BIFFes 2026: 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮುಕ್ತಾಯ; ಹಂಸಲೇಖಗೆ ಜೀವಮಾನ ಸಾಧನೆ ಪ್ರಶಸ್ತಿ
Bangalore International Film Festival : ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ 17ನೇ ಆವೃತ್ತಿಗೆ ಶುಕ್ರವಾರ (ಫೆ.6) ರಾತ್ರಿ ನಗರದ ಲುಲು ಮಾಲ್‌ನಲ್ಲಿ ತೆರೆ ಬಿದ್ದಿದೆ. ಜಪಾನ್ ದೇಶದದ ʼಲಾಸ್ಟ್ ಲ್ಯಾಂಡ್ʼ, ಮರಾಠಿಯ ʼಸಬರ್ ಬೊಂಡಾʼ ಮತ್ತು ʼವನ್ಯಾʼ ಚಿತ್ರಗಳು ಚಿತ್ರೋತ್ಸವದ ಏಷ್ಯಾ, ಭಾರತ ಮತ್ತು ಕನ್ನಡ ವಿಭಾಗಗಳಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿವೆ. ಖ್ಯಾತ ಗೀತರಚನೆಕಾರ ಮತ್ತು ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ಜೀವಮಾನದ ಶ್ರೇಷ್ಠ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ -
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (bengaluru film festival 2026) 17ನೇ ಆವೃತ್ತಿಗೆ ಶುಕ್ರವಾರ (ಫೆ.6) ರಾತ್ರಿ ನಗರದ ಲುಲು ಮಾಲ್‌ನಲ್ಲಿ ತೆರೆ ಬಿದ್ದಿದೆ. ಜಪಾನ್ ದೇಶದದ ʼಲಾಸ್ಟ್ ಲ್ಯಾಂಡ್ʼ, ಮರಾಠಿಯ ʼಸಬರ್ ಬೊಂಡಾʼ ಮತ್ತು ʼವನ್ಯಾʼ (Vanya Movie) ಚಿತ್ರಗಳು ಚಿತ್ರೋತ್ಸವದ ಏಷ್ಯಾ, ಭಾರತ ಮತ್ತು ಕನ್ನಡ ವಿಭಾಗಗಳಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿವೆ. ಖ್ಯಾತ ಗೀತರಚನೆಕಾರ ಮತ್ತು ಸಂಗೀತ ನಿರ್ದೇಶಕ ಹಂಸಲೇಖ (Hamsalekha) ಅವರಿಗೆ ಜೀವಮಾನದ ಶ್ರೇಷ್ಠ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಜೀವಮಾನದ ಶ್ರೇಷ್ಠ ಸಾಧನೆ ಪ್ರಶಸ್ತಿ
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸಚಿವ ದಿನೇಶ್ ಗುಂಡೂರಾವ್ ಭಾಗವಹಿಸಿದ್ದರು. ಚಿತ್ರೋತ್ಸವದ ರಾಯಭಾರಿ ಪ್ರಕಾಶ್ ರಾಜ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಡಾ. ಸಾಧು ಕೋಕಿಲ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ. ಜಯಮಾಲ ಮುಂತಾದವರು ಈ ಸಮಾರಂಭದಲ್ಲಿ ಹಾಜರಿದ್ದರು. ಖ್ಯಾತ ಗೀತರಚನೆಕಾರ ಮತ್ತು ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ಜೀವಮಾನದ ಶ್ರೇಷ್ಠ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಇದನ್ನೂ ಓದಿ: BIFFES 2026: ಸ್ಪರ್ಧಾತ್ಮಕ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಚಿತ್ರಗಳ ಘೋಷಣೆ; ಕನ್ನಡ ಸಿನಿಮಾಗಳು ಯಾವುದೆಲ್ಲ?
