Surendra Pai Column: ಉತ್ತರಕ್ಕೆ ಬೆಣ್ಣೆ, ದಕ್ಷಿಣಕ್ಕೆ ಸುಣ್ಣವೇ ?!
ತಮಿಳುನಾಡಿನ ಸಿಎಂ ಸ್ಟಾಲಿನ್, “ಗಡಿನಿರ್ಣಯವು ಕೇವಲ ತಮಿಳುನಾಡಿಗೆ ಸಂಬಂಧಿಸಿದ್ದಲ್ಲ, ಅದು ಇಡೀ ದಕ್ಷಿಣ ಭಾರ ತದ ಮೇಲೆ ಪರಿಣಾಮ ಬೀರಲಿದೆ. ಜನಸಂಖ್ಯಾ ಸ್ಫೋಟವನ್ನು ಯಶ ಸ್ವಿಯಾಗಿ ನಿಯಂತ್ರಿಸಿ ರಾಷ್ಟ್ರೀಯ ಪ್ರಗತಿಗೆ ಗಮನಾರ್ಹ ಕೊಡುಗೆ ನೀಡಿದ ದಕ್ಷಿಣದ ರಾಜ್ಯ ಗಳನ್ನು ಪ್ರಜಾ ಪ್ರಭುತ್ವದ ಪ್ರಕ್ರಿಯೆಯೊಂದು ದಂಡಿಸಬಾರದು" ಎಂದಿರುವುದು


ಹಿತದೃಷ್ಟಿ
ಸುರೇಂದ್ರ ಪೈ, ಭಟ್ಕಳ
ಕೇಂದ್ರ ಸರಕಾರವು ಪ್ರಸ್ತಾಪಿಸಿರುವ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ (ಡಿಲಿಮಿ ಟೇಷನ್) ವಿಷಯವು ಕೇಂದ್ರ ಮತ್ತು ದಕ್ಷಿಣ ರಾಜ್ಯಗಳ ನಡುವಿನ ಜಟಾಪಟಿಗೆ ಕಾರಣ ವಾಗಿದೆ. ಡಿಲಿಮಿಟೇಷನ್ ನೀತಿಯ ವಿರುದ್ಧ ದನಿಯೆತ್ತಿರುವ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್, “ಡಿಲಿಮಿಟೇಷನ್ ಹೆಸರಲ್ಲಿ ದಕ್ಷಿಣ ರಾಜ್ಯಗಳ ಮೇಲೆ ತೂಗುಗತ್ತಿ ನೇತಾಡು ತ್ತಿದ್ದು, ಈ ವಿಚಾರವು ಮುಂದುವರಿಯುವುದಕ್ಕೆ ಬಿಡೆನು" ಎಂದಿದ್ದಾರೆ. ಕೇಂದ್ರದ ಪಾಲಿಗೆ ಬಿಸಿತುಪ್ಪವಾಗಿ ಪರಿಣಮಿಸಿರುವ ಈ ಡಿಲಿಮಿಟೇಷನ್ ಪರಿಕಲ್ಪನೆಯ ಕುರಿತು ಅವಲೋಕಿ ಸೋಣ. ಡಿಲಿಮಿಟೇಷನ್ ಎಂಬುದು, ಜನಸಂಖ್ಯಾ ಬದಲಾವಣೆ ಗಳನ್ನು ಪ್ರತಿಬಿಂಬಿಸಲು ಸಂಸತ್ತಿನ ಮತ್ತು ರಾಜ್ಯ ವಿಧಾನಸಭಾ ಕ್ಷೇತ್ರಗಳ ಗಡಿಗಳನ್ನು ಮರುರೂಪಿಸುವ ಪ್ರಕ್ರಿಯೆ.
