Gururaj Gantihole Column: ದೆಹಲಿ ದೌಡು ಮತ್ತು ಆಡಳಿತದ ತಡೆಗೋಡೆ
ಕೇವಲ ರಾಜ್ಯ ನಾಯಕರು ದೆಹಲಿಗೆ ಹೋಗುವುದಷ್ಟೇ ಅಲ್ಲದೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಅಸಮಾಧಾನಿತ ಶಾಸಕರನ್ನು ಶಾಂತಗೊಳಿಸಲು ಹಲವು ಬಾರಿ ಬೆಂಗಳೂರಿಗೆ ಧಾವಿಸಿ ಬರಬೇಕಾಯಿತು. ಶಾಸಕಾಂಗ ಪಕ್ಷದ ಸಭೆಗಳನ್ನು ನಡೆಸಿ, ಬಹಿರಂಗ ಹೇಳಿಕೆಗಳನ್ನು ನೀಡದಂತೆ ಶಾಸಕರಿಗೆ ಎಚ್ಚರಿಕೆ ನೀಡುವುದು ಮತ್ತು ಸಚಿವರ ಪೋರ್ಟ್ ಫೋಲಿಯೋ ಹಾಗೂ ಸಚಿವ ಸಂಪುಟ ಪುನಾರಚನೆಯ ಭರವಸೆ ನೀಡಿ ತೇಪೆ ಹಚ್ಚುವ ಕೆಲಸವನ್ನು ಈ ಕೇಂದ್ರ ನಾಯಕರು ನಿರಂತರವಾಗಿ ಮಾಡಿದರು.
-
ಗಂಟಾಘೋಷ
ಕರ್ನಾಟಕದಲ್ಲಿ ಕಳೆದ ಕೆಲವು ತಿಂಗಳುಗಳಿಂದ ರಾಜ್ಯದ ರಾಜಕೀಯ ಗಲ್ಲಿಗಳಲ್ಲಿ ಕಾಣುತ್ತಿರುವ ‘ಅಧಿಕಾರ ಹಂಚಿಕೆ’ಯ ಸದ್ದುಗಳು ಆಡಳಿತದ ನೈಜ ಉದ್ದೇಶವನ್ನೇ ಮರೆ ಮಾಚುತ್ತಿರುವಂತೆ ಭಾಸ ವಾಗುತ್ತಿದೆ. ಸರಕಾರವು ಮೂರು ವರ್ಷಗಳ ಮೈಲಿಗಲ್ಲನ್ನು ತಲುಪುತ್ತಿದ್ದ ಹೊಸ್ತಿಲಲ್ಲಿ ನಾಯಕತ್ವ ದ ಪ್ರಶ್ನೆಗಳು ಮತ್ತು ದೆಹಲಿ ಪ್ರವಾಸಗಳ ಅಬ್ಬರವು ಜನಸಾಮಾನ್ಯರ ದೈನಂದಿನ ಸಮಸ್ಯೆಗಳನ್ನು ತೆರೆಮರೆಗೆ ಸರಿಸಿದೆ.
ಆಡಳಿತದ ಚುಕ್ಕಾಣಿ ಹಿಡಿದಿರುವ ಪ್ರಮುಖ ನಾಯಕರು ಮತ್ತು ಶಾಸಕರು ವಾರಕ್ಕೊಮ್ಮೆ ದೆಹಲಿಯ ಹೈಕಮಾಂಡ್ ಬಾಗಿಲು ತಟ್ಟುವುದು ಇತ್ತೀಚೆಗೆ ಸಾಮಾನ್ಯ ಎಂಬಂತಾಗಿದೆ. ನಾಯ ಕತ್ವದ ಬದಲಾವಣೆಯ ಚರ್ಚೆಗಳಿಗಾಗಿ ನಾಯಕರು ದೆಹಲಿಯಲ್ಲಿ ಕಾಯುತ್ತಿರುವಾಗ, ಇತ್ತ ಬೆಂಗಳೂರಿನ ವಿಧಾನಸೌಧದ ಕಾರಿಡಾರ್ಗಳು ರಾಜಕೀಯ ನಿರ್ಧಾರಗಳಿಲ್ಲದೆ ಮೌನಕ್ಕೆ ಶರಣಾ ಗಿವೆ. ಪ್ರತಿಯೊಂದು ಫೈಲ್ಗಳ ವಿಲೇವಾರಿಗೆ ಸಚಿವರ ಸಹಿ ಬೇಕು, ಆದರೆ ಸಚಿವರೇ ರಾಜಕೀಯ ಸಮೀಕರಣಗಳಲ್ಲಿ ಮಗ್ನರಾದಾಗ ಜಿ ಮಟ್ಟದ ಅಭಿವೃದ್ಧಿ ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿವೆ.
