ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

‘ಬಿಗ್ ಬಾಸ್‌ 13’ ಮನೆಯಲ್ಲಿ ಮಹಿಳಾ ಸ್ಪರ್ಧಿಗೆ ʻಮೂಳೆ ಮುರಿತೀನಿʼ ಅಂತ ಬೆದರಿಕೆ ಹಾಕಿ, ತೊಡೆ ತಟ್ಟಿದ ಮಂಜನ ನಡೆ ಸರಿಯೇ? ಕಿಚ್ಚನ ಪಂಚಾಯಿತಿ ಮೇಲೆ ವೀಕ್ಷಕರು ಕಣ್ಣು!

Bigg Boss Kannada 13: ಬಿಗ್‌ ಬಾಸ್‌ ಮನೆಯ ಮೊದಲ ವಾರದ ಕಣ್ಗಾವಲು ಟಾಸ್ಕ್ ವೇಳೆ ಸ್ಪರ್ಧಿಗಳ ನಡುವೆ ತೀವ್ರ ಮಾರಾಮಾರಿ ನಡೆದಿದೆ. ಕಾಮನ್ ಮ್ಯಾನ್ ಸ್ಪರ್ಧಿಗಳಾದ ಮಂಜ ಮತ್ತು ಧನುಷ್ ಮಹಿಳಾ ಸ್ಪರ್ಧಿಗಳ ಮೇಲೆ ದಬ್ಬಾಳಿಕೆ ಮಾಡಿದ್ದಾರೆ. ಸೌಂದರ್ಯ ಶೆಟ್ಟಿಗೆ ಮೂಳೆ ಮುರಿಯುವ ಜೀವಬೆದರಿಕೆ ಹಾಕಿ, ಅವರ ಮುಂದೆ ತೊಡೆ ತಟ್ಟಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಮಂಜನ ವಿರುದ್ಧ ಪ್ರೇಕ್ಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೌಂದರ್ಯಗೆ ʻಮೂಳೆ ಮುರಿತೀನಿʼ ಅಂತ ಬೆದರಿಕೆ ಹಾಕಿದ ಮಂಜ; ವೀಕ್ಷಕರು ಗರಂ!

-

Avinash GR
Avinash GR Sep 15, 2026 12:36 PM

‘ಬಿಗ್ ಬಾಸ್' ಮನೆಯೊಳಗೆ ಅಕ್ಷರಶಃ ರಣರಂಗ ಸೃಷ್ಟಿಯಾಗಿದೆ. ಮೊದಲ ವಾರದಲ್ಲೇ ಪೈಲಟ್ ಆಯ್ಕೆಗಾಗಿ ನಡೆದ ‘ಕಣ್ಗಾವಲು’ ಟಾಸ್ಕ್ ವೇಳೆ ಸ್ಪರ್ಧಿಗಳ ನಡುವೆ ತಳ್ಳಾಟ, ಮಾರಾಮಾರಿ ಹಾಗೂ ನೂಕಾಟ ನಡೆದಿದ್ದು, ಸೌಂದರ್ಯ ಶೆಟ್ಟಿ ಮತ್ತು ಮಂಜ ನಡುವಿನ ಕಿತ್ತಾಟ ತಾರಕಕ್ಕೇರಿದೆ. ಈ ನಡುವೆ ಮನೆಯೊಳಗೆ ಕಾಮನ್‌ ಮ್ಯಾನ್ ಸ್ಪರ್ಧಿಗಳ ಗುಂಪುಗಾರಿಕೆ ಬಯಲಾಗಿದ್ದು, ಮಹಿಳಾ ಸ್ಪರ್ಧಿಗಳ ಮೇಲೆ ನಡೆದಿರುವ ಮ್ಯಾನ್‌ಹ್ಯಾಂಡ್ಲಿಂಗ್ ಹಾಗೂ ಬೆದರಿಕೆ ವರ್ತನೆಗೆ ಪ್ರೇಕ್ಷಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಮಂಜ ಮತ್ತು ಧನುಷ್ ಅತಿಯಾದ ಬಲಪ್ರಯೋಗ

