ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬಸನಗೌಡ ಪಾಟೀಲ್‌ ಸಾವಿನಲ್ಲಿ ರಾಜಕಾರಣ

ಬ್ಯಾಂಕ್‌ನಲ್ಲಿ ಹಣ ದುರ್ಬಳಕೆಯಾಗಿರುವ ಆರೋಪದ ಹಿನ್ನೆಲೆ ಏಪ್ರಿಲ್ 13ರಂದು ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನ ಕಚೇರಿಯ ನಿರ್ದೇಶನದ ಮೇರೆಗೆ ಆಡಿಟ್ ವರದಿ ಪಡೆದು ಸರಕಾರಕ್ಕೆ ಸಲ್ಲಿಸಲಾಗಿತ್ತು. ಆಡಿಟ್ ವರದಿಯ ಆಧಾರದ ಮೇಲೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವಂತೆ ಶಿಫಾರಸು ಮಾಡಲಾಗಿದ್ದು, ಸರಕಾರ ಅದಕ್ಕೆ ಅನುಮೋದನೆ ನೀಡಿದೆ

ಬಸನಗೌಡ ಪಾಟೀಲ್‌ ಸಾವಿನಲ್ಲಿ ರಾಜಕಾರಣ

-

Profile
Ashok Nayak Jul 5, 2026 11:36 AM

ವೀರೇಶ ಎಸ್.ಕೆಂಭಾವಿ ಯಾದಗಿರಿ

7 ಕೋಟಿ ರು.ದುರ್ಬಳಕೆ ಆರೋಪ

ಸಹಕಾರಿ ಬ್ಯಾಂಕ್ ಅಧ್ಯಕ್ಷ ಆತ್ಮಹತ್ಯೆ

ರಾಜಕೀಯ ಆರೋಪ-ಪ್ರತ್ಯಾರೋಪಕ್ಕೆ ತಿರುಗಿದ ಪ್ರಕರಣ

3 ಪುಟಗಳ ಡೆತ್‌ನೋಟ್‌ನಲ್ಲಿ ಹಲವು ಅಂಶ

ಸಿಐಡಿ ತನಿಖೆಗೆ ಹಣ ದುರ್ಬಳಕೆ ಪ್ರಕರಣ ಹಸ್ತಾಂತರ

ಶಹಾಪುರ ನಗರದ ಮಾತೋಶ್ರೀ ಹೇಮರೆಡ್ಡಿ ಮಲ್ಲಮ್ಮ ಸೌಹಾರ್ದ ಸಹಕಾರ ಬ್ಯಾಂಕ್‌ನಲ್ಲಿ ನಡೆದಿರುವ ಅಂದಾಜು 7 ಕೋಟಿ ರು. ಹಣ ದುರ್ಬಳಕೆ ಪ್ರಕರಣ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಇದೇ ಪ್ರಕರಣದ ತನಿಖೆ ನಡೆಯುತ್ತಿರುವ ನಡುವೆಯೇ ಬ್ಯಾಂಕ್ ಅಧ್ಯಕ್ಷ ಬಸನಗೌಡ ಪಾಟೀಲ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದು ಪ್ರಕರಣಕ್ಕೆ ಮತ್ತಷ್ಟು ಗಂಭೀರ ಸ್ವರೂಪ ನೀಡಿದೆ.

ಹಣ ದುರ್ಬಳಕೆ ಪ್ರಕರಣವನ್ನು ಸರಕಾರ ಸಿಐಡಿ ತನಿಖೆಗೆ ವರ್ಗಾಯಿಸಿರುವ ಬೆನ್ನಲ್ಲೇ, ಪ್ರಕರಣ ರಾಜಕೀಯ ಆರೋಪ-ಪ್ರತ್ಯಾರೋಪಕ್ಕೂ ಕಾರಣವಾಗಿದ್ದು, ಹಲವು ಪ್ರಶ್ನೆಗಳಿಗೆ ತನಿಖೆಯೇ ಉತ್ತರ ನೀಡಬೇಕಾಗಿದೆ.