ದೆಹಲಿ ಬಾಗಿಲು ತಟ್ಟಿದವರು
ಈ ಸರಕಾರದ ಅವಧಿಯಲ್ಲಿ ಹೈಕಮಾಂಡ್ ಕಚೇರಿಯು ಕರ್ನಾಟಕದ ರಾಜಕೀಯದ ಪ್ರಧಾನ ಕೇಂದ್ರವಾಗಿದೆ. ಮುಖ್ಯಮಂತ್ರಿ ಹುದ್ದೆಯನ್ನು ಉಳಿಸಿಕೊಳ್ಳುವ ಮತ್ತು ತಮ್ಮ ಬಣದ ಹಿಡಿತವನ್ನು ಬಲಪಡಿಸುವ ಸಲುವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆಪ್ತ ಸಚಿವರ ದಂಡಿನೊಂದಿಗೆ ನಿರಂತರವಾಗಿ ದೆಹಲಿ ಪ್ರವಾಸ ಕೈಗೊಂಡರು. ಇನ್ನೊಂದೆಡೆ, ಮೊದಲಿನಿಂದಲೂ ಮುಖ್ಯಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧಿಕಾರ ಹಂಚಿಕೆಯ ಒಪ್ಪಂದದ ಅನುಷ್ಠಾನಕ್ಕಾಗಿ ದೆಹಲಿ ಮಟ್ಟದಲ್ಲಿ ತೀವ್ರ ಕಸರತ್ತು ನಡೆಸಿದರು.
ಇದನ್ನೂ ಓದಿ:Gururaj Gantihole Column: ಸೆಮಿ ಕಂಡಕ್ಟರ್ ಚಿಪ್: ಮಾಡದಿರಲಿ ಕರ್ನಾಟಕ ತಪ್ಪು
ಇವರೊಂದಿಗೆ ಹಲವು ಸಚಿವರು ಹಾಗೂ ನಾಯಕರು ತಮ್ಮ ಬಣದ ನಾಯಕರ ಪರ ಲಾಬಿ ಮಾಡುತ್ತ ಕಾಲಹರಣ ಮಾಡಿದರು. ಹಲವರು ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿ ಅಥವಾ ಸಂಪೂರ್ಣ ನಾಯಕತ್ವ ಬದಲಾವಣೆಯ ಪರವಾಗಿ ಹೈಕಮಾಂಡ್ ಎದುರು ನಿರಂತರ ವಾಗಿ ವಾದ ಮಂಡಿಸುತ್ತಿದ್ದುದು ಜನ ಅಸಹಾಯಕರಾಗಿ ನೋಡುತ್ತ ನಿಂತಿದ್ದರು.
ಕೇಂದ್ರ ನಾಯಕರ ಕಸರತ್ತು
ರಾಜ್ಯ ನಾಯಕರ ನಡುವಿನ ಮುಸುಕಿನ ಗುದ್ದಾಟವು ಆಡಳಿತದ ಮೇಲೆ ನಕಾರಾತ್ಮಕ ಪ್ರಭಾವ ಬೀರ ದಂತೆ ತಡೆಯಲು ಕೇಂದ್ರ ನಾಯಕತ್ವ ನಿರಂತರವಾಗಿ ರಕ್ಷಣಾತ್ಮಕ ಪಾತ್ರವನ್ನು ವಹಿಸಬೇಕಾ ಯಿತು. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ದೆಹಲಿಯಲ್ಲಿ ಉಭಯ ನಾಯಕರೊಂದಿಗೆ ಹತ್ತಾರು ಬಾರಿ ಒನ್-ಟು-ಒನ್ ಮತ್ತು ಜಂಟಿ ಸಂಧಾನ ಸಭೆಗಳನ್ನು ನಡೆಸ ಬೇಕಾಯಿತು. ಪರಿಸ್ಥಿತಿ ಕೈಮೀರಿ ಹೋಗದಂತೆ ತಡೆಯಲು ಮತ್ತು ಇಬ್ಬರೂ ನಾಯಕರ ನಡುವೆ ಸೌಹಾರ್ದ ಮೂಡಿಸಲು ದೆಹಲಿಯ ಹಲವು ಸುತ್ತಿನ ಸುದೀರ್ಘ ಸಭೆಗಳನ್ನು ಆಯೋಜಿಸ ಲಾಯಿತು.
