IND vs ENG: ಕಳೆದ ವರ್ಷ ಭಾರತ ತಂಡದಿಂದ ಶ್ರೇಯಸ್ ಅಯ್ಯರ್ ಹೊರಗಿದ್ದಿದ್ದೇಕೆ? ರಿಕಿ ಪಾಂಟಿಂಗ್ ಪ್ರಶ್ನೆ!
Ricky Ponting on Shreyas Iyer: ಇಂಗ್ಲೆಂಡ್ ವಿರುದ್ಧದ ಮೊದಲನೇ ಏಕದಿನ ಪಂದ್ಯದಲ್ಲಿ ಸ್ಪೋಟಕ ಅರ್ಧಶತಕ ಸಿಡಿಸಿದ ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಅವರನ್ನು ಆಸ್ಟ್ರೇಲಿಯಾ ದಿಗ್ಗಜ ರಿಕಿ ಪಾಂಟಿಂಗ್ ಶ್ಲಾಘಿಸಿದ್ದಾರೆ. ಅಲ್ಲದೆ ಕಳೆದ ಕೆಲ ವರ್ಷಗಳಿಂದ ಶ್ರೇಯಸ್ ಅಯ್ಯರ್ ಅವರನ್ನು ಭಾರತ ತಂಡದಿಂದ ಹೊರಗಿಟ್ಟಿದ್ದ ಬಗ್ಗೆ ಪಂಟರ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.
![Ricky Ponting-Shreyas Iyer](https://cdn-vishwavani-prod.hindverse.com/media/images/Ricky_Ponting-Shreyas_Iyer.max-1280x720.jpg)
![Profile](https://vishwavani.news/static/img/user.png)
ನವದೆಹಲಿ: ಕಳೆದ ಕೆಲ ವರ್ಷಗಳಿಂದ ಬಲಗೈ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಅವರನ್ನು ಭಾರತ ತಂಡದಿಂದ ಹೊರಗಿಟ್ಟಿದ್ದ ಬಗ್ಗೆ ಆಸ್ಟ್ರೇಲಿಯಾ ಮಾಜಿ ನಾಯಕ ಹಾಗೂ ಪಂಜಾಬ್ ಕಿಂಗ್ಸ್ ಹೆಡ್ ಕೋಚ್ ರಿಕಿ ಪಾಂಟಿಂಗ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಗುರುವಾರ ನಡೆದಿದ್ದ ಮೊದಲನೇ ಏಕದಿನ ಪಂದ್ಯದಲ್ಲಿ ಆಡುವ ಮೂಲಕ ಶ್ರೇಯಸ್ ಅಯ್ಯರ್ ಅವರು ದೀರ್ಘಾವಧಿ ಬಳಿಕ ಟೀಮ್ ಇಂಡಿಯಾಗೆ ಮರಳಿದರು. ಭಾರತದ ಪ್ಲೇಯಿಂಗ್ XIನಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದ ಶ್ರೇಯಸ್ ಅಯ್ಯರ್, ಕೇವಲ36 ಎಸೆತಗಳಲ್ಲಿ 160ಕ್ಕೂ ಅಧಿಕ ಸ್ಟ್ರೈಕ್ ರೇಟ್‌ನಲ್ಲಿ 59 ರನ್‌ಗಳನ್ನು ಸಿಡಿಸಿದ್ದಾರೆ. ಸುಲಭವಾಗಿ ಶತಕ ಸಿಡಿಸಬಹುದಾದ ಅವಕಾಶ ಕಳೆದುಕೊಂಡರೂ ಟೀಮ್ ಇಂಡಿಯಾ 4 ವಿಕೆಟ್‌ಗಳಿಂದ ಗೆಲುವು ಪಡೆಯಿತು ಹಾಗೂ ಏಕದಿನ ಸರಣಿಯಲ್ಲಿ 1-0 ಮುನ್ನಡೆಯನ್ನು ಪಡೆದುಕೊಂಡಿದೆ.
