ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

KPSC Recruitment Scam: ನೇಮಕಾತಿ ಅಕ್ರಮ; ಕೆಪಿಎಸ್‌ಸಿಯನ್ನೇ ಮುಚ್ಚುವ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ ಎಂದ ಸಿಎಂ

ಕೆಪಿಎಸ್‌ಸಿಯಲ್ಲಿ ಖದೀಮರು ಸೇರಿಕೊಂಡು ಅಕ್ರಮದಲ್ಲಿ ತೊಡಗಿದ್ದಾರೆ. ನಮಗೆ ಮಕ್ಕಳ ಭವಿಷ್ಯ ಮುಖ್ಯ. ಹೀಗಾಗಿ ನೇಮಕಾತಿ ಅಕ್ರಮಗಳನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದು, ಕಾನೂನಾತ್ಮಕವಾಗಿ ಈ ಕೆಪಿಎಸ್‌ಸ್ಸಿಯನ್ನೇ ಹೇಗೆ ಮುಚ್ಚಬೇಕು ಎಂಬ ಬಗ್ಗೆ ನಾವು ಚರ್ಚೆ ನಡೆಸುತ್ತಿದ್ದೇವೆ ಎಂದು ಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಕೆಪಿಎಸ್‌ಸಿಯನ್ನೇ ಮುಚ್ಚುವ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ ಎಂದ ಸಿಎಂ

-

Prabhakara R
Prabhakara R Sep 22, 2026 5:39 PM

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿಯಲ್ಲಿ (KPSC Recruitment Scam) ಪದೇಪದೆ ಅಕ್ರಮಗಳು ಬೆಳಕಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಕೆಪಿಎಸ್‌ಸಿಯನ್ನೇ ಮುಚ್ಚುವ (ರದ್ದು) ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಸಂಸ್ಥೆಯ ಮೇಲೆ ಅಪಾರ ನಂಬಿಕೆ ಇಟ್ಟು ನೇಮಕಾತಿ ಜವಾಬ್ದಾರಿ ವಹಿಸಲಾಗುತ್ತಿತ್ತು. ಆದರೆ ಪದೇ ಪದೇ ಇಂತಹ ಅಕ್ರಮಗಳು ಮರುಕಳಿಸುತ್ತಿರುವುದು ಲಕ್ಷಾಂತರ ಅಭ್ಯರ್ಥಿಗಳ ಹಾಗೂ ಮಕ್ಕಳ ಭವಿಷ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.



ಇನ್ನು ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ತನಿಖೆಗೆ ಎಸ್‌ಐಟಿ ರಚಿಸಲು ಹೈಕೋರ್ಟ್‌ ಆದೇಶ ನೀಡಿರುವ ಬಗ್ಗೆ ಮಾತನಾಡಿರುವ ಅವರು, ಹೈಕೋರ್ಟ್‌ ನಿರ್ದೇಶನವನ್ನು ಸ್ವಾಗತಿಸುತ್ತೇವೆ. ನಮ್ಮ ಪೊಲೀಸರೂ ಕೂಡ ಈಗಾಗಲೇ ಉತ್ತಮವಾಗಿ ತನಿಖೆ ನಡೆಸುತ್ತಿದ್ದಾರೆ. ಆದರೆ, ಇಂತಹುದೇ ಪೊಲೀಸ್‌ ಅಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಸೂಚಿಸಿರುವುದು ಸರಿಯಲ್ಲ. ಯಾವ ಅಧಿಕಾರಿಗಳ ಕೈಯಲ್ಲಿ ತನಿಖೆ ಮಾಡಿಸಬೇಕು ಎಂಬುವುದನ್ನು ಸರ್ಕಾರಕ್ಕೆ ಬಿಡಬೇಕು ಎಂದು ಹೇಳಿದ್ದಾರೆ.

ನೇಮಕಾತಿ ಅಕ್ರಮಗಳನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದು, ಕಾನೂನಾತ್ಮಕವಾಗಿ ಈ ಕೆಪಿಎಸ್‌ಸ್ಸಿಯನ್ನೇ ಹೇಗೆ ಮುಚ್ಚಬೇಕು ಎಂಬ ಬಗ್ಗೆ ನಾವು ಚರ್ಚೆ ನಡೆಸುತ್ತಿದ್ದೇವೆ. ಕೆಪಿಎಸ್‌ಸಿಯಲ್ಲಿ ಖದೀಮರು ಸೇರಿಕೊಂಡು ಅಕ್ರಮದಲ್ಲಿ ತೊಡಗಿದ್ದಾರೆ. ನಮಗೆ ಮಕ್ಕಳ ಭವಿಷ್ಯ ಮುಖ್ಯ, ಈ ನಿಟ್ಟಿನಲ್ಲಿ ನಾವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದೇವೆ ಎಂದು ತಿಳಿಸಿದ್ದಾರೆ.

