Champions Trophy: ರವೀಂದ್ರ ಜಡೇಜಾ ಸ್ಥಾನದ ಬಗ್ಗೆ ಎಸ್ ಬದ್ರಿನಾಥ್ ಆಕ್ಷೇಪ!
S Badrinath On Ravindra Jadeja's selection: ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಹಾಗೂ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಭಾರತ ತಂಡದಲ್ಲಿ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾಗೆ ಸ್ಥಾನ ನೀಡಿದ ಬಗ್ಗೆ ತಮಿಳುನಾಡು ಮಾಜಿ ನಾಯಕ ಎಸ್ ಬದ್ರಿನಾಥ್ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ನವದೆಹಲಿ: ಟೀಮ್ ಇಂಡಿಯಾದ ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾಗೆ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಹಾಗೂ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಭಾರತ ತಂಡದಲ್ಲಿ ಸ್ಥಾನ ನೀಡಿರುವುದು ನನಗೆ ಅಚ್ಚರಿಯನ್ನು ತಂದಿದೆ ಎಂದು ಮಾಜಿ ಕ್ರಿಕೆಟಿಗ ಎಸ್ ಬದ್ರಿನಾಥ್ ತಿಳಿಸಿದ್ದಾರೆ. 2023ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದ ನಂತರ ರವೀಂದ್ರ ಜಡೇಜಾ 50 ಓವರ್‌ಗಳ ಸ್ವರೂಪಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ.
ಶ್ರೀಲಂಕಾ ವಿರುದ್ಧ ನಡೆದಿದ್ದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ರವೀಂದ್ರ ಜಡೇಜಾ ಬದಲಿಗೆ ಯುವ ಸ್ಪಿನ್ ಆಲ್‌ರೌಂಡರ್‌ಗಳಾದ ಅಕ್ಷರ್ ಪಟೇಲ್ ಹಾಗೂ ವಾಷಿಂಗ್ಟನ್ ಸುಂದರ್‌ಗೆ ಸ್ಥಾನ ನೀಡಲಾಗಿತ್ತು. ಇವರಿಬ್ಬರು ಭಾರತ ತಂಡದ ಭವಿಷ್ಯದ ಸ್ಪಿನ್ ಆಲ್‌ರೌಂಡರ್‌ಗಳಾಗಿ ಗುರುತಿಸಿಕೊಂಡಿದ್ದಾರೆ. ಆದ್ದರಿಂದ ಇಂಗ್ಲೆಂಡ್ ಸರಣಿ ಹಾಗೂ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಜಡೇಜಾ ಅವರನ್ನು ಆಯ್ಕೆ ಮಾಡಬಾರದಿತ್ತು ಎಂದು ಬದ್ರಿನಾಥ್ ಹೇಳಿದ್ದಾರೆ.
IND vs ENG 1st ODI: ವಿರಾಟ್ ಕೊಹ್ಲಿ ಆಡದೆ ಇರಲು ಕಾರಣ ತಿಳಿಸಿದ ರೋಹಿತ್ ಶರ್ಮಾ!
ಪ್ಲೇಯಿಂಗ್ XIನಲ್ಲಿ ಗೊಂದಲ: ಬದ್ರಿನಾಥ್
ಸ್ಟಾರ್ ಸ್ಪೋರ್ಟ್ಸ್ ಜೊತೆಗೆ ಸಂವಾದ ನಡೆಸಿರುವ ಮಾಜಿ ಕ್ರಿಕೆಟಿಗ ಬದ್ರಿನಾಥ್, ಇಂಗ್ಲೆಂಡ್ ಸರಣಿ ಹಾಗೂ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಜಡೇಜಾಗೆ ಸ್ಥಾನ ಕಲ್ಪಿಸಿರುವುದರಿಂದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಗೊಂದಲ ಉಂಟು ಮಾಡಲಿದೆ ಎಂದು ಹೇಳಿದ್ದಾರೆ.
