Women Safety: ಮಹಿಳಾ ಸುರಕ್ಷತೆಗಾಗಿ ಬಂದಿದೆ ಸ್ಪೆಷಲ್ ಸ್ಯಾಂಡಲ್ – ಇದ್ರಲ್ಲಿರುವ ಬಟನ್ ಒತ್ತಿದ್ರೆ ಆಯ್ತು!
ಮಹಿಳಾ ಸುರಕ್ಷತೆ ನಮ್ಮೆಲ್ಲರ ಆದ್ಯತೆ. ಇದಕ್ಕೆ ಪೂರಕವಾಗಿ ವಿದ್ಯಾರ್ಥಿಗಳಿಬ್ಬರು ಒಂದು ವಿಶಿಷ್ಟ ತಂತ್ರಜ್ಞಾನದ ಚಪ್ಪಲಿಯನ್ನು ಅಭಿವೃದ್ಧಿಗೊಳಿಸಿದ್ದು ಇದು ಹೇಗೆ ಮಹಿಳಾ ಸೇಫ್ಟಿಗೆ ಕೊಡುಗೆ ನಿಡುತ್ತದೆ ಎಂಬ ವಿವರ ಇಲ್ಲಿದೆ.

ಮಹಿಳಾ ಸುರಕ್ಷತೆಗಾಗಿ ಯುಪಿಯ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ವಿಶೇಷ ಸ್ಯಾಂಡಲ್.

ಲಖನೌ: ನಮ್ಮ ದೇಶದಲ್ಲಿ ಮಹಿಳೆಯ ಸುರಕ್ಷಾ (Women Saftey) ವಿಚಾರ ಬಹಳ ದೊಡ್ಡ ಚರ್ಚೆಯ ವಿಷಯವಾಗಿದೆ. ಮನೆಯ ಒಳಗೆ ಮತ್ತು ಮನೆಯ ಹೊರಗೆ ಹೆಣ್ಣು ಮಗಳೊಬ್ಬಳು ಎಷ್ಟು ಸುರಕ್ಷಿತ ಎಂಬ ಪ್ರಶ್ನೆಯನ್ನು ನಮ್ಮನ್ನೇ ನಾವು ಕೇಳಿಕೊಳ್ಳಬೇಕಾದ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಇನ್ನು ಮಹಿಳೆಯರ ಸುರಕ್ಷಾ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ಎರಡು ದಶಕಗಳಲ್ಲಿ ಹಲವಾರು ಉತ್ಪನ್ನಗಳನ್ನು ಪರಿಚಯಿಸಲಾಗಿದ್ದು ಅವುಗಳಲ್ಲಿ ಕೆಲವೊಂದು ಫೇಮಸ್ ಸಹ ಆಗಿದೆ. ಪೆಪ್ಪರ್ ಸ್ಪ್ರೇಯಿಂದ (pepper spray) ಹಿಡಿದು ಕ್ಯಾಬ್ ಗಳಲ್ಲಿ ಎಸ್.ಒ.ಎಸ್. ಬಟನ್ ಗಳು (SOS Button) ಹಾಗೂ ರೇಪ್ ವಿಸಿಲ್ ಗಳನ್ನು (rape whistles) ನಾವಿಲ್ಲಿ ಪ್ರಮುಖವಾಗಿ ಉಲ್ಲೇಖಿಸಬಹುದಾಗಿದೆ.
ಇದಕ್ಕೆ ಪೂರಕವಾಗಿ ಇದೀಗ ಹೊಸ ಮಾದರಿಯ ಚಪ್ಪಲಿಯೊಂದನ್ನು (Sandal) ಅಭವೃದ್ಧಿಪಡಿಸಲಾಗಿದ್ದು, ಈ ಚಪ್ಪಲಿಯಲ್ಲಿ ಮಹಿಳಾ ಸುರಕ್ಷಾ ಅಂಶಗಳನ್ನು ಅಳವಡಿಸಲಾಗಿದೆ. ಇದರಲ್ಲಿ ಇನ್ನೂ ಅಚ್ಚರಿಪಡುವ ಅಂಶವೆಂದರೆ ಈ ವಿನೂತನ ತಂತ್ರಜ್ಞಾನದ ಚಪ್ಪಲಿಯನ್ನು ಅಭಿವೃದ್ಧಿಪಡಿಸಿರುವುದು ಶಾಲಾ ವಿದ್ಯಾರ್ಥಿಗಳು!
