ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Renukaswamy Case: ನಟ ದರ್ಶನ್‌ ಚಿಕಿತ್ಸೆ ನೆಪದಲ್ಲಿ ಜೈಲಿನಿಂದ ಹೊರಬರೋದು ಡೌಟು! ಜೈಲಾಧಿಕಾರಿಗಳ ನಡೆ ಏನು?

Actor Darshan Treatment: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್, ತೀವ್ರ ಬೆನ್ನುನೋವಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಕಮ್ಮಿ ಎನ್ನಲಾಗಿದೆ. ನ್ಯಾಯಾಲಯದ ಸೂಚನೆಯಂತೆ ಜೈಲು ವೈದ್ಯಾಧಿಕಾರಿಗಳು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

ನಟ ದರ್ಶನ್‌ಗೆ ಶಾಕ್: ಆಸ್ಪತ್ರೆಗೆ ಶಿಫ್ಟ್ ಇಲ್ಲ, ಜೈಲಿನಲ್ಲೇ ಫಿಸಿಯೋಥೆರಪಿ!

-

Avinash GR
Avinash GR Nov 28, 2026 1:46 PM

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಸದ್ಯ ಆಸ್ಪತ್ರೆಗೆ ಶಿಫ್ಟ್ ಆಗುವ ಅವಕಾಶ ಸಿಗುವುದು ಅನುಮಾನವಾಗಿದೆ. ತೀವ್ರ ಬೆನ್ನುನೋವಿನ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಜೈಲಿನಿಂದ ಹೊರಬರಲು ಮುಂದಾಗಿದ್ದ ದರ್ಶನ್ ಅವರಿಗೆ, ಜೈಲಾಧಿಕಾರಿಗಳ ಹೊಸ ನಿರ್ಧಾರದಿಂದ ಹಿನ್ನಡೆಯಾದಂತಾಗಿದೆ.

ಸದ್ಯದ ಮಟ್ಟಿಗೆ ದರ್ಶನ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು, ಜೈಲಿನ ಒಳಗಡೆಯೇ ಅಗತ್ಯ ವೈದ್ಯಕೀಯ ಸೌಲಭ್ಯ ಹಾಗೂ ಚಿಕಿತ್ಸೆ ಕೊಡಿಸಲು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿಗಳು ಮುಂದಾಗಿದ್ದಾರೆ.

ನ್ಯಾಯಾಧೀಶರ ನಿರ್ದೇಶನ ಏನು?

ಈ ಹಿಂದೆ ಅರ್ಜಿ ವಿಚಾರಣೆ ನಡೆಸಿದ್ದ ಬೆಂಗಳೂರಿನ 59ನೇ ಸಿಸಿಹೆಚ್ ನ್ಯಾಯಾಲಯವು, ದರ್ಶನ್ ಅವರಿಗೆ ನಿಯಮಿತವಾಗಿ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿತ್ತು. ಅಲ್ಲದೆ, ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅತ್ಯಗತ್ಯ ಎನಿಸಿದರೆ ಮಾತ್ರ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡುವಂತೆ ನ್ಯಾಯಾಧೀಶರು ನಿರ್ದೇಶನ ನೀಡಿದ್ದರು. ಈ ಹಿನ್ನೆಲೆಯಲ್ಲಿ ಹಿರಿಯ ಜೈಲಾಧಿಕಾರಿಗಳು ದರ್ಶನ್ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸುವ ಕುರಿತ ಅಂತಿಮ ನಿರ್ಧಾರವನ್ನು ಜೈಲಿನ ಮುಖ್ಯ ವೈದ್ಯಾಧಿಕಾರಿಗಳ ವಿವೇಚನೆಗೆ ಬಿಟ್ಟಿದ್ದರು.