ಈ ನೀತಿಯು ಸಾಂವಿಧಾನಿಕ ಅವಶ್ಯಕತೆಯಲ್ಲಿ ಒಂದಾಗಿದ್ದರೂ, ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಗೂ ಮುನ್ನ ಜನಸಂಖ್ಯಾ ತಾರತಮ್ಯವನ್ನು ಹೋಗಲಾಡಿಸಬೇಕಲ್ಲವೇ? ಈ ನೀತಿಯು ಸಂಪೂರ್ಣವಾಗಿ ರಾಜ್ಯದ ಜನಸಂಖ್ಯೆಗಳನ್ನು ಆಧರಿಸಿದ್ದು, ಪ್ರಸ್ತುತ ಉತ್ತರದ ಹಾಗೂ ದಕ್ಷಿಣದ ರಾಜ್ಯಗಳ ನಡುವೆ ಈ ವಿಷಯದಲ್ಲಿ ಭಾರಿ ಅಂತರವಿದೆ.
ಇದನ್ನೂ ಓದಿ: Surendra Pai column: ಪರೀಕ್ಷಾ ಪೇ ಚರ್ಚಾ: ವಿನೂತನ ಪ್ರಯೋಗ
ಪ್ರಸ್ತುತ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಕ್ರಮವಾಗಿ 534 ಮತ್ತು 250 ಸ್ಥಾನಗಳಿದ್ದು, ಇವು 1971ರ ಜನಗಣತಿ ಸಂಖ್ಯೆಯನ್ನು ಆಧರಿಸಿವೆ. ಆದರೆ, ಸ್ಥಾನಗಳ ಸಂಖ್ಯೆ ಬದಲಾಗದೆ ಉಳಿದಿದ್ದರೂ, 2001ರ ಜನಗಣತಿಯ ನಂತರ ಕ್ಷೇತ್ರದ ಗಡಿಗಳು ಮತ್ತು ಎಸ್‌ಸಿ/ಎಸ್‌ಟಿ ಮೀಸಲುಗಳನ್ನು ಸರಿಹೊಂದಿಸಲಾಗಿದೆ.
ಇದರ ಅವಧಿ 2026ರಲ್ಲಿ ಕೊನೆಯಾಗಲಿದ್ದು, ಈಗ ಡಿಲಿಮಿಟೇಷನ್ ಎಂಬ ಚೆಂಡು ಕೇಂದ್ರ ಸರಕಾರದ ಅಂಗಳದಲ್ಲಿದೆ. ಈ ಕುರಿತು ಅದಾಗಲೇ ಅರಿತಿದ್ದ ಕೇಂದ್ರ ಸರಕಾರವು ಪೂರ್ವ ಸಿದ್ಧತೆಯನ್ನು ಮಾಡಿಕೊಂಡಂತಿದೆ. ಈ ಬಾರಿ ಮತ್ತೇನಾದರೂ ಮರುವಿಂಗಡಣೆ ಯಾದರೆ, 543ರಷ್ಟಿರುವ ಎಂಪಿ ಸೀಟುಗಳ ಸಂಖ್ಯೆ 753ಕ್ಕೆ ಏರಬಹುದು ಎಂಬ ಲೆಕ್ಕಾ ಚಾರವಿದೆ (ನೂತನ ಸಂಸತ್ ಭವನವು ಹೊಂದಿರುವ 888 ಆಸನಗಳ ವ್ಯವಸ್ಥೆಯು, ಕ್ಷೇತ್ರಗಳ ಮರುವಿಂಗಡಣೆಯ ಕುರಿತಾದ ಚರ್ಚೆಗಳಿಗೆ ಮತ್ತಷ್ಟು ಉತ್ತೇಜನ ನೀಡಿತು ಎನ್ನಬೇಕು).
ಇದರಿಂದ ಮುಖ್ಯವಾಗಿ ದಕ್ಷಿಣದ ರಾಜ್ಯಗಳಿಗೆ ಎಲ್ಲ ವಿಧದಲ್ಲೂ ಅನ್ಯಾಯವಾಗುತ್ತದೆ ಎಂಬ ಕಳವಳ ಎಲ್ಲರಲ್ಲೂ ಮನೆಮಾಡಿದೆ. ಸ್ವಾತಂತ್ರ್ಯಾನಂತರದಲ್ಲಿ ಕುಟುಂಬ ಯೋಜನೆ ಗಳ ಮೂಲಕ ದಕ್ಷಿಣ ರಾಜ್ಯಗಳು ಜನಸಂಖ್ಯಾ ಸ್ಪೋಟವನ್ನು ಗಮನಾರ್ಹವಾಗಿ ನಿಯಂತ್ರಿಸಿದವು.
