BBK 13: ಗಗನ್ ಚಿನ್ನಪ್ಪ, ತಾಂಡವ್‌ಗೆ ಬಿಗ್ ಶಾಕ್ ನೀಡಿದ ಕಿರಣ್ ಶಾಸ್ತ್ರಿ; ಸ್ಪರ್ಧಿಗಳ ಲೆಕ್ಕಾಚಾರ ಉಲ್ಟಾ ಮಾಡಿದ 'ಬಿಗ್ ಬಾಸ್'!
ಬಿಗ್ ಬಾಸ್ ಕ್ಯಾಪ್ಟನ್ಸಿ ರೇಸ್‌ನಲ್ಲಿ ಅನಿರೀಕ್ಷಿತ ತಿರುವು ಸಿಕ್ಕಿದ್ದು, ಪ್ರಬಲ ಸ್ಪರ್ಧಿಗಳಾದ ಗಗನ್ ಚಿನ್ನಪ್ಪ ಮತ್ತು ತಾಂಡವ್ ರಾಮ್ ಹೊರಬಿದ್ದಿದ್ದಾರೆ. ದಿನಸಿ ಖರೀದಿಯ ‘ಬಿಗ್ ಪೇಟೆ’ ಟಾಸ್ಕ್‌ನಲ್ಲಿ ಕಿರಣ್ ಶಾಸ್ತ್ರಿ ಚಾಣಾಕ್ಷ ನಡೆ ಇಡೀ ಮನೆಯ ಲೆಕ್ಕಾಚಾರವನ್ನೇ ಬದಲಿಸಿತು. ಜಗದೀಶ್ ಮತ್ತು ಅವಿನಾಶ್ ಸುಲಭವಾಗಿ ಸ್ಥಾನ ತ್ಯಾಗ ಮಾಡಿದ್ದು ಅಚ್ಚರಿ ಮೂಡಿಸಿತು.
-
‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋ ಆರಂಭದಲ್ಲೇ ರಣರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಸಾಮಾನ್ಯವಾಗಿ ಪ್ರತಿ ಸೀಸನ್‌ನಲ್ಲೂ ದಿನಸಿ ಹೊಂದಿಸುವ ವಿಚಾರದಲ್ಲಿ ಮನೆ ಮಂದಿ ಲೆಕ್ಕಾಚಾರ ತಪ್ಪಿ ಉಪವಾಸ ಬೀಳುವ ಸನ್ನಿವೇಶಗಳು ಎದುರಾಗುತ್ತಿದ್ದವು. ಆದರೆ ಈ ಬಾರಿ ಬಿಗ್ ಬಾಸ್ ದಿನಸಿ ಖರೀದಿಯ ನೆಪದಲ್ಲೇ ಮಾಸ್ಟರ್ ಮೈಂಡ್ ಗೇಮ್ ಆಡಿ ಸ್ಪರ್ಧಿಗಳ ಲೆಕ್ಕಾಚಾರವನ್ನು ಸಂಪೂರ್ಣ ಬುಡಮೇಲು ಮಾಡಿದ್ದಾರೆ. ಆಕ್ಟಿವಿಟಿ ರೂಮ್‌ನಲ್ಲಿ ಸೃಷ್ಟಿಸಲಾಗಿದ್ದ ‘ಬಿಗ್ ಪೇಟೆ’ ಮಾರುಕಟ್ಟೆಯಲ್ಲಿ ನಡೆದ ಈ ಸಂತೆ ಟಾಸ್ಕ್‌ನ ಪರಿಣಾಮವಾಗಿ, ಮನೆಯ ಬಲಿಷ್ಠ ಸ್ಪರ್ಧಿಗಳೆಂದು ಬಿಂಬಿತವಾಗಿದ್ದ ಗಗನ್ ಚಿನ್ನಪ್ಪ ಹಾಗೂ ತಾಂಡವ್ ರಾಮ್ ಮೊದಲ ವಾರವೇ ಕ್ಯಾಪ್ಟನ್ ಪಟ್ಟದ ರೇಸ್‌ನಿಂದ ಹೊರಬಿದ್ದು ಶಾಕ್ ಅನುಭವಿಸಿದ್ದಾರೆ.
