Physical Abuse: ಸಿಗರೇಟ್, ಎಣ್ಣೆ ಬೇಡ ಎಂದ ಶಿಕ್ಷಕಿಗೆ ಕಂಠಪೂರ್ತಿ ಕುಡಿದಿದ್ದ ಪ್ರಿನ್ಸಿಪಾಲ್ ಮಾಡಿದ್ದೇನು ಗೊತ್ತಾ?
Physical Abuse: ಪಾನಮತ್ತನಾಗಿದ್ದ ಶಾಲೆಯ ಪ್ರಿನ್ಸಿಪಾಲ್ ಒಬ್ಬ ಶಿಕ್ಷಕಿಗೆ ಮದ್ಯ ಸೇವಿಸಿ ಸಿಗರೇಟ್ ಸೇದುವಂತೆ ಒತ್ತಾಯಿಸಿದ್ದಾನೆ.
Deekshith Nair
December 4, 2024
ಜಬಲ್‌ಪುರ್: ಮಧ್ಯಪ್ರದೇಶದ(Madhya Pradesh) ಜಬಲ್‌ಪುರದ(Jabalpur) ಸಾಲಿವಾಡದಲ್ಲಿ ಕಂಠಪೂರ್ತಿ ಕುಡಿದಿದ್ದ ಶಾಲೆಯ ಪ್ರಿನ್ಸಿಪಾಲ್(Principal) ಶಿಕ್ಷಕಿಯೊಬ್ಬರಿಗೆ ಸಿಗರೇಟ್ ಸೇದಲು ಮತ್ತು ಮದ್ಯ ಸೇವಿಸಲು ಒತ್ತಾಯಿಸಿದ್ದಾನೆ. ಬೇಡ ಎಂದ ಆಕೆಗೆ ಆತ ಲೈಂಗಿಕ ಕಿರುಕುಳ ಕೊಟ್ಟಿರುವ ಘಟನೆ ವರದಿಯಾಗಿದೆ. ಸಾಲಿವಾಡದ ಕಾನ್ವೆಂಟ್ ಶಾಲೆಯ ಪ್ರಿನ್ಸಿಪಾಲ್ ಕ್ಷಿತಿಜ್ ಜಾಕೋಬ್ ಎಂಬ ವ್ಯಕ್ತಿ ಶಿಕ್ಷಕಿಯನ್ನು ಕೆಲಸದ ಕುರಿತು ಚರ್ಚಿಸುವ ನೆಪದಲ್ಲಿ ದುಮ್ನಾ ರಸ್ತೆಗೆ ಕರೆದೊಯ್ದು ಕಿರುಕುಳ ನೀಡಿದ್ದಾನೆ(Physical Abuse) ಎಂದು ಆರೋಪಿಸಲಾಗಿದೆ.
ಪ್ರಿನ್ಸಿಪಾಲ್ ವಿರುದ್ಧ ಈಗಾಗಲೇ ಎಫ್‌ಐಆರ್ ದಾಖಲಾಗಿದ್ದು, ಖಮಾರಿಯಾ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಿನ್ಸಿಪಾಲ್ ವಿರುದ್ಧ ತನಿಖೆ ಪ್ರಾರಂಭಿಸಿದ್ದಾರೆ. ಪೊಲೀಸರು ಹೆಚ್ಚಿನ ಮಾಹಿತಿಗಾಗಿ ಶಾಲೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ ಎನ್ನಲಾಗಿದೆ. ಶಿಕ್ಷಕಿ ಹೇಳಿರುವಂತೆ, ಪ್ರಿನ್ಸಿಪಾಲ್ ಆಕೆಗೆ ಮದ್ಯ ಮತ್ತು ಸಿಗರೇಟ್ ಸೇವಿಸುವಂತೆ ಒತ್ತಾಯಿಸಿದ್ದಾನೆ. ಆಕೆ ವಿರೋಧಿಸಿದಾಗ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳವನ್ನು ನೀಡಿದ್ದಾನೆ ಎಂದು ಆರೋಪ ಕೇಳಿ ಬಂದಿದೆ.
