ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

T20 World Cup: ಕೌಟುಂಬಿಕ ತುರ್ತು ಪರಿಸ್ಥಿತಿಯಿಂದಾಗಿ ಭಾರತ ತಂಡವನ್ನು ತೊರೆದ ರಿಂಕು ಸಿಂಗ್!

ಭಾರತ ತಂಡದ ಸ್ಪೋಟಕ ಬ್ಯಾಟ್ಸ್‌ಮನ್‌ ರಿಂಕು ಸಿಂಗ್‌ ಅವರು ಕೌಟುಂಬಿಕ ತುರ್ತು ಪರಿಸ್ಥಿತಿಗಳಿಂದಾಗಿ 2026ರ ಐಸಿಸಿ ಟಿ20 ವಿಶ್ವಕಪ್‌ ಟೀಮ್‌ ಇಂಡಿಯಾವನ್ನು ತೊರೆದು ಮನೆಗೆ ತೆರಳಿದ್ದಾರೆ. ಆ ಮೂಲಕ ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಸೂರ್ಯಕುಮಾರ್‌ ಯಾದವ್‌ ಪಡೆಗೆ ಭಾರಿ ಹಿನ್ನಡೆಯಾಗಿದೆ.

ಕೌಟುಂಬಿಕ ತುರ್ತು ಪರಿಸ್ಥಿತಿಯಿಂದ ಭಾರತ ತಂಡವನ್ನು ತೊರೆದ ರಿಂಕು ಸಿಂಗ್‌!

ಭಾರತ ತಂಡವನ್ನು ಹಠಾತ್‌ ತೊರೆದ ರಿಂಕು ಸಿಂಗ್‌! -

Profile
Ramesh Kote Feb 24, 2026 9:08 PM

ಚೆನ್ನೈ: ಸ್ಪೋಟಕ ಯುವ ಬ್ಯಾಟ್ಸ್‌ಮನ್ ರಿಂಕು ಸಿಂಗ್(Rinku Singh) ಅವರು ಕೌಟುಂಬಿಕ ತುರ್ತು ಪರಿಸ್ಥಿತಿಯ ಕಾರಣದಿಂದಾಗಿ 2026ರ ಐಸಿಸಿ ಟಿ20 ವಿಶ್ವಕಪ್‌ (ICC T20 World Cup 2026) ಟೂರ್ನಿಯ ಭಾರತ (India) ತಂಡದ ಶಿಬಿರವನ್ನು ತೊರೆದಿದ್ದು, ತಮ್ಮ ಮನೆಗೆ ತೆರಳಿದ್ದಾರೆ. ರಿಂಕು ಸಿಂಗ್ ಅವರ ತಂದೆ ಖಂಚಂದ್ ಸಿಂಗ್‌ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಗ್ರೇಟರ್ ನೊಯ್ಡಾ‌ದ ಸ್ಥಳೀಯ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದುಕೊಂಡು ಇಂಡಿಯಾ ಟುಡೇ ವರದಿ ಮಾಡಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ಸೂಪರ್‌-8ರ ಪಂದ್ಯದ ಸೋಲಿನ ಒಂದು ದಿನದ ಬಳಿಕ ಭಾರತ ತಂಡದಲ್ಲಿ ಈ ಬೆಳವಣಿಗೆಗಳು ನಡೆದಿವೆ. ಫೆಬ್ರವರಿ 23 ರಂದು ರಿಂಕು ಭಾರತ ತಂಡದ ಜೊತೆ ಚೆನ್ನೈಗೆ ಪ್ರಯಾಣ ಬೆಳೆಸಿದ್ದರು. ಆದರೆ, ತಮ್ಮ ತಂದೆಯನ್ನು ನೋಡುವ ಸಲುವಾಗಿ ಅವರು, ಮಂಗಳವಾರ ದೆಹಲಿಗೆ ತೆರಳಲು ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು ಎಂದು ವರದಿಯಾಗಿದೆ. ಈ ಘಟನೆಯ ಕಾರಣ ಮಂಗಳವಾರ ಸಂಜೆ ಭಾರತ ತಂಡದ ಅಭ್ಯಾಸದಲ್ಲಿ ರಿಂಕು ಸಿಂಗ್‌ ಕಾಣಿಸಿಕೊಂಡಿರಲಿಲ್ಲ. ಹಾಗಾಗಿ ಫೆಬ್ರವರಿ 26ರಂದು ಜಿಂಬಾಬ್ವೆ ವಿರುದ್ಧದ ತನ್ನ ಎರಡನೇ ಸೂಪರ್‌-8ರ ಪಂದ್ಯದಲ್ಲಿ ರಿಂಕು ಸಿಂಗ್ ಆಡುವ ಸಾಧ್ಯತೆ ತುಂಬಾ ಕಡಿಮೆ ಇದೆ.

IND vs ZIM: ʻವಿರಾಟ್‌ ಕೊಹ್ಲಿ ತರ ಆಡಿʼ- ತಿಲಕ್‌ ವರ್ಮಾಗೆ ಮಹತ್ವದ ಸಲಹೆ ನೀಡಿದ ಮೊಹಮ್ಮದ್‌ ಕೈಫ್‌!

