#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Narada Sanchara: ಮೂಲೆಗುಂಪಾದ ಹಿರಿಯ ನಾಯಕ

ದೇವೇಂದ್ರ ಫಡ್ನವಿಸ್‌ರ ಸಚಿವ ಸಂಪುಟದಲ್ಲಿ ಸ್ಥಾನವನ್ನು ನಿರಾಕರಿಸಿದಾಗಿನಿಂದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ (ಅಜಿತ್ ಪವಾರ್ ಬಣ) ಹಿರಿಯ ನಾಯಕ ಛಗನ್ ಭುಜಬಲ್ ಅವರು ಶಾನೆ ಮುನಿಸಿಕೊಂಡಿದ್ದರಂತೆ. ಹೀಗಾಗಿ, ಶಿರಡಿಯಲ್ಲಿ ಆಯೋಜಿಸಲಾಗಿದ್ದ ಪಕ್ಷದ ಎರಡು ದಿನಗಳ ಸಮಾ ವೇಶದಲ್ಲಿ ಪಾಲ್ಗೊಳ್ಳ ದಿರಲು ಅವರು ನಿರ್ಧರಿಸಿದ್ದರಲ್ಲಿ ಅಚ್ಚರಿಯೇನೂ ಇರಲಿಲ್ಲ. ಆದರೆ, ಸಂಭಾವ್ಯ ಹಾನಿಯನ್ನು ಮುನ್ನಂದಾಜಿಸಿ ಅಖಾಡಕ್ಕಿಳಿದ ಹಿರಿಯ ನಾಯಕ ಪ್ರಫುಲ್ ಪಟೇಲ್ ಅವರು, ನಾಸಿಕ್ ನಲ್ಲಿರುವ ಛಗನ್ ಭುಜಬಲ್ ಅವರ ನಿವಾಸಕ್ಕೇ ತೆರಳಿ, ಸಾಕಷ್ಟು ಮಸ್ಕಾ ಹೊಡೆದು ಸಮಾಧಾನ ಪಡಿಸಿದ ನಂತರವಷ್ಟೇ ಸಮಾವೇಶದಲ್ಲಿ ಪಾಲ್ಗೊಳ್ಳಲು ಭುಜಬಲ್ ಒಪ್ಪಿಕೊಂಡರಂತೆ.

ಮೂಲೆಗುಂಪಾದ ಹಿರಿಯ ನಾಯಕ

Profile Ashok Nayak Feb 12, 2025 11:59 AM

ನಾರದ ಸಂಚಾರ

ವಿಧಾನಸಭೆಯಿರಲಿ, ಸಂಸತ್ತೇ ಇರಲಿ, ಆಡಳಿತ ಪಕ್ಷದ ವತಿಯಿಂದ ಚುನಾಯಿತರಾದ ಎಲ್ಲರಿಗೂ ಸಚಿವ ಸ್ಥಾನವನ್ನು ನೀಡಲಾಗದು. ಅದು ಕಾರ್ಯತಃ ಅಸಾಧ್ಯ. ಈ ಕಹಿಸತ್ಯದ ಅರಿವಿದ್ದೂ ಕೆಲ ವರು ತಮಗೆ ಮಂತ್ರಿಗಿರಿ ಸಿಗಲಿಲ್ಲ ಎಂದು ಮುನಿಸಿಕೊಂಡು ಕೂರುವುದಿದೆ. ಅದರಲ್ಲೂ, ಸಾಕಷ್ಟು ವರ್ಷಗಳ ಕಾಲ ಅಧಿಕಾರದ ರುಚಿ ಕಂಡವರೂ ಹೀಗೆ ಮಂತ್ರಿಗಿರಿಗಾಗಿ ಹಂಬಲಿಸಿ, ಅದು ಸಿಗದಿ ದ್ದಾಗ ಮುನಿಸಿಕೊಂಡು ಕೂರುವುದನ್ನು ನೋಡಿದಾಗ, ‘ಅಯ್ಯೋ ಅಧಿಕಾರ ದಾಹವೇ!’ ಎಂದು ಜನರು ಒಳಗೊಳಗೇ ಆಡಿಕೊಳ್ಳುವುದುಂಟು.

