ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬಾಲಿವುಡ್‌ನಲ್ಲಿ 1 ಕೋಟಿ ಸಂಭಾವನೆ ಕೇಳಿದ ಮೊದಲ ನಟ ನಾನಾ ಪಾಟೇಕರ್‌ ಬಳಿ ಎಷ್ಟಿತ್ತು ಆಸ್ತಿ? ಯಾವೆಲ್ಲಾ ಕಾರುಗಳಿದ್ದವು?

Nana Patekar Biography: ನಾನಾ ಪಾಟೇಕರ್‌ ಅವರು ಬಡತನದ ದಿನಗಳಿಂದ ಆರಂಭವಾಗಿ ಭಾರತೀಯ ಚಿತ್ರರಂಗದಲ್ಲಿ 1 ಕೋಟಿ ಸಂಭಾವನೆ ಪಡೆದ ಮೊದಲ ನಟನಾಗಿ ಗುರುತಿಸಿಕೊಂಡಿದ್ದರು. ಕೋಟ್ಯಂತರ ರೂಪಾಯಿ ಆಸ್ತಿ ಗಳಿಸಿದರೂ 1BHK ಮನೆಯಲ್ಲೇ ವಾಸಿಸುತ್ತಾ, ಐಷಾರಾಮಿ ಕಾರುಗಳನ್ನು ತ್ಯಜಿಸಿ ರೈತರಿಗೆ ನೆರವಾದ ಅವರ ಸರಳ ಬದುಕು ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದೆ.

35 ರೂ. ಸಂಬಳದಿಂದ 1 ಕೋಟಿ ಸಂಭಾವನೆವರೆಗೆ; ನಾನಾ ಪಾಟೇಕರ್ ಆಸ್ತಿ ಎಷ್ಟು?

-

Avinash GR
Avinash GR Oct 8, 2026 3:25 PM

ಯಾವುದೇ ಗಾಡ್‌ಫಾದರ್ ಬೆಂಬಲವಿಲ್ಲದೆ, ಸ್ವಂತ ಪ್ರತಿಭೆ ಮತ್ತು ಅದ್ಭುತ ನಟನೆಯ ಬಲದಿಂದಲೇ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆನಿಂತ ಹಿರಿಯ ನಟ ನಾನಾ ಪಾಟೇಕರ್ ಅವರ ಸುಮಾರು 5 ದಶಕಗಳ ಬದುಕು ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ. ಕಡುಬಡತನದ ದಿನಗಳಿಂದ ಆರಂಭವಾಗಿ ಭಾರತೀಯ ಚಿತ್ರರಂಗದಲ್ಲೇ ಮೊಟ್ಟಮೊದಲ ಬಾರಿಗೆ ಒಂದು ಕೋಟಿ ರೂಪಾಯಿ ಸಂಭಾವನೆ ಪಡೆದ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾದ ಅವರ ಒಟ್ಟು ಆಸ್ತಿಯ ವಿವರಗಳು ಹಾಗೂ ಅವರ ಸರಳತೆಯ ದಿನಗಳು ಇದೀಗ ಗಮನ ಸೆಳೆಯುತ್ತಿವೆ.

ತಿಂಗಳಿಗೆ ₹35 ಸಂಪಾದಿಸುತ್ತಿದ್ದ ಆರಂಭಿಕ ದಿನಗಳು

ನಾನಾ ಪಾಟೇಕರ್ ಅವರ ಬಾಲ್ಯ ಸುಲಭವಾಗಿರಲಿಲ್ಲ. ತಂದೆ ಆಸ್ತಿ ಕಳೆದುಕೊಂಡ ಪರಿಣಾಮ ಕುಟುಂಬ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಇದರಿಂದಾಗಿ ಕೇವಲ 13ನೇ ವಯಸ್ಸಿನಲ್ಲಿ, ಅಂದರೆ 9ನೇ ತರಗತಿಯಲ್ಲಿದ್ದಾಗಲೇ ಅವರು ಕೆಲಸಕ್ಕೆ ಇಳಿಯಬೇಕಾಯಿತು. ಶಾಲೆಯ ನಂತರ ಮುಂಬೈನ ಚುನಭಟ್ಟಿಗೆ ಪ್ರತಿದಿನ ಸುಮಾರು 8 ಕಿಲೋಮೀಟರ್ ನಡೆದುಕೊಂಡು ಹೋಗಿ, ಸಿನಿಮಾಗಳ ಪೋಸ್ಟರ್‌ಗಳಿಗೆ ಬಣ್ಣ ಹಚ್ಚುವ ಕೆಲಸ ಮಾಡುತ್ತಿದ್ದರು. ಅದಕ್ಕಾಗಿ ಅವರಿಗೆ ಸಿಗುತ್ತಿದ್ದದ್ದು ತಿಂಗಳಿಗೆ ಬರೀ 35 ರೂಪಾಯಿ ಸಂಬಳ ಮತ್ತು ದಿನಕ್ಕೆ ಒಂದು ಹೊತ್ತಿನ ಊಟ ಮಾತ್ರ.