ಪಂದ್ಯದ ಬಳಿಕ ಮಾತನಾಡಿದ್ದ ಶ್ರೇಯಸ್ ಅಯ್ಯರ್, ನಾಗ್ಪುರ ಪಂದ್ಯದಲ್ಲಿ ಬೆಂಚ್ ಕಾಯಬೇಕಾಗಿತ್ತು. ಆದರೆ, ಅನಿರೀಕ್ಷಿತವಾಗಿ ವಿರಾಟ್ ಕೊಹ್ಲಿ ಗಾಯದ ಕಾರಣ ಹೊರಗುಳಿದಿದ್ದರಿಂದ ಆಡಲು ನನಗೆ ಅವಕಾಶ ಬಂದಿತ್ತು. ಐಸಿಸಿ ರಿವ್ಯೂವ್‌ನಲ್ಲಿ ಮಾತನಾಡಿದ ರಿಕಿ ಪಾಂಟಿಂಗ್, 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ತೋರಿದ್ದ ಪ್ರದರ್ಶನದ ಆಧಾರದ ಮೇಲೆ ಶ್ರೇಯಸ್ ಅಯ್ಯರ್ ಭಾರತ ತಂಡದಲ್ಲಿ ತಮ್ಮ ಸ್ಥಾನವನ್ನುಗಟ್ಟಿ ಮಾಡಿಕೊಂಡಿದ್ದರು ಎಂದಿದ್ದಾರೆ.
ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ ಆಡಿದ್ದ 11 ಪಂದ್ಯಗಳಿಂದ 2 ಶತಕಗಳು ಹಾಗೂ 3 ಅರ್ಧಶತಕಗಳ ಮೂಲಕ ಒಟ್ಟು 530 ರನ್‌ಗಳನ್ನು ಕಲೆ ಹಾಕಿದ್ದರು.
IND vs ENG: ಇಂಗ್ಲೆಂಡ್ ವಿರುದ್ಧ ಗೆದ್ದು ಏಕದಿನ ಸರಣಿಯಲ್ಲಿ ಶುಭಾರಂಭ ಕಂಡ ಭಾರತ!
ಅಯ್ಯರ್ ತಂಡದಿಂದ ಹೊರಗಿದ್ದ ಬಗ್ಗೆ ಅಚ್ಚರಿ ತಂದಿದೆ
"ಕಳೆದ ಎರಡೆರಡು ವರ್ಷಗಳಿಂದ ಭಾರತ ತಂಡದಿಂದ ಶ್ರೇಯಸ್ ಅಯ್ಯರ್ ಹೊರಗಿದ್ದ ಬಗ್ಗೆ ನನಗೆ ಅಚ್ಚರಿಯಾಗಿದೆ. 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅವರು ಭಯಾನಕ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದರು. ಮಧ್ಯಮ ಕ್ರಮಾಂಕದಲ್ಲಿ ಅವರು ಸೊಗಸಾಗಿ ಬ್ಯಾಟ್ ಮಾಡಿ ಹೆಚ್ಚಿನ ರನ್‌ಗಳನ್ನು ದಾಖಲಿಸಿದ್ದರು. ಇದನ್ನು ಗಮನಿಸಿದ್ದ ನಾನು, ಬಹುಶಃ ಈ ಪ್ರದರ್ಶನದಿಂದ ಶ್ರೇಯಸ್ ಭಾರತ ತಂಡದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದಾರೆಂದು ಅಂದುಕೊಂಡಿದ್ದೆ," ಎಂದು ರಿಕಿ ಪಾಂಟಿಂಗ್ ತಿಳಿಸಿದ್ದಾರೆ.