ಪೈಲಟ್ ಓಟಕ್ಕಾಗಿ ನಡೆದ ‘ಕಣ್ಗಾವಲು’ ಟಾಸ್ಕ್‌ನಲ್ಲಿ, ಆಕ್ಟಿವಿಟಿ ರೂಮ್‌ನಲ್ಲಿದ್ದ 360 ಡಿಗ್ರಿ ಸರ್ವೆಲೆನ್ಸ್ ಕ್ಯಾಮೆರಾ ಕಣ್ಣು ತಪ್ಪಿಸಿ ಸ್ಪರ್ಧಿಗಳು ಕೆಂಪು ಬಣ್ಣದ ವಸ್ತುಗಳನ್ನು ಸಂಗ್ರಹಿಸಿ ರಕ್ಷಿಸಿಕೊಳ್ಳಬೇಕಿತ್ತು. ಆದರೆ ಬಝರ್ ಆದ ಬಳಿಕ ವಸ್ತುಗಳನ್ನು ಕಾಪಾಡಿಕೊಳ್ಳುವ ವೇಳೆ ಕಾಮನ್ ಮ್ಯಾನ್ ಸ್ಪರ್ಧಿಗಳಾದ ಕಿರಣ್ ಶಾಸ್ತ್ರಿ, ಲಿಖಿತ್ ಗೊಂದಿ ಹಾಗೂ ಮಂಜ ಸಂಘಟಿತರಾಗಿ ಸಂಗೀತಾ ಭಟ್ ಮತ್ತು ಸೌಂದರ್ಯ ಶೆಟ್ಟಿ ಅವರನ್ನು ಗುರಿಯಾಗಿಸಿಕೊಂಡರು. ಸಂಗೀತಾ ಬಳಿಯಿದ್ದ ವಸ್ತುವನ್ನು ಮಂಜ ಕಸಿದುಕೊಂಡಾಗ, "ನಿಮಗೆ ಆಟವಾಡಲು ಬೇರೆ ಯಾರೂ ಕಾಣಿಸುತ್ತಿಲ್ಲವೇ?" ಎಂದು ಆಕ್ರೋಶ ಹೊರಹಾಕಿದರು. ಇತ್ತ ಸೌಂದರ್ಯ ಕೈಯಲ್ಲಿದ್ದ ಬಕೆಟ್ ಕಸಿದುಕೊಳ್ಳಲು ಮಂಜ ಮತ್ತು ಧನುಷ್ ಅತಿಯಾದ ಬಲಪ್ರಯೋಗಕ್ಕೆ ಮುಂದಾದರು.

Kiccha Sudeep: ಸೆ.6ರಿಂದ ‘ಬಿಗ್‌ ಬಾಸ್‌ ಕನ್ನಡ ಸೀಸನ್‌ 13’ ಆರಂಭವಾಗುತ್ತಾ? ಏನಿದು ಗುಸುಗುಸು?

