ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿದ ʻಬಾರ್ಡರ್ 2ʼ; ನಾಲ್ಕೇ ದಿನಕ್ಕೆ ದಾಖಲೆಯ ಗಳಿಕೆ, ಟ್ರೋಲ್ ಮಾಡಿದವರಿಗೆ ಕಲೆಕ್ಷನ್ ಮೂಲಕವೇ ಉತ್ತರ!
ಬಾರ್ಡರ್ 2 ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆಯುತ್ತಿದ್ದು, ಬಿಡುಗಡೆಯಾದ ನಾಲ್ಕು ದಿನಗಳಲ್ಲಿ ಭಾರತವೊಂದರಲ್ಲೇ 193.48 ಕೋಟಿ ರೂ. ಗಳಿಸಿದೆ. ಗಣರಾಜ್ಯೋತ್ಸವದ ರಜೆಯ ದಿನದಂದು ಗರಿಷ್ಠ 63.59 ಕೋಟಿ ರೂ. ಲೂಟಿ ಮಾಡಿರುವ ಈ ಚಿತ್ರವು ಜಾಗತಿಕವಾಗಿ ದಾಖಲೆಯ ಮೊತ್ತವನ್ನು ಕಲೆಹಾಕಿದೆ.
-
ಬಾಲಿವುಡ್‌ನ ಬಾರ್ಡರ್ 2 ಸಿನಿಮಾದ ಅಬ್ಬರಕ್ಕೆ ತಡೆಯೇ ಇಲ್ಲದಂತಾಗಿದೆ. ಬಿಡುಗಡೆಗೂ ಮುನ್ನ ಇದ್ದ ಎಲ್ಲಾ ನಿರೀಕ್ಷೆಗಳನ್ನು ಈ ಸಿನಿಮಾ ಮೀರಿ ನಿಂತಿದೆ. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿದ್ದವರಿಗೆ, ಸಿನಿಮಾ ತನ್ನ ಬೃಹತ್ ಬಾಕ್ಸ್ ಆಫೀಸ್ ಗಳಿಕೆಯ ಮೂಲಕವೇ ತಕ್ಕ ಉತ್ತರ ನೀಡಿದೆ. ಈ ಸಿನಿಮಾವು ಮೊದಲ ವಾರಾಂತ್ಯದಲ್ಲಿ ಅದ್ಭುತ ಕಲೆಕ್ಷನ್ ಮಾಡಿದ್ದು, ಗಣರಾಜ್ಯೋತ್ಸವದ ರಜೆಯು ಸಿನಿಮಾದ ವ್ಯವಹಾರಕ್ಕೆ ದೊಡ್ಡ ಮಟ್ಟದ ಬೂಸ್ಟ್ ನೀಡಿದೆ.
ದಿನದಿಂದ ದಿನಕ್ಕೆ ಕಲೆಕ್ಷನ್‌ನಲ್ಲಿ ಏರಿಕೆ
ನಗರ ಪ್ರದೇಶಗಳಲ್ಲಿ ಶನಿವಾರದ ನಂತರ ಸಿನಿಮಾ ವೇಗ ಪಡೆದುಕೊಂಡರೆ, ಮಾಸ್ ಸೆಂಟರ್‌ಗಳಲ್ಲಿ ಶುಕ್ರವಾರದಿಂದಲೇ ಅಬ್ಬರ ಜೋರಾಗಿತ್ತು. ಹಿಂದಿ ಬೆಲ್ಟ್‌ನಾದ್ಯಂತ ಹಲವಾರು ಚಿತ್ರಮಂದಿರಗಳು ಹೌಸ್‌ಫುಲ್ ಆಗಿದ್ದು, ಬಾರ್ಡರ್ 2 ಸಿನಿಮಾ ಇತ್ತೀಚಿನ ದಿನಗಳಲ್ಲೇ ಅತಿದೊಡ್ಡ ವೀಕೆಂಡ್ ಗಳಿಕೆಯನ್ನು ದಾಖಲಿಸಿದೆ. ಮೊದಲ ದಿನಕ್ಕೆ ಹೋಲಿಸಿದರೆ, ನಾಲ್ಕನೇ ದಿನದ ಗಳಿಕೆ ವಾವ್ ಎನ್ನುವಂತಿದೆ. ಚಿತ್ರದ ನಿರ್ಮಾಪಕರು ದೊಡ್ಡಮಟ್ಟದ ಲಾಭವನ್ನು ಪಡೆದುಕೊಳ್ಳುವುದರಲ್ಲಿ ಡೌಟೇ ಇಲ್ಲ ಎಂಬ ಮಾತುಗಳು ಕೇಳಿಬಂದಿವೆ.
