ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

‘ನಂಗೆ 88 ಲಕ್ಷ ಸಾಲ ಇದೆ, ಸದ್ಯ ಹೆಂಡತಿಯ ಆದಾಯದಲ್ಲೇ ನನ್ನ ಜೀವನ ನಡೆಯುತ್ತಿದೆʼ; ಬಿಗ್‌ ಬಾಸ್‌ನಿಂದ ಬಂದ ನಟ ಅವಿನಾಶ್ ಷಟಮರ್ಷಣ ಓಪನ್‌ ಟಾಕ್!‌

Avinash Shatamarshan: ಹಣಕಾಸಿನ ಬಿಕ್ಕಟ್ಟಿನ ಕುರಿತು ಬಿಗ್ ಬಾಸ್ ಮನೆಯಿಂದ ಹೊರಬಿದ್ದ ನಟ ಅವಿನಾಶ್ ಷಟಮರ್ಷಣ ‌ಮುಕ್ತವಾಗಿ ಮಾತನಾಡಿದ್ದಾರೆ. ತಮಗಿರುವ 88 ಲಕ್ಷ ಸಾಲ ಹಾಗೂ ಪತ್ನಿಯ ಆದಾಯದಲ್ಲಿ ಜೀವನ ಮಾಡುತ್ತಿರುವುದಾಗಿ ಪ್ರಾಮಾಣಿಕವಾಗಿ ಹೇಳಿಕೊಂಡಿದ್ದಾರೆ. ಸಾಲಗಾರನಾದರೂ ಮೋಸಗಾರನಾಗುವುದಿಲ್ಲ ಎಂದಿರುವ ಅವರು, ಒಂದೇ ವರ್ಷದಲ್ಲಿ ಪುಟಿದೆದ್ದು ಬರುವ ಪಣತೊಟ್ಟಿದ್ದಾರೆ.

BBK 13: ‘ನಂಗೆ 88 ಲಕ್ಷ ಸಾಲ ಇದೆ..'; ನಟ ಅವಿನಾಶ್ ಷಟಮರ್ಷಣ ಓಪನ್‌ ಟಾಕ್!‌

-

Avinash GR
Avinash GR Sep 30, 2026 3:33 PM

‘ಬಿಗ್ ಬಾಸ್’ ಮನೆಯಿಂದ ಮೂರೇ ವಾರಕ್ಕೆ ಎಲಿಮಿನೇಟ್ ಆಗಿ ಹೊರಬಂದಿರುವ ನಟ ಹಾಗೂ ರಂಗಭೂಮಿ ಕಲಾವಿದ ಅವಿನಾಶ್ ಷಟಮರ್ಷಣ, ತಮ್ಮ ವೈಯಕ್ತಿಕ ಬದುಕು, ಆರ್ಥಿಕ ಸಂಕಷ್ಟ ಹಾಗೂ ಆಟದ ವೈಖರಿಯ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ‘ವಿಶ್ವವಾಣಿ ಟಿವಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಮ್ಮ ನೈಜ ಪರಿಸ್ಥಿತಿಯನ್ನು ಬಿಚ್ಚಿಟ್ಟಿರುವ ಅವರು, ತಮಗಿರುವ ಬರೋಬ್ಬರಿ 88 ಲಕ್ಷ ರೂಪಾಯಿ ಸಾಲ, ಪತ್ನಿಗೆ ನೀಡಿದ ಮಾತು ಹಾಗೂ ಬಿಗ್ ಬಾಸ್ ವೇದಿಕೆಯ ಅನುಭವಗಳನ್ನು ಪ್ರಾಮಾಣಿಕವಾಗಿ ಹಂಚಿಕೊಂಡಿದ್ದಾರೆ.