1 ಕೋಟಿ ರೂ. ಸಂಭಾವನೆ ಕೇಳಿದ ಮೊದಲ ಭಾರತೀಯ ನಟ!

1978ರಲ್ಲಿ ‘ಗಮನ್’ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ ನಾನಾ ಪಾಟೇಕರ್, ‘ಪರಿಂದಾ’, ‘ಕ್ರಾಂತಿವೀರ್’, ‘ಅಗ್ನಿಸಾಕ್ಷಿ’, ‘ಅಬ್ ತಕ್ ಛಪ್ಪನ್’, ‘ವೆಲ್ಕಮ್’ ಹಾಗೂ ಮರಾಠಿಯ ‘ನಟಸಾಮ್ರಾಟ್’ ಸೇರಿದಂತೆ ಹಲವು ಚಿತ್ರಗಳ ಮೂಲಕ ಮನೆಮಾತಾದರು. 1980-90ರ ದಶಕದಲ್ಲಿ ಬಾಲಿವುಡ್‌ನ ಘಟಾನುಘಟಿ ಸ್ಟಾರ್ ನಟರೇ ದೊಡ್ಡ ಮೊತ್ತದ ಸಂಭಾವನೆ ಕೇಳಲು ಹಿಂದೇಟು ಹಾಕುತ್ತಿದ್ದ ಕಾಲದಲ್ಲಿ, ನಾನಾ ಪಾಟೇಕರ್ ಒಂದು ಚಿತ್ರಕ್ಕೆ 1 ಕೋಟಿ ರೂಪಾಯಿ ಸಂಭಾವನೆ ಕೇಳಿ ಇಡೀ ಚಿತ್ರರಂಗವೇ ಹುಬ್ಬೇರಿಸುವಂತೆ ಮಾಡಿದ್ದರು.

ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿದ್ದರೂ ತಮ್ಮ ನಟನಾ ಸಾಮರ್ಥ್ಯದ ಮೇಲೆ ಪೂರ್ಣ ವಿಶ್ವಾಸವಿಟ್ಟು ಅಷ್ಟೊಂದು ದೊಡ್ಡ ಮೊತ್ತವನ್ನು ಡಿಮ್ಯಾಂಡ್ ಮಾಡಿ ಪಡೆದ ಮೊದಲ ನಟ ಅವರಾಗಿದ್ದರು ಎಂದು ಹಿರಿಯ ನಟ ಪರೇಶ್ ರಾವಲ್ ಈ ಹಿಂದೆ ಬಹಿರಂಗಪಡಿಸಿದ್ದರು. ನಂತರದ ದಿನಗಳಲ್ಲಿ ಅವರು ಒಂದು ಚಿತ್ರಕ್ಕೆ ಸುಮಾರು 2 ರಿಂದ 3 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದರು.

Nana Patekar: ಹಿರಿಯ ನಟ ನಾನಾ ಪಾಟೇಕರ್​ ಇನ್ನಿಲ್ಲ

ಒಟ್ಟು ಆಸ್ತಿ ಮೌಲ್ಯ ಎಷ್ಟು?

ಸುದೀರ್ಘ 48 ವರ್ಷಗಳ ವೃತ್ತಿಜೀವನದಲ್ಲಿ ನಾನಾ ಪಾಟೇಕರ್ ಗಳಿಸಿದ ಒಟ್ಟು ಆಸ್ತಿಯ ಮೌಲ್ಯ ಸುಮಾರು 60 ಕೋಟಿಯಿಂದ 80 ಕೋಟಿ ರೂಪಾಯಿಗಳೆಂದು ಅಂದಾಜಿಸಲಾಗಿದೆ. ಸಿನಿಮಾ ಸಂಭಾವನೆ ಮಾತ್ರವಲ್ಲದೆ ಬ್ರ್ಯಾಂಡ್ ಸಹಯೋಗಗಳು ಹಾಗೂ ಇತರ ಕಾರ್ಯಕ್ರಮಗಳಿಂದಲೂ ಅವರು ಆದಾಯ ಗಳಿಸುತ್ತಿದ್ದರು.

ಕೋಟಿಗಳಿದ್ದರೂ 1BHK ಅಪಾರ್ಟ್‌ಮೆಂಟ್‌ನಲ್ಲೇ ವಾಸ!

