ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಜೀ ಕನ್ನಡದಲ್ಲಿ ಹೊಸ ಕೌಟುಂಬಿಕ ಧಾರಾವಾಹಿ ‘ಗೌರಿಪುತ್ರ’; ತಾಯಿಯ ಪಾತ್ರದಲ್ಲಿ ಮಿಂಚಲಿದ್ದಾರೆ ನಟಿ ಅನು ಪ್ರಭಾಕರ್!

ನಟಿ ಅನು ಪ್ರಭಾಕರ್‌ ಕಿರುತೆರೆಗೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ʻಗೌರಿಪುತ್ರʼ ಧಾರಾವಾಹಿಯಲ್ಲಿ ಅನು ಪ್ರಭಾಕರ್‌ ಅವರು ತಾಯಿ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ನಟ ರಿತ್ವಿಕ್‌ ಕೃಪಾಕರ್‌ ಅವರು ಮಗನಾಗಿ ಕಾಣಿಸಿಕೊಳ್ಳಲಿದ್ದಾರೆ.

‘ಗೌರಿಪುತ್ರ’ ಧಾರಾವಾಹಿಯಲ್ಲಿ ತಾಯಿಯಾದ ನಟಿ ಅನು ಪ್ರಭಾಕರ್!

-

Avinash GR
Avinash GR Nov 13, 2026 3:13 PM

ಕನ್ನಡಿಗರಿಗೆ ಸದಾ ವಿಭಿನ್ನ ಕೌಟುಂಬಿಕ ಕಥೆಗಳನ್ನು ನೀಡುತ್ತಾ ಬಂದಿರುವ ಜೀ ಕನ್ನಡ ವಾಹಿನಿ, ಇದೀಗ ‘ಗೌರಿಪುತ್ರ’ ಎಂಬ ಹೊಚ್ಚಹೊಸ ಧಾರಾವಾಹಿಯನ್ನು ಪ್ರೇಕ್ಷಕರ ಮುಂದೆ ತರಲು ಸಜ್ಜಾಗಿದೆ. ನವೆಂಬರ್ 16ರಿಂದ ಪ್ರತಿದಿನ ಸಂಜೆ 7 ಗಂಟೆಗೆ ಪ್ರಸಾರವಾಗಲಿರುವ ಈ ಧಾರಾವಾಹಿಯಲ್ಲಿ ಕನ್ನಡದ ಖ್ಯಾತ ನಟಿ ಅನು ಪ್ರಭಾಕರ್ ಅವರು ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ತನ್ನ ತಾಯಿಗೆ ದೂರವಾಗಿರುವ ತವರಿನ ಪ್ರೀತಿಯನ್ನು ಮರಳಿ ಕೊಡಿಸಲು ಪಣತೊಡುವ ಮಗನ ಭಾವನಾತ್ಮಕ ಹೋರಾಟವೇ ಈ ಧಾರಾವಾಹಿಯ ಜೀವಾಳ.

ತವರಿನಿಂದ ದೂರವಾಗಿರುವ ಗೌರಿ

ಧಾರಾವಾಹಿಯ ಕಥಾಹಂದರವು ತಾಯಿ ಗೌರಿ (ಅನು ಪ್ರಭಾಕರ್) ಮತ್ತು ಆಕೆಯ ಮಗ ಕಾರ್ತಿಕ್ (ರಿತ್ವಿಕ್) ನಡುವಿನ ಅಪಾರ ಪ್ರೀತಿ ಹಾಗೂ ಬಾಂಧವ್ಯದ ಸುತ್ತ ಹೆಣೆಯಲಾಗಿದೆ. ಅಪ್ಪ, ಅಮ್ಮ, ಅಜ್ಜ, ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ ಹೀಗೆ ತುಂಬು ಕುಟುಂಬದಲ್ಲಿ ಬೆಳೆದ ಕಾರ್ತಿಕ್‌ಗೆ ತನ್ನ ಅಮ್ಮನೇ ಪ್ರಪಂಚ. ಮತ್ತೊಂದೆಡೆ, ಸಕಲ ಐಶ್ವರ್ಯ, ಆಸ್ತಿ, ಅಂತಸ್ತು ಹಾಗೂ ಹಲವು ಕಂಪನಿಗಳ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಗೌರಿಗೆ ಬದುಕಿನಲ್ಲಿ ಯಾವುದಕ್ಕೂ ಕೊರತೆಯಿಲ್ಲ.