ಪತ್ನಿಗೆ ನಾನು ಒಂದು ಮಾತು ಕೊಟ್ಟಿದ್ದೇನೆ

ತಮ್ಮ ಆರ್ಥಿಕ ಸಂಕಷ್ಟದ ಬಗ್ಗೆ ಮುಕ್ತವಾಗಿ ಮಾತನಾಡಿದ ಅವಿನಾಶ್, "ನಾನು ಸದ್ಯ ಸಾಲದಲ್ಲಿದ್ದೇನೆ, ಬರೋಬ್ಬರಿ 88 ಲಕ್ಷ ರೂಪಾಯಿ ಸಾಲ ತೀರಿಸಬೇಕಿದೆ. ಸದ್ಯಕ್ಕೆ ನನ್ನ ಆದಾಯದ ಮೂಲ ಮತ್ತು ಜೀವನ ಅಂದರೆ ಅದು ನನ್ನ ಪತ್ನಿ ಮಾತ್ರ. ಅವಳಿಗೆ ನಾನು ಒಂದು ಮಾತು ಕೊಟ್ಟಿದ್ದೇನೆ; ಈ ಒಂದು ವರ್ಷದಲ್ಲಿ ನಾನು ಮತ್ತೆ ಪುಟಿದೆದ್ದು ಬರ್ತೀನಿ, ಸಾಲವನ್ನೆಲ್ಲಾ ಸಂಪೂರ್ಣವಾಗಿ ತೀರಿಸಿ ನೆಮ್ಮದಿಯಾಗಿ ನಿದ್ದೆ ಮಾಡ್ತೀನಿ. ಬೆಳಗ್ಗೆ ಕಣ್ಣು ತೆರೆದರೆ ಮುಂದಿನ ಕೆಲಸ, ಎದ್ದಿಲ್ಲ ಅಂದ್ರೆ ಅದೇ ಬೆಸ್ಟ್ ಸ್ಲೀಪ್" ಎಂದು ಗಂಭೀರ ವಾಸ್ತವವನ್ನು ತೆರೆದಿಟ್ಟಿದ್ದಾರೆ.

BBK 13: ‘ಅಲ್ಲಿ ಶಾಂತಿ ಹಾಳು ಮಾಡೋರು, ಜಗಳ ಆಡೋರೇ ಬೇಕು’: ʻಬಿಗ್ ಬಾಸ್ʼ ಎಲಿಮಿನೇಷನ್ ಬಗ್ಗೆ ನಟ ಅವಿನಾಶ್ ಷಟಮರ್ಷಣ ನೇರ ಮಾತು!

ಸಾಲಗಾರ ಆದ್ರೂ ಪರವಾಗಿಲ್ಲ, ಮೋಸಗಾರ ಅನ್ನಿಸಿಕೊಳ್ಳಲ್ಲ

ಇದೇ ವೇಳೆ ‘ಬಿಗ್ ಬಾಸ್ ವಿನ್ನರ್ ಆಗಿ 50 ಲಕ್ಷ ರೂ. ನಗದು ಬಹುಮಾನ ಗೆದ್ದಿದ್ದರೆ ಏನು ಮಾಡುತ್ತಿದ್ದಿರಿ?’ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, "ಆ ಮೊತ್ತ ಬಂದಿದ್ದರೆ ಪೂರ್ತಿಯಾಗಿ ಸಾಲ ತೀರಿಸಲು ಬಳಸುತ್ತಿದ್ದೆ. ಗೆಲುವಿನ ಮೊತ್ತಕ್ಕಿಂತ ಹೆಚ್ಚಿನ ಸಾಲ ನನ್ನ ಮೇಲಿದೆ. ಸಾಲ ನೀಡಿದವರು ಹಲವು ವರ್ಷಗಳಿಂದ ಕಾಯುತ್ತಿದ್ದಾರೆ. ಸಾಲಗಾರ ಎಂಬ ಹಣೆಪಟ್ಟಿಯನ್ನು ಬೇಕಾದರೆ ಸಹಿಸಿಕೊಳ್ಳಬಲ್ಲೆ, ಆದರೆ ಮೋಸಗಾರ ಅಥವಾ ನಂಬಿಕೆದ್ರೋಹಿ ಎಂಬ ಪಟ್ಟವನ್ನು ಹೊರಲು ನನ್ನಿಂದ ಸಾಧ್ಯವಿಲ್ಲ" ಎಂದು ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದ್ದಾರೆ ಅವಿನಾಶ್‌.