ಕೇವಲ ರಾಜ್ಯ ನಾಯಕರು ದೆಹಲಿಗೆ ಹೋಗುವುದಷ್ಟೇ ಅಲ್ಲದೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಅಸಮಾಧಾನಿತ ಶಾಸಕರನ್ನು ಶಾಂತಗೊಳಿಸಲು ಹಲವು ಬಾರಿ ಬೆಂಗಳೂರಿಗೆ ಧಾವಿಸಿ ಬರಬೇಕಾಯಿತು. ಶಾಸಕಾಂಗ ಪಕ್ಷದ ಸಭೆಗಳನ್ನು ನಡೆಸಿ, ಬಹಿರಂಗ ಹೇಳಿಕೆಗಳನ್ನು ನೀಡದಂತೆ ಶಾಸಕರಿಗೆ ಎಚ್ಚರಿಕೆ ನೀಡುವುದು ಮತ್ತು ಸಚಿವರ ಪೋರ್ಟ್ ಫೋಲಿಯೋ ಹಾಗೂ ಸಚಿವ ಸಂಪುಟ ಪುನಾರಚನೆಯ ಭರವಸೆ ನೀಡಿ ತೇಪೆ ಹಚ್ಚುವ ಕೆಲಸವನ್ನು ಈ ಕೇಂದ್ರ ನಾಯಕರು ನಿರಂತರವಾಗಿ ಮಾಡಿದರು.
ರಾಜಕೀಯ ಮೇಲಾಟಗಳು ಮತ್ತು ಅಧಿಕಾರ ಹಂಚಿಕೆಯ ಇಂತಹ ಗೊಂದಲಗಳು ಉಂಟಾದಾಗ, ಅದರ ನೇರ ಹೊಡೆತ ಬೀಳುವುದು ರಾಜ್ಯದ ಬಜೆಟ್ ಮತ್ತು ಧನಸಹಾಯದ ಲಭ್ಯತೆಯ ಮೇಲೆ. ಪ್ರಸ್ತುತ ಅವೈeನಿಕ ಯೋಜನೆಗಳಿಂದಾಗಿ ಈಗಾಗಲೇ ರಾಜ್ಯದ ಖಜಾನೆಯ ಮೇಲೆ ಭಾರಿ ಆರ್ಥಿಕ ಒತ್ತಡವಿದೆ. ಇಂತಹ ಸಂದರ್ಭದಲ್ಲಿ ಆಡಳಿತ ಯಂತ್ರವು ಸ್ಥಿರವಾಗಿಲ್ಲದಿದ್ದರೆ, ಹೊಸ ಮೂಲ ಸೌಕರ್ಯ ಯೋಜನೆಗಳಿಗೆ ಬಂಡವಾಳ ವೆಚ್ಚದ ಹಣಕಾಸು ಒದಗಿಸುವುದು ಅಸಾಧ್ಯವಾಗುತ್ತದೆ. ಸರಕಾರದ ಉನ್ನತ ಮಟ್ಟದಲ್ಲಿ ತ್ವರಿತ ನಿರ್ಧಾರಗಳು ಮತ್ತು ಅನುಮೋದನೆಗಳು ಸಿಗದೆ, ಮಂಜೂ ರಾದ ರಸ್ತೆ, ರೈಲ್ವೆ ಮತ್ತು ಕೈಗಾರಿಕಾ ಕಾರಿಡಾರ್ಗಳಿಗೆ ಸಿಗಬೇಕಾದ ನಿರಂತರ ಹಣದ ಹರಿವು ಸಂಪೂರ್ಣವಾಗಿ ಸ್ಥಗಿತಗೊಳ್ಳುತ್ತದೆ. ಹಣಕಾಸಿನ ಈ ಅಲಭ್ಯತೆಯು ಕೇವಲ ಕಾಗದದ ಮೇಲಿನ ಯೋಜನೆಗಳನ್ನು ಮಾತ್ರವಲ್ಲದೆ, ಕಣ್ಮುಂದೆಯೇ ಪ್ರಗತಿಯಲ್ಲಿದ್ದ ಕಾಮಗಾರಿಗಳಿಗೂ ಬ್ರೇಕ್ ಹಾಕುತ್ತದೆ.