ಆದರೆ, ಉತ್ತರಪ್ರದೇಶ ಸೇರಿದಂತೆ ಉತ್ತರದ ಇನ್ನಿತರ ರಾಜ್ಯಗಳು ಈ ವಿಷಯದಲ್ಲಿ ಸೋತಿ ವೆ. 2011ರ ಜನಗಣತಿಯ ಪ್ರಕಾರ, ಉತ್ತರ ಪ್ರದೇಶ ಹಾಗೂ ಬಿಹಾರ ರಾಜ್ಯಗಳು ಸೇರಿ ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.25ರಷ್ಟು ಪಾಲನ್ನು ಹೊಂದಿದ್ದರೆ, ದಕ್ಷಿಣದ 5 ರಾಜ್ಯ ಗಳ ಜನಸಂಖ್ಯೆಯನ್ನು ಒಗ್ಗೂಡಿಸಿದರೂ ಶೇ.೨೧ರಷ್ಟು ಆಗುವುದಿಲ್ಲ.
ಇವೆಲ್ಲಾ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡೇ ತಮಿಳುನಾಡಿನ ಸಿಎಂ ಸ್ಟಾಲಿನ್, “ಗಡಿನಿರ್ಣಯವು ಕೇವಲ ತಮಿಳುನಾಡಿಗೆ ಸಂಬಂಧಿಸಿದ್ದಲ್ಲ, ಅದು ಇಡೀ ದಕ್ಷಿಣ ಭಾರ ತದ ಮೇಲೆ ಪರಿಣಾಮ ಬೀರಲಿದೆ. ಜನಸಂಖ್ಯಾ ಸ್ಫೋಟವನ್ನು ಯಶಸ್ವಿಯಾಗಿ ನಿಯಂತ್ರಿಸಿ ರಾಷ್ಟ್ರೀಯ ಪ್ರಗತಿಗೆ ಗಮನಾರ್ಹ ಕೊಡುಗೆ ನೀಡಿದ ದಕ್ಷಿಣದ ರಾಜ್ಯಗಳನ್ನು ಪ್ರಜಾ ಪ್ರಭುತ್ವದ ಪ್ರಕ್ರಿಯೆಯೊಂದು ದಂಡಿಸಬಾರದು" ಎಂದಿರುವುದು.
ಪ್ರಸ್ತುತ, ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕೇರಳ ರಾಜ್ಯಗಳು ಸೇರಿ ಒಟ್ಟು 129 ಲೋಕಸಭಾ ಸ್ಥಾನಗಳನ್ನು (ಸರಿಸುಮಾರು ಶೇ.24ರಷ್ಟು ಪ್ರಾತಿನಿಧ್ಯವನ್ನು) ಹೊಂದಿವೆ. ಆದಾಗ್ಯೂ, ಪ್ರಮಾಣಾನುಗುಣ ಹೆಚ್ಚಳದೊಂದಿಗೆ ಈ ಶೇಕಡಾವಾರು ಪ್ರಾತಿ ನಿಧ್ಯವು ಮತ್ತಷ್ಟು ಕಡಿಮೆಯಾಗುತ್ತದೆ. ಪ್ರತಿ 10 ಲಕ್ಷ ಜನರಿಗೆ ಒಬ್ಬ ಸಂಸದ ಇರಬೇಕು ಎಂಬ ಲೆಕ್ಕವನ್ನೇ ಆಧರಿಸಿದರೆ, ದಕ್ಷಿಣದ ರಾಜ್ಯಗಳು ಹಲವು ಎಂಪಿ ಸೀಟುಗಳನ್ನು (ತಮಿಳುನಾಡು ಕನಿಷ್ಠ 8 ಸೀಟುಗಳನ್ನು) ಕಳೆದುಕೊಳ್ಳಲಿವೆ. ಒಂದೊಮ್ಮೆ, ಪ್ರತಿ ಕ್ಷೇತ್ರಕ್ಕೆ 10 ಲಕ್ಷಕ್ಕೆ ಬದಲಾಗಿ 20 ಲಕ್ಷದಷ್ಟು ಜನಸಂಖ್ಯಾ ಅನುಪಾತವನ್ನು ಅಂದಾಜಿಸಿದರೆ, ಒಟ್ಟು ಎಂಪಿ ಸೀಟುಗಳು 753ನ್ನು ಮುಟ್ಟುತ್ತವೆ; ಇದರನ್ವಯ ದಕ್ಷಿಣದ ರಾಜ್ಯಗಳ ಒಟ್ಟು ಎಂಪಿ ಸೀಟುಗಳು 144ನ್ನು (ಒಟ್ಟು ಪ್ರಾತಿನಿಧ್ಯ ಶೇ.19ರಷ್ಟು) ಮುಟ್ಟುತ್ತವೆ.