ಜನ ಖಂಡಿತ ಮುಠ್ಠಾಳರಲ್ಲ

ಶೋನಿಂದ ಬೇಗನೆ ಹೊರಬಂದ ಬಗ್ಗೆ ಮತ್ತು ಜನರ ಮನಸ್ಥಿತಿಯ ಕುರಿತು ಪ್ರತಿಕ್ರಿಯಿಸಿದ ಅವರು, "ಏನು ಬರಬೇಕೋ ಅದೆಲ್ಲ ಬಂದೇ ಬರುತ್ತದೆ. ಇವತ್ತು ಸಿಕ್ಕಿಲ್ಲ ಅಂದ್ರೆ ನಾಳೆ ಅಥವಾ ನಾಡಿದ್ದು ಸಿಗುತ್ತದೆ. ಜನ ಖಂಡಿತ ಮುಠ್ಠಾಳರಲ್ಲ. ಆದರೆ ಇದು ಫಾಸ್ಟ್ ಫುಡ್ ಯುಗವಾಗಿರುವುದರಿಂದ ಜನ ತ್ವರಿತವಾಗಿ ತೀರ್ಪು ನೀಡುತ್ತಾರೆ ಮತ್ತು ಇನ್‌ಸ್ಟೆಂಟ್ ಮನರಂಜನೆ ಬಯಸುತ್ತಾರೆ. ಅದು ಜನರ ತಪ್ಪಲ್ಲ, ಅವರಿಗೆ ಅಂಥದ್ದನ್ನೇ ಕೊಟ್ಟು ರೂಢಿ ಮಾಡಲಾಗಿದೆ. ಮನೆಯಲ್ಲಿ ಯಾರು ಹೆಚ್ಚು ದಿನ ಉಳಿದುಕೊಳ್ಳುತ್ತಿದ್ದಾರೋ ಅದು ಇಂದಿನ ಸಮಾಜದ ಪ್ರತಿಬಿಂಬವಷ್ಟೇ. ನಾನು ಹೊರಬಂದಿದ್ದಕ್ಕೆ ನಾಲ್ಕು ಜನ ಬೇಸರ ವ್ಯಕ್ತಪಡಿಸಿದ್ದರೆ, ಆ ನಾಲ್ಕು ಜನರ ಪೈಕಿ ನಾನೂ ಒಬ್ಬ. ಇನ್ನು ನಾಲ್ಕು ಲಕ್ಷ ಜನ ಬೇರೆ ಯಾರಿಗೋ ವೋಟ್ ಮಾಡಿದ್ದರೆ, ಅವರನ್ನೂ ಅರ್ಥಮಾಡಿಕೊಳ್ಳಬಲ್ಲೆ. ನನ್ನಂಥ ವ್ಯಕ್ತಿತ್ವಗಳು ಇಂದು ಸಮಾಜದಲ್ಲಿ ಸಿಗುವುದು ತುಂಬಾ ಕಡಿಮೆ" ಎಂದಿದ್ದಾರೆ.

ಜನರ ಆ ನಿರೀಕ್ಷೆಗೆ ಧಕ್ಕೆಯಾಗಿದೆ

ತಮ್ಮ ಆಟದ ವೈಖರಿ ಹಾಗೂ ಜನರ ನಿರೀಕ್ಷೆಗಳ ಬಗ್ಗೆ ಮಾತನಾಡಿದ ನಟ ಅವಿನಾಶ್‌, "ನಾವು ಎಂದಿಗೂ ಪ್ರಚಾರಪ್ರಿಯರಲ್ಲ. ಹೇಳದೇ ಅರ್ಥವಾಗುತ್ತದೆ ಎಂಬ ಭ್ರಮೆಯೂ ನನಗಿಲ್ಲ. ಏನಾದರೂ ಸಾಧಿಸಿದರೆ ಹೇಳಿಕೊಳ್ಳಬಹುದು, ಏನೂ ಮಾಡದೇ ಕೇವಲ ಬಡಾಯಿ ಕೊಚ್ಚಿಕೊಳ್ಳಲು ಸಾಧ್ಯವಿಲ್ಲ. ಮನೆಯೊಳಗೆ ಹೋದಾಗ ನನ್ನಿಂದ ಜನರಿಗೊಂದು ನಿರೀಕ್ಷೆ ಇತ್ತು, ಆದರೆ ಆ ನಿರೀಕ್ಷೆಗೆ ಧಕ್ಕೆಯಾಗಿದೆ ಎಂಬುದು ನನಗೆ ಅರಿವಾಗಿದೆ. ಆದರೆ ಪ್ರೇಕ್ಷಕರಿಗೆ ನಾನೊಂದು ಮಾತು ಕೊಡುತ್ತೇನೆ, ನಿಮ್ಮ ಆ ನಿರೀಕ್ಷೆಯನ್ನು ನಾನು ಖಂಡಿತವಾಗಿಯೂ ರೀಚ್ ಮಾಡುತ್ತೇನೆ. ಜನ ಕೇಳಿದ್ದನ್ನೆಲ್ಲಾ ಒದಗಿಸುವುದು ನನ್ನ ಧರ್ಮವಲ್ಲ; ಬದಲಿಗೆ ಯಾವುದರಲ್ಲಿ ನನಗೆ ಆತ್ಮತೃಪ್ತಿ ಮತ್ತು ಸಮಾಧಾನ ಸಿಗುತ್ತದೆಯೋ, ಅಂತಹ ಗುಣಮಟ್ಟದ ಕೆಲಸವನ್ನು ಮಾತ್ರ ಜನರಿಗೆ ನೀಡುವ ವರ್ಗದ ವ್ಯಕ್ತಿ ನಾನು" ಎಂದು ಹೇಳಿದ್ದಾರೆ.