ಆದರೆ, ಮದುವೆಯಾಗಿ ವರ್ಷಗಳೇ ಕಳೆದರೂ ತನ್ನ ತವರು ಮನೆ ಹಾಗೂ ಅಣ್ಣನ ಪ್ರೀತಿ, ಒಡನಾಟದಿಂದ ದೂರವಾಗಿರುವ ನೋವು ಆಕೆಯನ್ನು ಸದಾ ಕಾಡುತ್ತಿರುತ್ತದೆ. ಹೆಣ್ಣೊಬ್ಬಳಿಗೆ ಜೀವನದಲ್ಲಿ ಎಲ್ಲವೂ ಇದ್ದರೂ ತವರಿನ ಬಾಂಧವ್ಯವಿಲ್ಲದಿದ್ದಾಗ ಕಾಡುವ ಭಾವನಾತ್ಮಕ ತೊಳಲಾಟವನ್ನು ಈ ಕಥೆ ಮನೋಜ್ಞವಾಗಿ ತೆರೆದಿಡಲಿದೆ.

ಕಾರ್ತಿಕ್‌ ಅಂದುಕೊಂಡಿದ್ದು ನೆರವೇರುತ್ತದೆಯೇ?

ತನ್ನ ತಾಯಿಯ ಅಂತರಾಳದ ಈ ನೋವನ್ನು ಅರಿತುಕೊಳ್ಳುವ ಮಗ ಕಾರ್ತಿಕ್, ಆಕೆಗೆ ತಪ್ಪಿಹೋದ ತವರು ಮನೆ ಮತ್ತು ಸಂಬಂಧಗಳ ಪ್ರೀತಿಯನ್ನು ಮರಳಿ ಕೊಡಿಸಬೇಕೆಂಬ ದೃಢ ಸಂಕಲ್ಪದೊಂದಿಗೆ ಪ್ರಯಾಣ ಬೆಳೆಸುತ್ತಾನೆ. ಆದರೆ, ಅಮ್ಮನ ಬಹುದಿನಗಳ ಆಸೆಯನ್ನು ಈಡೇರಿಸುವ ಈ ಹಾದಿಯಲ್ಲಿ ‘ಮದುವೆ’ ಎಂಬ ಅನಿರೀಕ್ಷಿತ ಕವಲುದಾರಿ ಕಾರ್ತಿಕ್‌ನ ಬದುಕಿಗೆ ದೊಡ್ಡ ಅಡ್ಡಿಯಾಗಿ ಎದುರಾಗುತ್ತದೆ.

ಈ ಎಲ್ಲಾ ಸವಾಲು ಮತ್ತು ಅಡೆತಡೆಗಳನ್ನು ಕಾರ್ತಿಕ್ ಹೇಗೆ ಮೆಟ್ಟಿ ನಿಲ್ಲುತ್ತಾನೆ? ಕೊನೆಗೂ ತನ್ನ ತಾಯಿಗೆ ತವರಿನ ಪ್ರೀತಿಯನ್ನು ಮರಳಿ ಕೊಡಿಸುವಲ್ಲಿ ಯಶಸ್ವಿಯಾಗುತ್ತಾನೆಯೇ? ಎಂಬ ಕುತೂಹಲಕಾರಿ ತಿರುವುಗಳೊಂದಿಗೆ ಧಾರಾವಾಹಿ ಸಾಗಲಿದೆ.