ಗುಂಪುಗಾರಿಕೆ ಪ್ರದರ್ಶಿಸಿದ ಕಾಮನ್ ಮ್ಯಾನ್ ಗ್ಯಾಂಗ್‌

ಈ ತೀವ್ರ ನೂಕಾಟ ಮತ್ತು ಎಳೆದಾಟದ ರಭಸದಲ್ಲಿ ಸೌಂದರ್ಯ ಶೆಟ್ಟಿ ಅವರ ಕೈ ಮಂಜನ ಮುಖಕ್ಕೆ ತಗುಲಿತು. ಇದರಿಂದ ಕೆರಳಿದ ಮಂಜ, "ಮ್ಯಾನ್‌ಹ್ಯಾಂಡ್ಲಿಂಗ್.. ಮ್ಯಾನ್‌ಹ್ಯಾಂಡ್ಲಿಂಗ್" ಎಂದು ಕೂಗಾಡುತ್ತಲೇ ಸೌಂದರ್ಯ ಅವರನ್ನು ಜೋರಾಗಿ ತಳ್ಳಿದರು. ಇದಕ್ಕೆ ಧ್ವನಿಗೂಡಿಸಿದ ಸಂಗೀತಾ, "ನೀವು ಮ್ಯಾನ್‌ಹ್ಯಾಂಡ್ಲಿಂಗ್ ಮಾಡಿಲ್ವಾ? ನನಗೂ ಜೋರಾಗಿ ಪರಚಿದ್ದೀರಲ್ಲ!" ಎಂದು ತಿರುಗೇಟು ನೀಡಿದರು.

ಇಷ್ಟಕ್ಕೇ ಸುಮ್ಮನಾಗದ ಮಂಜ ಹಾಗೂ ಧನುಷ್, ಸೌಂದರ್ಯ ಬಳಿಯಿದ್ದ ರಿಂಗ್ ಕಿತ್ತುಕೊಳ್ಳಲು ಮಹಿಳಾ ಸ್ಪರ್ಧಿಯೆಂಬ ಕನಿಷ್ಠ ಮರ್ಯಾದೆಯೂ ಇಲ್ಲದೆ ತೀವ್ರವಾಗಿ ಜಗ್ಗಾಡಿದರು. "ಧನುಷ್ ಬಳಿ ದೊಡ್ಡ ದೊಡ್ಡ ವಸ್ತುಗಳಿವೆ, ಹೋಗಿ ಕಿತ್ತುಕೊಳ್ಳಿ" ಎಂದು ಸಂಗೀತಾ ಹೇಳಿದರೂ, ಕಾಮನ್ ಮ್ಯಾನ್ ಗ್ಯಾಂಗ್‌ನ ಯಾರೊಬ್ಬರೂ ಅವರ ಹತ್ತಿರ ಸುಳಿಯದೆ ಸಂಪೂರ್ಣ ಗುಂಪುಗಾರಿಕೆ ಪ್ರದರ್ಶಿಸಿದರು.

ವಿಕೃತಿ ಮೆರೆದ ಮಂಜ

ವಸ್ತುಗಳನ್ನು ಕಸಿದುಕೊಳ್ಳಲು ಸಾಧ್ಯವಾಗದಿದ್ದಾಗ ಮಂಜನ ಅಸಹನೆ ಮಿತಿಮೀರಿತು. "ಮುಖ ಮುಖಕ್ಕೇ ಎರಡು ಸಲ ಹೊಡೆದಳು. ನಮ್ಮ ಅಪ್ಪ-ಅಮ್ಮನೇ ನನ್ನ ಮೇಲೆ ಕೈ ಮಾಡಿಲ್ಲ. ಇವಳ ಮೈಯಲ್ಲಿ 30 ಕೆಜಿ ಮಾಂಸವೂ ಇಲ್ಲ, ಒಂದೇ ಏಟಿಗೆ ಎತ್ತಿ ಕುಕ್ಕಿಬಿಡ್ತಾ ಇದ್ದೆ. ಹೆಣ್ಣುಮಗು ಅಂತ ಬಿಟ್ಟೆ, ಇಲ್ಲದಿದ್ದರೆ ಮೂಳೆಗಳನ್ನೆಲ್ಲ ಲಟ-ಲಟ ಅಂತ ಮುರಿದುಬಿಡ್ತಿದ್ದೆ!" ಎಂದು ಸೌಂದರ್ಯ ಎದುರು ಅಬ್ಬರಿಸಿದರು.

