ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಬಿಗ್‌ ಬಾಸ್‌ ಕನ್ನಡ 13ʼ ಶೋ ಆರಂಭಿಸಲು ಜಿಲ್ಲಾಡಳಿತಕ್ಕೆ ಸಲ್ಲಿಕೆಯಾಗಿಲ್ಲ ಅರ್ಜಿ! ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಹೇಳಿದ್ದೇನು‌?

ʻಬಿಗ್‌ ಬಾಸ್‌ ಕನ್ನಡ 13ʼ ಪ್ರಸಾರಕ್ಕೆ ದಿನಗಣನೆ ಆರಂಭವಾಗಿರುವ ಹೊತ್ತಲ್ಲೇ ಕಾನೂನು ಸಂಕಷ್ಟ ಎದುರಾಗುವ ಸಾಧ್ಯತೆಗಳು ಕಾಣಿಸುತ್ತಿವೆ. ಮಾಲಿನ್ಯ ನಿಯಂತ್ರಣ ನಿಯಮ ಮೀರಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಪರಿಸರ ಸಚಿವರು ಎಚ್ಚರಿಸಿದ ಬೆನ್ನಲ್ಲೇ, "ಶೋ ನಡೆಸಲು ಯಾವುದೇ ಅಧಿಕೃತ ಅರ್ಜಿ ಬಂದಿಲ್ಲ" ಎಂದು ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

ʻಬಿಗ್ ಬಾಸ್ 13ʼ ಆರಂಭಿಸಲು ಜಿಲ್ಲಾಡಳಿತಕ್ಕೆ ಅರ್ಜಿಯನ್ನೇ ಸಲ್ಲಿಸಿಲ್ಲ!

-

Avinash GR
Avinash GR Sep 1, 2026 5:50 PM

ಕನ್ನಡದ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್' ನೂತನ ಆವೃತ್ತಿಯ ಆರಂಭಕ್ಕೆ ಸಿದ್ಧತೆಗಳು ನಡೆಯುತ್ತಿರುವ ಬೆನ್ನಲ್ಲೇ, ಶೋ ಆಯೋಜನೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತಕ್ಕೆ ಯಾವುದೇ ಅನುಮತಿ ಕೋರಿ ಅರ್ಜಿ ಬಂದಿಲ್ಲ ಎಂದು ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಯಶವಂತ್ ಗುರುಕರ್ ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ, ಪರಿಸರ ಮಾಲಿನ್ಯ ನಿಯಂತ್ರಣ ನಿಯಮಗಳನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಅರಣ್ಯ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.

ಅನುಮೋದನೆ ಹಂತದಲ್ಲಿದೆ ಜಾಲಿವುಡ್‌ ಅರ್ಜಿ

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಯಶವಂತ್ ಗುರುಕರ್, "ಬಿಗ್ ಬಾಸ್ ಶೋ ನಡೆಸಲು ಅನುಮತಿ ಕೋರಿ ಜಿಲ್ಲಾಡಳಿತಕ್ಕೆ ಈವರೆಗೆ ಯಾವುದೇ ಅಧಿಕೃತ ಅರ್ಜಿ ಬಂದಿಲ್ಲ. ಬಿಗ್ ಬಾಸ್ ಸೆಟ್ ಇರುವ ಜಾಲಿವುಡ್‌ನವರು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ 'ಕನ್ಸೆಂಟ್ ಫಾರ್ ಎಸ್ಟಾಬ್ಲಿಷ್‌ಮೆಂಟ್' (CFE) ಅನುಮತಿ ಕೋರಿದ್ದು, ಅದು ಪ್ರಸ್ತುತ ಮಂಡಳಿಯ ಅನುಮೋದನೆಗೆ ಬಾಕಿ ಇದೆ ಎಂದು ಪರಿಸರ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿ ಹಾಗೂ ಸೂಚನೆಯಂತೆ ಮುಂದಿನ ಕ್ರಮ ಜರುಗಿಸಲಾಗುವುದು. ಜಿಲ್ಲಾಡಳಿತಕ್ಕೆ ಶೋ ಆಯೋಜಕರಿಂದ ಅರ್ಜಿ ಸಲ್ಲಿಕೆಯಾದ ಬಳಿಕ ನಿಯಮಾನುಸಾರ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು" ಎಂದಿದ್ದಾರೆ.

ನಿಯಮ ಉಲ್ಲಂಘಿಸಿದರೆ ದಂಡ ಪ್ರಯೋಗ

ಪರಿಸರ ಇಲಾಖೆಯ ಅನುಮತಿ ವಿಚಾರವಾಗಿ ಮಾತನಾಡಿದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ, "ಬಿಗ್ ಬಾಸ್ ನಡೆಯುವ ಸ್ಥಳದಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷವೇ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ, ಪ್ರಸಕ್ತ ಸಾಲಿನಲ್ಲಿ ಪರಿಸರ ಇಲಾಖೆಯಿಂದ ಅನುಮತಿ ಕೋರಿ ಆಯೋಜಕರು ಈವರೆಗೂ ಯಾವುದೇ ಮನವಿ ಸಲ್ಲಿಸಿಲ್ಲ" ಎಂದು ಸೋಮವಾರ (ಆ.31) ತಿಳಿಸಿದ್ದರು.

Bigg Boss Kannada 13: ಇದೇ ಭಾನುವಾರ ಬಿಗ್ ಬಾಸ್ 13 Grand Take Off!

"ಆಯೋಜಕರು ಅನುಮತಿ ಕೋರಿ ಮನವಿ ಸಲ್ಲಿಸಿದರೆ, ಮಾಲಿನ್ಯ ನಿಯಂತ್ರಣ ನಿಯಮಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಬೇಕು. ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಕಾನೂನಿನ ಅನ್ವಯ ನಿಗದಿತ ದಂಡ ವಿಧಿಸಿ, ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ" ಎಂದು ಸ್ಪಷ್ಟಪಡಿಸಿದ್ದರು.

ಕಿಚ್ಚ ಸುದೀಪ್‌ ಸಾರಥ್ಯದ ಈ ಶೋ ಸೆ.6ರಂದು ಗ್ರ್ಯಾಂಡ್‌ ಆಗಿ ಶುರುವಾಗಲಿದೆ. ಈ ಬಾರಿ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ವರ್ಷನ್‌ ಬಿಗ್‌ ಬಾಸ್‌ ಶೋಗಳು ಒಟ್ಟಿಗೆ ಒಂದೇ ದಿನ ಪ್ರೀಮಿಯರ್‌ ಆರಂಭಿಸುತ್ತಿರುವುದು ವಿಶೇಷ.