ಸ್ವಾತಂತ್ರ್ಯೋತ್ತರ ಭಾರತದಲ್ಲಿ ಇಂಥ ಸಾಕಷ್ಟು ಹಗ್ಗಜಗ್ಗಾಟಗಳನ್ನು ನಮ್ಮ ಜನರು ಕಂಡಿದ್ದಾ ರಾದರೂ, ಇತ್ತೀಚಿನ ದಶಕಗಳಲ್ಲಿ ಇಂಥ ‘ನೀ ಕೊಡೆ, ನಾ ಬಿಡೆ’ ರೀತಿಯ ಪ್ರಸಂಗಗಳು ಹೆಚ್ಚೆಚ್ಚು ವರದಿಯಾಗುತ್ತಿವೆ. ನೆರೆರಾಜ್ಯ ಮಹಾರಾಷ್ಟ್ರದಿಂದ ಅಂಥದೊಂದು ಪ್ರಸಂಗ ವರದಿಯಾಗಿದೆ ನೋಡಿ: ಅಲ್ಲಿನ ದೇವೇಂದ್ರ ಫಡ್ನವಿಸ್‌ರ ಸಚಿವ ಸಂಪುಟದಲ್ಲಿ ಸ್ಥಾನವನ್ನು ನಿರಾಕರಿಸಿದಾಗಿನಿಂದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ (ಅಜಿತ್ ಪವಾರ್ ಬಣ) ಹಿರಿಯ ನಾಯಕ ಛಗನ್ ಭುಜಬಲ್ ಅವರು ಶಾನೆ ಮುನಿಸಿಕೊಂಡಿದ್ದರಂತೆ. ಹೀಗಾಗಿ, ಶಿರಡಿಯಲ್ಲಿ ಆಯೋಜಿಸಲಾಗಿದ್ದ ಪಕ್ಷದ ಎರಡು ದಿನಗಳ ಸಮಾವೇಶದಲ್ಲಿ ಪಾಲ್ಗೊಳ್ಳ ದಿರಲು ಅವರು ನಿರ್ಧರಿಸಿದ್ದರಲ್ಲಿ ಅಚ್ಚರಿಯೇನೂ ಇರಲಿಲ್ಲ. ಆದರೆ, ಸಂಭಾವ್ಯ ಹಾನಿಯನ್ನು ಮುನ್ನಂದಾಜಿಸಿ ಅಖಾಡಕ್ಕಿಳಿದ ಹಿರಿಯ ನಾಯಕ ಪ್ರಫುಲ್ ಪಟೇಲ್ ಅವರು, ನಾಸಿಕ್ ನಲ್ಲಿರುವ ಛಗನ್ ಭುಜಬಲ್ ಅವರ ನಿವಾಸಕ್ಕೇ ತೆರಳಿ, ಸಾಕಷ್ಟು ಮಸ್ಕಾ ಹೊಡೆದು ಸಮಾಧಾನಪಡಿಸಿದ ನಂತರವಷ್ಟೇ ಸಮಾವೇಶದಲ್ಲಿ ಪಾಲ್ಗೊಳ್ಳಲು ಭುಜಬಲ್ ಒಪ್ಪಿಕೊಂಡರಂತೆ.

ಇದನ್ನೂ ಓದಿ: Narada Sanchara: ಸಿಂಗ್ ಈಸ್ ಮಿಂಚಿಂಗ್!

ಹಾಗೆಂದ ಮಾತ್ರಕ್ಕೆ ಅವರು ತಮ್ಮ ‘ರಾಜಕೀಯ ಶಸ್ತ್ರಾಸ್ತ್ರಗಳನ್ನು’ ಕೆಳಗಿಳಿಸಿಬಿಟ್ಟಿದ್ದರು ಎಂದೇನೂ ಅರ್ಥವಲ್ಲ; ತಮ್ಮ ಅಸಮಾಧಾನವನ್ನು ಹೊರಹಾಕಲು ಈ ಸಮಾವೇಶವನ್ನು ಸಮರ್ಥವಾಗೇ ಬಳಸಿಕೊಂಡ ಅವರು, “ಪಕ್ಷವು ಅಜಿತ್ ಪವಾರ್ ಯುಗವನ್ನು ಪ್ರವೇಶಿಸಿದಾಗಿನಿಂದ, ವರಿಷ್ಠ ರೊಂದಿಗೆ ಸಮಾಲೋಚನೆ ನಡೆಸುವ ಸತ್ಸಂಪ್ರದಾಯಕ್ಕೆ ಎಳ್ಳು-ನೀರು ಬಿಡಲಾಗಿದೆ" ಎಂದು ನೇರವಾಗಿ ಹೇಳಿಬಿಟ್ಟರಂತೆ!

