ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Summer Holiday: ರಜಾ ಕಾಲದ ಮಜಾ ಪಡೆಯಲು ರೆಡಿನಾ? ಇಲ್ಲಿವೆ ನೋಡಿ ಅಗ್ಗದ ಹೋಟೆಲ್ ಕೊಠಡಿ ಹೊಂದಿರುವ ವಿದೇಶಿ ನಗರಗಳ ಪಟ್ಟಿ

Best Destination: ಪ್ರವಾಸ ಹೋದರೆ ಊಟ, ವಸತಿ, ಪ್ರಯಾಣ ಎಂದು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಲೇಬೇಕು. ಇಂತಹ ಸಂದರ್ಭದಲ್ಲಿ ಜನರು ಹುಡುಕುವುದು ಪಾಕೆಟ್‌ ಫ್ರೆಂಡ್ಲಿ ಸ್ಥಳಗಳನ್ನು. ನಿಮ್ಮ ಕಷ್ಟವನ್ನು ಕಡಿಮೆ ಮಾಡಲೆಂದೇ ನಾವು ಇವತ್ತು 8 ವಿದೇಶಿ ತಾಣಗಳನ್ನು ನಿಮಗೆ ಪರಿಚಯಿಸುತ್ತಿದ್ದೇವೆ.

ಜಪಾನ್‌ನಲ್ಲಿರುವ ಚೀಪೆಸ್ಟ್ ಟೂರಿಸ್ಟ್ ತಾಣಗಳು ಇಲ್ಲಿವೆ..!

ಸಾಂದರ್ಭಿಕ ಚಿತ್ರ

Profile Sushmitha Jain Mar 21, 2025 5:00 AM

ನವದೆಹಲಿ: ಭಾರತ(India)ದಲ್ಲಿ ಬೇಸಿಗೆ ರಜೆ(Summer Holiday) ಎಂದರೆ ಬಹುತೇಕರಿಗೆ (Tour)ದ ನೆನಪಾಗುತ್ತದೆ. ಆದರೆ, ಈ ಸಮಯವನ್ನು ಪ್ರವಾಸಿ ತಾಣಗಳ(Tourist Place) ಉದ್ಯಮಿಗಳೂ ಬಳಸಿಕೊಂಡು ಹೆಚ್ಚಿನ ಹಣ ಸಂಪಾದಿಸಲು ಪ್ರಯತ್ನಿಸುತ್ತಾರೆ. ಎಲ್ಲಾದರೂ ಹೋದರೆ ಊಟ, ವಸತಿ, ಪ್ರಯಾಣ ಎಂದು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಲೇಬೇಕು. ಇಂತಹ ಸಂದರ್ಭದಲ್ಲಿ ಜನರು ಹುಡುಕುವುದು ಪಾಕೆಟ್‌ ಫ್ರೆಂಡ್ಲಿ ಸ್ಥಳಗಳನ್ನು. ನಿಮ್ಮ ಕಷ್ಟವನ್ನು ಕಡಿಮೆ ಮಾಡಲೆಂದೇ ನಾವು ಇವತ್ತು 8 ವಿದೇಶಿ ತಾಣಗಳನ್ನು(foreign Country) ನಿಮಗೆ ಪರಿಚಯಿಸುತ್ತಿದ್ದೇವೆ. ಅಗೋಡಾ ಎಂಬ ಸಂಸ್ಥೆ ನಡೆಸಿದ ತುಲಣಾತ್ಮಕ ಅಧ್ಯಯನದ ಪ್ರಕಾರ, ಭಾರತೀಯರ ಮಟ್ಟಿಗೆ ಈ ಸ್ಥಳಗಳು ಅತ್ಯಂತ ಕಡಿಮೆ ದರದಲ್ಲಿ ವಸತಿಯನ್ನು ಒದಗಿಸುತ್ತವೆ. ಅಗ್ಗದ ವಸತಿಗಳನ್ನು ನೀಡುವ ಎಂಟು ತಾಣಗಳು ಇಲ್ಲಿವೆ.

ಫೋಂಗ್ ನ್ಹಾ, ವಿಯೆಟ್ನಾಂ (ಸರಾಸರಿ ಕೊಠಡಿ ದರ: ಪ್ರತಿ ರಾತ್ರಿಗೆ ರೂ. 2,431)

ಪಟ್ಟಿಯಲ್ಲಿ ಮೊದಲನೆಯ ಸ್ಥಾನದಲ್ಲಿ ಬರುವುದು ವಿಯೆಟ್ನಾಂನ ಫೋಂಗ್ ನ್ಹಾ. ಇದು ಸಾಹಸಿಗರ ಸ್ವರ್ಗ. ಇದು ಯುನೆಸ್ಕೋ ಪಟ್ಟಿ ಮಾಡಿರುವ ಫೋಂಗ್ ನ್ಹಾ-ಕೆ ಬ್ಯಾಂಗ್ ರಾಷ್ಟ್ರೀಯ ಉದ್ಯಾನವನದ ನೆಲೆಯಾಗಿದೆ. ಇಲ್ಲಿ ಸನ್ ಡೂಂಗ್ ಸೇರಿದಂತೆ ವಿಶ್ವದ ಕೆಲವು ದೊಡ್ಡ ಗುಹೆಗಳಿವೆ. ನೀವು ಸಾಹಸಪ್ರಿಯರಾಗಿದ್ದರೆ ಇದು ನಿಮಗೆ ಸೂಕ್ತವಾದ ಸ್ಥಳ.

ಹ್ಯಾಟ್ ಯೈ, ಥೈಲ್ಯಾಂಡ್ (ಸರಾಸರಿ ಕೊಠಡಿ ದರ: ಪ್ರತಿ ರಾತ್ರಿಗೆ ರೂ. 3,473)

ದಕ್ಷಿಣ ಥೈಲ್ಯಾಂಡ್‌ನ ಅತಿದೊಡ್ಡ ನಗರವಾದ ಹ್ಯಾಟ್ ಯೈ, ಮಲೇಷ್ಯಾದ ಗಡಿ ಬಳಿ ಇದೆ. ಇದು ಬೇಸಿಗೆಯಲ್ಲಿ ಅತ್ಯಂತ ಅಗ್ಗದ ಪ್ರಯಾಣ ತಾಣಗಳಲ್ಲಿ ಒಂದಾಗಿದೆ. ನೀವು ಶಾಪಿಂಗ್ ಪ್ರಿಯರಾಗಿದ್ದರೆ, ಪ್ರಯಾಣ ಮತ್ತು ವಸತಿಯಲ್ಲಿ ಹಣ ಉಳಿಸಿ, ಶಾಪಿಂಗ್‌ನಲ್ಲಿ ಖರ್ಚು ಮಾಡಲು ಇಲ್ಲಿಗ ಬರಲೇಬೇಕು! ಕಿಮ್ ಯೋಂಗ್ ಮತ್ತು ಸ್ಯಾಂಟಿಸುಕ್ ಮಾರುಕಟ್ಟೆಗಳು ಆಮದು ಮಾಡಿಕೊಂಡ ಮತ್ತು ಸ್ಥಳೀಯ ವಸ್ತುಗಳಿಂದ ತುಂಬಿ ತುಳುಕುತ್ತವೆ. ಹ್ಯಾಟ್ ಯೈನ ಅದ್ಭುತವಾದ ಸ್ಟ್ರೀಟ್‌ ಫುಡ್‌ ಬಹಳ ಫೇಮಸ್.

ಪಡಾಂಗ್, ಇಂಡೋನೇಷ್ಯಾ (ಸರಾಸರಿ ಕೊಠಡಿ ದರ: ಪ್ರತಿ ರಾತ್ರಿಗೆ ರೂ. 3,473)

ವಿವಿಧ ರೀತಿಯ ಆಹಾರರ ವಸ್ತುಗಳನ್ನು ಸವಿಯುವುದು ನಿಮಗೆ ಇಷ್ಟವಾಗಿದ್ದರೆ ನೀವು ಇಲ್ಲಿಗೆ ಭೇಟಿ ನೀಡಲೇಬೇಕು. ರೆಂಡಾಂಗ್ ಮತ್ತು ಸೇಟ್ ಪಡಾಂಗ್ ರುಚಿಕರವಾದ ಭಕ್ಷ್ಯಗಳಿಗೆ ಹೆಸರುವಾಸಿಯಾಗಿದೆ. ಈ ನಗರವು ಇಂಡೋನೇಷ್ಯಾದ ಅಧಿಕೃತ ಪಾಕಪದ್ಧತಿಯನ್ನು ಬಳಸಿ ಆಹಾರ ತಯಾರಿಸುತ್ತದೆ. ಆಹಾರದ ಹೊರತಾಗಿ, ನೀವು ಮೆಂಟವಾಯಿ ದ್ವೀಪಗಳಲ್ಲಿನ ಕಡಲತೀರಗಳಲ್ಲಿ ವಿಶ್ರಾಂತಿ ಪಡೆಯಬಹುದು ಅಥವಾ ಏರ್ ಮನಿಸ್ ಬೀಚ್‌ಗೆ ಭೇಟಿ ನೀಡಬಹುದು.

ಬಕೋಲೋಡ್, ಫಿಲಿಪೈನ್ಸ್ (ಸರಾಸರಿ ಕೊಠಡಿ ದರ: ಪ್ರತಿ ರಾತ್ರಿಗೆ ರೂ. 3,994)

"ಸ್ಮೈಲ್ಸ್ ನಗರ" ಎಂದೂ ಕರೆಯಲ್ಪಡುವ ಬಕೋಲೋಡ್, ಮಸ್ಕಾರಾ ಉತ್ಸವ ಮತ್ತು ರೋಮಾಂಚಕಾರಿ ಬಕೋಲಾಡಿಯೇಟ್ ಉತ್ಸವಕ್ಕೆ ಪ್ರಸಿದ್ಧವಾಗಿದೆ. ನೀವು ಐತಿಹಾಸಿಕ ಹೆಗ್ಗುರುತಾದ ದಿ ರೂಯಿನ್ಸ್ ಅನ್ನು ಕೂಡಾ ನೋಡಬಹುದು. ಇದರೊಂದಿಗೆ, ಸ್ಥಳೀಯ ಸಂಸ್ಕೃತಿಯ ಕುರುಹಾದ ಪ್ರಸಿದ್ಧ ಚಿಕನ್ ಇನಾಸಲ್ ಅನ್ನು ಆನಂದಿಸಬಹುದು.

ಈ ಸುದ್ದಿಯನ್ನು ಓದಿ:Touring Spot: ಇಲ್ಲಿದೆ ಪ್ರಪಂಚದ 9 ಅತ್ಯಂತ ಸುಂದರ ಊರುಗಳು – ಇಲ್ಲಿಗೆ ಭೇಟಿ ಕೊಡುವುದೇ ಒಂದು ಅನುಪಮ ಅನುಭವ?

ಕೌಲಾ ಟೆರೆಂಗಾನು, ಮಲೇಷ್ಯಾ (ಸರಾಸರಿ ಕೊಠಡಿ ದರ: ಪ್ರತಿ ರಾತ್ರಿಗೆ ರೂ. 4,168)

ಸೂರ್ಯನ ಕಿರಣ, ಮರಳು ಮತ್ತು ಸಂಸ್ಕೃತಿಯನ್ನು ಪ್ರೀತಿಸುವವರಿಗೆ, ಕೌಲಾ ಟೆರೆಂಗಾನು ಪರ್ಫೆಕ್ಟ್ ಆಯ್ಕೆಯಾಗಿದೆ. ಈ ಕರಾವಳಿ ನಗರವು ಪ್ರಾಚೀನ ಕಡಲತೀರಗಳು, ಸಾಂಪ್ರದಾಯಿಕ ಮಾರುಕಟ್ಟೆಗಳು ಮತ್ತು ಕ್ರಿಸ್ಟಲ್ ಮಸೀದಿಯನ್ನು ಹೊಂದಿದೆ. ಹತ್ತಿರದ ರೆಡಾಂಗ್ ದ್ವೀಪದಲ್ಲಿ ಸ್ನಾರ್ಕೆಲಿಂಗ್ ಮತ್ತು ಡೈವಿಂಗ್ ಅವಕಾಶಗಳೂ ಲಭ್ಯವಿವೆ.

ಗಿಂಪೊ, ದಕ್ಷಿಣ ಕೊರಿಯಾ (ಸರಾಸರಿ ಕೊಠಡಿ ದರ: ಪ್ರತಿ ರಾತ್ರಿಗೆ ರೂ. 5,731)

ನಿಮ್ಮ ಜೇಬಿಗೆ ಹೆಚ್ಚಿನ ಹೊರೆಯಾಗದೆ ನೀವು ದಕ್ಷಿಣ ಕೊರಿಯಾವನ್ನು ಸುತ್ತಲು ಬಯಸಿದರೆ, ಗಿಯೊಂಗಿ ಪ್ರಾಂತ್ಯದ ಗಿಂಪೊ ನಗರವು ಉತ್ತರವಾಗಿದೆ. ಮುನ್ಸು ಪರ್ವತದಲ್ಲಿ ಚೆರ್ರಿ ಹೂವುಗಳನ್ನು ವೀಕ್ಷಿಸಿ, ರಾಷ್ಟ್ರೀಯ ವಿಮಾನಯಾನ ವಸ್ತುಸಂಗ್ರಹಾಲಯವನ್ನು ನೋಡಿ, ಹಾನ್ ನದಿಯ ಉದ್ದಕ್ಕೂ ಸುಂದರವಾದ ಪರಿಸರದಲ್ಲಿ ವಾಕಿಂಗ್‌ ಮಾಡಿದರೆ ಅದೊಂದು ಪೈಸಾ ವಸೂಲ್‌ ಪ್ರವಾಸವಾಗುತದೆ.

ನರಿತಾ, ಜಪಾನ್ (ಸರಾಸರಿ ಕೊಠಡಿ ದರ: ಪ್ರತಿ ರಾತ್ರಿಗೆ ರೂ. 6,165)

ನರಿತಾ ಜಪಾನ್‌ನ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದ್ದು, ಇದನ್ನು ಕೇವಲ ಒಂದು ಲೇಓವರ್ ನಗರವಾಗಿ ಪರಿಗಣಿಸಲಾಗುತ್ತದೆ. ಇದು ಐತಿಹಾಸಿಕ ನರಿತಾಸನ್ ಶಿನ್ಶೋಜಿ ದೇವಾಲಯ ಮತ್ತು ಸುಂದರವಾದ ಚೆರ್ರಿ ಹೂವುಗಳಿಂದ ತುಂಬಿದ ಉದ್ಯಾನವನಗಳಂತಹ ಆಕರ್ಷಣೀಯ ಸ್ಥಳಗಳನ್ನು ಹೊಂದಿದೆ. ಈ ನಗರವು ಸಂಸ್ಕೃತಿ ಮತ್ತು ನೈಸರ್ಗಿಕ ಸೌಂದರ್ಯದ ಪರಿಪೂರ್ಣ ಮಿಶ್ರಣವಾಗಿದೆ. ನಿಮಗೆ ಆಸಕ್ತಿ ಇದ್ದರೆ, ಸ್ಥಳೀಯ ವಿಶೇಷ ಖಾದ್ಯವಾದ ಉನಗಿ (ಸುಟ್ಟ ಈಲ್) ತಿನ್ನುವುದನ್ನು ತಪ್ಪಿಸಿಕೊಳ್ಳಬೇಡಿ.

ಪಿಂಗ್ಟಂಗ್, ತೈವಾನ್ (ಸರಾಸರಿ ಕೊಠಡಿ ದರ: ಪ್ರತಿ ರಾತ್ರಿಗೆ ರೂ. 6,860)

ತೈವಾನ್ ನಿಮ್ಮ ಪ್ರವಾಸ ಪಟ್ಟಿಯಲ್ಲಿದ್ದರೆ, ಪಿಂಗ್ಟಂಗ್ ನಗರ ಅಗ್ರಸ್ಥಾನದಲ್ಲಿರಲಿ. ಈ ಕರಾವಳಿ ನಗರವು ಕೆಂಟಿಂಗ್ ರಾಷ್ಟ್ರೀಯ ಉದ್ಯಾನವನಕ್ಕೆ ಪ್ರವೇಶ ದ್ವಾರವಾಗಿದೆ. ಅಲ್ಲಿನ ಬಂಡೆಗಳು ಮತ್ತು ಪರಿಶುದ್ಧವಾದ ನೀರು ಜಗತ್ಪ್ರಸಿದ್ಧ. ರಾತ್ರಿ ಮಾರುಕಟ್ಟೆಗಳು, ಸ್ಥಳೀಯ ಖಾದ್ಯಗಳು ಮತ್ತು ಬೆರಗುಗೊಳಿಸುವ ದೃಶ್ಯಾವಳಿಗಳನ್ನು ಹೆಚ್ಚಿನ ಖರ್ಚು ಮಾಡದೆ ಆನಂದಿಸಬಹುದು. ಈ ಬಾರಿಯ ಬೇಸಿಗೆ ರಜೆಯನ್ನು ಸುಮ್ಮನೆ ಮನೆಯಲ್ಲಿ ಕುಳಿತು ವ್ಯರ್ಥ ಮಾಡುವ ಬದಲು, ಅತ್ಯಂತ ಕಡಿಮೆ ಖರ್ಚಿನಲ್ಲಿ ಮೇಲಿನ ಯಾವುದಾದರೂ ಸ್ಥಳಕ್ಕೆ ಪ್ರಯಾಣ ಬೆಳೆಸಬಹುದು. ಈ ಬೇಸಿಗೆ ರಜೆಯನ್ನು ಅತ್ಯಂತ ಸ್ಮರಣೀಯವಾಗಿಸುವ ಆಯ್ಕೆ ನಿಮಗಿದೆ.