Physical Abuse: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ; ಕಾಲೇಜು ಪ್ರಿನ್ಸಿಪಾಲ್ ಅರೆಸ್ಟ್
Physical Abuse: ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರನ್ನು ಅರೆಸ್ಟ್ ಮಾಡಲಾಗಿದೆ.
Prabhakara R
January 4, 2025
ವಿಜಯಪುರ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ (Physical Abuse) ನೀಡಿದ ಆರೋಪದಲ್ಲಿ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರನ್ನು ಅರೆಸ್ಟ್ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿ ನಡೆದಿದೆ. ಸಚಿನ್ ಕುಮಾರ್ ಪಾಟೀಲ್ ಬಂಧಿತ ಪ್ರಿನ್ಸಿಪಾಲ್.
ಕಳೆದ ಜುಲೈನಲ್ಲಿ ಪ್ರಕರಣದ ನಡೆದಿದ್ದು, ಈ ಸಂಬಂಧ ಜನವರಿ 2ರಂದು ವಿದ್ಯಾರ್ಥಿನಿಯರು ಮನಗೂಳಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರೋಪಿ ಪ್ರಾಂಶುಪಾಲ ವಿದ್ಯಾರ್ಥಿನಿಯರ ಮೈ-ಕೈ ಮುಟ್ಟುವುದು ಹಾಗೂ ಅಪ್ಪಿಕೊಳ್ಳುತ್ತಿದ್ದರು. ಇದಕ್ಕೆ ಪ್ರತಿರೋಧಿಸಿದರೆ ಪರೀಕ್ಷೆಯಲ್ಲಿ ಫೇಲ್ ಮಾಡುವುದಾಗಿ ಬೆದರಿಸುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಚಿನ್ ಪಾಟೀಲ್ ಕಿರುಕುಳಕ್ಕೆ ವಿದ್ಯಾರ್ಥಿನಿ ಒಬ್ಬಳು ಅರ್ಧಕ್ಕೆ ಕಾಲೇಜು ಬಿಟ್ಟಿದ್ದಳು. ಅಲ್ಲದೆ ಮೊದಲ ಸೆಮಿಸ್ಟರ್ ಪರೀಕ್ಷೆಯಲ್ಲಿ ಒಂದು ವಿಷಯದಲ್ಲಿ ಕೂಡ ಫೇಲ್ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿದಾಗ ನನಗೆ ಸಹಕರಿಸಿದರೆ ಟಾಪರ್ ಮಾಡುತ್ತೇನೆ ಎಂದು ಹೇಳಿದ್ದರು ಎನ್ನಲಾಗಿದೆ.
ಇನ್ನು ಮತ್ತೊಬ್ಬ ವಿದ್ಯಾರ್ಥಿನಿಗೆ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಗೆ ಹೋದಾಗಲೂ ಕಿರುಕುಳ ನೀಡಲಾಗಿತ್ತು ಎಂದು ಆರೋಪಿಸಲಾಗಿದೆ. ಈ ದೂರಿನ ಆಧಾರದಡಿ ಆರೋಪಿಯನ್ನು ಬಂಧಿಸಿ, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷಣ್ ನಿಂಬರಗಿ ಮಾಹಿತಿ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ | Girl Dies: ಕಟ್ಟಡದಿಂದ ಮರದ ತುಂಡು ಬಿದ್ದು 15 ವರ್ಷದ ಬಾಲಕಿ ಸಾವು
ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಕೇಸ್; ಡಿವೈಎಸ್‌ಪಿಗೆ 14 ದಿನ ನ್ಯಾಯಾಂಗ ಬಂಧನ
ತುಮಕೂರು: ದೂರು ನೀಡಲು ಬಂದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ (Madhugiri News) ಮಧುಗಿರಿ ಡಿವೈಎಸ್‌ಪಿ ರಾಮಚಂದ್ರಪ್ಪಕ್ಕೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಮಧುಗಿರಿ ನ್ಯಾಯಾಲಯ ಆದೇಶಿಸಿದೆ. ಜಮೀನು ವ್ಯಾಜ್ಯ ಸಂಬಂಧ ಪಾವಗಡ ಮೂಲದ ಮಹಿಳೆಯೊಬ್ಬಳು ದೂರು ನೀಡಲು ಡಿವೈಎಸ್‌ಪಿ ಕಚೇರಿಗೆ ಬಂದಿದ್ದಾಗ ಪುಸಲಾಯಿಸಿ ಠಾಣೆಯ ಶೌಚಗೃಹದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದ ಹಿನ್ನೆಲೆಯಲ್ಲಿ ಸಂತ್ರಸ್ತೆ, ಮಧುಗಿರಿ ಠಾಣೆಯಲ್ಲಿ ದೂರು ನೀಡಿದ್ದರು.