ಪ್ರಮುಖ ಪಾತ್ರದಲ್ಲಿ ರಮೇಶ್‌ ಭಟ್‌ ನಟನೆ

‘ಗೌರಿಪುತ್ರ’ ಧಾರಾವಾಹಿಯಲ್ಲಿ ಅನುಭವಿ ಹಾಗೂ ಪ್ರತಿಭಾವಂತ ಕಲಾವಿದರ ದೊಡ್ಡ ಸಮಾಗಮವೇ ಇದೆ. ಪ್ರಮುಖ ಪಾತ್ರಗಳಲ್ಲಿ ಅನು ಪ್ರಭಾಕರ್, ರಿತ್ವಿಕ್ ಮತ್ತು ಮಹತಿ ಭಟ್ ಅಭಿನಯಿಸುತ್ತಿದ್ದು, ಇವರೊಂದಿಗೆ ಹಿರಿಯ ನಟರಾದ ರಮೇಶ್ ಭಟ್, ರಾಜೇಂದ್ರ ಕಾರಂತ್ ಸೇರಿದಂತೆ ಕಿರುತೆರೆ, ರಂಗಭೂಮಿ ಹಾಗೂ ಸಿನಿಮಾರಂಗದ ಹಲವು ಖ್ಯಾತ ಕಲಾವಿದರು ಬಣ್ಣ ಹಚ್ಚಿದ್ದಾರೆ. ಕನ್ನಡ ಕಿರುತೆರೆಗೆ ಹಲವು ಸೂಪರ್‌ಹಿಟ್ ಮತ್ತು ವಿಭಿನ್ನ ಧಾರಾವಾಹಿಗಳನ್ನು ನೀಡಿರುವ ರಾಮ್‌ಜಿ ಅವರು ಈ ಧಾರಾವಾಹಿಯ ನಿರ್ಮಾಣ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.

Ramachari Kannada serial: ಸೀರಿಯಲ್ ಪ್ರಿಯರಿಗೆ ಶಾಕ್ ಮೇಲೆ ಶಾಕ್: ರಾಮಾಚಾರಿ ಧಾರಾವಾಹಿ ಮುಕ್ತಾಯ?

ಕೌಟುಂಬಿಕ ಕಥೆಗಳು ಪ್ರೇಕ್ಷಕರ ಹೃದಯಕ್ಕೆ ಸದಾ ಹತ್ತಿರ

ಈ ಹೊಸ ಧಾರಾವಾಹಿಯ ಕುರಿತು ಮಾತನಾಡಿರುವ ಜೀ ಕನ್ನಡದ ಬಿಸಿನೆಸ್ ಹೆಡ್ ದೀಪಕ್ ಶ್ರೀರಾಮುಲು, “ಕೌಟುಂಬಿಕ ಕಥೆಗಳು ಯಾವಾಗಲೂ ಕನ್ನಡ ಪ್ರೇಕ್ಷಕರ ಹೃದಯಕ್ಕೆ ಹತ್ತಿರವಾಗಿರುತ್ತವೆ. ಸಂಬಂಧಗಳ ಬೆಸುಗೆಯ ಇಂತಹ ಕಥೆಗಳಲ್ಲಿ ವೀಕ್ಷಕರು ತಮ್ಮದೇ ಬದುಕಿನ ಪ್ರತಿಬಿಂಬವನ್ನು ಕಾಣುತ್ತಾರೆ. ‘ಗೌರಿಪುತ್ರ’ ಕೂಡ ಅಂತಹದ್ದೇ ಒಂದು ಭಾವನಾತ್ಮಕ ಕಥೆಯಾಗಿದ್ದು, ತಾಯಿ-ಮಗನ ಬಾಂಧವ್ಯ ಹಾಗೂ ತಾಯಿಯ ಆಸೆ ಈಡೇರಿಸಲು ಮಗ ಪಡುವ ಪ್ರಯತ್ನ ಇದರ ವಿಶೇಷತೆಯಾಗಿದೆ. ಈ ಕಥೆ ಖಂಡಿತವಾಗಿಯೂ ವೀಕ್ಷಕರ ಮನಗೆಲ್ಲಲಿದೆ ಎಂಬ ವಿಶ್ವಾಸವಿದ್ದು, ಕನ್ನಡಿಗರ ಪ್ರೀತಿ ಮತ್ತು ಪ್ರೋತ್ಸಾಹ ಸದಾ ಇರಲಿ" ಎಂದು ಆಶಿಸಿದ್ದಾರೆ.