Birthright citizenship : ಜನ್ಮದತ್ತ ಪೌರತ್ವ ರದ್ಧತಿ ಕುರಿತ ಟ್ರಂಪ್ ಆದೇಶಕ್ಕೆ ಫೆಡರಲ್ ಕೋರ್ಟ್ ತಡೆ
ಅಮೆರಿಕ ಅಧ್ಯಕ್ಷ ಹೊರಡಿಸಿದ್ದ ಜನ್ಮಸಿದ್ಧ ಪೌರತ್ವ ರದ್ಧತಿ ಆದೇಶವನ್ನು ಫೆಡರಲ್ ನ್ಯಾಯಾಲಯ ತಡೆ ಹಿಡಿದಿದೆ. ನ್ಯಾಯಾಧೀಶರು ಈ ಆದೇಶವನ್ನು ಅಸಂವಿಧಾನಿಕ ಎಂದು ಕರೆದಿದ್ದಾರೆ. ಟ್ರಂಪ್ ಅವರ ಈ ಆದೇಶಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು.

Donald Trump

ವಾಷಿಂಗ್ಟನ್ : ಅಮೆರಿಕದಲ್ಲಿ (America) ಸದ್ಯ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ಜನ್ಮದತ್ತ ಪೌರತ್ವದ (Birthright citizenship) ವಿಷಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಅಮೆರಿಕದಲ್ಲಿ ಜನಿಸಿದ ಮಕ್ಕಳಿಗೆ ಸ್ವಾಭಾವಿಕವಾಗಿ ಅಲ್ಲಿನ ನಾಗರಿಕತ್ವ ಒದಗಿಸುತ್ತಿದ್ದ ಜನ್ಮಸಿದ್ಧ ಪೌರತ್ವ ಹಕ್ಕನ್ನು ರದ್ದುಪಡಿಸಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಸಹಿ ಮಾಡಿದ್ದರು. ಅದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಇದೀಗ ಟ್ರಂಪ್ ಆದೇಶವನ್ನು ಅಮೆರಿಕದ ಫೆಡರಲ್ ನ್ಯಾಯಾಲಯ ತಡೆಹಿಡಿದಿದೆ ಎಂದು ವರದಿಯಾಗಿದೆ.
ನ್ಯಾಯಾಧೀಶರು ಈ ಆದೇಶವನ್ನು ಅಸಂವಿಧಾನಿಕ ಎಂದು ಕರೆದಿದ್ದಾರೆ. ಡೆಮಾಕ್ರಟಿಕ್ ನೇತೃತ್ವದ ನಾಲ್ಕು ರಾಜ್ಯಗಳ ಮನವಿಯನ್ನು ಗೌರವಿಸಿ ಅಮೆರಿಕದ ಜಿಲ್ಲಾ ನ್ಯಾಯಾಧೀಶ ಜಾನ್ ಕೋಘೆನೂರ್ ಅವರು ಆದೇಶವನ್ನು ಜಾರಿಗೊಳಿಸದಂತೆ ಆಡಳಿತವನ್ನು ತಡೆಯುವ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದಾರೆ. ಜ.20ರಂದು ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡ ಟ್ರಂಪ್ ಈ ಆದೇಶಕ್ಕೆ ಸಹಿ ಹಾಕಿದ್ದರು. ಈ ಆದೇಶದ ಪ್ರಕಾರ ಜನನ ಹಕ್ಕು ಪೌರತ್ವವನ್ನು ಕೊನೆಗೊಳಿಸಲು ಫೆ.20 ಕೊನೆಯ ದಿನಾಂಕವಾಗಿದೆ.
ಈ ಮೊದಲು ಅಮೆರಿಕದಲ್ಲಿ ಜನಿಸಿದ ಮಕ್ಕಳಿಗೆ ಸ್ವಾಭಾವಿಕವಾಗಿ ಅಲ್ಲಿನ ನಾಗರಿಕತ್ವ ದೊರಕುತ್ತಿತ್ತು. ಇದನ್ನು ಬಳಸಿಕೊಂಡು ಅನೇಕರು ತಾತ್ಕಾಲಿಕ ವೀಸಾ ಪಡೆದು ಅಥವಾ ಅಮೆರಿಕ್ಕೆ ಹೋಗಿ ಮಕ್ಕಳಿಗೆ ಜನ್ಮ ನೀಡುತ್ತಿದ್ದರು. ಆದರೆ ಇನ್ನು ಮುಂದೆ ಫೆ.19ರ ಬಳಿಕ ಜನಿಸುವ ಮಕ್ಕಳ ಪೋಷಕರಲ್ಲಿ ಒಬ್ಬರಾದರೂ ಅಮೆರಿಕ ನಾಗರಿಕ ಆಗಿರಬೇಕು. ಇಬ್ಬರೂ ಪೋಷಕರು ಅಮೆರಿಕ ನಾಗರಿಕ ಆಗದೇ ಇದ್ದರೆ, ಜನ್ಮಸಿದ್ಧ ಪೌರತ್ವ ಸಿಗದು ಎಂಬ ನಿಯಮವನ್ನು ಟ್ರಂಪ್ ತಂದಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ಡೊನಾಲ್ಡ್ ಟ್ರಂಪ್ ಪದಗ್ರಹಣ ಸಮಾರಂಭ: ಮೈಕ್ ಟೈಸನ್ ಹಾಗೂ ಜೇಕ್ ಪಾಲ್ ಮಾಡಿದ್ದೇನು?
ಭಾರತೀಯರ ಮೇಲೇನು ಪರಿಣಾಮ?
ಅಮೆರಿಕದಲ್ಲಿ ಸದ್ಯ 54 ಲಕ್ಷ ಭಾರತೀಯರು ನೆಲೆಸಿದ್ದಾರೆ. ಇವರಲ್ಲಿ ಶೇ.66ರಷ್ಟು ಜನ ವಲಸಿಗರಾಗಿದ್ದು, ಶೇ.34 ಜನ ಮಾತ್ರ ಅಮೆರಿಕ ನಾಗರಿಕರಾಗಿದ್ದಾರೆ. ಎಚ್1ಬಿ ವೀಸಾ ಹಾಗೂ ಪ್ರವಾಸಿ ವೀಸಾದ ಮೇಲೆ ನೆಲೆಸಿರುವ ಭಾರತೀಯರಿಗೆ ಮಕ್ಕಳಾದರೆ ಅವರು ಪೌರತ್ವಕ್ಕಾಗಿ ಮತ್ತೆ ಅರ್ಜಿ ಸಲ್ಲಿಸಬೇಕು. ಇಲ್ಲವೇ ಪ್ರವಾಸಿ ವೀಸಾ ಪಡೆದು ತೆರಳಬೇಕಾಗಿದೆ. ಸದ್ಯ ಟ್ರಂಪ್ ಅವರ ಈ ಆದೇಶಕ್ಕೆ ಭಾರತೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.