ಉತ್ತರಪ್ರದೇಶದ (Uttar Pradesh) ಮಹಾರಾಜಗಂಜ್ (Maharajganj) ಜಿಲ್ಲೆಯ ಸಿಸ್ವಾ ಬಜಾರ್ ನಲ್ಲಿರುವ (Siswa Bazar) ಆರ್.ಪಿ.ಐ.ಸಿ. ಶಾಲಾ (RPIC School) ವಿದ್ಯಾರ್ಥಿಗಳಾದ ಅಮೃತ್ ತಿವಾರಿ ಹಾಗೂ ಕೋಮಲ್ ಜೈಸ್ವಾಲ್ ಎಂಬಿಬ್ಬರು ವಿದ್ಯಾರ್ಥಿಗಳು ಈ ವಿನೂತನ ಚಪ್ಪಲಿಗಳನ್ನು ಆವಿಷ್ಕರಿಸಿದ್ದಾರೆ.
ಅಪಾಯದ ಸಂದರ್ಭದಲ್ಲಿ ತುರ್ತು ಎಚ್ಚರಿಕೆಯನ್ನು ಕಳುಹಿಸುವ ವ್ಯವಸ್ಥೆಯನ್ನು ಈ ಚಪ್ಪಲಿಯಲ್ಲಿ ಅಳವಡಿಸಲಾಗಿದೆ. ಈ ಚಪ್ಪಲಿಯಲ್ಲಿ ಬೆರಳುಗಳ ಭಾಗದಲ್ಲಿ ಬಟನ್ ಒಂದನ್ನು ಇರಿಸಲಾಗಿದ್ದು, ಇದನ್ನು ಧರಿಸುವವರಿಗೆ ಅಪಾಯ ಎದುರಾದ ಸಂದರ್ಭದಲ್ಲಿ ಅವರು ಈ ಬಟನ್ ಅನ್ನು ತಮ್ಮ ಕಾಲಿನ ಬೆರಳಿನ ಮೂಲಕ ಅದುಮಿದರೆ ಎಸ್.ಒ.ಎಸ್. ಅಲರ್ಟ್ ರವಾನೆಯಾಗುತ್ತದೆ.
ಈ ಆವಿಷ್ಕಾರಿ ಚಪ್ಪಲಿಯಲ್ಲಿ ಅಳವಡಿಸಲಾಗಿರುವ ತಂತ್ರಜ್ಞಾನ ಮೊಬೈಲ್ ಅಪ್ಲಿಕೇಶನ್ ಒಂದಕ್ಕೆ ಸಂಪರ್ಕ ಹೊಂದಿರುತ್ತದೆ. ಈ ಅಪ್ಲಿಕೇಶನ್ ಮೂಲಕ, ಚಪ್ಪಲ್ ಬಳಸುವವರು ತಮ್ಮ ಕುಟುಂಬ ಸದಸ್ಯರಿಗೆ, ಗೆಳೆಯರಿಗೆ ಅಥವಾ ತಮ್ಮ ನಂಬುಗೆಯ ವ್ಯಕ್ತಿಗಳಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುವಂತೆ ಈ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗಿದೆ.
ಅಪಾಯದ ಸಂದರ್ಭದಲ್ಲಿ ಈ ಚಪ್ಪಲಿ ಧರಿಸಿರುವವರು ಕಳುಹಿಸುವ ಎಚ್ಚರಿಕೆ ಸಂದೇಶ, ಚಪ್ಪಲ್ ಧರಿಸಿರುವವರ ಲೊಕೇಶನ್ ಅನ್ನು ಶೇರ್ ಮಾಡುವುದು ಮಾತ್ರವಲ್ಲದೇ, ಸಮೀಪದ ಸ್ಥಳದ ಆಡಿಯೋವನ್ನು ಸಹ ಕ್ಯಾಪ್ಚರ್ ಮಾಡಿ ಕಳುಹಿಸುತ್ತದೆ. ಇದರಿಂದ, ಈ ಎಚ್ಚರಿಕೆ ಸಂದೇಶ ಸ್ವಿಕರಿಸುವರಿಗೆ ಇದನ್ನು ಕಳುಹಿಸಿದ ವ್ಯಕ್ತಿಗಳ ಪ್ರದೇಶದಲ್ಲಿ ಏನಾಗುತ್ತಿದೆ ಎಂಬ ಸ್ಥೂಲ ಚಿತ್ರಣವೂ ದೊರೆಯುತ್ತದೆ.
