Champions Trophy:ʻ869 ಕೋಟಿ ರೂ ನಷ್ಟʼ-ಬಿಸಿಸಿಐ ವಿರುದ್ಧ ಎಚ್ಚರಿಕೆ ನೀಡಿದ ಪಿಸಿಬಿ!
PCB on Financial loss in CT 2025: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಟೂರ್ನಿ ಮುಗಿದ 12 ದಿನಗಳು ಕಳೆದಿವೆ. ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಬಿಸಿಸಿಐ ವಿರುದ್ದ ಗಂಭೀರ ಆರೋಪವನ್ನು ಮಾಡಿದೆ. ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಪಿಸಿಬಿಗೆ 869 ಕೋಟಿ ರೂ. ಗಳ ನಷ್ಟವಾಗಿದೆ ಇತ್ತೀಚೆಗೆ ವರದಿಯಾಗಿತ್ತು. ಈ ವರದಿಗಳನ್ನು ಪಿಸಿಬಿ ತಳ್ಳಿ ಹಾಕಿದೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿ

ನವದೆಹಲಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ಆಯೋಜಿಸಿದ್ದರಿಂದ ಪಾಕಿಸ್ತಾನಕ್ಕೆ ದೊಡ್ಡ ಮೊತ್ತದ ನಷ್ಟವಾಗಿದೆ ಎಂಬ ವರದಿಗಳಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸ್ಪಷ್ಟನೆ ನೀಡಿದೆ. ಪಿಸಿಬಿ ಚೀಫ್ ಫೈನಾನ್ಷಿಯಲ್ ಆಫೀಸರ್ ಜಾವೇದ್ ಮುರ್ತಾಝಾ ನಷ್ಟದ ಕುರಿತ ವರದಿಗಳನ್ನು ತಳ್ಳಿ ಹಾಕಿದ್ದಾರೆ. ಆ ಮೂಲಕ ನಷ್ಟದ ಕುರಿತು ವರದಿಗಳನ್ನು ಮಾಡಿದ್ದ ಭಾರತೀಯ ಮಾಧ್ಯಮಗಳನ್ನು ಟೀಕಿಸಿದ್ದಾರೆ. ಅಂದ ಹಾಗೆ ಈ ಬಾರಿ ನಡೆದಿದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ಪಾಕಿಸ್ತಾನದ ಆತಿಥ್ಯದಲ್ಲಿ ನಡೆದಿತ್ತು. ಆದರೆ, ಭಾರತ ತಂಡದ ಪಂದ್ಯಗಳನ್ನು ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದವು.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ಹೈಬ್ರಿಡ್ ಮಾಡೆಲ್‌ನಲ್ಲಿ ನಡೆಸಲಾಗಿತ್ತು. ರಾಜಕೀಯ ಕಾರಣಗಳಿಂದ ಪಾಕಿಸ್ತಾನಕ್ಕೆ ಭಾರತ ತಂಡ ಪ್ರಯಾಣ ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ತಂಡದ ಎಲ್ಲಾ ಪಂದ್ಯಗಳನ್ನು ಯುಎಇನಲ್ಲಿ ನಡೆಸಲಾಗಿತ್ತು. ದುಬೈನಲ್ಲಿ ಆಡಿದ್ದ ಎಲ್ಲಾ ಪಂದ್ಯಗಳನ್ನು ಗೆದ್ದು ಟೀಮ್ ಇಂಡಿಯಾ ಚಾಂಪಿಯನ್ ಆಗಿತ್ತು. ಅಂದ ಹಾಗೆ ಟೂರ್ನಿ ಮುಗಿದ ಬಳಿಕ ಕೆಲ ಮಾಧ್ಯಮಗಳು, ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ 869 ಕೋಟಿ ರೂ. ಗಳ ನಷ್ಟ ಉಂಟಾಗಿದೆ ಎಂದು ವರದಿ ಮಾಡಿದ್ದವು.
ʻಭಾರತ ತಂಡ ಪಾಕಿಸ್ತಾನದಲ್ಲಿ ಆಡಿದಿದ್ರೆ...?ʼ: ಅಚ್ಚರಿ ಹೇಳಿಕೆ ನೀಡಿದ ವಸೀಮ್ ಅಕ್ರಮ್!
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಪಿಸಿಬಿ ವಕ್ತಾರ ಆಮಿರ್ ಮಿರ್ ಹಾಗೂ ಚೀಫ್ ಫೈನಾನ್ಷಿಯಲ್ ಆಫೀಸರ್ ಜಾವೇದ್ ಮುರ್ತಾಝ ಅವರು, ಐಸಿಸಿ ಚಾಂಪಿಯನ್‌ಷಿಪ್ ಟೂರ್ನಿಯಲ್ಲಿ ನಮಗೆ ಯಾವುದೇ ನಷ್ಟ ಉಂಟಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಭಾರತೀಯ ಮಾಧ್ಯಮಗಳು ಈ ರೀತಿ ಸುದ್ದಿಯನ್ನು ಹುಟ್ಟು ಹಾಕಿವೆ ಎಂದು ಆರೋಪ ಮಾಡಿದ್ದಾರೆ.