ಅಂದರೆ, ಮೊದಲಿಗಿಂತಲೂ ಶೇ.5ರಷ್ಟು ಕುಸಿತವಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಈಗಾ ಗಲೇ ಅತಿಹೆಚ್ಚು ಸಂಸದರಿರುವ ಉತ್ತರ ಪ್ರದೇಶದಲ್ಲಿ ಇದು 80ರಿಂದ 128ಕ್ಕೆ, ಬಿಹಾರ ದಲ್ಲಿ 40ರಿಂದ 70ಕ್ಕೆ ತೀವ್ರ ಏರಿಕೆಯಾಗುವ ನಿರೀಕ್ಷೆಯಿದ್ದು, ಇದು ನಮಗೆ ಶಾಪವಾಗಲಿದೆ ಎಂಬ ಭೀತಿ ದಕ್ಷಿಣದ ರಾಜ್ಯಗಳನ್ನು ಕಾಡುತ್ತಿದೆ. ಪರಿಣಾಮವಾಗಿ ಲೋಕಸಭೆಯಲ್ಲಿ ಉತ್ತರದ ರಾಜ್ಯಗಳ ಪಾರಮ್ಯ ಹೆಚ್ಚಾಗುತ್ತದೆ, ಇದು ಸಾಂವಿಧಾನಿಕವಾಗಿ ಅಸಮಂಜಸ ನಡೆಯಾಗು ತ್ತದೆ ಎಂಬುದಿಲ್ಲಿ ಕೆನೆಗಟ್ಟಿರುವ ಗ್ರಹಿಕೆ.
ಜನಸಂಖ್ಯೆಯನ್ನು ಆಧರಿಸಿ ಮಾತ್ರವೇ ಕ್ಷೇತ್ರದ ಮರುವಿಂಗಡಣೆಯಾದರೆ, ದಕ್ಷಿಣ ಭಾರ ತದ ಎಂಪಿ ಸೀಟುಗಳ ಪಾಲು ಶೇ.19ಕ್ಕೆ ಇಳಿಯಬಹುದು, ಆದರೆ ಹಿಂದಿ ಭಾಷಿಕ ರಾಜ್ಯಗಳ ಪಾಲು ಶೇ.60ಕ್ಕೆ ಏರಬಹುದು. ಹೀಗಾಗಿ ದಕ್ಷಿಣದವರ ರಾಜಕೀಯ ಪ್ರಾಬಲ್ಯ/ಪ್ರಭಾವ ಕುಸಿಯಬಹುದು ಮತ್ತು ಹಿಂದಿ ಭಾಷಿಕ ರಾಜ್ಯಗಳು ಹೆಚ್ಚಿನ ಲಾಭ ಪಡೆಯು ವಂತಾಗ ಬಹುದು.
ಇದು ರಾಷ್ಟ್ರೀಯ ನೀತಿ ನಿರೂಪಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬುದು ಈಗೆದ್ದಿರುವ ಕೂಗು. ಇಷ್ಟಲ್ಲದೆ, ಕೇಂದ್ರಗಳು ಸಂಗ್ರಹಿಸುವ ತೆರಿಗೆಯಲ್ಲಿ ರಾಜ್ಯಗಳಿಗೆ ನೀಡುವ ಪಾಲನ್ನು ಈಗಿನ ಶೇ.41ರಿಂದ 40ಕ್ಕೆ ಇಳಿಸಲು ಶಿಫಾರಸು ಮಾಡುವಂತೆ ಹಣ ಕಾಸು ಆಯೋಗಕ್ಕೆ ಕೋರಿಕೆ ಸಲ್ಲಿಸಲು ಕೇಂದ್ರ ಸಜ್ಜಾಗಿದೆ. ಇದೇನಾದರೂ ಕಾರ್ಯ ರೂಪಕ್ಕೆ ಬಂದಲ್ಲಿ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಲಿದೆ.