ಹಣಕಾಸು ಮತ್ತು ಆಡಳಿತಾತ್ಮಕ ಅನುಮೋದನೆಗಳ ಈ ಅಲಭ್ಯತೆಯು ಇಡೀ ಅಭಿವೃದ್ಧಿ ಪ್ರಕ್ರಿಯೆಯನ್ನು ಒಂದು ಸಾಲದ ಮತ್ತು ವಿಳಂಬದ ಸುಳಿಗೆ ತಳ್ಳುತ್ತದೆ. ನಿಗದಿತ ಸಮಯಕ್ಕೆ ಹಣ ಬಿಡುಗಡೆಯಾಗದಿದ್ದಾಗ, ಗುತ್ತಿಗೆದಾರರು ಕೆಲಸವನ್ನು ಅರ್ಧಕ್ಕೇ ನಿಲ್ಲಿಸುತ್ತಾರೆ; ಇದರಿಂದಾಗಿ ಯೋಜನೆಯ ಒಟ್ಟು ವೆಚ್ಚವು ಮುಂದಿನ ದಿನಗಳಲ್ಲಿ ದುಪ್ಪಟ್ಟಾಗುತ್ತದೆ. ಉದಾಹರಣೆಗೆ, ಹಲವು ಕಡೆ ಹೊರಗೆ ಸ್ಥಾಪಿಸಲು ಉದ್ದೇಶಿಸಲಾಗಿರುವ ಕ್ಲಸ್ಟರ್ಗಳಿಗೆ ಸಕಾಲದಲ್ಲಿ ವಿದ್ಯುತ್, ನೀರು ಮತ್ತು ಭೂಮಿಯ ಮೂಲಸೌಕರ್ಯ ಒದಗಿಸಲು ನಿಧಿ ಸಿಗುತ್ತಿಲ್ಲ. ಈ ರಾಜಕೀಯ ಅನಿಶ್ಚಿತತೆಯಿಂದಾಗಿ ಜಾಗತಿಕ ಹೂಡಿಕೆದಾರರು ಮುಖ ತಿರುಗಿಸಿಕೊಳ್ಳುವುದರಿಂದ, ರಾಜ್ಯಕ್ಕೆ ಬರಬೇಕಿದ್ದ ಬೃಹತ್ ಉದ್ಯೋಗಾವಕಾಶಗಳು ಕಣ್ಮುಂದೆಯೇ ನೆರೆಯ ರಾಜ್ಯಗಳ ಪಾಲಾಗುತ್ತಿವೆ. ಆಧಾರವಾಗಬೇಕಿದ್ದ ಅಡಿಗಲ್ಲುಗಳು ಕೇವಲ ಧೂಳು ತಿನ್ನುವ ಕಲ್ಲುಗಳಾಗಿ ಉಳಿಯುತ್ತಿವೆ.
ಏಕರೂಪದ ಅಭಿವೃದ್ಧಿಯ ಕೊರತೆ
ಈ ಬಣ ರಾಜಕಾರಣದ ಲೆಕ್ಕಾಚಾರವು ಕೇವಲ ನಾಯಕರ ಮಟ್ಟಿಗೆ ಸೀಮಿತವಾಗಿರದೆ, ತಳಮಟ್ಟದ ಶಾಸಕರ ಕಾರ್ಯವೈಖರಿಯನ್ನೂ ಸಂಪೂರ್ಣವಾಗಿ ಕಲುಷಿತಗೊಳಿಸಿದೆ. ಆಡಳಿತಾರೂಢ ಪಕ್ಷದ ಶಾಸಕರು ಸಿದ್ದರಾಮಯ್ಯ ಅಥವಾ ಡಿ.ಕೆ.ಶಿವಕುಮಾರ್ ಅವರ ಬಣಗಳಲ್ಲಿ ಯಾವುದಾದರೂ ಒಂದನ್ನು ಬಹಿರಂಗವಾಗಿ ಆಯ್ಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ತಾವು ಬೆಂಬಲಿಸುವ ನಾಯಕನ ಶಕ್ತಿ ಪ್ರದರ್ಶನಕ್ಕಾಗಿ ರೆಸಾರ್ಟ್ ಸಭೆಗಳು, ರಹಸ್ಯ ಔತಣಕೂಟಗಳು ಮತ್ತು ದೆಹಲಿ ಪ್ರವಾಸಗಳಲ್ಲಿ ಶಾಸಕರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಈ ರಾಜಕೀಯ ಭರಾಟೆಯಲ್ಲಿ, ತಮ್ಮನ್ನು ನಂಬಿ ಮತ ಹಾಕಿದ ಕ್ಷೇತ್ರದ ಜನರ ಕುಡಿಯುವ ನೀರು, ರಸ್ತೆ ದುರಸ್ತಿ, ಶಾಲೆಗಳ ಮೂಲಸೌಕರ್ಯ ಮತ್ತು ಸ್ಥಳೀಯ ಆಸ್ಪತ್ರೆಗಳ ಕೊರತೆಯಂತಹ ಅವಶ್ಯಕತೆಗಳ ಕಡೆಗೆ ಗಮನಹರಿಸಲು ಶಾಸಕರಿಗೆ ಸಮಯವೇ ಇಲ್ಲದಂತಾಗಿದೆ. ಕ್ಷೇತ್ರದ ಜನರ ಅಹವಾಲುಗಳನ್ನು ಕೇಳುವ ಬದಲು, ಬೆಂಗಳೂರು ಮತ್ತು ದೆಹಲಿಯ ರಾಜಕೀಯ ಸಮೀಕರಣಗಳಲ್ಲಿ ಶಾಸಕರು ಮುಳುಗಿರುವುದು ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆ ತರುತ್ತಿದೆ.