ಸಂತೆಯಲ್ಲಿ ಅಸಲಿ ಟ್ಟಿಸ್ಟ್
ಮನೆಯವರೆಲ್ಲರೂ ಸಮಾಲೋಚನೆ ನಡೆಸಿ ಆಕ್ಟಿವಿಟಿ ರೂಮ್‌ಗೆ ಸೌಂದರ್ಯ ಶೆಟ್ಟಿ, ಅವಿನಾಶ್ ಶಠಮರ್ಷಣ್, ಕಿರಣ್ ಶಾಸ್ತ್ರಿ, ಜಗದೀಶ್ (ಜಗ್ಗಾ ಮಮ್ಮಿ), ವೈಷ್ಣವಿ ಕೌಂಡಿನ್ಯ ಹಾಗೂ ಕಾವ್ಯ ಗೌಡ ಅವರನ್ನು ನಿಯೋಜಿಸಿದ್ದರು. ಜೋಡಿಯಾಗಿ ಒಳಗೆ ಬಂದ ಸ್ಪರ್ಧಿಗಳಿಗೆ ದಿನಸಿ ಖರೀದಿಯ ನಂತರ ಬಿಗ್ ಬಾಸ್ ಅಸಲಿ ಟ್ವಿಸ್ಟ್ ಬಹಿರಂಗಪಡಿಸಿದರು.
ಗಗನ್, ತಾಂಡವ್‌ಗೆ ಕಿರಣ್ ಗುನ್ನ
ಮೊದಲ ಜೋಡಿಯಾಗಿ ತೆರಳಿದ ಕಿರಣ್ ಶಾಸ್ತ್ರಿ ಮತ್ತು ಜಗದೀಶ್ ಅವರಿಗೆ, "ನಿಮ್ಮಿಬ್ಬರಲ್ಲಿ ಪೈಲಟ್ (ಕ್ಯಾಪ್ಟನ್) ರೇಸ್‌ಗೆ ಯಾರು ಸ್ಪರ್ಧಿ? ಮತ್ತೊಬ್ಬರ ಹೆಸರು ಯಾರನ್ನು ಸೂಚಿಸುತ್ತೀರಾ? ಹಾಗೂ ಯಾರನ್ನು ಈ ಓಟದಿಂದ ಬ್ಲಾಕ್ ಮಾಡುತ್ತೀರಾ?" ಎಂಬ ಮೂರು ಕಠಿಣ ಆಯ್ಕೆಗಳನ್ನು ಮುಂದಿಡಲಾಯಿತು. ಈ ವೇಳೆ ಕಿರಣ್ ಶಾಸ್ತ್ರಿ ಚಾಣಾಕ್ಷತನ ಮೆರೆದರೆ, ಕ್ಯಾಪ್ಟನ್ಸಿ ಮಹತ್ವವನ್ನೇ ಅರಿಯದ ಜಗದೀಶ್ ಕಿಂಚಿತ್ತೂ ವಾದ ಮಾಡದೆ ಅವಕಾಶವನ್ನು ಬಿಟ್ಟುಕೊಟ್ಟರು. ಇದರ ಸಂಪೂರ್ಣ ಲಾಭ ಪಡೆದ ಕಿರಣ್, ತಾವೇ ಕಂಟೆಂಡರ್ ಆಗಿ ಮತ್ತೊಂದು ಸ್ಥಾನಕ್ಕೆ ಸಂಗೀತಾ ಭಟ್ ಹೆಸರನ್ನು ಸೂಚಿಸಿದ್ದಲ್ಲದೆ, ಪ್ರಬಲ ಸ್ಪರ್ಧಿಗಳಾದ ಲಿಖಿತ್, ಗಗನ್ ಚಿನ್ನಪ್ಪ ಮತ್ತು ತಾಂಡವ್ ರಾಮ್ ಅವರನ್ನು ನೇರವಾಗಿ ಕ್ಯಾಪ್ಟನ್ಸಿ ರೇಸ್‌ನಿಂದ ಬ್ಲಾಕ್ ಮಾಡಿದರು.
