IPL 2025: ಐಪಿಎಲ್ ವೇಳೆ ತಂಬಾಕು, ಮದ್ಯದ ಜಾಹೀರಾತಿಗೆ ನಿರ್ಬಂಧ!
ಈ ಬಾರಿ ಐಪಿಎಲ್ ಪಂದ್ಯಗಳು ,ಟೂರ್ನಿಗೆ ಸಂಬಂಧಿಸಿದ ಕಾರ್ಯಕ್ರಮಗಳು, ಕ್ರೀಡಾಂಗಣ ಹಾಗೂ ಪಂದ್ಯಗಳ ನೇರಪ್ರಸಾರದ ಅವಧಿಯಲ್ಲಿ ಟಿವಿಯಲ್ಲಿ ಎಲ್ಲ ರೀತಿಯ ತಂಬಾಕು, ಮದ್ಯದ ಉತ್ಪನ್ನಗಳ ಜಾಹೀರಾತುಗಳನ್ನು ನಿಷೇಧಿಸುವ ನಿಯಮಗಳನ್ನು ಐಪಿಎಲ್‌ನಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ತಿಳಿಸಲಾಗಿದೆ.


ನವದೆಹಲಿ: 18ನೇ ಆವೃತ್ತಿಯ ಐಪಿಎಲ್(IPL 2025) ಟೂರ್ನಿಯಲ್ಲಿ ಆಟಗಾರರಿಗೆ ಐಪಿಎಲ್ ಮತ್ತು ಬಿಸಿಸಿಐ ಆಡಳಿತ ಮಂಡಳಿ ಕೆಲವು ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿತ್ತು. ಇದೀಗ ಕೇಂದ್ರ ಆರೋಗ್ಯ ಸಚಿವಾಲಯ(Health Ministry) ಐಪಿಎಲ್ ಆಡಳಿತ ಮಂಡಳಿಗೆ ಪತ್ರ ಬರೆದಿದ್ದು ಕೆಲವು ನಿಯಮಗಳನ್ನು ಪಾಲಿಸುವಂತೆ ಆದೇಶಿಸಿದೆ ಎಂದು ತಿಳಿದುಬಂದಿದೆ. ಸಾರ್ವಜನಿಕರ ಆರೋಗ್ಯದ ಹಿತರಕ್ಷಣೆಯ ಆದ್ಯತೆಯಾಗಿ ಮಾರ್ಚ್ 22ರಂದು ಆರಂಭವಾಗಲಿರುವ ಐಪಿಎಲ್ ಟೂರ್ನಿ ಸೇರಿ ಫ್ರಾಂಚೈಸಿಗಳ ಇತರ ಕಾರ್ಯಕ್ರಮಗಳ ಆಯೋಜನೆ ಸಮಯದಲ್ಲಿ ಕ್ರೀಡಾಂಗಣ ಮತ್ತು ಟಿವಿಯಲ್ಲಿ ತಂಬಾಕು ಉತ್ಪನ್ನ, ಮದ್ಯ ಪ್ರಚಾರದ(alcohol and tobacco advertising) ಜಾಹೀರಾತುಗಳನ್ನು ನಿಷೇಧಿಸುವಂತೆ ಐಪಿಎಲ್ ಆಡಳಿತ ಮಂಡಳಿಗೆ ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿದೆ ಎನ್ನಲಾಗಿದೆ.
ಐಪಿಎಲ್ ಟೂರ್ನಿ ಮುಖ್ಯಸ್ಥ ಅರುಣ್ ಧುಮಾಲ್‌ಗೆ ಪತ್ರ ಕಳುಹಿಸಿರುವ ಕೇಂದ್ರ ಆರೋಗ್ಯ ಸೇವೆಗಳ ಮಹಾನಿರ್ದೇಶಕ (ಡಿಜಿಎಚ್‌ಎಸ್) ಅತುಲ್ ಗೋಯೆಲ್, ಯುವಜನತೆಗೆ ಮಾದರಿಯಾಗಿರುವ ಕ್ರಿಕೆಟಿಗರು ಯಾವುದೇ ರೀತಿಯ ತಂಬಾಕು ಅಥವಾ ಮದ್ಯದ ಜಾಹೀರಾತುಗಳಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಬೆಂಬಲ ಸೂಚಿಸದಂತೆಯೂ ತಿಳಿಸಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಐಪಿಎಲ್ ಟೂರ್ನಿ ವೇಳೆ ಸುನೀಲ್ ಗವಾಸ್ಕರ್, ಕಪಿಲ್ ದೇವ್, ವಿರೇಂದ್ರ ಸೆಹವಾಗ್ ಸೇರಿ ಕೆಲ ಮಾಜಿ ಕ್ರಿಕೆಟಿಗರು ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಈ ಬಾರಿ ಐಪಿಎಲ್ ಪಂದ್ಯಗಳು ,ಟೂರ್ನಿಗೆ ಸಂಬಂಧಿಸಿದ ಕಾರ್ಯಕ್ರಮಗಳು, ಕ್ರೀಡಾಂಗಣ ಹಾಗೂ ಪಂದ್ಯಗಳ ನೇರಪ್ರಸಾರದ ಅವಧಿಯಲ್ಲಿ ಟಿವಿಯಲ್ಲಿ ಎಲ್ಲ ರೀತಿಯ ತಂಬಾಕು, ಮದ್ಯದ ಉತ್ಪನ್ನಗಳ ಜಾಹೀರಾತುಗಳನ್ನು ನಿಷೇಧಿಸುವ ನಿಯಮಗಳನ್ನು ಐಪಿಎಲ್‌ನಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ತಿಳಿಸಲಾಗಿದೆ.