ಕೆಪಿಎಸ್‌ಸಿ ರದ್ದು ಮಾಡಲು ಅನೇಕ ಸಚಿವರ ಒತ್ತಾಯ

ಬೆಂಗಳೂರು: ಕೆಪಿಎಸ್‌ಸಿ ಮೇಲೆ 1998ರಿಂದಲೂ ಗುರುತರ ಆರೋಪಗಳು ಬರುತ್ತಿದ್ದು, ಯುಪಿಎಸ್‌ಸಿ ಮಾದರಿ ರೂಪಿಸಬೇಕು ಅಥವಾ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನೇಮಕಾತಿ ಮಾಡಬೇಕು ಎಂಬುದು ರಾಜ್ಯದ ಅನೇಕ ಸಚಿವರ ಅಭಿಪ್ರಾಯ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಅವರು ಇತ್ತೀಚೆಗೆ ಹೇಳಿದ್ದರು.

ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ಕೆಪಿಎಸ್‌ಸಿ ಒಂದು ಸ್ವಾಯತ್ತ ಸಂಸ್ಥೆ ಆಗಿದ್ದು, ವಿವಿಧ ಇಲಾಖೆಯ ನೇಮಕಾತಿ ಪಾರದರ್ಶಕವಾಗಿ ಮಾಡಬೇಕಾಗಿವುದು ಅಧ್ಯಕ್ಷರು, ಸದಸ್ಯರ ಜವಾಬ್ದಾರಿ. ಕಷ್ಟಪಟ್ಟು ಓದಿದ ಕರ್ನಾಟಕದ ಅಭ್ಯರ್ಥಿಗಳಿಗೆ ಅನ್ಯಾಯ ಆಗದಂತೆ ಮತ್ತು ಪ್ರತಿಭಾವಂತರು ಸರ್ಕಾರಿ ಅಧಿಕಾರಿಗಳಾಗಲು ಉತ್ತಮ ವ್ಯವಸ್ಥೆ ಬರಬೇಕು.

KPSC Recruitment Scam: ಕೆಪಿಎಸ್‌ಸಿ ನೇಮಕಾತಿ ಹಗರಣದ ತನಿಖೆಗೆ ಎಸ್‌ಐಟಿ ರಚಿಸಲು ಹೈಕೋರ್ಟ್ ಆದೇಶ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಲವು ಹುದ್ದೆಗೆ ಈಗಾಗಲೇ ಪರೀಕ್ಷೆ ನಡೆಸಿ ನೇಮಕಾತಿ ಮಾಡಿದ ಅನುಭವ ಹೊಂದಿದೆ. ಪ್ರಶ್ನೆಪತ್ರಿಕೆ ಸೋರಿಕೆ ಆಗದಂತೆ, ಪರೀಕ್ಷೆ, ಮೌಲ್ಯಮಾಪನ ಪಾರದರ್ಶಕವಾಗಿ ನಡೆಯುವಂತೆ, ಮೌಖಿಕ ಸಂದರ್ಶನವೂ ಪಾರದರ್ಶಕವಾಗಿರುವಂತೆ ಮಾಡಿದ್ದಲ್ಲಿ ಶಾಶ್ವತ ಪರಿಹಾರ ದೊರಕುತ್ತದೆ. ಈ ನಿಟ್ಟಿನಲ್ಲಿ ವಿಫಲವಾಗಿರುವ ಆಯೋಗ ರದ್ದು ಮಾಡುವಂತೆ ತಾವೂ ಸೇರಿ ಹಲವು ಸಚಿವರು ಸಿಎಂಗೆ ಅಭಿಪ್ರಾಯ ತಿಳಿಸಿದ್ದೇವೆ. ಸಿಎಂ ಡಿ.ಕೆ.ಶಿವಕುಮಾ‌ರ್ ಮತ್ತು ಡಿಸಿಎಂ ಡಾ.ಜಿ.ಪರಮೇಶ್ವರ್ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದು ತಿಳಿಸಿದ್ದರು.