ಇದನ್ನೂ ಓದಿ: Viral Video: ರೀಲ್ಸ್ ನೋಡ್ತಾ ಕುಳಿತ ವೈದ್ಯ- ಚಿಕಿತ್ಸೆಗೆ ಬಂದಿದ್ದ ಮಹಿಳೆ ಹೃದಯಘಾತದಿಂದ ಸಾವು
‘ಚಪ್ಪಲಿ ಮೂಲಕ ಫೋನ್ ಗೆ ಸಂಪರ್ಕ ಕಲ್ಪಿಸುವ ತಂತ್ರಜ್ಞಾನದ ಮೂಲಕ ನಾವು ಈ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದ್ದು, ಭವಿಷ್ಯದಲ್ಲಿ ನಾವು ಇ ಚಪ್ಪಲ್ ನಲ್ಲಿ ಕ್ಯಾಮರಾ ಅಳವಡಿಸುವ ಚಿಂತನೆಯಲ್ಲಿದ್ದೇವೆ. ಹಿಗಾದಾಗ, ಅಪಾಯಕ್ಕೊಳಗಾದ ವ್ಯಕ್ತಿಯ ಪರಿಸರದ ಧ್ವನಿ, ಲೊಕೇಶನ್ ಮತ್ತು ದೃಶ್ಯಗಳನ್ನೂ ಸಹ ಈ ಸಂದೇಶವನ್ನು ಸ್ವೀಕರಿಸುವವರು ಪಡೆಯಲು ಸಾಧ್ಯವಿರುತ್ತದೆ’ ಎಂದು ಇದನ್ನು ಅಭಿವೃದ್ಧಿಪಡಿಸಿದ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿರುವ ಅಮೃತ್ ತಿವಾರಿ ತಮ್ಮ ಸಂಶೋಧನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.
‘ಸುರಕ್ಷತೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಈ ಚಪ್ಪಲನ್ನು ಅಭಿವೃದ‍್ಧಿಪಡಿಸಲಾಗಿದೆ. ಮಹಿಳೆಯರು ತುರ್ತು ಸಂದರ್ಭದಲ್ಲಿ ತಮ್ಮ ಸುರಕ್ಷತೆ ಮತ್ತು ರಕ್ಷಣೆಗಾಗಿ ಈ ತಂತ್ರಜ್ಞಾನವನ್ನು ಬಳಸಿಕೊಳ್ಳಬಹುದಾಗಿದೆ. ಈ ಚಪ್ಪಲಿಗಳ ಪ್ರತಿ ಜೊತೆಯೂ, ಇದನ್ನು ಧರಿಸಿದವರಿಗೆ ಯಾವುದೇ ಅಪಾಯವಾಗದ ರೀತಿಯಲ್ಲಿ, ದಾಳಿಕೋರರನ್ನು ಹಿಮ್ಮೆಟ್ಟಿಸಲು ಸಾಕಾಗುವಷ್ಟು ವಿದ್ಯುತ್ ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ’ ಎಂದು ಈ ಚಪ್ಪಲಿಯನ್ನು ಅಭಿವೃದ‍್ಧಿಗೊಳಿಸುವಲ್ಲಿ ಭಗಿಯಾಗಿರುವ ಇನ್ನೋರ್ವ ವಿದ್ಯಾರ್ಥಿ ಕೋಮಲ್ ಜೈಸ್ವಾಲ್ ಮಾಹಿತಿ ನೀಡಿದ್ದಾರೆ.
ಈ ಚಪ್ಪಲಿಯ ಬೆಲೆ 2500 ರೂಪಾಯಿಗಳಾಗಿದ್ದು, ಸಾಮಾನ್ಯ ಚಪ್ಪಲಿಗಳಿಗಿಂತ ಕೊಂಚ ದುಬಾರಿಯಾಗಿದ್ದರೂ, ಸುರಕ್ಷತೆಯ ವಿಚಾರಕ್ಕೆ ಬಂದಾಗ ಹಣಕ್ಕಿಂತ ಪ್ರಾಣ ಮತ್ತು ಮಾನವೇ ಮುಖ್ಯವಾಗುವ ಕಾರಣ ಈ ಬೆಲೆ ನಗಣ್ಯವಾಗುತ್ತದೆ.
ಈ ಇಬ್ಬರು ವಿದ್ಯಾರ್ಥಿಗಳ ಈ ವಿಶಿಷ್ಟ ಸಂಶೋಧನೆ ಇದೀಗ ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ (Science and Technology Department) ಗಮನ ಸೆಳೆದಿದ್ದು, ಈ ವಿಶಿಷ್ಟ ವಿನ್ಯಾಸದ ಬಗ್ಗೆ ಇಲಾಖೆ ಇದೀಗ ಆಸಕ್ತಿ ತಳೆದಿದೆ.