ಭಾರತದಲ್ಲಿ ಅತಿಹೆಚ್ಚು ವೀಕ್ಷಣೆಗೆ ಒಳಪಡುವ ಟೂರ್ನಿಯಾಗಿದ್ದು, ಇದು ಜಾಹೀರಾತುದಾರರಿಗೆ ಉತ್ಪನ್ನಗಳ ಪ್ರಚಾರಕ್ಕೆ ಒಂದು ರೀತಿಯ ವರದಾನವಾಗಿತ್ತು. ಇದೀಗ ಹೊಸ ನಿಯಮದಿಂದ ಜಾಹೀರಾತುದಾರರಿಗೆ ದೊಡ್ಡ ಪೆಟ್ಟು ಬಿದ್ದಂತಾಗಿದೆ.
ಆಟಗಾರರ ಕುಟುಂಬಕ್ಕೆ ನಿರ್ಬಂಧ
ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಆಟಗಾರರು ಪಾಲಿಸಬೇಕಾದ ನಿಯಮವನ್ನು ಐಪಿಎಲ್ ನಲ್ಲೂ ಪಾಲಿಸಬೇಕಿದೆ. ಆಟಗಾರರ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಪ್ರತ್ಯೇಕ ವಾಹನದಲ್ಲಿ ಬರಬೇಕು. ಅವರು ಪ್ರ್ಯಾಕ್ಟೀಸ್ ಸೆಶನ್ ಗಳನ್ನು ಹಾಸ್ಪಿಟಾಲಿಟಿ ಏರಿಯಾದಲ್ಲಿ ಕುಳಿತು ವೀಕ್ಷಿಸಬಹುದು. ಹೆಚ್ಚುವರಿ ಸಿಬ್ಬಂದಿಗಳ (ಥ್ರೋಡೌನ್ ತಜ್ಞ, ನೆಟ್ ಬೌಲರ್) ಪಟ್ಟಿಯನ್ನು ಬಿಸಿಸಿಐ ಅನುಮತಿಗೆ ಕಳುಹಿಸಬೇಕು.
ಇದನ್ನೂ ಓದಿ IPL 2025: ಡೆಲ್ಲಿ ತಂಡಕ್ಕೆ ಕೈಕೊಟ್ಟ ಬ್ರೂಕ್; 2 ವರ್ಷ ಐಪಿಎಲ್ ನಿಷೇಧ ಸಾಧ್ಯತೆ!
ಪಂದ್ಯ ಇರುವ ದಿನದಂದು ಈಗಾಗಲೇ ಕುಟುಂಬಸ್ಥರ ಪ್ರವೇಶ ನಿಷೇಧಿಸಲಾಗಿತ್ತು. ಇದೀಗ ಅಭ್ಯಾಸ ಪಂದ್ಯಗಳಿಗೂ ಡ್ರೆಸ್ಸಿಂಗ್ ರೂಂಗೆ ಪ್ರವೇಶಕ್ಕೆ ನಿರ್ಬಂಧ ಹೇರಲು ಮುಂದಾಗಿದೆ. ಪಂದ್ಯದ ವೇಳೆ ಆಟಗಾರರು ಕನಿಷ್ಠ 2 ಓವರ್‌ಗಳಿಗಾದರೂ ಕಿತ್ತಳೆ, ನೇರಳೆ ಬಣ್ಣದ ಕ್ಯಾಪ್ ಧರಿಸಬೇಕು. ಪಂದ್ಯದ ಬಳಿಕ ಪ್ರೆಸೆಂಟೇಷನ್ ವೇಳೆ ಆಟಗಾರರು ತೋಳಿಲ್ಲದ ಜೆರ್ಸಿಗಳನ್ನು ಧರಿಸುವಂತಿಲ್ಲ. ಅಲ್ಲದೇ ಯಾವುದೇ ಜೆರ್ಸಿ ಸಂಖ್ಯೆಗಳ ಬದಲಾವಣೆ ಮಾಡುವುದಿದ್ದರೆ 24 ಗಂಟೆಗೂ ಮುಂಚೆ ತಿಳಿಸಬೇಕು.
ಮಾ. 22ರಂದು ಈಡನ್ ಗಾರ್ಡನ್ಸ್ ಮೈದಾನದಲ್ಲಿ ಹಾಲಿ ಚಾಂಪಿಯ್ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಣಕ್ಕಿಳಿಯುವ ಮೂಲಕ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್‌ಗೆ ಚಾಲನೆ ದೊರೆಯಲಿದೆ. ಒಟ್ಟು 10 ತಂಡಗಳು ಪರಸ್ಪರ ಸೆಣಸಾಡಲಿದ್ದು, 13 ತಾಣಗಳಲ್ಲಿ 74 ಪಂದ್ಯಗಳು ನಡೆಯಲಿವೆ.