ಈ ಸಂದರ್ಭದಲ್ಲಿ ಮಾತನಾಡಿದ ಹಂಸಲೇಖ, ʼಕಲೆಗೆ ಸಂಬಂಧಿಸಿದ ಸಮಾರಂಭಕ್ಕೆ ಸಮಾರೋಪ ಇರುವುದಿಲ್ಲ. ಅದು ಆರಂಭ. ಸೃಷ್ಟಿ ಕಾರ್ಯ ನಿರಂತರ. ಅದು ಯಾವತ್ತು ನಿಲ್ಲುವುದಿಲ್ಲ. ಕೃಷಿಕರು, ಕಾರ್ಮಿಕರು, ಸಿನಿಮಾದವರಿಗೆ ಯಾವುದೇ ವ್ಯತ್ಯಾಸ ಇಲ್ಲ. ಒಬ್ಬನಿಂದ ಸಿನಿಮಾ ಆಗುವುದಿಲ್ಲ. ಅದೊಂದು ಸಾಮೂಹಿಕ ಕೃಷಿ. ಈ ಚಿತ್ರೋತ್ಸವಕ್ಕೆ ರಾಜ್ಯ ಸರ್ಕಾರ ತುಂಬು ಸಹಾಕಾರ ನೀಡಿದೆ.
ಜೀವಮಾನ ಪ್ರಶಸ್ತಿ ಸಿಕ್ಕಿದ್ದು ಖುಷಿಯ ವಿಷಯ. ನಾವು ಕನ್ನಡ ನಾಡಿಗೆ ಋಣಿಯಾಗಿರಬೇಕು. ಕನ್ನಡದಲ್ಲಿ ಬದುಕಿದ್ದೇವೆ. ಕಲೆ ಎನ್ನುವುದು ಆತ್ಮದ ಮೇವು. ಕಲೆಯ ಮೇವನ್ನು ಆರು ದಶಕಗಳ ಕಾಲ ಮೇದಿರುವೆ. ಇಲ್ಲಿನ ವೈಚಾರಿಕತೆ, ಆಧ್ಯಾತ್ಮಿಕತೆ ನನ್ನನ್ನು ಬೆಳೆಸಿದೆ. ಬೇಂದ್ರೆ ಅವರು ʼಉತ್ತರ ಧ್ರುವದಿಂದ ದಕ್ಷಿಣ ಧ್ರುವಕೂ …ʼ ಎಂದು ಹೇಳಿದರೆ, ʼಕಾಂತಾರʼ ಮತ್ತು ʼಕೆಜಿಎಫ್ʼ ಚಿತ್ರಗಳು ಅದನ್ನು ದಕ್ಷಿಣದಿಂದ ಉತ್ತರದವರೆಗೂ ಎಂದು ಬದಲಾಯಿಸಿದೆ. ಪ್ರಜಾಪ್ರಭುತ್ವದ ಬೀಜ ಬಿತ್ತಿದ ಬಸವ ನಾಡಿನಲ್ಲಿ ಪ್ರಜಾಪ್ರಭುತ್ವ ರಕ್ಷಿಸುವ ಸಿನಿಮಾ ಮಾಡಬೇಕಿದೆʼ ಎಂದು ಹೇಳಿದರು.
ಪ್ರಜಾಪ್ರಭುತ್ವ ಉಳಿಸುವ ಜವಾಬ್ದಾರಿ
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ʼಚಿತ್ರೋತವಗಳಿಂದ ಬೇರೆ ಭಾಷೆಯ ಸಿನಿಮಾ ನೋಡಬಹುದಾಗಿದೆ. ಇದು ಕಲೆಯನ್ನು ಉತ್ಕೃಷ್ಟ ಮಟ್ಟಕ್ಕೆ ಒಯ್ಯುವ ಉದ್ದೇಶದಿಂದ ಮಾಡುವ ಚಿತ್ರೋತ್ಸವ. ಪ್ರಜಾಪ್ರಭುತ್ವ ಉಳಿಸುವ ಜವಾಬ್ದಾರಿ ಕಲೆ ಮೇಲಿದೆ ಎಂಬುವ ಮಾತು ಒಪ್ಪುವೆ. ಎಲ್ಲ ರೀತಿಯ ಸಿನಿಮಾಗಳು ಬರಬೇಕು.