ಇದಲ್ಲದೆ, ಈ ಆಂತರಿಕ ಸಂಘರ್ಷದ ನೇರ ಪ್ರಭಾವವು ರಾಜ್ಯದ ಬಜೆಟ್ ಮತ್ತು ಕ್ಷೇತ್ರವಾರು ಅನುದಾನ ಹಂಚಿಕೆಯ ಮೇಲೂ ಬಿದ್ದಿದೆ. ಪ್ರಭಾವಿ ಸಚಿವರು ಅಥವಾ ನಾಯಕರಿಗೆ ಆಪ್ತರಾಗಿರುವ ಶಾಸಕರ ಕ್ಷೇತ್ರಗಳಿಗೆ ಸುಲಭವಾಗಿ ಕೋಟ್ಯಂತರ ರೂಪಾಯಿಗಳ ವಿಶೇಷ ಪ್ಯಾಕೇಜ್ ಮತ್ತು ಅನುದಾನಗಳು ಮಂಜೂರಾಗುತ್ತಿದ್ದರೆ, ತಟಸ್ಥವಾಗಿರುವ ಅಥವಾ ಭಿನ್ನ ಬಣದಲ್ಲಿ ಗುರುತಿಸಿ ಕೊಂಡಿರುವ ಶಾಸಕರ ಕ್ಷೇತ್ರಗಳು ನಯಾಪೈಸೆ ಅನುದಾನವೂ ಸಿಗದೆ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿವೆ. ಅಗತ್ಯತೆ ಮತ್ತು ಪ್ರಾದೇಶಿಕ ಸಮತೋಲನದ ಆಧಾರದ ಮೇಲೆ ಹಣ ಬಿಡುಗಡೆ ಮಾಡುವ ಬದಲು, ಕೇವಲ ‘ರಾಜಕೀಯ ನಿಷ್ಠೆ’ಯನ್ನು ನೋಡಿ ಅನುದಾನ ಹಂಚಲಾಗುತ್ತಿದೆ ಎಂಬ ಗಂಭೀರ ಆಕ್ಷೇಪಗಳು ಕೇಳಿ ಬರುತ್ತಿವೆ. ಇದರ ಪರಿಣಾಮವಾಗಿ, ಪ್ರಭಾವಿ ನಾಯಕರ ಕೈಯಲ್ಲಿರುವ ಜಿಲ್ಲೆಗಳು ಅಥವಾ ಕ್ಷೇತ್ರಗಳು ಅಭಿವೃದ್ಧಿಯ ಹೆಸರಿನಲ್ಲಿ ಮಿನುಗುತ್ತಿದ್ದರೆ, ಉತ್ತರ ಕರ್ನಾಟಕ ಅಥವಾ ಕಲ್ಯಾಣ ಕರ್ನಾಟಕದ ಹಳ್ಳಿಗಾಡಿನ ಕ್ಷೇತ್ರಗಳು ಕನಿಷ್ಠ ಮೂಲಸೌಕರ್ಯವೂ ಇಲ್ಲದೆ ಬಸವಳಿ ಯುತ್ತಿವೆ. ಈ ತಾರತಮ್ಯ ನೀತಿಯು ಇಡೀ ಕರ್ನಾಟಕವನ್ನು ಪ್ರಗತಿಯ ಹಾದಿಯಲ್ಲಿ ‘ಅಸಮ ತೋಲಿತ ರಾಜ್ಯ’ವನ್ನಾಗಿ ಪರಿವರ್ತಿಸುತ್ತಿದೆ.