ಬ್ಯಾಂಕ್‌ನಲ್ಲಿ ಹಣ ದುರ್ಬಳಕೆಯಾಗಿರುವ ಆರೋಪದ ಹಿನ್ನೆಲೆ ಏಪ್ರಿಲ್ 13ರಂದು ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನ ಕಚೇರಿಯ ನಿರ್ದೇಶನದ ಮೇರೆಗೆ ಆಡಿಟ್ ವರದಿ ಪಡೆದು ಸರಕಾರಕ್ಕೆ ಸಲ್ಲಿಸಲಾಗಿತ್ತು. ಆಡಿಟ್ ವರದಿಯ ಆಧಾರದ ಮೇಲೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವಂತೆ ಶಿಫಾರಸು ಮಾಡಲಾಗಿದ್ದು, ಸರಕಾರ ಅದಕ್ಕೆ ಅನುಮೋದನೆ ನೀಡಿದೆ. ಸಿಐಡಿ ತನಿಖಾಧಿಕಾರಿ ನೇಮಕವಾದ ಬಳಿಕ ಪ್ರಕರಣದ ದಾಖಲಾತಿಗಳನ್ನು ಹಸ್ತಾಂತರಿಸ ಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ತಿಳಿಸಿದ್ದಾರೆ.

ಇದನ್ನೂ ಓದಿ: Yadgir News: ಯಾದಗಿರಿಯಲ್ಲಿ ಕ್ವಾರಿಗೆ ಬಿದ್ದು ಇಬ್ಬರು ಬಾಲಕಿಯರು ಸೇರಿ ಮೂವರ ಸಾವು; ಬಟ್ಟೆ ತೊಳೆಯುವ ವೇಳೆ ದುರಂತ!

ಈ ಬೆಳವಣಿಗೆಗಳ ನಡುವೆಯೇ ಬ್ಯಾಂಕ್ ಅಧ್ಯಕ್ಷ ಬಸನಗೌಡ ಪಾಟೀಲ ಅವರು ಕಳೆದ ಮಂಗಳ ವಾರ ಬೆಳಗ್ಗೆ ತಮ್ಮ ಮನೆಯ ಹಿಂಭಾಗದಲ್ಲಿದ್ದ ಕಬ್ಬಿಣದ ಮೆಟ್ಟಿಲಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಅದರ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದ್ದಾರೆ. ಆತ್ಮಹತ್ಯೆಗೆ ಮುನ್ನ ಬಸನಗೌಡ ಪಾಟೀಲ ಮೂರು ಪುಟಗಳ ಡೆತ್‌ನೋಟ್ ಬರೆದಿಟ್ಟು ಹೋಗಿದ್ದಾರೆ. ಅದರಲ್ಲಿ ನನ್ನ ಸಾವಿಗೆ ನಾನೇ ಕಾರಣ,

ಬೇರೆ ಯಾರೂ ಕಾರಣರಲ್ಲ ಎಂದು ಉಲ್ಲೇಖಿಸಿರುವ ಜತೆಗೆ, ಠೇವಣಿದಾರರ ಹಣವನ್ನು ಹಿಂತಿರುಗಿಸಲು ಸಾಕಷ್ಟು ಪ್ರಯತ್ನಿಸಿದರೂ ಅಗತ್ಯ ಸಹಕಾರ ದೊರೆಯಲಿಲ್ಲ ಎಂಬ ಅಂಶ ಗಳನ್ನೂ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ. ಡೆತ್‌ನೋಟ್‌ನ ಕೈಬರಹವನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.

ಠೇವಣಿದಾರರಿಗೆ ಜೂನ್ 10ರೊಳಗೆ ಹಣ ಮರುಪಾವತಿಸುವ ಕುರಿತು ಒಪ್ಪಂದವಾಗಿದ್ದರೂ, ನಿಗದಿತ ಅವಧಿಯಲ್ಲಿ ಹಣ ಪಾವತಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಜೂನ್ 9ರಂದು ಬಸನಗೌಡ ಪಾಟೀಲ ಊರು ತೊರೆದಿದ್ದರು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.

