ನೀಡಲಾಗುತ್ತಿದೆʼʼ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ʼʼಆದ್ದರಿಂದ ನನ್ನ ಕ್ಷೇತ್ರದ ಜನರ ಆಸೆ, ಆಶೋತ್ತರಗಳಿಗೆ ಸ್ಪಂದಿಸಲು ಸಾಧ್ಯವಾಗದ ಪ್ರಯುಕ್ತ ನಾನು ಸ್ವ-ಇಚ್ಛೆಯಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ದಯವಿಟ್ಟು ಅಂಗೀಕರಿಸಿʼʼ ಎಂದು ವಿಧಾನಸಭೆ ಸಭಾಧ್ಯಕ್ಷ ಜಿ.ಎಸ್.ಪಾಟೀಲ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ʼʼಇಂಡಿ ಮತ್ತು ಚಡಚಣ ತಾಲೂಕುಗಳ ರೈತರು ಬೀಜ ಮತ್ತು ರಸಗೊಬ್ಬರ ಖರೀದಿಸಲು ಸಾಲ ಮಾಡಿದ್ದು, ಇದೀಗ ಮಳೆಯ ಅಭಾವದಿಂದಾಗಿ ಬೆಳೆಗಳು ಒಣಗಿಹೋಗುವ ಪರಿಸ್ಥಿತಿ ಎದುರಾಗಿದೆ. ಅಲ್ಲದೆ ಕುಡಿಯುವ ನೀರು ಮತ್ತು ಮೇವಿನ ಕೊರತೆ ಅಲ್ಲಿನ ಜನರು ಹಾಗೂ ಜಾನುವಾರುಗಳ ಮೇಲೆ ಪರಿಣಾಮ ಬೀರುತ್ತಿದೆʼʼ ಎಂದು ವಿವರಿಸಿದ್ದಾರೆ.
ಸಚಿವ ಸ್ಥಾನ ಸಿಗದ ಹಿನ್ನೆಲೆ ಇಂಡಿ ಶಾಸಕ ಯಶವಂತರಾಯ ಗೌಡ ಪಾಟೀಲ್ ರಾಜೀನಾಮೆ ಸಲ್ಲಿಕೆ
ಇಂಡಿ ಮತ್ತು ಚಡಚಣ ಪ್ರದೇಶಗಳಿಗೆ ಬರಪೀಡಿತ ಪ್ರದೇಶದ ಸ್ಥಾನಮಾನ ನೀಡುವಂತೆ ಕೋರಿ ಆಗಸ್ಟ್ 28ರಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾಗಿ ಪಾಟೀಲ್ ಹೇಳಿದ್ದಾರೆ. ವಿಜಯಪುರ ಜಿಲ್ಲೆಯ 13 ತಾಲೂಕುಗಳ ಪೈಕಿ 11 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದರೂ, ಇಂಡಿ ಮತ್ತು ಚಡಚಣಗಳನ್ನು ಅದರಿಂದ ಕೈಬಿಡಲಾಗಿದೆ ಎಂದು ಅವರು ನೋವು ತೋಡಿಕೊಂಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.