ಜೈಲಿಗೆ ಬರಲಿದ್ದಾರೆ ವೈದ್ಯರು

ಜೈಲಿನ ಮುಖ್ಯ ವೈದ್ಯರು ಇದೀಗ ಮಹತ್ವದ ಹೆಜ್ಜೆ ಇಟ್ಟಿದ್ದು, ದರ್ಶನ್ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸುವ ಬದಲು ಅಲ್ಲಿನ ತಜ್ಞ ವೈದ್ಯರನ್ನೇ ಜೈಲಿಗೆ ಕರೆಸಿಕೊಳ್ಳಲು ಕ್ರಮ ಕೈಗೊಂಡಿದ್ದಾರೆ. ಈಗಾಗಲೇ ಜೈಲಾಧಿಕಾರಿಗಳು ವಿಕ್ಟೋರಿಯಾ ಆಸ್ಪತ್ರೆಯ ಫಿಸಿಯೋಥೆರಪಿ ವೈದ್ಯರನ್ನು ಸಂಪರ್ಕಿಸಿದ್ದು, ಚಿಕಿತ್ಸೆಗೆ ಬೇಕಾದ ಅಗತ್ಯ ಉಪಕರಣಗಳೊಂದಿಗೆ ಜೈಲಿಗೆ ಬಂದು ಚಿಕಿತ್ಸೆ ನೀಡಲು ಸಿದ್ಧತೆ ನಡೆಸಿದ್ದಾರೆ. ಬಹುತೇಕ ಇಂದೇ (ನ.28) ವಿಕ್ಟೋರಿಯಾ ಆಸ್ಪತ್ರೆಯ ಫಿಸಿಯೋಥೆರಪಿ ತಜ್ಞರು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಲಿದ್ದು, ದರ್ಶನ್ ಅವರ ಬೆನ್ನು ನೋವಿನ ಸಮಸ್ಯೆ ಹಾಗೂ ಸದ್ಯದ ಆರೋಗ್ಯ ಸ್ಥಿತಿಯನ್ನು ಕೂಲಂಕಷವಾಗಿ ಪರಿಶೀಲಿಸಿ ಅಲ್ಲಿಯೇ ಅಗತ್ಯ ಚಿಕಿತ್ಸೆ ನೀಡಲಿದ್ದಾರೆ.

Actor Darshan: ಸವಲತ್ತು ಕೋರಿದ ದರ್ಶನ್‌ ಅರ್ಜಿ 9ಕ್ಕೆ ಮುಂದೂಡಿಕೆ, ʼಉಮೇಶ್‌ ರೆಡ್ಡಿಗೆ ಕೊಟ್ಟ ಸೌಲಭ್ಯ ದರ್ಶನ್‌ಗೆ ಏಕಿಲ್ಲ?ʼ ಎಂದ ವಕೀಲರು

ಸೋಮವಾರ ಮತ್ತೊಂದು ವಿಚಾರಣೆ

ಇನ್ನೊಂದೆಡೆ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅನುಮತಿ ಕೋರಿ ದರ್ಶನ್ ಪರ ವಕೀಲರು ಸಲ್ಲಿಸಿರುವ ಅರ್ಜಿಯ ಕುರಿತು ವಿಶೇಷ ಸರ್ಕಾರಿ ಅಭಿಯೋಜಕರು ಸೋಮವಾರ (ನ.30) ನ್ಯಾಯಾಲಯಕ್ಕೆ ಆಕ್ಷೇಪಣೆ ಸಲ್ಲಿಸಲಿದ್ದಾರೆ. ಜೈಲಿನ ವೈದ್ಯರು ನೀಡಲಿರುವ ಹೆಲ್ತ್ ರಿಪೋರ್ಟ್ ಹಾಗೂ ಎಸ್‌ಪಿಪಿ ಅವರ ಆಕ್ಷೇಪಣೆಯನ್ನು ಆಲಿಸಿದ ಬಳಿಕವಷ್ಟೇ ನ್ಯಾಯಾಲಯದಿಂದ ಮುಂದಿನ ಕಾನೂನು ತೀರ್ಮಾನ ಹೊರಬೀಳಲಿದೆ. ಅಲ್ಲಿಯವರೆಗೆ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇದ್ದು ಚಿಕಿತ್ಸೆ ಪಡೆಯುವುದು ಬಹುತೇಕ ಖಚಿತವಾಗಿದೆ.