IND vs ENG: ಕೊಹ್ಲಿಯಲ್ಲ, ಭಾರತದ ಆಕ್ರಮಣಕಾರಿ ಆಟಕ್ಕೆ ಈ ಆಟಗಾರನೇ ಕಾರಣ ಎಂದ ಜೋಸ್ ಬಟ್ಲರ್!
Jos Buttler praised on Rohit Sharma: ಇಂಗ್ಲೆಂಡ್ ಹಾಗೂ ಭಾರತ ನಡುವಣ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿ ನಾಳೆಯಿಂದ (ಫೆಬ್ರವರಿ 6) ಆರಂಭಗೊಳ್ಳಲಿದೆ. ಇತ್ತೀಚೆಗೆ ನಡೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್, ಭಾರತ ತಂಡ ಏಕದಿನ ಕ್ರಿಕೆಟ್‌ನಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸುತ್ತಿರುವ ಶ್ರೇಯ ರೋಹಿತ್ ಶರ್ಮಾಗೆ ಸಲ್ಲಬೇಕೆಂದು ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
![Jos Buttler](https://cdn-vishwavani-prod.hindverse.com/media/images/Jos_Buttler.max-1280x720.jpg)
![Profile](https://vishwavani.news/static/img/user.5c7ca8245eec.png)
ನಾಗ್ಪುರ: ಏಕದಿನ ಕ್ರಿಕೆಟ್‌ನಲ್ಲಿ ಭಾರತ ತಂಡದ ಆಟಗಾರರು ಆಕ್ರಮಣಕಾರಿ ಪ್ರವೃತ್ತಿ ಅಳವಡಿಸಿಕೊಳ್ಳಲು ನಾಯಕ ರೋಹಿತ್ ಶರ್ಮಾ ಕಾರಣ ಎಂದು ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಆಂಗ್ಲ ಪಡೆ ಟಿ20ಐ ಸರಣಿಯಲ್ಲಿ 4-1 ಅಂತರದಲ್ಲಿ ಸೋಲು ಕಂಡಿದ್ದರೂ ಏಕದಿನ ಸರಣಿಯಲ್ಲಿ ಆಕ್ರಮಣಕಾರಿ ಪ್ರದರ್ಶನ ತೋರುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತವರು ಅಂಗಣದಲ್ಲಿ ನಡೆದಿದ್ದ 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಆರಂಭಿಕ ಆಟಗಾರನಾಗಿ ಆಕ್ರಮಣಕಾರಿಯಾಗಿ ಆಡಿ 125.94ರ ಸ್ಟ್ರೆಕ್ ರೇಟ್‌ನಲ್ಲಿ 597 ರನ್ ಗಳಿಸಿದ್ದರು. ಪವರ್‌ಪ್ಲೇನಲ್ಲಿ ಎದುರಾಳಿ ತಂಡದ ಬೌಲರ್‌ಗಳ ಮೇಲೆ ಪ್ರಾಬಲ್ಯ ಸಾಧಿಸಿದ್ದರು. ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಫೈನಲ್ ಪಂದ್ಯದಲ್ಲೂ ರೋಹಿತ್ ಶರ್ಮಾ, 31 ಎಸೆತಗಳಲ್ಲಿ 47 ರನ್ ಬಾರಿಸಿದ್ದರು. ಆದರೆ ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ಎಡವಿದ್ದರು.
ವೆಸ್ಟ್ ಇಂಡೀಸ್ ಹಾಗೂ ಅಮೇರಿಕ ಜಂಟಿ ಆತಿಥ್ಯದಲ್ಲಿ 2024ರಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲೂ ಪ್ರತಿ ತಂಡದ ಬೌಲರ್‌ಗಳನ್ನು ದಂಡಿಸಿದ್ದರು. ಅಲ್ಲದೆ ತಮ್ಮ ಕ್ಯಾಪ್ಟನ್ಸಿಯಲ್ಲಿ ಚೊಚ್ಚಲ ಐಸಿಸಿ ಟ್ರೋಫಿ ಮುಡಿಗೇರಿಸಿಕೊಂಡಿದ್ದರು.
IND vs ENG: ʻಭಾರತ ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ಈ ಇಬ್ಬರ ಫಾರ್ಮ್ ಮುಖ್ಯʼ-ಸುರೇಶ್ ರೈನಾ!
ಆಕ್ರಮಣಕಾರಿ ಆಟ ಪ್ರದರ್ಶಿಸಿದ್ದರು: ಜೋಸ್ ಬಟ್ಲರ್
ನಾಗ್ಪುರದಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೋಸ್ ಬಟ್ಲರ್, 2023ರ ಏಕದಿನ ಫೈನಲ್ ಪಂದ್ಯದಲ್ಲಿ ಎರಡು ತಂಡಗಳು ಆಕ್ರಮಣಕಾರಿ ಪ್ರದರ್ಶನ ತೋರಿದ್ದವು ಎಂದು ಹೇಳಿದ್ದಾರೆ.