ಸಾವಿರಾರು ಕೋಟಿ ಮೌಲ್ಯದ ಚಿತ್ರರಂಗದಲ್ಲಿದ್ದರೂ ನಾನಾ ಪಾಟೇಕರ್ ಅತ್ಯಂತ ಸರಳ ಬದುಕಿಗೆ ಹೆಸರಾಗಿದ್ದರು. ಮುಂಬೈನ ಅಂಧೇರಿಯಲ್ಲಿರುವ ಕೇವಲ 750 ಚದರ ಅಡಿಯ ಒಂದೇ ಬೆಡ್‌ರೂಮ್ ಅಪಾರ್ಟ್‌ಮೆಂಟ್‌ನಲ್ಲಿ ಅವರು ದಶಕಗಳ ಕಾಲ ವಾಸವಿದ್ದರು. ದಶಕಗಳ ಹಿಂದೆ ಸುಮಾರು 1.10 ಲಕ್ಷ ರೂಪಾಯಿಗೆ ಖರೀದಿಸಲಾಗಿದ್ದ ಈ ಮನೆಯ ಮೌಲ್ಯ ಈಗ ಸುಮಾರು 3 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದರೊಂದಿಗೆ ಗೋವಾದಲ್ಲಿ ಒಂದು ಸುಂದರ ಮನೆ ಹಾಗೂ ಪುಣೆಯ ಖಡಕ್‌ವಾಸ್ಲಾ ಬಳಿ 27 ಎಕರೆ ವಿಸ್ತೀರ್ಣದ ಫಾರ್ಮ್‌ಹೌಸ್ ಹೊಂದಿದ್ದರು. ಅಲ್ಲಿ ಅವರು ಗೋಧಿ ಮತ್ತು ಭತ್ತ ಬೆಳೆಯುತ್ತಾ ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು.

ಕಾರುಗಳ ಮೇಲೂ ಇರಲಿಲ್ಲ ವ್ಯಾಮೋಹ

ಇತರ ಬಾಲಿವುಡ್ ಸೆಲೆಬ್ರಿಟಿಗಳಂತೆ ನೂರಾರು ಕೋಟಿ ಮೌಲ್ಯದ ಐಷಾರಾಮಿ ಕಾರುಗಳ ಸಂಗ್ರಹ ಅವರ ಬಳಿ ಇರಲಿಲ್ಲ. ಮಹೀಂದ್ರಾ ಜೀಪ್ CJ4, ಮಹೀಂದ್ರಾ ಸ್ಕಾರ್ಪಿಯೋ ಹಾಗೂ ಒಂದು ಆಡಿ Q7 ಕಾರುಗಳನ್ನು ಮಾತ್ರ ಅವರು ಬಳಸುತ್ತಿದ್ದರು. ಒಮ್ಮೆ 1.50 ಕೋಟಿ ರೂಪಾಯಿ ಬೆಲೆಯ ಐಷಾರಾಮಿ ಕಾರು ಖರೀದಿಸುವ ಪ್ರಸ್ತಾಪ ಬಂದಾಗ, "ಅಷ್ಟೊಂದು ಹಣ ಖರ್ಚು ಮಾಡುವ ಬದಲು ರೈತರಿಗೆ ನೆರವು ನೀಡಲು ಬಳಸುತ್ತೇನೆ" ಎಂದು ನಿರಾಕರಿಸಿದ್ದರು.

ನನ್ನ ಕೊನೆಯ ಆಸ್ತಿ 12 ಮಣ ಒಣ ಸೌದೆ ಮಾತ್ರ!

ಗ್ಲಾಮರ್ ಲೋಕದಲ್ಲಿದ್ದರೂ ಬದಲಾಗದೆ ಉಳಿದಿದ್ದರ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಾನಾ ಪಾಟೇಕರ್ ಅವರ ಮಾತುಗಳು ಬದುಕಿನ ಅಸಲಿ ಸತ್ಯವನ್ನು ಬಿಂಬಿಸುತ್ತವೆ: "ನನಗೆ ನಂಬಿಕೆ ಇರುವುದು ಸಾವಿನ ಮೇಲೆ ಮಾತ್ರ. ನಾಳೆ ನಾನು ಸಾಯುತ್ತೇನೆ ಎಂಬುದು ನನಗೆ ಸ್ಪಷ್ಟವಾಗಿ ತಿಳಿದಿದೆ. ಕೊನೆಗೆ ನನ್ನ ದೇಹವನ್ನು ಸುಡಲು 12 ಮಣ ಒಣ ಸೌದೆ ಬೇಕಾಗುತ್ತದೆ. ಅದೇ ನನ್ನ ಕೊನೆಯ ಆಸ್ತಿ. ಕೊನೆಗೆ ಅದನ್ನಷ್ಟೇ ಪಡೆದುಕೊಂಡು ನಾನು ಈ ಜಗತ್ತಿನಿಂದ ಹೋಗುತ್ತೇನೆ..." ಎಂದು ನುಡಿದಿದ್ದರು. ಕಡುಬಡತನದಿಂದ ಮೇಲೆದ್ದು ಕೋಟಿಗಳ ಒಡೆಯನಾದರೂ, ಕೊನೆಯವರೆಗೂ ಅಹಂಕಾರವಿಲ್ಲದೆ ಬದುಕಿದ ನಾನಾ ಪಾಟೇಕರ್ ಅವರ ಜೀವನ ಪಯಣ ಎಲ್ಲರಿಗೂ ಸದಾ ಸ್ಮರಣೀಯ.