Self Harming: ʼʼಭಾರತ ಸರ್ಕಾರಕ್ಕೆ ನನ್ನ ಮನವಿ ಇದು...ʼʼ: ಮಾಜಿ ಪತ್ನಿಯ ಕಾಟ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಡೆತ್‌ನೋಟ್‌ನಲ್ಲಿ ಏನಿದೆ?
Self Harming: ಇಂದೋರ್‌ನಲ್ಲಿ ವ್ಯಕ್ತಿಯೊಬ್ಬರು ಮಾಜಿ ಪತ್ನಿ ಮತ್ತು ಆಕೆಯ ತಾಯಿ, ಸಹೋದರಿಯ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಇಂದೋರ್‌ನ ಬಂಗಂಗಾದ 28 ವರ್ಷದ ನಿತಿನ್ ಪಡಿಯಾರ್ ಎಂದು ಗುರುತಿಸಲಾಗಿದೆ. ಸ್ಥಳದಲ್ಲಿ ಡೆತ್‌ನೋಟ್ ಪತ್ತೆಯಾಗಿದೆ.
ಭೋಪಾಲ್: ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಉತ್ತರ ಪ್ರದೇಶ ಮೂಲದ, 34 ವರ್ಷದ ಟೆಕ್ಕಿ ಅತುಲ್ ಸುಭಾಷ್ (Atul Subhash) ಪತ್ನಿ ಮತ್ತು ಪತ್ನಿ ಮನೆಯವರ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದರು (Self Harming). ಈ ಬಗ್ಗೆ ಡೆತ್ ನೋಟ್ ಬರೆದಿಡುವ ಜತೆಗೆ ವಿಡಿಯೊ ರೆಕಾರ್ಡ್ ಮಾಡಿದ್ದರು. ಈ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದು, ಇದೀಗ ಅಂತಹದ್ದೇ ಮತ್ತೊಂದು ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಇಂದೋರ್‌ನಲ್ಲಿ ವ್ಯಕ್ತಿಯೊಬ್ಬರು ಮಾಜಿ ಪತ್ನಿ ಮತ್ತು ಆಕೆಯ ತಾಯಿ, ಸಹೋದರಿಯ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಇಂದೋರ್‌ನ ಬಂಗಂಗಾದ ನಿತಿನ್ ಪಡಿಯಾರ್ (Nitin Padiyar) (28) ಎಂದು ಗುರುತಿಸಲಾಗಿದೆ. ಅವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಸ್ಥಳದಲ್ಲಿ ಡೆತ್‌ನೋಡ್ ಪತ್ತೆಯಾಗಿದೆ.
ತನ್ನ ಸಾವಿಗೆ ಮಾಜಿ ಪತ್ನಿ ಹರ್ಷಾ ಶರ್ಮಾ, ಆಕೆಯ ಸಹೋದರಿ ಮೀನಾಕ್ಷಿ ಮತ್ತು ವರ್ಷಾ ಶರ್ಮಾ ಹಾಗೂ ತಾಯಿ ಸೀತಾ ಶರ್ಮಾ ಕಾರಣ ಎಂದು ವೃತ್ತಿಪರ ಫೋಟೊಗ್ರಾಫರ್ ಆಗಿದ್ದ ನಿತಿನ್ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ. ತನ್ನ ಸಾವಿಗೆ ಅಳದಂತೆ ತಾಯಿ ಬಳಿ ಮನವಿ ಮಾಡಿದ್ದಾರೆ. ಅಲ್ಲದೆ ಸರ್ಕಾರ ಕಾನೂನು ಬದಲಾಯಿಸದಿದ್ದರೆ ಸಮಸ್ಯೆ ಹೀಗೆ ಮುಂದುವರಿಯುವುದಾಗಿ ತಿಳಿಸಿದ್ದಾರೆ.
28 years old Nitin Pandiyar from Indore ended his life after leaving a 14 page suicide note alleging harassment and torture by his wife and In Laws. He left two suicide notes. One for his Mother and one for The Unmarried Men and Boys of the Country.
— NCMIndia Council For Men Affairs (@NCMIndiaa) January 21, 2025
How many more Men and Boys… https://t.co/o3dgQnhq1V pic.twitter.com/F1Ns5Ygtve
ಡೆತ್‌ನೋಟ್‌ನಲ್ಲಿ ಏನಿದೆ?