"ಪಂದ್ಯದಲ್ಲಿ ಕೇವಲ ಕೆಲವೇ ಆಟಗಾರರನ್ನು ಆಯ್ಕೆ ಮಾಡಬೇಕಾಗಿದ್ದು, ಸ್ವಲ್ಪ ಗೊಂದಲ ಮೂಡಲಿದೆ. ರವೀಂದ್ರ ಜಡೇಜಾ ಆಯ್ಕೆಯಾಗಿರುವುದು ನಿಜಕ್ಕೂ ನನಗೆ ಅಚ್ಚರಿ ತಂದಿದೆ. ನಾನು ಅವರ ಆಯ್ಕೆಯನ್ನು ನಿರೀಕ್ಷಿಸಿರಲಿಲ್ಲ. ಏಕೆಂದರೆ ಪ್ಲೇಯಿಂಗ್ XIನಲ್ಲಿ ಕೆಲವರಿಗೆ ಮಾತ್ರ ಜಾಗ ಸಿಗಲಿದೆ. ಭವಿಷ್ಯದಲ್ಲಿ ಹೆಚ್ಚು ಕಾಲ ತಂಡದೊಂದಿಗೆ ಇರಲು ಆಗದ ಆಟಗಾರನನ್ನು ಏಕೆ ಆಯ್ಕೆ ಮಾಡುತ್ತೀರಿ? ಇದರಿಂದ ತಂಡದಲ್ಲಿ ಸ್ವಲ್ಪ ಗೊಂದಲ ಮೂಡಲಿದೆ," ಎಂದು ಎಸ್ ಬದ್ರಿನಾಥ್ ಪ್ರಶ್ನೆ ಮಾಡಿದ್ದಾರೆ.
IND vs ENG: ಚಾಂಪಿಯನ್ಸ್ ಟ್ರೋಫಿಗೆ ವರುಣ್ ಚಕ್ರವರ್ತಿ? ರೋಹಿತ್ ಶರ್ಮಾ ಹೇಳಿದ್ದಿದು!
ಜಡೇಜಾಗೆ ಅಕ್ಷರ್ ಕಠಿಣ ಸ್ಪರ್ಧಿ
ಇತ್ತೀಚೆಗೆ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ರವೀಂದ್ರ ಜಡೇಜಾಗೆ ಅಕ್ಷರ್ ಪಟೇಲ್ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿರುವ ಅಕ್ಷರ್ ಪಟೇಲ್, ಸೆಮಿಫೈನಲ್ ಹಾಗೂ ಫೈನಲ್ ಪಂದ್ಯದಲ್ಲಿ ತಮ್ಮ ಆಲ್‌ರೌಂಡರ್ ಪ್ರದರ್ಶನದಿಂದ ಗಮನ ಸೆಳೆದು ಭಾರತ ತಂಡ ಚಾಂಪಿಯನ್ ಪಟ್ಟ ಅಲಂಕರಿಸಲು ನೆರವು ನೀಡಿದ್ದರು. ಆದರೆ ರವೀಂದ್ರ ಜಡೇಜಾ 7 ಪಂದ್ಯಗಳಿಂದ ಒಂದು ವಿಕೆಟ್ ಪಡೆದಿದ್ದರು. ಇನ್ನು 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರವೀಂದ್ರ ಜಡೇಜಾ 16 ವಿಕೆಟ್ ಪಡೆದಿದ್ದರೂ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯದಲ್ಲಿ ಎಡವಿದ್ದರು. ಇಂಗ್ಲೆಂಡ್ ವಿರುದ್ಧ ಇಂದು (ಫೆಬ್ರವರಿ 6) ನಡೆಯಲಿರುವ ಮೊದಲ ಏಕದಿನ ಪಂದ್ಯದ ಪ್ಲೇಯಿಂಗ್ XIನಲ್ಲಿ ಜಡೇಜಾ ಮತ್ತು ಅಕ್ಷರ್ ಪಟೇಲ್ ಇಬ್ಬರಿಗೂ ಸ್ಥಾನ ನೀಡಲಾಗಿದೆ.