IND vs ENG: ಇಂಗ್ಲೆಂಡ್ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆ ಬರೆದ ರವೀಂದ್ರ ಜಡೇಜಾ!
Ravindra Jadeja Took 42 wickets in IND vs ENG ODIs: ಇಂಗ್ಲೆಂಡ್ ವಿರುದ್ಧ ಮೊದಲನೇ ಏಕದಿನ ಪಂದ್ಯದಲ್ಲಿ ಮೂರು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಭಾರತ ತಂಡದ ಸ್ಪಿನ್ ಆಲ್‌ರೌಂಡರ್ ರವೀಂದ್ರ ಜಡೇಜಾ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಜಡೇಜಾ ಭಾರತ vs ಇಂಗ್ಲೆಂಡ್ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.
ನಾಗ್ಪುರ: ಇಲ್ಲಿನ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ (IND vs ENG) ನಡುವಣ ಮೊದಲನೇ ಏಕದಿನ ಪಂದ್ಯದಲ್ಲಿ ಸ್ಪಿನ್ ಆಲ್‌ರೌಂಡರ್ ರವೀಂದ್ರ ಜಡೇಜಾ (Ravindra Jadeja) ವಿಕೆಟ್‌ಗಳನ್ನು ಕಬಳಿಸುವ ಮೂಲಕ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್ ಎನಿಸಿಕೊಳ್ಳುವ ಮೂಲಕ ಆಂಗ್ಲರ ಮಾಜಿ ವೇಗಿ ಜೇಮ್ಸ್ ಆಂಡರ್ಸನ್ ದಾಖಲೆಯನ್ನು ಮುರಿದಿದ್ದಾರೆ.
ಮೊದಲನೇ ಏಕದಿನ ಪಂದ್ಯದಲ್ಲಿ ಮೊದಲು ಬೌಲ್ ಮಾಡುವಂತಾದ ಭಾರತ ತಂಡದ ಪರ 9 ಓವರ್ ಬೌಲ್ ಮಾಡಿ 26 ರನ್ ನೀಡಿ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಆ ಮೂಲಕ ಭಾರತ ಹಾಗೂ ಇಂಗ್ಲೆಂಡ್ ನಡುವಣ ಏಕದಿನ ಕ್ರಿಕೆಟ್‌ನಲ್ಲಿ 42 ವಿಕೆಟ್‌ಗಳನ್ನು ಪಡೆದಂತಾಯಿತು. ಇದರೊಂದಿಗೆ ಇಂಡೋ-ಆಂಗ್ಲ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಳ್ಳುವ ಮೂಲಕ ಜೇಮ್ಸ್ ಆಂಡರ್ಸನ್ ಅವರ ದಾಖಲೆಯನ್ನು ಮುರಿದಿದ್ದಾರೆ.
IND vs ENG: ಒಂದೇ ಓವರ್‌ನಲ್ಲಿ 26 ರನ್ ನೀಡಿ ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಹರ್ಷಿತ್ ರಾಣಾ!
ಇಂಗ್ಲೆಂಡ್ ಮಾಜಿ ವೇಗಿ ಜೇಮ್ಸ್ ಆಂಡರ್ಸನ್ ಅವರು ಭಾರತದ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಆಡಿದ 31 ಪಂದ್ಯಗಳಿಂದ 40 ವಿಕೆಟ್‌ಗಳನ್ನು ಪಡೆದಿದ್ದಾರೆ. ಆದರೆ, ರವೀಂದ್ರ ಜಡೇಜಾ ತಮ್ಮ 27ನೇ ಪಂದ್ಯದಲ್ಲಿ 40 ವಿಕೆಟ್‌ಗಳನ್ನು ತಲುಪಿದ್ದಾರೆ. ಒಟ್ಟಾರೆ ರವೀಂದ್ರ ಜಡೇಜಾ ಇದೀಗ ಭಾರತ ಹಾಗೂ ಇಂಗ್ಲೆಂಡ್ ನಡುವಣ ಏಕದಿನ ಕ್ರಿಕೆಟ್‌ನನಲ್ಲಿ 42 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಭಾರತ vs ಇಂಗ್ಲೆಂಡ್ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ಬೌಲರ್‌ಗಳು
ರವೀಂದ್ರ ಜಡೇಜಾ: 42
ಜೇಮ್ಸ್ ಆಂಡರ್ಸನ್: 40
ಆಂಡ್ರ್ಯೂ ಫ್ಲಿಂಟಾಫ್: 37
ಹರ್ಭಜನ್ ಸಿಂಗ್: 36
ಜಾವಗಲ್ ಶ್ರೀನಾಥ್, ಆರ್ ಅಶ್ವಿನ್ : 35
IND vs ENG: ಚಾಂಪಿಯನ್ಸ್ ಟ್ರೋಫಿಗೆ ವರುಣ್ ಚಕ್ರವರ್ತಿ? ರೋಹಿತ್ ಶರ್ಮಾ ಹೇಳಿದ್ದಿದು!
ತಮ್ಮ ಆಯ್ಕೆಗೆ ಮೌಲ್ಯ ತಂದುಕೊಟ್ಟ ಜಡೇಜಾ
ಈ ಪ್ರದರ್ಶನದ ಮೂಲಕ ರವೀಂದ್ರ ಜಡೇಜಾ ಭಾರತದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರೆಂಬುದನ್ನು ಸಾಬೀತುಪಡಿಸಿದ್ದಾರೆ. ತಂಡದಲ್ಲಿ ಅಕ್ಷರ್ ಪಟೇಲ್ ಇರುವ ಕಾರಣ, ಭಾರತದ ಪ್ಲೇಯಿಂಗ್ XIನಲ್ಲಿ ರವೀಂದ್ರ ಜಡೇಜಾಗೆ ಸ್ಥಾನ ಸಿಗುವುದು ಅನುಮಾನ ಎಂದು ಹೇಳಲಾಗುತ್ತಿತ್ತು. ಆದರೆ, ಅಕ್ಷರ್ ಜತೆಗೆ ಜಡೇಜಾಗೂ ಕೂಡ ತಂಡದಲ್ಲಿ ಸ್ಥಾನ ನೀಡಲಾಗಿದೆ. ಆಡುವ ಬಳಗದಲ್ಲಿ ಸಿಕ್ಕ ಸ್ಥಾನಕ್ಕೆ ಜಡೇಜಾ ಮೌಲ್ಯವನ್ನು ತಂದುಕೊಟ್ಟಿದ್ದಾರೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಭಾರತ ತಂಡದಲ್ಲಿ ವರುಣ್ ಚಕ್ರವರ್ತಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಈ ಕಾರಣದಿಂದಲೇ ಅವರನ್ನು ಇಂಗ್ಲೆಂಡ್ ಏಕದಿನ ಸರಣಿಗೆ ಕರೆಸಿಕೊಳ್ಳಲಾಗಿದೆ. ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್ ಹಾಗೂ ಕುಲ್ದೀಪ್ ಯಾದವ್ ಅವರಲ್ಲಿ ಒಬ್ಬರು ಚೆನ್ನೈ ಮೂಲದ ಸ್ಪಿನ್ನರ್‌ಗೆ ಅವಕಾಶ ಮಾಡಿಕೊಡಲಿದ್ದಾರೆ. ಇದೀಗ ಮೂರು ವಿಕೆಟ್ ಪಡೆದಿರುವ ರವೀಂದ್ರ ಜಡೇಜಾ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ತಮ್ಮ ಸ್ಥಾನವನ್ನು ಬಹುತೇಕ ಗಟ್ಟಿ ಮಾಡಿಕೊಂಡಿದ್ದಾರೆ.