ಹಸ್ತಾಂತರದ ನಂತರವೂ ಅದೇ ರಾಗ
ದೀರ್ಘಾವಧಿಯ ರಾಜಕೀಯ ಹಗ್ಗಜಗ್ಗಾಟ ಹಾಗೂ ಹೈಕಮಾಂಡ್ ಮಟ್ಟದ ಸಂಧಾನಗಳ ನಂತರ ಅಧಿಕಾರ ಹಂಚಿಕೆಯ ಸೂತ್ರದಂತೆ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದರ ಬೆನ್ನ, ಉಪಮುಖ್ಯಮಂತ್ರಿಯಾಗಿದ್ದ ಡಿ.ಕೆ.ಶಿವಕುಮಾರ್ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಈ ಮಹತ್ವದ ನಾಯಕತ್ವ ಬದಲಾವಣೆ ಯು ಡಿ.ಕೆ. ಶಿವಕುಮಾರ್ ಅವರ ಬೆಂಬಲಿಗರಲ್ಲಿ ಭಾರಿ ಸಡಗರವನ್ನು ತಂದಿತಾದರೂ, ಸಿದ್ದರಾಮಯ್ಯ ಅವರ ಬಣದಲ್ಲಿ ಗುರುತಿಸಿಕೊಂಡಿದ್ದ ಹಿರಿಯ ಸಚಿವರು ಹಾಗೂ ಶಾಸಕರಲ್ಲಿ ತೀವ್ರ ಅಸಮಾಧಾನ ಮತ್ತು ಮುನಿಸಿಗೆ ಕಾರಣವಾಯಿತು.
ಡಿ.ಕೆ.ಶಿವಕುಮಾರ್ ಅವರ ಪಟ್ಟಾಭಿಷೇಕದ ಬೆನ್ನ, ಸಚಿವ ಸಂಪುಟದಲ್ಲಿ ತಮಗೆ ಸಿಗಬಹುದಾದ ಸ್ಥಾನ ಹಾಗೂ ಪ್ರಮುಖ ಖಾತೆಗಳ ಹಂಚಿಕೆಯ ವಿಚಾರದಲ್ಲಿ ಹಿರಿಯ ನಾಯಕರ ಅಸಮಾಧಾನ ಸ್ಫೋಟಗೊಂಡಿದ್ದನ್ನು ನಾವು ಕಾಣುತ್ತಿದ್ದೇವೆ. ಈ ಹಿಂದೆ ಸಿದ್ದರಾಮಯ್ಯ ಅವರ ಆಪ್ತ ವಲಯ ದಲ್ಲಿದ್ದ ಸಚಿವರು ಹೊಸ ಮುಖ್ಯಮಂತ್ರಿಗಳ ಕಾರ್ಯವೈಖರಿ ಮತ್ತು ಅಧಿಕಾರ ಹಂಚಿಕೆಯ ತಾರತಮ್ಯದ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕತೊಡಗಿದರು. ಹೊಸದಾಗಿ ರಚನೆಯಾದ ಸಂಪುಟದಲ್ಲಿ ತಮಗೆ ಅತ್ಯಂತ ಪ್ರಭಾವಿ ಎನ್ನಲಾಗುವ ‘ಬೆಂಗಳೂರು ನಗರಾಭಿ ವೃದ್ಧಿ’ ಖಾತೆಯನ್ನು ನೀಡಲಾಗುವುದು ಎಂದು ರಾಮಲಿಂಗಾ ರೆಡ್ಡಿ ಅವರಿಗೆ ಭರವಸೆ ನೀಡಲಾ ಗಿತ್ತಂತೆ, ಆದರೆ ಕೊನೆಯ ಕ್ಷಣದಲ್ಲಿ ಆ ಖಾತೆಯನ್ನು ಕೈತಪ್ಪಿಸಿ ತಮಗೆ ‘ಭಾರೀ ಮತ್ತು ಮಧ್ಯಮ ನೀರಾವರಿ’ ಇಲಾಖೆಯನ್ನು ನೀಡಿದ್ದರಿಂದ ಅವರು ತೀವ್ರ ಬೇಸರಗೊಂಡರು.