ಅಲ್ಲದೆ ವ್ಯವಸ್ಥಾಪಕರನ್ನು "50 ಪೈಸೆಗೆ ಪ್ರಯೋಜನವಿಲ್ಲದವರು" ಎಂದು ನಿಂದಿಸಿ, ಸೌಂದರ್ಯ ಅವರ ತೀರಾ ಹತ್ತಿರಕ್ಕೆ ನುಗ್ಗಿ ಜೀವಬೆದರಿಕೆಯ ಧಾಟಿಯಲ್ಲಿ ಬೆರಳು ತೋರಿಸಿ ಆಕ್ರೋಶ ಹೊರಹಾಕಿದರು. ನಂತರ ಸಂಗೀತಾ ಭಟ್ ಗ್ರೂಪಿಸಂ ಬಗ್ಗೆ ಪ್ರಶ್ನಿಸಿದಾಗ "ವುಮನ್ ಕಾರ್ಡ್" ಎನ್ನುತ್ತಾ, "ಒಳಗೆ ಕೂತು ಕೂಗಾಡುವುದಲ್ಲ, ಗಂಡಸ್ತನ ಇದ್ದರೆ ಎದುರು ನಿಲ್ಲಬೇಕು" ಎಂದು ತೊಡೆ ತಟ್ಟಿ, ಅಸಭ್ಯವಾಗಿ ಸನ್ನೆ ಮಾಡಿ ವಿಕೃತಿ ಮೆರೆದರು.

ಇದು ಮಿತಿಮೀರಿದ ಅತಿರೇಕದ ವರ್ತನೆ

ಟಾಸ್ಕ್‌ನ ಭರದಲ್ಲಿ ಕೈಮಾಡಿದ ಸೌಂದರ್ಯ ಶೆಟ್ಟಿ, ಆಟ ಮುಗಿದ ತಕ್ಷಣವೇ ತಮ್ಮ ತಪ್ಪಿನ ಅರಿವಾಗಿ ಪಶ್ಚಾತ್ತಾಪ ವ್ಯಕ್ತಪಡಿಸಿ ಕ್ಷಮೆಯಾಚಿಸಿದ್ದಾರೆ. ಆದರೆ, ಟಾಸ್ಕ್ ನೆಪದಲ್ಲಿ ಮಹಿಳಾ ಸ್ಪರ್ಧಿಯ ಕೈಯಲ್ಲಿದ್ದ ವಸ್ತುವನ್ನು ಬಲವಂತವಾಗಿ ಎಳೆದಾಡಿದ ಧನುಷ್ ಅವರ ವರ್ತನೆ ಹಾಗೂ ಎತ್ತಿ ಕುಕ್ಕುವ, ಮೂಳೆ ಮುರಿಯುವ ಬೆದರಿಕೆ ಹಾಕಿ ಅಸಭ್ಯವಾಗಿ ವರ್ತಿಸಿದ ಮಂಜನ ರೌಡಿಸಂ ಯಾವುದೇ ಕಾರಣಕ್ಕೂ ಕ್ಷಮಾರ್ಹವಲ್ಲ ಎಂಬ ಅಭಿಪ್ರಾಯ ವೀಕ್ಷಕರಿಂದ ವ್ಯಕ್ತವಾಗಿದೆ.

ಹಿಂದಿನ ಸೀಸನ್‌ಗಳಲ್ಲಿ ಇಂತಹ ಮಿತಿಮೀರಿದ ಅತಿರೇಕದ ವರ್ತನೆಗಳಿಗೆ ನಟ ಕಿಚ್ಚ ಸುದೀಪ್ ಕಠಿಣ ಶಿಕ್ಷೆ ವಿಧಿಸಿದ ಉದಾಹರಣೆಗಳಿವೆ. ಹೀಗಾಗಿ ಈ ವಾರಾಂತ್ಯದ ಪಂಚಾಯಿತಿಯಲ್ಲಿ ಸುದೀಪ್ ಈ ಸ್ಪರ್ಧಿಗಳಿಗೆ ಸರಿಯಾಗಿ ಕ್ಲಾಸ್‌ ತೆಗೆದುಕೊಳ್ಳದ್ದಾರಾ? ಕಾದುನೋಡಬೇಕಿದೆ.