"ನಾವು 2023ರ ಏಕದಿನ ವಿಶ್ವಕಪ್ ಕಡೆ ಅವಲೋಕಿಸಿದರೆ, ಫೈನಲ್ ಪಂದ್ಯದಲ್ಲಿ ಎರಡೂ ತಂಡ (ಭಾರತ ಹಾಗೂ ಆಸ್ಟ್ರೇಲಿಯಾ)ದ ಆಟಗಾರರು ಸಕಾರಾತ್ಮಕ ಹಾಗೂ ಆಕ್ರಮಣಕಾರಿ ಆಟ ಪ್ರದರ್ಶಿಸಿದ್ದರು. ಆದರೆ ಟ್ರಾವಿಸ್ ಹೆಡ್ ತಮ್ಮ ಬಿರುಸಿನ ಬ್ಯಾಟಿಂಗ್‌ನಿಂದ ಪಂದ್ಯದ ತಿರುವನ್ನು ಹೇಗೆ ಬದಲಾಯಿಸಿದರು ಎಂಬುದನ್ನು ಗಮನಿಸಬೇಕು. ಆದ್ದರಿಂದ ಪ್ಯಾಟ್ ಕಮಿನ್ಸ್ ಸಾರಥ್ಯದ ಆಸ್ಟ್ರೇಲಿಯಾ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು," ಎಂದು ಇಂಗ್ಲೆಂಡ್ ತಂಡದ ನಾಯಕ ಹೊಗಳಿದ್ದಾರೆ.
IND vs ENG: ಥ್ರೋಡೌನ್ ಸ್ಪೆಷಲಿಸ್ಟ್ ರಘುವನ್ನು ತಡೆದ ಪೊಲೀಸರು!
ರೋಹಿತ್ ಶರ್ಮಾಗೆ ಶ್ಲಾಘನೆ
"ತಂಡದ ನಾಯಕನಾದ ರೋಹಿತ್ ಶರ್ಮಾ ಆರಂಭಿಕ ಆಟಗಾರನಾಗಿ ತಂಡವನ್ನು ಸಮರ್ಥವಾಗಿ ಮುನ್ನಡೆಸಿದ ಶ್ರೇಯ ನಿಜವಾಗಿಯೂ ಅವರಿಗೇ ಸಲ್ಲಬೇಕು. ಟೀಮ್ ಇಂಡಿಯಾ ಆಕ್ರಮಣಕಾರಿ ಆಟ ಪ್ರದರ್ಶಿಸುವಲ್ಲಿ ಅವರ ಪಾತ್ರ ಅಗಾಧವಾಗಿದೆ. ಭಾರತ ವಿರುದ್ಧದ ಮುಂಬರುವ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ ತಂಡದ ಆಟಗಾರರು ಕೂಡ ಆಕ್ರಮಣಕಾರಿ ಪ್ರವೃತ್ತಿ ಅಳವಡಿಸಿಕೊಳ್ಳುತ್ತಾರೆ," ಎಂದು ಜೋಸ್ ಬಟ್ಲರ್ ಹೇಳಿದ್ದಾರೆ.
4-1 ಅಂತರದಲ್ಲಿ ಸರಣಿ ಕಳೆದುಕೊಂಡ ಇಂಗ್ಲೆಂಡ್
ಇತ್ತೀಚೆಗೆ ಮುಕ್ತಾಯಗೊಂಡ ಐದು ಪಂದ್ಯಗಳ ಟಿ20-ಐ ಸರಣಿಯಲ್ಲಿ ವರುಣ್ ಚಕ್ರವರ್ತಿ ಸೇರಿದಂತೆ ಇತರ ಬೌಲರ್‌ಗಳ ಎದುರು ಮಂಕಾದ ಇಂಗ್ಲೆಂಡ್ ಆಟಗಾರರು 4-1 ರಿಂದ ಸರಣಿ ಕಳೆದುಕೊಂಡು ಸಾಕಷ್ಟು ಟೀಕೆಗೆ ಒಳಗಾಗಿದ್ದಾರೆ. ಆದರೆ ನಾಳೆಯಿಂದ (ಗುರುವಾರ) ನಡೆಯಲಿರುವ ಏಕದಿನ ಸರಣಿ ಗೆಲ್ಲುವ ಹುಮ್ಮಸ್ಸಿನಲ್ಲಿ ಜೋಸ್ ಬಟ್ಲರ್ ಸಾರಥ್ಯದ ಇಂಗ್ಲೆಂಡ್ ತಂಡವಿದೆ.