ತಮಗೆ ಹಂಚಿಕೆಯಾಗಿದ್ದ ‘ಆಹಾರ ಮತ್ತು ನಾಗರಿಕ ಸರಬರಾಜು’ ಖಾತೆಯ ಬಗ್ಗೆ ತೀವ್ರ ಅಸಮಾ ಧಾನ ಹೊಂದಿದ್ದ ಕೆ. ಎಚ್. ಮುನಿಯಪ್ಪ ಅವರು ಆರಂಭದಲ್ಲಿ ಜವಾಬ್ದಾರಿ ವಹಿಸಿಕೊಳ್ಳಲು ಹಿಂಜರಿದು ಬಂಡಾಯದ ಮುನ್ಸೂಚನೆ ನೀಡಿದ್ದರು, ನಂತರ ಕೇಂದ್ರ ನಾಯಕರ ಸಂಧಾನದ ಬಳಿಕ ಒಪ್ಪಿಕೊಂಡರು. ಕೃಷ್ಣ ಬೈರೇಗೌಡರೂ ಸಹ ತಮಗೆ ಸಿಕ್ಕ ಪೋರ್ಟ್ ಫೋಲಿಯೋಗಳ ಬಗ್ಗೆ ಅಸಮಾಧಾನಗೊಂಡು ಸಚಿವ ಸ್ಥಾನದ ಜವಾಬ್ದಾರಿ ವಹಿಸಿಕೊಳ್ಳಲು ವಿಳಂಬ ಮಾಡಿದ್ದರು, ಇದು ಇಡೀ ಸಚಿವ ಸಂಪುಟದ ಒಗ್ಗಟ್ಟನ್ನು ಪ್ರಶ್ನಿಸುವಂತೆ ಮಾಡಿತು.
ಸಂದಿಗ್ಧತೆಯಲ್ಲಿ ರಾಜ್ಯದ ಹಿತಾಸಕ್ತಿ
ರಾಜ್ಯದಲ್ಲಿ ಮಹದಾಯಿ, ಕಾವೇರಿ ನೀರು ಹಂಚಿಕೆಯಂತಹ ಗಂಭೀರ ಸಂಕಷ್ಟಗಳಿzಗ ಅಥವಾ ಸೆಮಿಕಂಡಕ್ಟರ್ ಹೂಡಿಕೆಯಂತಹ ಬೃಹತ್ ಅವಕಾಶಗಳು ಎದುರಾದಾಗ ಸರಕಾರವು ಪೂರ್ಣ ಶಕ್ತಿಯೊಂದಿಗೆ ಕೆಲಸ ಮಾಡಬೇಕಿತ್ತು. ಆದರೆ ಆಡಳಿತ ಯಂತ್ರವು ಆಂತರಿಕ ಭಿನ್ನಾಭಿಪ್ರಾಯ ಗಳನ್ನು ಶಮನಗೊಳಿಸುವಲ್ಲಿ ಹೆಚ್ಚು ಸಮಯ ವ್ಯಯಿಸುತ್ತಿರುವುದು ರಾಜ್ಯದ ಭವಿಷ್ಯದ ಮೇಲೆ ಕಪ್ಪು ನೆರಳು ಚೆಲ್ಲುತ್ತಿದೆ. ಹೂಡಿಕೆದಾರರು ಮತ್ತು ಉದ್ದಿಮೆದಾರರು ಯಾವಾಗಲೂ ‘ಸ್ಥಿರ ಸರಕಾರ’ ವನ್ನು ಬಯಸುತ್ತಾರೆ; ರಾಜಕೀಯ ಅನಿಶ್ಚಿತತೆ ಕಂಡುಬಂದಾಗ ಅವರು ನೆರೆಯ ರಾಜ್ಯಗಳತ್ತ ಮುಖ ಮಾಡುವುದು ಸಹಜ.
