ʻನನ್ ಗಂಡ ಅಂದ್ರೆ ನಂಗೆ ತುಂಬಾ ಇಷ್ಟ, ನಿಮಗೇನ್ ಕಷ್ಟʼ; ಟ್ರೋಲ್ ಮಾಡೋರ ಮೇಲೆ ಕೆಂಡಕಾರಿದ ರಶ್ಮಿಕಾ ಮಂದಣ್ಣ, ಕನ್ನಡಿಗರ ಬಗ್ಗೆ ಹೇಳಿದ್ದೇನು?
Rashmika Mandanna On Trolls: ‘ಕಾಫಿ ವಿತ್ ಕರಣ್’ ಶೋನಲ್ಲಿ ಭಾಗಿಯಾದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಅವರ ಸಂಬಂಧದ ಸಖತ್ ಟ್ರೋಲ್ ಮಾಡಲಾಗಿದೆ. ಆ ಬಗ್ಗೆ ರಶ್ಮಿಕಾ ತಕ್ಕ ಉತ್ತರ ನೀಡಿದ್ದಾರೆ. ತಮ್ಮ ಕಷ್ಟದ ದಿನಗಳಲ್ಲಿ ವಿಜಯ್ ಸಾಥ್ ನೀಡಿದ್ದನ್ನು ಸ್ಮರಿಸಿದ ರಶ್ಮಿಕಾ, ನಕಲಿ ಸ್ತ್ರೀವಾದದ ಹೆಸರಿನಲ್ಲಿ ಆನ್ಲೈನ್ ದೌರ್ಜನ್ಯ ಮಾಡಬೇಡಿ ಎಂದು ಎಚ್ಚರಿಸಿದ್ದಾರೆ.
-
‘ಕಾಫಿ ವಿತ್ ಕರಣ್’ ಶೋನಲ್ಲಿ ತಾವು ನೀಡಿದ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಮತ್ತು ಟ್ರೋಲಿಂಗ್ಗೆ ಕಾರಣವಾದ ಬೆನ್ನಲ್ಲೇ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸುದೀರ್ಘ ಪೋಸ್ಟ್ ಮೂಲಕ ತಿರುಗೇಟು ನೀಡಿದ್ದಾರೆ.
ವಿಜಯ್ ದೇವರಕೊಂಡ ಅವರನ್ನು ಮದುವೆಯಾಗಲು ತಾವೇ ಒಂದು ವರ್ಷ ಅವರ ಹಿಂದೆ ಬಿದ್ದಿದ್ದಾಗಿ ಹೇಳಿದ್ದ ಹೇಳಿಕೆಯನ್ನು ನೆಟ್ಟಿಗರು ಟ್ರೋಲ್ ಮಾಡಿದ್ದರು. ಅಲ್ಲದೆ, ವಿಜಯ್ ನಡವಳಿಕೆಯನ್ನು ‘ರೆಡ್ ಫ್ಲ್ಯಾಗ್’ ಎಂದು ಜರಿದು, ರಶ್ಮಿಕಾಗೆ ಸಂಬಂಧದಿಂದ ದೂರ ಸರಿಯುವಂತೆ ಉಚಿತ ಸಲಹೆಗಳನ್ನು ನೀಡಿದ್ದರು. ಈ ಎಲ್ಲಾ ಟೀಕೆಗಳಿಗೆ ರಶ್ಮಿಕಾ ತಮ್ಮದೇ ಶೈಲಿಯಲ್ಲಿ ಖಡಕ್ ಉತ್ತರ ನೀಡಿದ್ದು, ತಾವು ಅತ್ಯಂತ ಸಂತೋಷದಿಂದ ಬದುಕುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಅದ್ಧೂರಿ ಪ್ರೇಮ ನಿವೇದನೆ ಬೇಕಾಗಿರಲಿಲ್ಲ