"ಇದಾದ ಬಳಿಕ ಅವರು ಹಲವು ಬಾರಿ ಗಾಯಗಳಿಗೆ ತುತ್ತಾಗಿದ್ದರು ಹಾಗೂ ಭಾರತ ತಂಡಕ್ಕೂ ಮರಳಿದ್ದರು. ನಂತರ ಟೀಮ್ ಇಂಡಿಯಾದಿಂದಲೂ ಹೊರಬಿದ್ದಿದ್ದ ಅವರು ಈ ಬಾರಿ ದೇಶಿ ಕ್ರಿಕೆಟ್‌ನಲ್ಲಿಯೂ ಉತ್ತಮ ಪ್ರದರ್ಶನವನ್ನು ತೋರಿದ್ದಾರೆ. ಐಪಿಎಲ್ ಮೆಗಾ ಹರಾಜಿನ ಬಳಿಕ ಅವರು ದೇಶಿ ಕ್ರಿಕೆಟ್‌ಗೆ ಮರಳಿ ತೋರಿದ್ದ ಪ್ರದರ್ಶನ ಅದ್ಭುತವಾಗಿತ್ತು ಹಾಗೂ ಅವರ ಆಟ ಅಸಾಧಾರಣವಾಗಿದೆ," ಎಂದು ಆಸ್ಟ್ರೇಲಿಯಾ ದಿಗ್ಗಜ ಗುಣಗಾಣ ಮಾಡಿದ್ದಾರೆ.
IND vs ENG: ʻಬ್ಯಾಟ್ ಮೂಲಕ ಉತ್ತರ ನೀಡಿʼ-ರೋಹಿತ್ ಶರ್ಮಾ ವೈಫಲ್ಯದ ಬಗ್ಗೆ ಆರ್ ಅಶ್ವಿನ್ ಪ್ರತಿಕ್ರಿಯೆ!
ಚಾಂಪಿಯನ್ಸ್ ಟ್ರೋಫಿಯಲ್ಲಿ ಅಯ್ಯರ್ ಮಿಂಚಲಿದ್ದಾರೆ: ಪಾಂಟಿಂಗ್ ಭವಿಷ್ಯ
ಮುಂಬರುವ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ತಂಡ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಇಲ್ಲಿನ ಪಿಚ್‌ಗಳು ನಿಧಾನಗತಿಯಿಂದ ಕೂಡಿರುವ ಕಾರಣ, ಶ್ರೇಯಸ್ ಅಯ್ಯರ್ ಹೆಚ್ಚಿನ ರನ್‌ಗಳನ್ನು ಗಳಿಸುವ ಸಾಧ್ಯತೆ ಇದೆ ಎಂದು ಆಸ್ಟ್ರೇಲಿಯಾ ಮಾಜಿ ನಾಯಕ ಭವಿಷ್ಯ ನುಡಿದಿದ್ದಾರೆ.
"ವೈಟ್‌ಬಾಲ್ ಕ್ರಿಕೆಟ್‌ಗೆ ಸೂಕ್ತವಾಗುವಂತಹ ಬ್ಯಾಟಿಂಗ್ ಕೌಶಲವನ್ನು ಶ್ರೇಯಸ್ ಅಯ್ಯರ್ ಹೊಂದಿದ್ದಾರೆ. ದುಬೈ ವಿಕೆಟ್ ನಿಧಾನಗತಿಯಿಂದ ಹಾಗೂ ಚೆಂಡು ಪುಟಿಯುವುದು ಕಡಿಮೆ. ಹಾಗಾಗಿ ಸ್ಪಿನ್ನರ್‌ಗಳನ್ನು ಇಲ್ಲಿ ಹೆಚ್ಚಿನ ಓವರ್‌ಗಳನ್ನು ಬೌಲ್ ಮಾಡುವ ಸಾಧ್ಯತೆ ಇದೆ. ಸ್ಪಿನ್ನರ್‌ಗಳಿಗೆ ಶ್ರೇಯಸ್ ಅಯ್ಯರ್ ಯಾವ ರೀತಿ ಬ್ಯಾಟ್ ಬೀಸುತ್ತಾರೆಂದು ನಮಗೆ ಗೊತ್ತಿದೆ," ಎಂದು ರಿಕಿ ಪಾಂಟಿಂಗ್ ತಿಳಿಸಿದ್ದಾರೆ.