ಈಗಾಗಲೇ ಜಿಎಸ್‌ಟಿ ರೂಪದಲ್ಲಿ ದಕ್ಷಿಣದ ರಾಜ್ಯಗಳು ಗಣನೀಯ ಕೊಡುಗೆ ನೀಡುತ್ತಿ ದ್ದರೂ, ಅದಕ್ಕೆ ಪ್ರತಿಯಾಗಿ ಶೇ.30ರಷ್ಟನ್ನು ಮಾತ್ರ ಪಡೆಯುತ್ತವೆ; ಆದರೆ ಈ ಬಾಬತ್ತಿನಲ್ಲಿ ಉತ್ತರಪ್ರದೇಶ ಮತ್ತು ಬಿಹಾರ ರಾಜ್ಯಗಳಿಗೆ ಸಿಂಹಪಾಲು ಸಿಗುತ್ತಿದೆ. ಇದನ್ನು ಮನಗಂಡಿ ರುವ ದಕ್ಷಿಣ ರಾಜ್ಯಗಳು, ‘ಕೇಂದ್ರವು ನಮಗೆ ಅನ್ಯಾಯ ಮಾಡುತ್ತಿದೆ’ ಎಂಬ ಬೇಸರದಲ್ಲಿವೆ.
ಕ್ಷೇತ್ರಗಳ ಮರುವಿಂಗಡಣೆಯ ವಿಷಯದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳ ಬೇಕಾದ್ದು ಅಗತ್ಯ. ಪ್ರತಿಯೊಂದು ರಾಜ್ಯವೂ ಭಾರತ ಒಕ್ಕೂಟ ವ್ಯವಸ್ಥೆಯ ಭಾಗವಾಗಿ ರುವುದರಿಂದ, ರಾಜ್ಯಗಳ ಜತೆಗೆ ಚರ್ಚಿಸದೆಯೇ ಕೇಂದ್ರವು ನಿರ್ಣಯ ಕೈಗೊಂಡರೆ ಅದು ಸರ್ವಾಧಿಕಾರಿ ಧೋರಣೆಯಾಗುತ್ತದೆ.
ಕ್ಷೇತ್ರಗಳ ಮರುವಿಂಗಡಣೆಯಂಥ ಸಂಕೀರ್ಣ ನೀತಿಯನ್ನು, ಯಾರಿಗೂ ಅನ್ಯಾಯವಾಗ ದಂತೆ ನಿಭಾಯಿಸಿಕೊಂಡು ಜಾರಿಗೆ ತರುವುದು ಸವಾಲಿನ ಕೆಲಸವೇ. ಈ ನಿಟ್ಟಿನಲ್ಲಿ ಕೇಂದ್ರ ವು ಏನೇ ಕ್ರಮ ಕೈಗೊಳ್ಳುವ ಮುನ್ನ ಒಂದು ಸಂಗತಿಯನ್ನು ಮರೆಯಬಾರದು- ಸ್ವಾತಂತ್ರ್ಯ ದ ಬಳಿಕ ಚದುರಿಹೋಗಿದ್ದ ಸಂಸ್ಥಾನಗಳನ್ನು ಒಗ್ಗೂಡಿಸಿ ಅಖಂಡ ಭಾರತ ವನ್ನು ಕಟ್ಟಲು ಶ್ರಮಿಸಿದ ಸರ್ದಾರ್ ವಲ್ಲಭಭಾಯಿ ಪಟೇಲರ ಶ್ರಮವನ್ನು ನೆನಪಿನಲ್ಲಿ ಇಟ್ಟುಕೊಂಡೇ ಅದು ನಿರ್ಣಯ ಕೈಗೊಳ್ಳಬೇಕಿದೆ. ದೇಶದ ಏಕತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕಿದೆ.
(ಲೇಖಕರು ಶಿಕ್ಷಕರು)