ಕಮರ್ಷಿಯಲ್, ಕಲಾತ್ಮಕ ಸೇರಿ ಎಲ್ಲಾ ರೀತಿಯಲ್ಲಿ ಬರಬೇಕು. ಕಲೆಯಲ್ಲಿ ಭಯ, ಭೀತಿ ಇರಬಾರದು. ಅಭಿವ್ಯಕ್ತಿ ಇರಬೇಕು. ಸ್ವಾತಂತ್ರ್ಯ ಇರಬೇಕು. ಯಾರಿಗೇ ಆಗಲಿ, ಪ್ರಶ್ನೆ ಮಾಡುವ ಅವಕಾಶವಿದೆ. ಕನ್ನಡದಲ್ಲಿ ಯಾರ ಹಂಗೂ ಇಲ್ಲದೆ ಧೈರ್ಯದಿಂದ ಸಿನಿಮಾ ಮಾಡುವಂತಾಗಬೇಕು. ಕಲಾವಿದರು ಜವಾಬ್ದಾರಿ ಅರಿತು ಕೆಲಸ ಮಾಡಬೇಕುʼ ಎಂದರು.
ಚಿತ್ರೋತ್ಸವದ ರಾಯಭಾರಿ ಪ್ರಕಾಶ್ ರಾಜ್ ಮಾತನಾಡಿ, ʼಭಾಷೆ ಹಲವಾದರೂ, ಭಾವನೆ ಒಂದೇ. ಬೇರೆಬೇರೆ ವ್ಯಾಕರಣ ಇದ್ದರೂ, ಅದರ ಗರ್ಭದಲ್ಲಿ ಗ್ರಹಿಕೆ ಒಂದೇ. ಮನುಷ್ಯ ವಿಕಾಸದಲ್ಲಿ ಸಿನಿಮಾ ಹೊಸ ಭಾಷೆ. ಅದು ಅವನ ಸಂಸ್ಕೃತಿ, ನೋವು, ಅಳಲು ದಾಖಲಿಸುತ್ತದೆ. ಚಿತ್ರೋತ್ಸವವೆನ್ನುವುದು ಪ್ರಪಂಚದ ಬೇರೆಬೇರೆ ಮಾನವೀಯ ಗ್ರಹಿಕೆಗಳನ್ನು ಹಂಚಿಕೊಳ್ಳುವ ವೇದಿಕೆ.
ದೇಶಕ್ಕೆ, ಸಮಾಜಕ್ಕೆ ಆದ ನೋವು ದೊಡ್ಡ ನೋವು. ಅಂತಹ ನೋವುಗಳನ್ನು ಸಿನಿಮಾಗಳು ದಾಖಲಿಸಬೇಕು. ಈ ನಿಟ್ಟಿನಲ್ಲಿ ಚಿತ್ರೋತ್ಸವ ಉತ್ಸವವಾಗಿದೆ. ಹಂಸಲೇಖ ಅವರನ್ನು ಸನ್ಮಾನಿಸಿ ಉತ್ಸವದ ಅರ್ಥವನ್ನು ಹೆಚ್ಚಿಸಿದೆʼ ಎಂದರು.

ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಎಲ್ಲಾ ಸಿನಿಮಾಗಳ ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ ಎಂದ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಡಾ. ಸಾಧು ಕೋಕಿಲ, ʼಭಾರತದ ಅತೀ ದೊಡ್ಡ ಚಿತ್ರೋತ್ಸವ ನಮ್ಮದಾಗಿದೆ. ಇದಕ್ಕೆ ಶ್ರಮಿಸಿದ ಸರ್ಕಾರ ಹಾಗೂ ಅಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸುವೆ. ಈ ಬಾರಿಯ ಹೊಸ ಯೋಜನೆಗಳು ಯಶಸ್ವಿಯಾಗಿವೆ.