ಕೆಲಸದ ಬಗ್ಗೆ ಚರ್ಚಿಸುವ ನೆಪದಲ್ಲಿ ಪ್ರಿನ್ಸಿಪಾಲ್ ಆಕೆಯನ್ನು ದುಮ್ನಾ ರಸ್ತೆಗೆ ಕರೆದೊಯ್ದು ಮದ್ಯಪಾನ ಮತ್ತು ಧೂಮಪಾನ ಮಾಡುವಂತೆ ಒತ್ತಡ ಹೇರಿದ್ದಾರೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ. ಆಕೆ ಅದಕ್ಕೆ ನಿರಾಕರಿಸಿದ ಕಾರಣಕ್ಕೆ ಮರುದಿನ ಶಾಲೆಯಲ್ಲಿ ಆಕೆಯನ್ನು ಅವಮಾನಿಸಿ, ಮಂಡಿಯೂರುವಂತೆ ಮಾಡಿ ಮಾನಸಿಕವಾಗಿ ಕಿರುಕುಳ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಪ್ರಿನ್ಸಿಪಾಲ್ ಈ ಹಿಂದಿನಿಂದಲೂ ತನ್ನೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದರು ಎಂದು ಶಿಕ್ಷಕಿ ಹೇಳಿದ್ದಾರೆ. ಆಗಾಗ್ಗೆ ಆಕೆಯನ್ನು ತನ್ನ ಚೇಂಬರ್‌ಗೆ ಕರೆಸಿಕೊಂಡು ಅನುಚಿತವಾಗಿ ವರ್ತಿಸುತ್ತಿದ್ದರು ಎಂದಿದ್ದಾರೆ. ಅಲ್ಲದೆ, ಆಕೆಯನ್ನು ಕೆಲಸದಿಂದ ತೆಗೆದುಹಾಕುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ತನಗೆ ಉದ್ಯೋಗದ ಅವಶ್ಯಕತೆ ಮತ್ತು ಅನಿವಾರ್ಯತೆ ಇದ್ದುದರಿಂದ ಉದ್ಯೋಗ ಕಳೆದುಕೊಳ್ಳುವ ಭಯದಿಂದಾಗಿ ಎರಡು ವರ್ಷಗಳಿಂದ ಯಾರಿಗೂ ಹೇಳದೆ ಎಲ್ಲವನ್ನು ಸಹಿಸಿಕೊಂಡಿದ್ದೆ ಎಂದು ಆಕೆ ಹೇಳಿದ್ದಾರೆ.
ಆರೋಪ ಸಾಬೀತಾದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ. ಆದರೆ ಪ್ರಿನ್ಸಿಪಾಲ್ ಕ್ಷಿತಿಜ್ ಜೇಕಬ್ ಆರೋಪದ ಬಗ್ಗೆ ಈವರೆಗೂ ಯಾವುದೇ ಹೇಳಿಕೆ ನೀಡಿಲ್ಲ.
ಕುಡಿದು ಕಾರು ಚಲಾಯಿಸಿ ಯುವತಿಗೆ ಡಿಕ್ಕಿ ಹೊಡೆದ ಚಾಲಕ
ಉತ್ತರ ಪ್ರದೇಶದ ಕಾನ್ಪುರದಲ್ಲಿ ನವೆಂಬರ್ 29 ರ ತಡರಾತ್ರಿ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದ ಮಹಿಳೆಯೊಬ್ಬರಿಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಆಘಾತಕಾರಿ ಘಟನೆ ನಡೆದಿದೆ. ಈ ಘಟನೆಯ ವೇಳೆ ಕಾರು ಚಾಲಕ ಪಾನಮತ್ತನಾಗಿದ್ದರಿಂದ ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿ ನಡೆದು ಹೋಗುತ್ತಿದ್ದ ಯುವತಿಗೆ ಡಿಕ್ಕಿ ಹೊಡೆದಿದ್ದಾನೆ. ಕಿರಿದಾದ ರಸ್ತೆಯಲ್ಲಿ ಈ ಘಟನೆ ಸಂಭವಿಸಿದ್ದು, ವಸತಿ ಪ್ರದೇಶದಲ್ಲಿ ಚಾಲಕ ಅತಿವೇಗದ ಚಾಲನೆ ಮಾಡಿದ್ದಾನೆ. ಈ ಭೀಕರ ಅಪಘಾತ ಸ್ಥಳದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ಹರಿದಾಡುತ್ತಿದೆ.
ಈ ಸುದ್ದಿಯನ್ನೂ ಓದಿ: ತಂದೆಯ ಅಂತ್ಯಸಂಸ್ಕಾರ: ಮದ್ಯ, ಬೀಡಿ, ಬನಾರಸಿ ಪಾನ್ ಬಳಸಿ ದಹನ