ರಿಂಕು ಸಿಂಗ್‌ ತಂಡದಿಂದ ನಿರ್ಗಮಿಸಿರುವುದು ನಿರ್ಣಾಯಕ ಸಮಯದಲ್ಲಿ ಸಂಭವಿಸಿದೆ. ತಮ್ಮ ಮೊದಲ ಸೂಪರ್-8ರ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನ ನಂತರ, ಭಾರತ ತಂಡ ಟೂರ್ನಿಯ ಮೊದಲನೇ ಹಂತದಿಂದ ಹೊರಹೊಮ್ಮುವ ಅಪಾಯವನ್ನು ಎದುರಿಸುತ್ತಿದೆ. ಭಾರತ ಇದೀಗ ಜಿಂಬಾಬ್ವೆ ತಂಡವನ್ನು ಎದುರಿಸುತ್ತಿದ್ದು, ಈ ತಂಡವು ಗುಂಪು ಹಂತದಲ್ಲಿ ಮಾಜಿ ಚಾಂಪಿಯನ್ ಆಸ್ಟ್ರೇಲಿಯಾವನ್ನು ಮತ್ತು ಶ್ರೀಲಂಕಾವನ್ನು ಸೋಲಿಸಿ ಸೂಪರ್-8ಕ್ಕೆ ಲಗ್ಗೆ ಇಟ್ಟಿದೆ.

INDW vs AUSW: ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಸೋತ ಭಾರತ ವನಿತೆಯರು!

ಮಾಡು ಇಲ್ಲದೆ ಮಡಿ ಪರಿಸ್ಥಿತಿ

ಇದೀಗ ನಡೆಯುತ್ತಿರುವ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ, ಅಹಮದಾಬಾದ್‌ನಲ್ಲಿ ನಡೆದಿದ್ದ ಸೂಪರ್-8 ಪ್ರಾರಂಭಿಕ ಪಂದ್ಯದಲ್ಲಿ 76 ರನ್‌ಗಳ ಭರ್ಜರಿ ಜಯ ಸಾಧಿಸಿತ್ತು. ಈ ಸೋಲು ಭಾರತ ತಂಡದ ಗೆಲುವಿನ ಸರಣಿಯನ್ನು ಬ್ರೇಕ್‌ ಮಾಡಿತ್ತು. ಈ ಸೋಲಿನಿಂದ ಟೀಮ್‌ ನೆಟ್‌ ರನ್‌ರೇಟ್‌ ಕೂಡ ಕಡಿಮೆಯಾಗಿದೆ. ಹಾಲಿ ಚಾಂಪಿಯನ್ಸ್‌ ಭಾರತ ಸೆಮಿಫೈನಲ್ ಸ್ಥಾನ ಕಳೆದುಕೊಳ್ಳುವ ಅಪಾಯದಲ್ಲಿದೆ. ಭಾರತಕ್ಕೆ ಇನ್ನುಳಿದಿರುವುದು ಒಂದೇ ಮಾರ್ಗ-ಕೊನೆಯ ಎರಡೂ ಪಂದ್ಯಗಳನ್ನು ಗೆಲ್ಲಬೇಕಾಗಿದೆ.



ರಿಂಕು ಸಿಂಗ್‌ ಸ್ಥಾನಕ್ಕೆ ಅಕ್ಷರ್‌ ಪಟೇಲ್‌?

ಸಿಕಂದರ್ ರಾಜಾ ನೇತೃತ್ವದ ಜಿಂಬಾಬ್ವೆ ತಂಡವು ತಮ್ಮ ಮೊದಲ ಸೂಪರ್-8 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೋಲು ಅನುಭವಿಸಿದ್ದು, ಮುಂದಿನ ಪಂದ್ಯದಲ್ಲಿ ಗೆಲುವಿನ ಲಯಕ್ಕೆ ಮರಳಲು ಎದುರು ನೋಡುತ್ತಿದೆ. ರಿಂಕು ಪಂದ್ಯಕ್ಕೆ ಅಲಭ್ಯರಾದರೆ, ಭಾರತ ಪ್ಲೇಯಿಂಗ್‌ XIನಲ್ಲಿ ಅವರ ಸ್ಥಾನದಲ್ಲಿ ನೇರವಾಗಿ ಅಕ್ಷರ್ ಪಟೇಲ್ ಆಡಬಹುದು. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತದ ಉಪನಾಯಕ ಆಡಿರಲಿಲ್ಲ. ಟೀಮ್‌ ಮ್ಯಾನೇಜ್‌ಮೆಂಟ್‌ನ ಈ ನಿರ್ಧಾರವನ್ನು ಕ್ರಿಕೆಟ್‌ ಪಂಡಿತರು ಹಾಗೂ ಅಭಿಮಾನಿಗಳು ತೀವ್ರವಾಗಿ ಟೀಕಿಸಿದ್ದರು.