ʼʼಇದು ತಾಯಿಗಾಗಿ. ಅಮ್ಮ ಕೇಳು ನಾನು ಮೃತಪಟ್ಟಿದ್ದಕ್ಕೆ ಅಳಬೇಡ. ಎಲ್ಲರನ್ನೂ ಸಮಾಮಾಧಾನಪಡಿಸು. ನೀವೆಲ್ಲ ದುಃಖಿಸಿದರೆ ಸತ್ತ ನಂತರವೂ ನನಗೆ ನೋವಾಗುತ್ತದೆ. ಮತ್ತೆ ನಾನು ನಿನ್ನ ಮಗನಾಗಿ ಹುಟ್ಟಿ ಬರುತ್ತೇನೆ ಅಮ್ಮʼʼ ಎಂದು ಅವರು ಭಾವುಕರಾಗಿ ಬರೆದುಕೊಂಡಿದ್ದಾರೆ.
ಮುಂದುವರಿದು, ʼʼನಾನು, ನಿತಿನ್ ಪಡಿಯಾರ್. ಭಾರತ ಸರ್ಕಾರವನ್ನು ಕೋರುವುದೇನೆಂದರೆ ದೇಶದ ಕಾನೂನನ್ನು ಬದಲಾಯಿಸಿ. ಯಾಕೆಂದರೆ ಕಾನೂನನ್ನು ಮಹಿಳೆಯರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಈ ನಿಯಮಗಳನ್ನು ಬದಲಾಯಿಸದಿದ್ದರೆ ಅನೇಕ ಯುವಕರು ಮತ್ತು ಅವರ ಕುಟುಂಬಸ್ಥರ ಜೀವನವೇ ನಾಶವಾಗಲಿದೆʼʼ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಯುವ ಜನತೆಗೆ ಸಲಹೆ ನೀಡಿದ ಅವರು, "ಭಾರತದ ಎಲ್ಲ ಯುವಕರು ಮದುವೆಯನ್ನು ಮರುಪರಿಶೀಲಿಸಬೇಕೆಂದು ನಾನು ವಿನಂತಿಸುತ್ತೇನೆ. ನೀವು ಮದುವೆಯಾಗಲು ತೀರ್ಮಾನಿಸಿದರೆ ಮೊದಲು ಔಪಚಾರಿಕ ಒಪ್ಪಂದವನ್ನು ಮಾಡಿ. ನನಗೆ ಯಾವುದೇ ಹಾನಿ ಸಂಭವಿಸಿದರೆ, ಮರಣೋತ್ತರವಾಗಿ ನ್ಯಾಯವನ್ನು ಒದಗಿಸಲು ನಿಮ್ಮ ಬೆಂಬಲವನ್ನು ಕೋರುತ್ತೇನೆ. ಎಲ್ಲರೂ ಎಚ್ಚರಿಕೆಯಿಂದಿರಿʼʼ ಎಂದು ಮನವಿ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: ಅಜ್ಜಿ or ತಾಯಿ? ಅತುಲ್ ಸುಭಾಷ್ ಪುತ್ರ ಯಾರ ಜೊತೆ ಇರಬೇಕೆಂದು ತೀರ್ಪು ನೀಡಿದ ಸುಪ್ರೀಂ!
ಏನಿದು ಪ್ರಕರಣ?
ನಿತಿನ್ ಕೆಲವು ವರ್ಷಗಳ ಹಿಂದೆ ಹರ್ಷ ಶರ್ಮಾ ಎಂಬ ಮಹಿಳೆಯನ್ನು ಮದುವೆಯಾಗಿದ್ದರು. ಆದಾಗ್ಯೂ ಇತ್ತೀಚೆಗೆ ದಂಪತಿ ಮಧ್ಯೆ ವೈಮನಸ್ಸು ಕಾಣಿಸಿಕೊಂಡಿತ್ತು. ಹೀಗಾಗಿ ಬೇರೆ ಬೇರೆ ವಾಸಿಸತೊಡಗಿದ್ದರು. ಇತ್ತೀಚೆಗೆ ಇವರು ವಿಚ್ಛೇದನಕ್ಕೆ ಅರ್ಜಿಯನ್ನೂ ಸಲ್ಲಿಸಿದ್ದರು. ಈ ಮಧ್ಯೆ ಹರ್ಷಾ ಕುಟುಂಬ 30 ಲಕ್ಷ ರೂ. ಜೀವನಾಂಶ ಒದಗಿಸುವಂತೆ ನಿತಿನ್ ಕುಟುಂಬದ ಮೇಲೆ ಒತ್ತಡ ಹೇರಿತ್ತು ಎನ್ನುವ ಆರೋಪ ಕೇಳಿ ಬಂದಿದೆ. ಇದೇ ಕಾರಣಕ್ಕೆ ನಿತಿನ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಸದ್ಯ ಬಂಗಂಗಾ ಪೊಲೀಸರು ಪೋಸ್ಟ್ ಮಾರ್ಟಂ ನಡೆಸಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ.