ಒಂದೇ ಸಾಂಗ್‌ನಲ್ಲಿ ಸಾವಿರ ನೃತ್ಯಗಾರರ ಡ್ಯಾನ್ಸ್; 'ನಾಗಬಂಧಂ' ಚಿತ್ರದ 'ನಮೋ ರೇ' ಹಾಡಿನ ಮೂಲಕ ಸೃಷ್ಟಿಯಾಯ್ತು ಹೊಸ ದಾಖಲೆ
Nagabandham Song Record: ಅಭಿಷೇಕ್ ನಾಮಾ ನಿರ್ದೇಶನದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ 'ನಾಗಬಂಧಂ' ಈಗ ತನ್ನ 'ನಮೋ ರೇ' ಹಾಡಿನ ಮೂಲಕ ಗಮನ ಸೆಳೆಯುತ್ತಿದೆ. ಈ ಒಂದು ಹಾಡಿನಲ್ಲಿ ಬರೋಬ್ಬರಿ 1 ಸಾವಿರ ನೃತ್ಯಗಾರರನ್ನು ಬಳಸಿಕೊಳ್ಳುವ ಮೂಲಕ ಚಿತ್ರತಂಡ ಹೊಸ ದಾಖಲೆ ಬರೆದಿದೆ.
-
ಭಾರತೀಯ ಚಿತ್ರರಂಗದಲ್ಲಿ ಈಗ ಭಾರೀ ಕುತೂಹಲ ಕೆರಳಿಸಿರುವ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಚಿತ್ರ ಎಂದರೆ, ಅದು 'ನಾಗಬಂಧಂ'. ಹೌದು, ನಿರ್ಮಾಣದ ಹಂತದಲ್ಲಿಯೇ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿರುವ ಈ ಸಿನಿಮಾಗೆ ಅಭಿಷೇಕ್ ನಾಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವನ್ನು ಎನ್.ಐ.ಕೆ ಸ್ಟುಡಿಯೋಸ್ ಲಾಂಛನದಡಿಯಲ್ಲಿ ಕಿಶೋರ್ ಅನ್ನಪೂರೆಡ್ಡಿ ಮತ್ತು ನಿಶಿತಾ ನಾಗಿರೆಡ್ಡಿ ನಿರ್ಮಿಸುತ್ತಿದ್ದಾರೆ. ಭಾರತೀಯ ಸಿನಿಮಾದ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸುವ ಗುರಿ ಹೊಂದಿರುವ ಈ ಸಿನಿಮಾವು ತನ್ನ ವಿಶಿಷ್ಟ ಕಥಾಹಂದರ ಹಾಗೂ ತಾಂತ್ರಿಕ ಶ್ರೀಮಂತಿಕೆಯಿಂದ ಎಲ್ಲ ವರ್ಗದ ಪ್ರೇಕ್ಷಕರನ್ನು ಸೆಳೆಯಲು ಸಜ್ಜಾಗಿದೆ. ಏನದು ತಾಂತ್ರಿಕ ಶ್ರೀಮಂತಿಕೆ? ಮುಂದೆ ಓದಿ.
ಒಂದೇ ಹಾಡಿನಲ್ಲಿ ಸಾವಿರ ನೃತ್ಯಗಾರರ ಬಳಕೆ
ಹೌದು, ನಾಗಬಂಧಂ ಚಿತ್ರದ ನಮೋ ರೇ ಹಾಡಿನಲ್ಲಿ ಸಾವಿರ ನೃತ್ಯಗಾರರ ಬಳಕೆ ಮಾಡಿಕೊಳ್ಳಲಾಗಿದೆಯಂತೆ. ಭಾರತದ ವಿವಿಧ ನೃತ್ಯ ಪ್ರಕಾರಗಳ ವೈವಿಧ್ಯತೆ ಮತ್ತು ಏಕತೆಯನ್ನು ಸಾರುವ ಸಲುವಾಗಿ ಈ ಬೃಹತ್ ನೃತ್ಯ ಸಂಯೋಜನೆಯನ್ನು ಮಾಡಲಾಗಿದೆ. ಖ್ಯಾತ ನೃತ್ಯ ಸಂಯೋಜಕರಾದ ಗಣೇಶ್ ಆಚಾರ್ಯ ಮತ್ತು ಸೃಷ್ಟಿ ವರ್ಮಾ ಅವರ ಉಸ್ತುವಾರಿಯಲ್ಲಿ ಮೂಡಿಬಂದಿರುವ ಈ ಅದ್ಭುತ ನೃತ್ಯ ಪ್ರದರ್ಶನವು ಪ್ರೇಕ್ಷಕರ ಕಣ್ಣಿಗೆ ಹಬ್ಬದಂತಹ ಮತ್ತು ಎಂದಿಗೂ ಮರೆಯಲಾಗದ ದೃಶ್ಯ ವೈಭವವನ್ನು ಉಣಬಡಿಸಲಿದೆ ಎಂಬದು ಚಿತ್ರತಂಡದ ಮಾತು.
ಶಿವರಾತ್ರಿ ಹಬ್ಬದ ಪ್ರಯುಕ್ತ 'ನಾಗಬಂಧಂ' ಟೀಸರ್ ರಿಲೀಸ್; ಟಾಲಿವುಡ್ ನಟ ಮಹೇಶ್ ಬಾಬು ಹೇಳಿದ್ದೇನು?
ಮಾ.15ರಂದು ಬಿಡುಗಡೆ
ಈ ಸಿನಿಮಾದ ಮಹತ್ವದ ಮೈಲಿಗಲ್ಲಾಗಿ 'ನಮೋ ರೇ' ಹಾಡು ಇದೇ ಮಾರ್ಚ್ 15ರಂದು ಬೆಳಗ್ಗೆ 11.11ಕ್ಕೆ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಭಗವಾನ್ ಶ್ರೀಮನ್ನಾರಾಯಣನಿಗೆ ಭಕ್ತಿಯ ಸಮರ್ಪಣೆಯಾಗಿ ಮೂಡಿಬಂದಿರುವ ಈ ಗೀತೆಯು ಚಿತ್ರದ ಆಳವಾದ ಆಧ್ಯಾತ್ಮಿಕ ಸತ್ವವನ್ನು ಪ್ರತಿಬಿಂಬಿಸುತ್ತದೆ. ಆಧ್ಯಾತ್ಮಿಕ ಹಿನ್ನೆಲೆಯುಳ್ಳ ಈ ಹಾಡು ಪ್ರೇಕ್ಷಕರಲ್ಲಿ ದೈವಿಕ ಭಾವನೆಯನ್ನು ಮೂಡಿಸುವಲ್ಲಿ ಯಶಸ್ವಿಯಾಗಲಿದೆ ಎಂಬುದು ಚಿತ್ರತಂಡ ನಂಬಿಕೆ.
Nagabandham Movie: ಅಭಿಷೇಕ್ ನಾಮಾ ನಿರ್ದೇಶನದ ನಾಗಬಂಧಂ- ದಿ ಸೀಕ್ರೆಟ್ ಟ್ರೆಷರ್ ಸಿನಿಮಾದ ಪ್ರೀ ಲುಕ್ ರಿಲೀಸ್
ಹಾಡನ್ನು ಹಾಡಿದ್ದು ಸಿಂಧೂಜಾ ಶ್ರೀನಿವಾಸನ್
ಜುನೈದ್ ಕುಮಾರ್ ಮತ್ತು ಅಭೆ ಅವರು ಈ ಹಾಡಿಗೆ ಭಕ್ತಿ ಮತ್ತು ಆಧ್ಯಾತ್ಮ ಮೇಳೈಸಿದ ಸುಮಧುರ ಸಂಗೀತ ನೀಡಿದ್ದಾರೆ. ಮಾಧುರಿ ಶೇಷಾದ್ರಿ ಅವರು ಬರೆದಿರುವ ಸಾಹಿತ್ಯಕ್ಕೆ ಧ್ವನಿಯಾಗಿರುವುದು ಖ್ಯಾತ ಗಾಯಕಿ ಸಿಂಧೂಜಾ ಶ್ರೀನಿವಾಸನ್. ತಮ್ಮ ಧ್ವನಿ ಮೂಲಕ ಈ ಗೀತೆಗೆ ಜೀವ ತುಂಬಿದ್ದಾರೆ ಅವರು. ಈ ಹಾಡು ಕೇಳುಗರನ್ನು ಒಂದು ದೈವಿಕ ಲೋಕಕ್ಕೆ ಕರೆದೊಯ್ಯುವ ಭರವಸೆಯನ್ನು ಚಿತ್ರತಂಡ ಹೊಂದಿದೆ.
ತಾಂತ್ರಿಕವಾಗಿಯೂ 'ನಾಗಬಂಧಂ' ಅತ್ಯಂತ ದೊಡ್ಡ ತಂಡವನ್ನು ಹೊಂದಿದೆ. ಸೌಂದರ್ ರಾಜನ್ ಎಸ್ ಅವರ ಛಾಯಾಗ್ರಹಣ ಹಾಗೂ ಆರ್.ಸಿ ಪ್ರಣವ್ ಅವರ ಸಂಕಲನವು ಈ ಚಿತ್ರಕ್ಕೆ ಹೊಸ ಆಯಾಮ ನೀಡಿದೆಯಂತೆ. ಕಲಾ ನಿರ್ದೇಶನವನ್ನು ಅಶೋಕ್ ಕುಮಾರ್ ಮಾಡಿದ್ದು, ನಿರ್ಮಾಣ ವಿನ್ಯಾಸದ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ್ದಾರಂತೆ ಅವರು. ಅತೀ ಶೀಘ್ರದಲ್ಲೇ ಈ ಸಿನಿಮಾ ತೆರೆಗೆ ಬರಲಿದೆ.