Mamta Kulkarni: 24 ವರ್ಷಗಳ ಬಳಿಕ ಭಾರತಕ್ಕೆ ಮರಳಿದ ಖ್ಯಾತ ನಟಿ ಮಮತಾ ಕುಲಕರ್ಣಿ ; ಡ್ರಗ್ಸ್ ದಂಧೆ ಪ್ರಕರಣದಲ್ಲಿ ಬಿಗ್ ರಿಲೀಫ್!
Mamta Kulkarni: 24 ವರ್ಷಗಳ ಬಳಿಕ ಬಾಲಿವುಡ್ ನ ಖ್ಯಾತ ನಟಿ ಮಮತಾ ಕುಲಕರ್ಣಿ ಭಾರತಕ್ಕೆ ಮರಳಿದ್ದಾರೆ.
Deekshith Nair
Dec 6, 2024 4:59 PM
ಮುಂಬೈ: 90ರ ದಶಕದಲ್ಲಿನ ಬಾಲಿವುಡ್ ಚಿತ್ರರಂಗದ(Bollywood) ಜನಪ್ರಿಯ ನಟಿ ಮಮತಾ ಕುಲಕರ್ಣಿ(Mamta Kulkarni) ಬರೋಬ್ಬರಿ 24 ವರ್ಷಗಳ ನಂತರ ಭಾರತಕ್ಕೆ ಮರಳಿದ್ದಾರೆ. 2015ರ ಡ್ರಗ್ಸ್(Drugs) ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಕ್ಕೆ ಒಳಗಾಗಿದ್ದ ನಟಿಯ ದಿಢೀರ್ ಹಿಂದಿರುಗುವಿಕೆ ಈಗ ಬಹು ಚರ್ಚಿತ ವಿಷಯವಾಗಿದೆ. ಕೀನ್ಯಾದಲ್ಲಿ(Kenya) ನಡೆದ ಡ್ರಗ್ಸ್ ರಿಂಗ್(Drugs Ring) ಸಭೆಯಲ್ಲಿ ಭಾಗವಹಿಸಿದ್ದಕ್ಕಾಗಿ ಕುಲಕರ್ಣಿ ಮೇಲೆ ಆರೋಪ ಹೊರಿಸಲಾಗಿತ್ತು. 2,000 ಕೋಟಿ ಮಾದಕ ದ್ರವ್ಯ ಸಾಗಾಟ ಪ್ರಕರಣವನ್ನು ಮಮತಾ ಕುಲಕರ್ಣಿ ಎದುರಿಸಿದ್ದರು.
24 ವರ್ಷಗಳ ನಂತರ ಮುಂಬೈಗೆ ಬಂದಿಳಿದಿರುವ ನಟಿ ಭಾವನಾತ್ಮಕವಾದ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಸದ್ಯ ಮಮತಾ ಕುಲಕರ್ಣಿ ಅವರ ಪೋಸ್ಟ್ ಎಲ್ಲೆಡೆ ಹರಿದಾಡುತ್ತಿದೆ. ಹಲವರಲ್ಲಿ ನಟಿ ಇಷ್ಟು ವರ್ಷಗಳು ಎಲ್ಲಿದ್ದರು ಎಂಬ ಪ್ರಶ್ನೆ ಮೂಡಿದೆ. ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ನಟಿ ತಮ್ಮ ವಿಡಿಯೊ ಹಂಚಿಕೊಂಡಿದ್ದು, ತೀರಾ ಭಾವುಕರಾಗಿದ್ದಾರೆ.
"ಭಾರತದ ಗೆಳೆಯರೇ, ನಾನು ಮಮತಾ ಕುಲಕರ್ಣಿ. ನಾನು 24 ವರ್ಷಗಳ ಬಳಿಕ ಭಾರತದ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದು ಇಳಿದಿರುವೆ. 2000ನೇ ಇಸವಿಯಲ್ಲಿ ಭಾರತದಿಂದ ನಿರ್ಗಮಿಸಿದ್ದೆ. ಮತ್ತೆ ನನ್ನ ತಾಯ್ನಾಡಿಗೆ ಮರಳಿ ಬಂದಿದ್ದೇನೆ. ಈ ಕ್ಷಣ ನಾನು ಭಾವುಕಳಾಗಿದ್ದೇನೆ. ಇಲ್ಲಿ ಬಂದು ಇಳಿದಾಗಿನಿಂದ ನನ್ನ ಎಡ-ಬಲಕ್ಕೆ ನೋಡುತ್ತಿದ್ದೇನೆ. ಇಷ್ಟು ವರ್ಷಗಳು ನನ್ನ ದೇಶವನ್ನು ಬಿಟ್ಟು ನಾನು ಹೇಗಿದ್ದೆ ಎಂಬುದು ಗೊತ್ತಿಲ್ಲ. ಈಗ ನನ್ನ ದೇಶವನ್ನು ನೋಡುತ್ತಿದ್ದಂತೆ ಕಣ್ಣುಗಳಲ್ಲಿ ನೀರು ಬಂತು. ನನ್ನ ಭಾವನೆಯನ್ನು ಮತ್ತು ನನಗಾಗಿರುವ ಸಂತೋಷವನ್ನು ಹೇಗೆ ವ್ಯಕ್ತಪಡಿಸುವುದು ನನಗೆ ತಿಳಿಯುತ್ತಿಲ್ಲ” ಎಂದು ಮಮತಾ ಕುಲಕರ್ಣಿ ವಿಡಿಯೊದಲ್ಲಿ ಹೇಳಿದ್ದಾರೆ. ನಟಿಯ ವಿಡಿಯೊ ಅವರದ್ದೇ ಇನ್ಸ್ಟಾಗ್ರಾಂ ಖಾತೆಯಿಂದ ಅಪ್ಲೋಡ್ ಆಗಿದೆ.