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆಕ್ರೋಶದ ಬಗ್ಗೆ ಮಾತನಾಡಿದ ರಶ್ಮಿಕಾ, "ನಮ್ಮ ಸಂದರ್ಶನದ ಸುತ್ತ ಸೃಷ್ಟಿಯಾಗಿರುವ ಈ ಹುಚ್ಚುತನ ಜನರ ಸಹಜ ಅಭಿಪ್ರಾಯವಲ್ಲ, ಬದಲಿಗೆ ತಮ್ಮೊಳಗಿನ ಸಿಟ್ಟನ್ನು ಕಾರಿಕೊಳ್ಳಲು ಯಾರನ್ನೋ ಹುಡುಕುತ್ತಿರುವ ಆಕ್ರೋಶದ ಗುಂಪಿನಂತೆ ಕಾಣುತ್ತಿದೆ. ಇದು ಎಷ್ಟು ಬಾರಿ ಅಥವಾ ಇಡೀ ವರ್ಷದ ವಿಚಾರವೇ ಆಗಿರಲಿಲ್ಲ, ಅಲ್ಲಿಯೇ ಹಲವರು ಸಿಲುಕಿಕೊಂಡಿದ್ದಾರೆ. ನಮ್ಮಿಬ್ಬರಲ್ಲಿ ಯಾರಿಗೂ ಅದ್ಧೂರಿ ಪ್ರೇಮ ನಿವೇದನೆ ಬೇಕಾಗಿರಲಿಲ್ಲ. ಜೀವನದ ಏಳು-ಬೀಳುಗಳು ಹಾಗೂ ಒತ್ತಡಗಳ ನಡುವೆಯೂ ಪರಸ್ಪರ ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಮಯ ಬೇಕು ಎಂದು ವಿಜಯ್ ಬಯಸಿದ್ದರು. ನಾನು ಭಾವನೆಗಳ ವ್ಯಕ್ತಿಯಾದರೆ, ಆತ ವಾಸ್ತವವಾಗಿ ಯೋಚಿಸುವ ವ್ಯಕ್ತಿ. ನಮ್ಮಿಬ್ಬರ ಬದುಕಿಗೂ ಇಂತಹದೊಂದು ಸಮತೋಲನ ಅತ್ಯಗತ್ಯವಾಗಿತ್ತು" ಎಂದು ಮದುವೆಯ ಹಿಂದಿನ ಒಪ್ಪಂದದ ಸತ್ಯವನ್ನು ವಿವರಿಸಿದ್ದಾರೆ.
'ಬಾ ಮದುವೆಯಾಗೋಣ' ಎಂದು ಮತ್ತೆ ಮತ್ತೆ ಕೇಳಬೇಕು
"ನಮ್ಮ ಮಟ್ಟಿಗೆ ಮದುವೆ ಎಂದರೆ ಕೇವಲ ಮಂಡಿಯೂರಿ ಪ್ರಪೋಸ್ ಮಾಡುವುದು ಅಥವಾ ಬೆರಳಿಗೆ ಉಂಗುರ ತೊಡಿಸುವುದಷ್ಟೇ ಅಲ್ಲ. ಜೊತೆಯಾಗಿ ಒಂದು ಸುಂದರ ಭವಿಷ್ಯವನ್ನು ಕಟ್ಟುವುದು. ನಾನು ಮದುವೆಯಾಗುವ ವ್ಯಕ್ತಿಯನ್ನು ನಾನೇ ಮನಸಾರೆ ಪ್ರೀತಿಸದೆ ಇನ್ನೇಕೆ ಮದುವೆಯಾಗಲಿ? ಆತ ನನ್ನ ಗೆಳೆಯ, ನನ್ನ ಮಕ್ಕಳ ಭಾವಿ ತಂದೆ ಹಾಗೂ ನನ್ನ ಜೊತೆ ಕೊನೆಯವರೆಗೂ ಇರುವ ವ್ಯಕ್ತಿ. ಮದುವೆಯಾದ ಮೇಲೂ ಮತ್ತೆ ಮತ್ತೆ 'ಬಾ ಮದುವೆಯಾಗೋಣ' ಎಂದು ಕೇಳುವಷ್ಟು ಸುಂದರವಾಗಿ ಪ್ರೀತಿಸುವ ಹುಡುಗನನ್ನು ಹುಡುಕಿಕೊಳ್ಳಿ. ನಾನು ನೂರು ಬಾರಿಯಲ್ಲ, ಸಾವಿರ ಬಾರಿಯಾದರೂ ಹಾಗೆ ಕೇಳುತ್ತೇನೆ. ನಾವು ಪ್ರಜ್ಞಾವಂತ ವಯಸ್ಕರು ಮತ್ತು ನಮ್ಮ ಬದುಕನ್ನು ನಮ್ಮದೇ ಷರತ್ತುಗಳ ಮೇಲೆ ಕಟ್ಟಿಕೊಂಡಿದ್ದೇವೆ. ಹೌದು, ನಾನು ನನ್ನ ಹುಡುಗನ ಬಗ್ಗೆ ಅಪಾರ ವ್ಯಾಮೋಹ ಹೊಂದಿದ್ದೇನೆ. ಅದು ಕೆಟ್ಟ ವಿಷಯವಾಗಿದ್ದು ಯಾವಾಗಿನಿಂದ?" ಎಂದು ರಶ್ಮಿಕಾ ಮಂದಣ್ಣ ಖಡಕ್ ಆಗಿ ಪ್ರಶ್ನೆ ಮಾಡಿದ್ದಾರೆ.