ದೂರು ದಾಖಲಾದ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ (ಜ.3) ಡಿವೈಎಸ್‌ಪಿ ರಾಮಚಂದ್ರಪ್ಪನನ್ನು ಬಂಧಿಸಿದ್ದ ಪೊಲೀಸರು ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಮಧುಗಿರಿಯ ಹಿರಿಯ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಮೀಳಮ್ಮ ಅವರು ಆರೋಪಿಯನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಮಧುಗಿರಿ ಕಾರಾಗೃಹದಿಂದ ಡಿವೈಎಸ್‌ಪಿ ರಾಮಚಂದ್ರಪ್ಪನನ್ನು ಸೋಮವಾರ ಜಿಲ್ಲಾ ಕಾರಾಗೃಹಕ್ಕೆ ಕರೆದೊಯ್ಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಪ್ರಕರಣ?ಜಮೀನು ತಗಾದೆ ವಿವಾದಕ್ಕೆ ಸಂಬಂಧಿಸಿದಂತೆ ದೂರು ನೀಡಲು ಠಾಣೆಗೆ ಬಂದ ಮಹಿಳೆಯನ್ನು ಮಧುಗಿರಿ ಉಪವಿಭಾಗದ ಡಿವೈಎಸ್‌ಪಿ ರಾಮಚಂದ್ರಪ್ಪ, ಕಚೇರಿಯ ಶೌಚಾಲಯಕ್ಕೆ ಕರೆದುಕೊಂಡುಹೋಗಿ ತನ್ನ ಕಾಮತೃಷೆ ತೀರಿಸಲು ಬಲವಂತಪಡಿಸಿದ್ದಾರೆ ಎಂದು ಆರೋಪ ಕೇಳಿಬಂದಿತ್ತು. ಈ ಸನ್ನಿವೇಶದಲ್ಲಿ ಅದನ್ನು ಠಾಣೆಯಲ್ಲಿದ್ದ ಸಾರ್ವಜನಿಕರೊಬ್ಬರು ಶೌಚಾಲಯದ ಗೋಡೆಯ ಈಚೆಯಿಂದ ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿಕೊಂಡಿದ್ದರು. ಆ ವಿಡಿಯೊ ವೈರಲ್ ಆಗಿ, ಎಲ್ಲೆಡೆ ಹರಿದಾಡಿತ್ತು. ಅಧಿಕಾರಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ಕೇಳಿಬಂದಿದ್ದರಿಂದ ಡಿಜಿ, ಐಜಿಪಿ ಅಲೋಕ್ ಮೋಹನ್ ಅವರು ಡಿವೈಎಸ್‌ಪಿ ರಾಮಚಂದ್ರಪ್ಪರನ್ನು ಅಮಾನತು ಮಾಡಿ ಆದೇಶಿಸಿದ್ದರು. ಅದರ ಬೆನ್ನಲ್ಲೇ ಶುಕ್ರವಾರ ರಾತ್ರಿ ಡಿವೈಎಸ್‌ಪಿ ಬಂಧನವಾಗಿತ್ತು.
ಈ ಸುದ್ದಿಯನ್ನೂ ಓದಿ | Manipur Militants: ಎಲಾನ್ ಮಸ್ಕ್‌ನ ಸ್ಟಾರ್‌ಲಿಂಕ್ ಉಪಕರಣ ಬಳಸುತ್ತಿದ್ದ ಮಣಿಪುರ ಉಗ್ರಗಾಮಿಗಳು