ಏನಿದು 2 ಸಾವಿರ ಕೋಟಿ ರೂ. ಡ್ರಗ್ಸ್ ದಂಧೆ ಪ್ರಕರಣ?
2016 ಏಪ್ರಿಲ್‌ನಲ್ಲಿ ಮಹಾರಾಷ್ಟ್ರದ ಥಾಣೆ ಪೊಲೀಸರು 80 ಲಕ್ಷ ರೂ. ಮೌಲ್ಯದ ಎಫೇಡ್ರಿನ್ ಸಾಗಿಸುತ್ತಿದ್ದ ಎರಡು ಕಂಟೆನರ್‌ಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಈ ಕಂಟೆನರ್‌ಗಳು ಮಮತಾ ಕುಲಕರ್ಣಿ ಅವರ ಪತಿ ವಿಕ್ಕಿ ಗೋಸ್ವಾಮಿ ಅವರಿಗೆ ಸಂಬಂಧಿಸಿದೆ ಎಂದು ಪೊಲೀಸರು ಧೃಢಪಡಿಸಿದ್ದರು. ಪತಿ ಗೋಸ್ವಾಮಿ ನಡೆಸುತ್ತಿದ್ದ ಕಂಪನಿಗೆ ಕುಲಕರ್ಣಿ ಅವರು ನಿರ್ದೇಶಕರಾಗಿದ್ದರು. ಅಲ್ಲದೆ, ಕಂಪನಿಯ 11 ಲಕ್ಷ ರೂ. ಷೇರುಗಳನ್ನು ಹೊಂದಿದ್ದ ಮಮತಾ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿತ್ತು. ಅಷ್ಟೇ ಅಲ್ಲದೆ ಅವರು ಅಕ್ರಮ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದು, ಮಾದಕ ವಸ್ತು ವ್ಯಾಪಾರದ ಕುರಿತು ಚರ್ಚಿಸಲು ಕೀನ್ಯಾ, ತಾಂಜಾನಿಯಾ ಮತ್ತು ದುಬೈನಲ್ಲಿ ನಡೆದ ಡ್ರಗ್ಸ್ ರಿಂಗ್ ಸಭೆಗಳಲ್ಲಿ ಭಾಗವಹಿಸಿದ್ದರು ಎಂದು ಪೊಲೀಸರು ಗಂಭೀರವಾಗಿ ಆರೋಪಿಸಿದ್ದರು.
ಬಳಿಕ 2018ರಲ್ಲಿ ಮಮತಾ ಪರ ವಾದ ಮಂಡಿಸಿದ ವಕೀಲ, 'ಮಮತಾ ಈ ಪ್ರಕರಣಲ್ಲಿ ಭಾಗಿಯಾದ್ದಾರೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಧಾರಗಳು ಇಲ್ಲ. ಅವರು ನಿರಾಪರಾಧಿ. ಹಾಗಾಗಿ, ಇವರ ಮೇಲೆ ಹಾಕಿರುವ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಿವಂತೆ ಕೋರ್ಟ್‌ಗೆ ಒತ್ತಾಯಿಸಿದ್ದರು. ವಾದ ವಿವಾದ ಆಲಿಸಿದ ಬಾಂಬೆ ಹೈ ಕೋರ್ಟ್ ಇದೇ ವರ್ಷದ ಆರಂಭದಲ್ಲಿ ಮಮತಾ ಮೇಲಿನ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಿತ್ತು. ನ್ಯಾಯಮೂರ್ತಿಗಳಾದ ಭಾರತಿ ಮತ್ತು ಮಂಜುಷಾ ದೇಶಪಾಂಡೆ ಅವರ ವಿಭಾಗೀಯ ಪೀಠವು ಕುಲಕರ್ಣಿ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲೇಖಿಸಿ ಅವರ ವಿರುದ್ಧದ ಪ್ರಕರಣವನ್ನು ವಜಾಗೊಳಿಸಿದೆ.
ಡ್ರಗ್ಸ್ ದಂಧೆಯ ಪ್ರಕರಣದ ಆರೋಪದಿಂದ ಬಿಗ್ ರಿಲೀಫ್ ಪಡೆದಿರುವ ನಟಿ ಮಮತಾ ಕುಲಕರ್ಣಿ ಇದೀಗ ಭಾರತಕ್ಕೆ ಮರಳಿದ್ದಾರೆ.
ಈ ಸುದ್ದಿಯನ್ನೂ ಓದಿ: Nargis Fakhri: ಬಾಲಿವುಡ್ ನಟಿ ನರ್ಗಿಸ್ ಫಕ್ರಿ ಸಹೋದರಿ ಬಂಧನ! ಆಗಿದ್ದೇನು?