ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್ ಪುತ್ರ ಅಮೀನ್ ಪ್ರಯಾಣಿಸುತ್ತಿದ್ದ ಕಾರು ಅಪಘಾತ!
ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್ ಅವರ ಪುತ್ರ, ಉದಯೋನ್ಮುಖ ಗಾಯಕ ಎ. ಆರ್. ಅಮೀನ್ ಪ್ರಯಾಣಿಸುತ್ತಿದ್ದ ಕಾರು ಸೋಮವಾರ (ಆಗಸ್ಟ್ 10) ಚೆನ್ನೈನ ಗಿಂಡಿ ಬಳಿಯ ಕತ್ತಿಪಾರ ಫ್ಲೈಓವರ್ ಸಮೀಪ ಅಪಘಾತಕ್ಕೀಡಾಗಿದೆ.
-
ಖ್ಯಾತ ಸಂಗೀತ ನಿರ್ದೇಶಕ, ಆಸ್ಕರ್ ವಿಜೇತ ಎ. ಆರ್. ರೆಹಮಾನ್ ಅವರ ಪುತ್ರ ಹಾಗೂ ಉದಯೋನ್ಮುಖ ಗಾಯಕ ಎ. ಆರ್. ಅಮೀನ್ ಪ್ರಯಾಣಿಸುತ್ತಿದ್ದ ಕಾರು ಸೋಮವಾರ (ಆಗಸ್ಟ್ 10) ಬೆಳಗ್ಗೆ ಚೆನ್ನೈನ ಗಿಂಡಿ ಬಳಿಯಿರುವ ಕತ್ತಿಪಾರ ಫ್ಲೈಓವರ್ ಸಮೀಪ ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್, ಅಮೀನ್ ಹಾಗೂ ಅವರ ಸ್ನೇಹಿತರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಘಟನೆ ನಡೆದಿದ್ದು ಹೇಗೆ?
ಅಮೀನ್ ಮತ್ತು ಅವರ ಸ್ನೇಹಿತ ಕೋಯಂಬೇಡುವಿನಿಂದ ಪ್ರಯಾಣಿಸುತ್ತಿದ್ದಾಗ, ಗಿಂಡಿಯ ಕತ್ತಿಪಾರ ಫ್ಲೈಓವರ್ ಬಳಿ ಈ ಘಟನೆ ಸಂಭವಿಸಿದೆ. ಎದುರಿನಿಂದ ಬಂದ ವಾಹನಕ್ಕೆ ಇವರ ಕಾರು ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಕಾರಿಗೆ ಹಾನಿಯಾಗಿದ್ದರೂ, ಒಳಗಿದ್ದ ಯಾರಿಗೂ ಗಂಭೀರ ಗಾಯಗಳಾಗಿಲ್ಲ. ಪ್ರಸ್ತುತ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಗೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಿದ್ದಾರೆ. ಈ ಕುರಿತು ಎ. ಆರ್. ರೆಹಮಾನ್ ಕುಟುಂಬದಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.
ಮೊದಲ ಬಾರಿಗೆ ಬಣ್ಣ ಹಚ್ಚಿದ ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್; ಯಾವ ಸಿನಿಮಾಕ್ಕಾಗಿ ಗೊತ್ತಾ?
ಅಮೀನ್ ಅವರ ವೃತ್ತಿಜೀವನದ ಬಗ್ಗೆ
ಹಿನ್ನೆಲೆ ಗಾಯಕರಾಗಿ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಎ. ಆರ್. ಅಮೀನ್, ಇತ್ತೀಚೆಗೆ ಬಿಡುಗಡೆಯಾದ ರಾಮ್ ಚರಣ್ ಅಭಿನಯದ 'ಪೆದ್ದಿ' ಚಿತ್ರದ 'ಚಿಕಿರಿ ಚಿಕಿರಿ' ಹಾಡಿನ ತಮಿಳು ಆವೃತ್ತಿಗೆ ಧ್ವನಿಯಾಗಿದ್ದರು. ಅಲ್ಲದೆ ದುಲ್ಕರ್ ಸಲ್ಮಾನ್ ಮತ್ತು ಮೃಣಾಲ್ ಠಾಕೂರ್ ನಟನೆಯ 'ಭೀಗಿ ಭೀಗಿ' ಎಂಬ ಸ್ವತಂತ್ರ ಆಲ್ಬಂ ಹಾಡಿಗಾಗಿ ಜಸ್ಲಿನ್ ರಾಯಲ್ ಅವರೊಂದಿಗೆ ಜೊತೆಯಾಗಿ ಕಾರ್ಯನಿರ್ವಹಿಸಿದ್ದರು.
ಚಿತ್ರರಂಗದಲ್ಲಿ ಬ್ಯುಸಿ ಆಗಿರುವ ರೆಹಮಾನ್
ಮತ್ತೊಂದೆಡೆ, ಎ. ಆರ್. ರೆಹಮಾನ್ ಅವರ ಸಂಗೀತ ನಿರ್ದೇಶನದ ಮೂರು ಚಿತ್ರಗಳು ಈ ವರ್ಷ ಬಿಡುಗಡೆಯಾಗಿವೆ. ಜೀ5ನಲ್ಲಿ ಪ್ರಸಾರವಾದ 'ಗಾಂಧಿ ಟಾಕ್ಸ್', ರಾಮ್ ಚರಣ್ ಅವರ 'ಪೆದ್ದಿ' ಮತ್ತು ಇಮ್ತಿಯಾಜ್ ಅಲಿ ಅವರ 'ಮೈ ವಾಪಸ್ ಆವುಂಗಾ' ಸಿನಿಮಾಗಳಿಗೆ ರೆಹಮಾನ್ ಕೆಲಸ ಮಾಡಿದ್ದಾರೆ. ಅವರ ಕೈಯಲ್ಲಿ 'ರಾಮಾಯಣ: ಪಾರ್ಟ್ 1' ಮತ್ತು 'ರಾಮಾಯಣ: ಪಾರ್ಟ್ 2', 'ಬಟ್ವಾರಾ 1947', 'ಮೂನ್ ವಾಕ್' ಹಾಗೂ ಧನುಷ್ ಮತ್ತು ನಿರ್ದೇಶಕ ಮಾರಿ ಸೆಲ್ವರಾಜ್ ಅವರ ಹೊಸ ಸಿನಿಮಾ ಸೇರಿದಂತೆ ಸಾಲು ಸಾಲು ಪ್ರಾಜೆಕ್ಟ್‌ಗಳಿವೆ.