"ಇಂದಿನ ಪತ್ರಿಕಾಗೋಷ್ಠಿಯ ಮುಖ್ಯ ಉದ್ದೇಶ ಚಾಂಪಿಯನ್ಸ್ ಟ್ರೋಫಿಗೆ ಸಂಬಂಧಿಸಿದಂತೆ ಭಾರತೀಯ ಮಾಧ್ಯಮಗಳು ಮಾಡುತ್ತಿರುವ ಪ್ರಚಾರವನ್ನು ಬಹಿರಂಗಪಡಿಸುವುದು ಮತ್ತು ಈ ಟೂರ್ನಿಯಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಭಾರಿ ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ. ಪಾಕಿಸ್ತಾನಕ್ಕೆ ಶತೃ ಭಾರತೀಯ ಮಾಧ್ಯಮಗಳಿಂದ ಸಾಲು ಸಾಲು ಸುಳ್ಳುಗಳನ್ನು ಪ್ರಚಾರ ಮಾಡಲಾಗುತ್ತಿದೆ. ಈ ಎಲ್ಲವನ್ನೂ ನಾವು ನಾಶ ಮಾಡುತ್ತೇವೆ. ಭಾರತೀಯ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದ ಎಲ್ಲಾ ಅಂಶಗಳು ಪಾಕಿಸ್ತಾನಿ ಮಾಧ್ಯಮಗಳಲ್ಲಿಯೇ ಪ್ರಕಟವಾಗುತ್ತಿವೆ. ಆದರೆ, ಇಲ್ಲಿನ ವಾಸ್ತವ ಇದಕ್ಕೆ ವಿರುದ್ದವಾಗಿದೆ," ಎಂದು ಆಮಿರ್ ಮಿರ್ ಹೇಳಿದ್ದಾರೆ.
"ಟೂರ್ನಿಯ ಎಲ್ಲಾ ವೆಚ್ಚಗಳನ್ನು ಐಸಿಸಿ ಭರಿಸಿತ್ತು," ಎಂದ ಮಿರ್, "ಪಿಸಿಬಿ ಗೇಟ್ ಮೊತ್ತ ಮತ್ತು ಟಿಕೆಟ್ ಮಾರಾಟದ ಮೂಲಕ ಆದಾಯವನ್ನು ಗಳಿಸಿತು ಮತ್ತು ಆಡಿಟ್ ನಂತರ, ಐಸಿಸಿಯಿಂದ ಹೆಚ್ಚುವರಿಯಾಗಿ 3 ಬಿಲಿಯನ್ ಪಿಕೆಆರ್ ನಿರೀಕ್ಷಿಸುತ್ತೇವೆ," ಎಂದು ಅವರು ತಿಳಿಸಿದ್ದಾರೆ.
2027ರ ವರೆಗೆ ಯಾವುದೇ ಐಸಿಸಿ ಟೂರ್ನಿಗಳವರೆಗೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಹೈಬ್ರಿಡ್ ಮಾಡೆಲ್‌ನಲ್ಲಿ ಪಂದ್ಯಗಳನ್ನು ಆಡಲಿವೆ. ಭಾರತದ ಆತಿಥ್ಯದಲ್ಲಿ ಐಸಿಸಿ ಟೂರ್ನಿ ನಡೆದರೆ, ಪಾಕಿಸ್ತಾನ ತಂಡ ಬೇರೆ ಸ್ಥಳದಲ್ಲಿ ತನ್ನ ಪಂದ್ಯಗಳನ್ನು ಆಡಲಿದೆ. ಅದೇ ರೀತಿ ಭಾರತ ತಂಡಕ್ಕೂ ಕೂಡ ಇದು ಅನ್ವಯವಾಗಲಿದೆ. 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಭಾರತದಲ್ಲಿ ನಡೆಯಲಿದೆ. ಈ ಟೂರ್ನಿಯ ಪಾಕಿಸ್ತಾನದ ಪಂದ್ಯಗಳು ಶ್ರೀಲಂಕಾದ ಕೊಲಂಬೊದಲ್ಲಿ ನಡೆಯಲಿವೆ.
2025ರ ಐಸಿಸಿ ಚಾಂಪಿಯನ್ಸ್‌ಟ್ರೋಫಿ ಟೂರ್ನಿಯಲ್ಲಿ ಪಿಸಿಬಿಗೆ ಆರ್ಥಿಕ ನಷ್ಟ ಉಂಟು ಮಾಡುವ ಸಲುವಾಗಿ ಬಿಸಿಸಿಐ ತನ್ನ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ನಿರಾಕರಿಸಿದೆ ಎಂಬುದು ನಿಜವಾದರೆ, ನಾವು 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬಿಸಿಸಿಐ ಹೆಚ್ಚಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಂದು ಆಮಿರ್ ಮಿರ್ ಎಚ್ಚರಿಕೆ ನೀಡಿದ್ದಾರೆ.