೯೨ ವರ್ಷಗಳ ಇತಿಹಾಸವಿರುವ ಚಲನಚಿತ್ರ ಸಾಧಕರ ಛಾಯಾಚಿತ್ರ ಪ್ರದರ್ಶನ, ಟೆಂಟ್ ಸಿನಿಮಾ ಹಾಗೂ ಡಾ. ರಾಜಕುಮಾರ್ ಸೇರಿ ವಿವಿಧ ನಟರ ಸಿನಿಮಾಗಳ ಪ್ರದರ್ಶನಗೊಂಡು ಜನಮೆಚ್ಚುಗೆ ಪಡೆದಿವೆ. ಹಂಡಲೇಖ ಅವರಿಗೆ ಜೀವಮಾನದ ಪ್ರಶಸ್ತಿ ನೀಡಿರುವುದು ನಮಗೆ ನಾವೇ ಮಾಡಿಕೊಳ್ಳುವ ಗೌರವ. ಈ ಚಿತ್ರೋತ್ಸವದಲ್ಲಿ ಒಂದು ಲಕ್ಷಕ್ಕೂ ಅಧಿಕ ಹಿರಿಯ ನಾಗರಿಕರು ಭಾಗವಹಿಸಿದ್ದಾರೆʼ ಎಂದರು.
ಈ ಸಮಾರಂಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹೇಮಂತ್ ಎಂ. ನಿಂಬಾಳ್ಕರ್, ವಾರ್ತಾ ಮತ್ತು ಸಾರ್ವಜನಿಕ ಇಲಾಖೆಯ ಕಾರ್ಯದರ್ಶಿ ಬಿ.ಬಿ. ಕಾವೇರಿ, ಚಲನಚಿತ್ರ ಅಕಾಡೆಮಿಯ ರಿಜಿಸ್ಟ್ರಾರ್ ವಿನೋದ್ ಚಂದ್ರ, ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ಮುರಳಿ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಕುರಿತು
ಜನವರಿ 29ರಂದು ಪ್ರಾರಂಭವಾದ ಈ ಪ್ರತಿಷ್ಠಿತ ಚಿತ್ರೋತ್ಸವದಲ್ಲಿ 70 ದೇಶಗಳ ಸುಮಾರು 300ಕ್ಕೂ ಹೆಚ್ಚು ಅತ್ಯುತ್ತಮ ಚಲನಚಿತ್ರಗಳು, ವಿಶ್ವದ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಪಾಲ್ಗೊಂಡಿದ್ದ ಅತ್ಯುತ್ತಮ ಚಲನಚಿತ್ರಗಳು ಪ್ರದರ್ಶನಗೊಂಡಿವೆ.
ಇದನ್ನೂ ಓದಿ: Sabar Bonda on OTT: ಒಟಿಟಿಗೆ ಬಂದೇ ಬಿಡ್ತು ಪ್ರಶಸ್ತಿ ವಿಜೇತ ʻSabar Bondaʼ ಸಿನಿಮಾ!
ಈ ಚಿತ್ರೋತ್ಸವವನ್ನು ಪ್ರತೀ ವರ್ಷವೂ ಅರ್ಥಪೂರ್ಣವಾದ ಧ್ಯೇಯವಾಕ್ಯದ ಮೂಲಕ ನಡೆಸಲಾಗುತ್ತಿದ್ದು, ಈ ಬಾರಿ ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪನವರ ಪ್ರಸಿದ್ಧ ಗೀತೆಯಾಗಿರುವ ‘ಸ್ತ್ರೀ ಎಂದರೆ ಅಷ್ಟೇ ಸಾಕೆ’ ಎಂಬ ಸಾಲಿನೊಂದಿಗೆ ʼಸ್ತ್ರೀ ಸಂವೇದನೆ, ಸಮಾನತೆಯ ದನಿʼ ಎಂಬ ಟ್ಯಾಗ್ ಲೈನ್ ಹೊಂದಿರುವ ಧ್ಯೇಯವಾಕ್ಯದೊಂದಿಗೆ ಆಚರಿಸಲಾಯಿತು.