ಇಂಥ ಮಾತುಗಳು ಹೊಮ್ಮುವುದಕ್ಕೆ ‘ಕಾರಣರಾದವರು’ ಸೂಕ್ಷ್ಮ ಮನಸ್ಸಿನವರಾದರೆ, ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಮನಸ್ಸು ಮಾಡುತ್ತಾರೆ; ಒಂದೊಮ್ಮೆ ಅವರು ‘ಡೋಂಟ್ ಕೇರ್ ಮಾಸ್ಟರ್’ ಗಳಾದರೆ, ಈ ಕಡೆ ಕಿವಿಯಲ್ಲಿ ಕೇಳಿಸಿಕೊಂಡಿದ್ದನ್ನು ಆ ಕಡೆ ಕಿವಿಯಲ್ಲಿ ಹೊರಗೆ ಬಿಡುತ್ತಾರೆ.

ಇದು ನಮ್ಮ ದೇಶದ ರಾಜಕಾರಣದ ವಾಸ್ತವ. ಪ್ರಸ್ತುತ, ಛಗನ್ ಭುಜಬಲ್ ಅವರು ಕತ್ತಲಲ್ಲೇ ಬಿಟ್ಟಿರುವ ಈ ಕಪ್ಪಾದ ಬಾಣವು, ಸದ್ಯೋಭವಿಷ್ಯದಲ್ಲಿ ಅವರಿಗೆ ಯಾವ ತೆರನಾದ ಫಲಿತ ಅಥವಾ ಪ್ರತಿಕ್ರಿಯೆಯನ್ನು ಹೊತ್ತು ತರಲಿದೆ ಎಂಬುದನ್ನು ಕಾಲವಷ್ಟೇ ಹೇಳಬಲ್ಲದು!

ನಾರಾಯಣ ನಾರಾಯಣ!

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳ ಪ್ರಯಾಣ ದರವನ್ನು ಏರಿಸಿದ್ದಾಯ್ತು, ದಿನಬಳಕೆಯ ಪದಾರ್ಥಗಳ ಬೆಲೆಯಂತೂ ಏರುತ್ತಲೇ ಇದೆ. ಇಷ್ಟು ಸಾಲದೆಂಬಂತೆ ನಮ್ಮ ಮೆಟ್ರೋ ಪ್ರಯಾಣ ದರವೂ ಎರ್ರಾಬಿರ್ರಿ ಏರಿಕೆಯಾಗಿದೆ" ಎಂದು ವಯೋವೃದ್ಧರೊಬ್ಬರು ಅಲವತ್ತುಕೊಳ್ಳುತ್ತಿದ್ದಾಗ, ಅದನ್ನು ಕೇಳಿಸಿಕೊಂಡ ಯುವಕರೊಬ್ಬರು, “ಹಂಗ್ಯಾಕೆ ಅಂತೀರಿ ಸ್ವಾಮಿ? ಒಂದು ಬಾಬತ್ತಿನ ಬೆಲೆ ಇಳಿದಿದೆಯಲ್ಲಾ.." ಅಂದ್ರಂತೆ. ಈ ಮಾತಿಗೆ ವಯೋವೃದ್ಧರು ಎರಡೂ ಕಿವಿಗಳನ್ನು ಇನ್ನಷ್ಟು ಅಗಲಿಸಿಕೊಂಡು, “ಯಾವುದಯ್ಯಾ ಅದೂ..?" ಎಂದು ಕುತೂಹಲಭರಿತರಾಗಿ ಕೇಳಿದರಂತೆ.

ಆಗ ಆ ಯುವಕರು, “ಮನುಷ್ಯರ ಬೆಲೆ.." ಎಂದಷ್ಟೇ ಸಂಕ್ಷಿಪ್ತವಾಗಿ ಹೇಳಿ ಅಲ್ಲಿಂದ ಕಂಬಿ ಕಿತ್ತರಂತೆ!