Sunny Deol: ʼರಾಮಾಯಣʼ ಸಿನಿಮಾದ ಹನುಮಂತ ಪಾತ್ರದ ಬಗ್ಗೆ ಬಾಲಿವುಡ್ ನಟ ಸನ್ನಿ ಡಿಯೋಲ್ ಹೇಳಿದ್ದೇನು?
ಮೊದಲ ನಾಲ್ಕು ದಿನಗಳ ಕಲೆಕ್ಷನ್ ವಿವರ
ಶುಕ್ರವಾರ: 32.10 ಕೋಟಿ ರೂಪಾಯಿ
ಶನಿವಾರ: 40.59 ಕೋಟಿ ರೂಪಾಯಿ
ಭಾನುವಾರ: 57.20 ಕೋಟಿ ರೂಪಾಯಿ
ಸೋಮವಾರ: (ಗಣರಾಜ್ಯೋತ್ಸವ): 63.59 ಕೋಟಿ ರೂಪಾಯಿ
ಅಲ್ಲಿಗೆ, ಭಾರತದಲ್ಲಿನ ಒಟ್ಟು 4 ದಿನಗಳ ಗಳಿಕೆ 193.48 ಕೋಟಿ ರೂಪಾಯಿ ಆಗಿದ್ದು, ಇದಕ್ಕೆ ವಿದೇಶದಲ್ಲಿನ ಗಳಿಕೆಯನ್ನು ಸೇರಿಸಿದರೆ, ಈ ಮೊತ್ತವು 250+ ಕೋಟಿ ರೂ. ಆಗಲಿದೆ. ಸುಮಾರು 275 ಕೋಟಿ ರೂ. ಬಜೆಟ್‌ನ ಈ ಸಿನಿಮಾವು ಮೊದಲ ವಾರದಲ್ಲೇ ತನ್ನ ಬಜೆಟ್ ಅನ್ನು ಕವರ್ ಮಾಡುವುದರಲ್ಲಿ ಅನುಮಾನವೇ ಇಲ್ಲ. ʻಕೇಸರಿʼ ಸಿನಿಮಾದ ನಂತರ ನಿರ್ದೇಶಕ ಅನುರಾಗ್ ಸಿಂಗ್ ಅವರು ಮತ್ತೊಂದು ಭರ್ಜರಿ ಗೆಲುವನ್ನು ಬಾರ್ಡರ್ 2 ಮೂಲ ಪಡೆದುಕೊಂಡಿದ್ದಾರೆ.
ಬಾರ್ಡರ್ ಚಿತ್ರದ ಸಿಕ್ವೇಲ್ ಇದು
1997ರಲ್ಲಿ ತೆರೆಕಂಡಿದ್ದ ಬಾರ್ಡರ್ ಸಿನಿಮಾದ ಮುಂದುವರಿದ ಭಾಗವಾಗಿ ಬಾರ್ಡರ್ 2 ಸಿನಿಮಾ ಮೂಡಿಬಂದಿದೆ. ಅಂದು ಬಾರ್ಡರ್ ಚಿತ್ರವನ್ನು 12 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಅಂದು ಗಳಿಕೆ ಆದ ಬಾಕ್ಸ್ ಆಫೀಸ್ ಕಲೆಕ್ಷನ್ 65 ಕೋಟಿ ರೂ. ದಾಟಿತ್ತು. ಸನ್ನಿ ಡಿಯೋಲ್, ಸುನೀಲ್ ಶೆಟ್ಟಿ, ಜಾಕಿ ಶ್ರಾಫ್, ಅಕ್ಷಯ್ ಖನ್ನಾ ಮುಂತಾದವರು ಆ ಸಿನಿಮಾದಲ್ಲಿ ನಟಿಸಿದ್ದರು. ಜೆಪಿ ದತ್ತಾ ಚಿತ್ರವನ್ನು ನಿರ್ದೇಶಿಸಿದ್ದರು.
ಬಾರ್ಡರ್ 2 ಸಿನಿಮಾವು ಕಂಪ್ಲೀಟ್ ಹೊಸ ತಾರಾಗಣವನ್ನು ಹೊಂದಿದೆ. ಸನ್ನಿ ಡಿಯೋಲ್ ಕೂಡ ಇಲ್ಲಿ ಬೇರೆಯದೇ ಪಾತ್ರವನ್ನು ಮಾಡಿದ್ದಾರೆ. ಜೊತೆಗೆ ವರುಣ್ ಧವನ್, ದಿಲ್‌ಜಿತ್ ದೊಸಾಂಜ್, ಆಹಾನ್ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಸುನೀಲ್ ಶೆಟ್ಟಿ ಮತ್ತು ಅಕ್ಷಯ್ ಖನ್ನಾ ಅವರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.