ಒಂದು ಚಿಂತನೆ: ಅಽಕಾರದ ಆಟದಲ್ಲಿ ಸಮಯವು ಬಂಡವಾಳವಿದ್ದಂತೆ ಎಂಬ ಮಾತು ಪ್ರಸ್ತುತ ಕರ್ನಾಟಕದ ಸ್ಥಿತಿಗೆ ಅತ್ಯಂತ ಕರಾರುವಕ್ಕಾಗಿ ಅನ್ವಯಿಸುತ್ತದೆ. ಒಂದು ರಾಜ್ಯದ ಪ್ರಗತಿಯಲ್ಲಿ ಸ್ಥಿರ ಸರಕಾರದ್ದೇ ಅತ್ಯಂತ ದೊಡ್ಡ ಕೊಡುಗೆಯಾಗಿರುತ್ತದೆ. ಆದರೆ ಯಾವಾಗ ಸರಕಾರದಲ್ಲಿ ನಿರಂತರ ನಾಯಕತ್ವ ಬದಲಾವಣೆ, ಅಧಿಕಾರ ಹಸ್ತಾಂತರದ ಗೊಂದಲಗಳು ಮತ್ತು ಆಂತರಿಕ ಒಡಕುಗಳು ಕಾಣಿಸಿಕೊಳ್ಳುತ್ತವೆಯೋ, ಆಗ ಅದು ಕೇವಲ ಅಸ್ಥಿರ ಮತ್ತು ಅಸಮಾಧಾನದ ಸರಕಾರವಾಗಿ ಪರಿವರ್ತಿತಗೊಳ್ಳುತ್ತದೆ. ಇಂತಹ ರಾಜಕೀಯ ಅನಿಶ್ಚಿತತೆಯಿಂದಾಗಿ ಆಡಳಿತದಲ್ಲಿ ಹೀಗೂ ನಷ್ಟ, ಹಾಗೂ ನಷ್ಟ ಎಂಬಂತಾಗಿ ಇಡೀ ರಾಜ್ಯವೇ ಆರ್ಥಿಕ ಸುಳಿಗೆ ಸಿಲುಕುತ್ತದೆ. ಕಳೆದುಹೋದ ಅಮೂಲ್ಯವಾದ ಸಮಯ ಮತ್ತು ಜಾಗತಿಕ ಅಭಿವೃದ್ಧಿಯ ಅವಕಾಶಗಳನ್ನು ಮತ್ತೆ ಪಡೆಯುವುದು ಸುಲಭವಲ್ಲ.
ಅಭಿವೃದ್ಧಿ ಎಂಬುದು ನಿರಂತರವಾಗಿ ಹರಿಯಬೇಕಾದ ನದಿ. ಆದರೆ ಅಧಿಕಾರ ಹಂಚಿಕೆಯ ಈ ಮುಸುಕಿನ ಗುದ್ದಾಟ ಮತ್ತು ನಾಯಕರ ವೈಯಕ್ತಿಕ ಮೇಲಾಟಗಳ ಕಾರಣದಿಂದಾಗಿ, ರಾಜ್ಯದ ದೂರದೃಷ್ಟಿಯ ಯೋಜನೆಗಳು ಮತ್ತು ಜನಸಾಮಾನ್ಯರ ಆಶೋತ್ತರಗಳು ಇನ್ನಿಲ್ಲದಂತೆ ಹಳ್ಳ ಹಿಡಿದಿವೆ. ರಾಜಕೀಯ ಅಸ್ಥಿರತೆಯು ರಾಜ್ಯದ ಹೆಮ್ಮೆಯ ತಾಂತ್ರಿಕ ಮುನ್ನಡೆಗೆ ತಡೆಗೋಡೆಯಾಗಿ ನಿಂತಿದ್ದು, ಪ್ರಗತಿಯ ಚಕ್ರವನ್ನು ಸಂಪೂರ್ಣವಾಗಿ ಸ್ತಬ್ಧಗೊಳಿಸಿದೆ. ಕರ್ನಾಟಕದ ಸಮೃದ್ಧಿಯ ಹಾದಿಯಲ್ಲಿ ಎದುರಾಗಿರುವ ಈ ಎಲ್ಲಾ ರಾಜಕೀಯ ಅಡೆತಡೆಗಳು, ಅಸಮಾಧಾನಗಳು ಶೀಘ್ರವಾಗಿ ನಿವಾರಣೆಯಾಗಲಿ. ಇನ್ನಾದರೂ ಆಡಳಿತದಲ್ಲಿ ಸ್ಥಿರತೆ ಮೂಡಿ, ಕನ್ನಡಿಗರ ಬಾಳಿನಲ್ಲಿ ಒಳ್ಳೆಯ ದಿನಗಳು ಬರಬಹುದು ಮತ್ತು ಕರ್ನಾಟಕವು ಮತ್ತೆ ಪ್ರಗತಿಯ ಹಳಿಗೆ ಮರಳಬಹುದು ಎಂಬುವುದೇ ಪ್ರತಿಯೊಬ್ಬ ಕನ್ನಡಿಗನ ಆಶಯವಾಗಿದೆ.