Bigg Boss Kannada 13: ಬಿಗ್ ಬಾಸ್ ಸೀಸನ್ 13ರ ಆರಂಭಕ್ಕೆ ಡೇಟ್ ಫಿಕ್ಸ್! ಸರ್ಪ್ರೈಸ್ ಕೊಟ್ಟ ಕಿಚ್ಚ
ಧನುಷ್ - ಲಿಖಿತ್‌ಗೆ ಚಾನ್ಸ್
ನಂತರ ಸಂತೆ ಪ್ರವೇಶಿಸಿದ ಅವಿನಾಶ್ - ಸೌಂದರ್ಯ ಶೆಟ್ಟಿ ಜೋಡಿಯಲ್ಲೂ ಯಾವುದೇ ಪೈಪೋಟಿ ಕಾಣಿಸಲಿಲ್ಲ. ಅವಿನಾಶ್ ಸುಲಭವಾಗಿ ಹಿಂದೆ ಸರಿದು ಸೌಂದರ್ಯಗೆ ಅವಕಾಶ ಬಿಟ್ಟುಕೊಟ್ಟರು. ಸೌಂದರ್ಯ ತಮ್ಮೊಂದಿಗೆ ಮಹಾಕವಿ ಮಂಜ ಅವರ ಹೆಸರನ್ನು ಆರಿಸಿಕೊಂಡು, ವೈಷ್ಣವಿ, ಧನುಷ್ ಹಾಗೂ ಕಾವ್ಯ ಗೌಡ ಅವರನ್ನು ಕ್ಯಾಪ್ಟನ್ಸಿ ಓಟದಿಂದ ಬ್ಲಾಕ್ ಮಾಡಿದರು. ಕೊನೆಯ ಜೋಡಿಯಾಗಿ ಒಳಗೆ ಹೋದ ವೈಷ್ಣವಿ ಮತ್ತು ಕಾವ್ಯ ಅವರಿಗೆ ಬಿಗ್ ಬಾಸ್ ಆಘಾತಕಾರಿ ಸುದ್ದಿ ತಿಳಿಸಿದರು. "ನೀವಿಬ್ಬರೂ ಕ್ಯಾಪ್ಟನ್ಸಿ ರೇಸ್‌ಗೆ ಅರ್ಹರಲ್ಲ ಎಂದು ಈಗಾಗಲೇ ಬ್ಲಾಕ್ ಆಗಿದ್ದೀರಿ" ಎಂದು ಎಚ್ಚರಿಸಿದ ಬಿಗ್ ಬಾಸ್, ಬ್ಲಾಕ್ ಆಗಿರುವವರ ಪೈಕಿ ಇಬ್ಬರನ್ನು ಮರಳಿ ರೇಸ್‌ಗೆ ತರುವ ವಿಶೇಷ ಅಧಿಕಾರವನ್ನು ಅವರಿಬ್ಬರಿಗೆ ನೀಡಿದರು. ಆಗ ವೈಷ್ಣವಿ ಮತ್ತು ಕಾವ್ಯ ಚರ್ಚಿಸಿ ಧನುಷ್ ಹಾಗೂ ಲಿಖಿತ್ ಅವರನ್ನು ಮತ್ತೆ ಪೈಲಟ್ ರೇಸ್‌ಗೆ ಸೇರ್ಪಡೆಗೊಳಿಸಿದರು.
ಸಾಮಾನ್ಯ ಕೆಟಗರಿ ಸ್ಪರ್ಧಿಗಳ ಹಾವಳಿ
ಆದರೆ ಗಗನ್ ಚಿನ್ನಪ್ಪ ಹಾಗೂ ತಾಂಡವ್ ರಾಮ್ ಅವರ ಹೆಸರನ್ನು ಯಾರೊಬ್ಬರೂ ಪುನಃ ಪರಿಗಣಿಸದ ಕಾರಣ, ಇಬ್ಬರೂ ಮೊದಲ ಕ್ಯಾಪ್ಟನ್ ಆಗುವ ಸುವರ್ಣಾವಕಾಶವನ್ನು ಕಳೆದುಕೊಂಡು ನೇರವಾಗಿ ರೇಸ್‌ನಿಂದ ಹೊರಬಿದ್ದರು. ಅಂತಿಮವಾಗಿ ಕಿರಣ್ ಶಾಸ್ತ್ರಿ, ಸಂಗೀತಾ ಭಟ್, ಸೌಂದರ್ಯ ಶೆಟ್ಟಿ, ಮಂಜು, ಲಿಖಿತ್ ಗೌಡ ಹಾಗೂ ಧನುಷ್ ಮೊದಲ ವಾರದ ಪೈಲಟ್ ಕಂಟೆಂಡರ್ ಆಗಿ ಆಯ್ಕೆಯಾದರು.
ಸುದೀಪ್ ಕ್ಲಾಸ್ ಗ್ಯಾರಂಟಿ!
ಮನೆಯ ಅಧಿಕಾರ ಚಲಾಯಿಸುವ ಮಹತ್ವದ ಕ್ಯಾಪ್ಟನ್ಸಿಗಾಗಿ ಜಗದೀಶ್ ಮತ್ತು ಅವಿನಾಶ್ ಯಾವುದೇ ಪೈಪೋಟಿ ನೀಡದೆ ಸುಲಭವಾಗಿ ತ್ಯಾಗ ಮಾಡಿದ್ದು ಪ್ರೇಕ್ಷಕರಲ್ಲಿ ತೀವ್ರ ಅಚ್ಚರಿ ಮೂಡಿಸಿದೆ. ಸ್ಪರ್ಧಿಗಳು ತೋರಿದ ಈ ಅತಿಯಾದ ನಿರ್ಲಕ್ಷ್ಯ ಹಾಗೂ ಜಾಣ್ಮೆಯ ಕೊರತೆ ಮುಂಬರುವ ‘ಕಿಚ್ಚನ ಪಂಚಾಯಿತಿ’ಯಲ್ಲಿ ಕಿಚ್ಚ ಸುದೀಪ್ ಅವರ ಖಡಕ್ ಕ್ಲಾಸ್‌ಗೆ ಗುರಿಯಾಗುವುದು ಖಚಿತ ಎನ್ನಲಾಗುತ್ತಿದೆ.