ನನ್ನ ಬದುಕಿನ ಬಗ್ಗೆ ನಾನು ಹೇಳುವುದನ್ನೇ ನಂಬಿ
ಫೇಮಿನಿಸಂ ನೆಪದಲ್ಲಿ ಬಿಟ್ಟಿ ಸಲಹೆ ಕೊಡುವವರಿಗೆ ಪ್ರತಿಕ್ರಿಯಿಸಿರುವ ರಶ್ಮಿಕಾ, "ಕಳೆದ ಒಂದೆರಡು ವರ್ಷಗಳ ಹಿಂದೆ ಪರಿಸ್ಥಿತಿ ನಿಜಕ್ಕೂ ಅತ್ಯಂತ ಕಠಿಣವಾಗಿದ್ದಾಗ ನಿಮ್ಮಲ್ಲಿ ಯಾರೂ ನನ್ನ ಜೊತೆಗಿರಲಿಲ್ಲ. ನನ್ನ ಮೂಳೆ ಮುರಿದಾಗ, ಮಾನಸಿಕವಾಗಿ ಕುಗ್ಗಿದಾಗ, ಮಧ್ಯರಾತ್ರಿ ಆತಂಕದಿಂದ ಎಚ್ಚರಗೊಂಡಾಗ, ಪ್ರತಿ ತಿಂಗಳು ಹೊಟ್ಟೆನೋವಿನಿಂದ ನರಳಿದಾಗ ಸಾಂತ್ವನ ನೀಡಲು ನೀವ್ಯಾರೂ ಇರಲಿಲ್ಲ, ಆಗಲೂ ಆತನೇ ಇದ್ದ, ಈಗಲೂ ಆತನೇ ಇದ್ದಾನೆ! ಸುಳ್ಳು ಕಥೆಗಳು, ತಿರುಚಿದ ವಿಡಿಯೋಗಳನ್ನು ನಂಬುವುದಕ್ಕಿಂತ ನನ್ನ ಬದುಕಿನ ಬಗ್ಗೆ ನಾನು ಹೇಳುವುದನ್ನು ನಂಬಿ. ನನ್ನ ಕುಟುಂಬದ ಬಗ್ಗೆ ತಿಳಿಯದೆ ಮಾತನಾಡುವುದು ಫೆಮಿನಿಸಂ ಅಲ್ಲ, ಅದು ಸ್ತ್ರೀವಾದದ ಮುಖವಾಡ ಹೊತ್ತ ಬುಲ್ಲಿಯಿಂಗ್. ತಮ್ಮ ಬದುಕಿನ ಸಂಪೂರ್ಣ ಜವಾಬ್ದಾರಿಯನ್ನು ತಾವೇ ಹೊರುವ ಸ್ವಾತಂತ್ರ್ಯವೇ ನಿಜವಾದ ಸ್ತ್ರೀವಾದ. ಪುರುಷರೇ ಆಗಿರಲಿ ಅಥವಾ ಮಹಿಳೆಯರೇ ಆಗಿರಲಿ, ಇನ್ನೊಬ್ಬರನ್ನು ಕೀಳಾಗಿ ಕಾಣುವುದು ಅಥವಾ ತಮ್ಮ ಶ್ರೇಷ್ಠತೆಯನ್ನು ಮೆರೆಯುವುದು ಎಂದಿಗೂ ಸ್ತ್ರೀವಾದವಾಗಿರಲಿಲ್ಲ" ಎಂದು ಗುಡುಗಿದ್ದಾರೆ.
ರಶ್ಮಿಕಾ ಮಂದಣ್ಣ ಹಂಚಿಕೊಂಡ ಪೋಸ್ಟ್
ತಮ್ಮ ಕನ್ನಡದ ಅಭಿಮಾನಿಗಳಿಗೆ ಹೇಳಿದ್ದೇನು?
"ಕೊನೆಯದಾಗಿ ತಮ್ಮ ಕನ್ನಡಿಗ ಅಭಿಮಾನಿಗಳಿಗೆ, 10 ವರ್ಷಗಳ ನಂತರವೂ ನಾನು ನಿಮ್ಮ ಹೃದಯದಲ್ಲಿ ಇಷ್ಟೊಂದು ಆಳವಾಗಿ ಉಳಿದುಕೊಂಡಿದ್ದೇನೆ ಎಂಬುದು ನಿಜಕ್ಕೂ ನನಗೆ ಸುಂದರವಾದ ವಿಚಾರ. ಇಷ್ಟೆಲ್ಲಾ ಸಮಯದ ನಂತರವೂ ನನ್ನನ್ನು ಸಂಭ್ರಮಿಸುತ್ತಿರುವುದಕ್ಕೆ ನಾನು ಧನ್ಯ... ಪ್ರೀತಿ ಮತ್ತು ಸದ್ಭಾವನೆಯನ್ನು ಹಂಚುವ ಎಲ್ಲರಿಗೂ ಶುಭ ಹಾರೈಕೆಗಳು" ಎಂದು ರಶ್ಮಿಕಾ ಹೇಳಿದ್ದಾರೆ.