ಈ ನಡುವೆ ಪ್ರಕರಣಕ್ಕೆ ರಾಜಕೀಯ ಬಣ್ಣವೂ ತಗುಲಿದೆ. ಪ್ರತಿಪಕ್ಷ ಬಿಜೆಪಿ ನಾಯಕರು ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಳಿತ ಪಕ್ಷದ ಕೆಲ ಜನಪ್ರತಿನಿಧಿಗಳ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ಆತ್ಮಹತ್ಯೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಹೀಗಾಗಿ ಬ್ಯಾಂಕ್ ಹಣ ದುರ್ಬಳಕೆ ಪ್ರಕರಣ ಈಗ ಹಣಕಾಸು ಅಕ್ರಮದ ವ್ಯಾಪ್ತಿಯನ್ನು ಮೀರಿ ರಾಜಕೀಯ ಆರೋಪಗಳ ಕೇಂದ್ರಬಿಂದುವಾಗಿಯೂ ಮಾರ್ಪಟ್ಟಿದೆ.

ಪ್ರಸ್ತುತ ಬಸನಗೌಡ ಪಾಟೀಲ ಅವರ ಸಾವಿನ ಸಂಬಂಧ ಶಹಾಪುರ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಮತ್ತೊಂದೆಡೆ, ಬ್ಯಾಂಕ್‌ನಲ್ಲಿ ನಡೆದಿರುವ ಅಂದಾಜು 7 ಕೋಟಿ ರು. ಹಣ ದುರ್ಬಳಕೆ ಪ್ರಕರಣ ವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ. ಸಿಐಡಿ ತನಿಖೆ ಮತ್ತು ಪೊಲೀಸ್ ತನಿಖೆ ಎರಡರ ವರದಿಯ ಬಳಿಕವೇ ಪ್ರಕರಣದ ಹಲವು ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ದೊರೆಯುವ ನಿರೀಕ್ಷೆ ಇದೆ.

ಬಿಜೆಪಿ ನಾಯಕರ ಆರೋಪಗಳೇನು?

ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ಅಮೀನ್ ರೆಡ್ಡಿ ಯಾಳಗಿ, ಬ್ಯಾಂಕ್ ಅಧ್ಯಕ್ಷ ಬಸನಗೌಡ ಮಾಲಿಪಾಟೀಲ್ ಆತ್ಮಹತ್ಯೆಗೆ ಶಾಸಕ ಶರಣಬಸಪ್ಪ ದರ್ಶನಾಪುರ, ಅಂಬರೀಶಗೌಡ ದರ್ಶನಾಪುರ ಹಾಗೂ ವಿಶ್ವನಾಥರೆಡ್ಡಿ ದರ್ಶನಾಪುರ ನೇರ ಕಾರಣ ಎಂದು ಆರೋಪ.

ಮಾತೋಶ್ರೀ ಹೇಮರೆಡ್ಡಿ ಮಲ್ಲಮ್ಮ ಸೌಹಾರ್ದ ಸಹಕಾರ ಸಂಘದ ಹಣಕಾಸು ಅವ್ಯವಹಾರ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹ.

ಬಸನಗೌಡ ಪಾಟೀಲ ಬರೆದಿರುವ ಡೆತ್‌ನೋಟ್ ಬಹಿರಂಗಪಡಿಸಿ, ಅವರು ಈ ಹಿಂದೆ ನೀಡಿದ್ದ ದೂರಿನ ಆಧಾರದ ಮೇಲೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ.

ಬ್ಯಾಂಕ್‌ಗೆ ಬರಬೇಕಿರುವ ಹಣವನ್ನು ವಸೂಲಿ ಮಾಡಿ ಠೇವಣಿದಾರರಿಗೆ ಮರುಪಾವತಿ ಮಾಡಬೇಕು ಎಂದು ಶಾಸಕರಿಗೆ ಮನವಿ.

ತಪ್ಪಿತಸ್ಥರ ವಿರುದ್ಧ ಕ್ರಮವಾಗದಿದ್ದರೆ ಶಹಾಪುರದಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಕೆ.