ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

‘ಬಿಗ್ ಬಾಸ್ ನೋಡುವವರಿಗೆ ಮುಜುಗರ ಆಗಬಾರದು...’; ‘ಮಹಾ ಕಳಪೆ’ ಮಂಜನಿಗೆ ಮತ್ತೆ ಜೈಲಿನ ದಾರಿ ತೋರಿಸಿದ ಸ್ಪರ್ಧಿಗಳು!

Bigg Boss Kannada 13: ʻಬಿಗ್‌ ಬಾಸ್‌ʼ ಮನೆಯಲ್ಲಿ ‘ಮಹಾಕವಿ’ ಎಂದೇ ಗುರುತಿಸಿಕೊಂಡಿದ್ದ ಮಂಜ, ತಮ್ಮ ಅಸಭ್ಯ ನಡವಳಿಕೆಯಿಂದಾಗಿ ಸತತ ಎರಡನೇ ವಾರವೂ ‘ಕಳಪೆ’ ಪಟ್ಟ ಹೊತ್ತು ಜೈಲುಪಾಲಾಗಿದ್ದಾರೆ. ಟಾಸ್ಕ್ ವೇಳೆ ಪ್ರಾಪರ್ಟಿ ಹಾನಿ ಮಾಡಿದ್ದಲ್ಲದೆ, ಯಶಸ್‌ ವಿರುದ್ಧ ಅಶ್ಲೀಲ ಶಬ್ದಗಳನ್ನು ಪ್ರಯೋಗಿಸಿ ಮನೆಯ ಸದಸ್ಯರ ಹಾಗೂ ವೀಕ್ಷಕರ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

BBK 13: ʻಮಹಾ ಕಳಪೆʼ ಮಂಜನಿಗೆ ಮತ್ತೆ ಜೈಲಿನ ದಾರಿ ತೋರಿಸಿದ ಸ್ಪರ್ಧಿಗಳು!

-

Avinash GR
Avinash GR Oct 9, 2026 3:28 PM

ಬಿಗ್ ಬಾಸ್ ಕನ್ನಡ ಸೀಸನ್ 13ರ ಶೋಗೆ ‘ಮಹಾಕವಿ’ ಹೆಸರಿನಲ್ಲಿ ಒಳಗೆ ಬಂದವರು ಮಂಜ. ಆದರೆ ಅವರೀಗ ‘ಮಹಾ ಕಳಪೆ’ ಎನಿಸಿಕೊಳ್ಳುವ ಹಾದಿಯಲ್ಲಿದ್ದಾರೆ. ಹೌದು, ಕಳೆದ ವಾರ ಕೂಡ ಮಂಜ ಕಳಪೆ ಪಟ್ಟ ಹೊತ್ತು ಜೈಲು ಸೇರಿದ್ದರು. ಅವರ ವರ್ತನೆ ಎಲ್ಲರಿಗೂ ರೇಜಿಗೆ ಹುಟ್ಟಿಸಿತ್ತು. ದುರಂತವೆಂದರೆ, ಈ ವಾರವೂ ಮಂಜ ಕಳಪೆ ಎನಿಸಿಕೊಂಡಿದ್ದು, ಪುನಃ ಜೈಲಿನತ್ತ ಮುಖ ಮಾಡಿದ್ದಾರೆ. ಈ ಬಾರಿ ಅವರನ್ನು ಜೈಲಿಗೆ ಕಳುಹಿಸುವುದಕ್ಕೆ ಸಹ-ಸ್ಪರ್ಧಿಗಳ ಬಳಿ ಸಾಕಷ್ಟು ಬಲವಾದ ಕಾರಣಗಳೇ ಇವೆ.

ಹೊಸ ಪ್ರೋಮೋ ಬಿಡುಗಡೆ ಮಾಡಿದ ಕಲರ್ಸ್ ಕನ್ನಡ

ಕಲರ್ಸ್ ಕನ್ನಡ ವಾಹಿನಿಯು ಹೊಸ ಪ್ರೋಮೋ ಬಿಡುಗಡೆ ಮಾಡಿದೆ. ಅದರಲ್ಲಿ ಮಂಜನಿಗೆ ಕಳಪೆ ನೀಡಿರುವುದು ಸ್ಪಷ್ಟವಾಗಿದೆ. ಅದರಲ್ಲೂ ಯಶಸ್‌ ಕೃಷ್ಣ ಅಂತೂ ಮಂಜನ ಮೇಲೆ ಉರಿದುಬಿದ್ದಿದ್ದಾರೆ. "ಈ ವಾರದ ಕಳಪೆ ಮಂಜುನಾಥ್.. ಇವರಿಗೆ ಸೋಲು ಒಪ್ಪಿಕೊಳ್ಳಲು ಆಗಲ್ಲ. ಗೆಲುವನ್ನು ಹೇಗೆ ಸ್ವೀಕರಿಸುತ್ತಾರೋ, ಒಬ್ಬ ಮನುಷ್ಯ ಸೋಲನ್ನೂ ಹಾಗೆಯೇ ಸ್ವೀಕರಿಸಬೇಕು. ನನ್ನ ಪ್ರಕಾರ ಪದಗಳನ್ನು ಬಳಸುವುದರಲ್ಲಿ ಮಿತಿಗಳು ಇರಬೇಕು. ಇದು ಕರ್ನಾಟಕದಾದ್ಯಂತ ಪ್ರಸಾರವಾಗುವುದರಿಂದ ಲಕ್ಷಾಂತರ ಮಂದಿ ನೋಡುತ್ತಾರೆ. ನೋಡುವವರಿಗೆ ಮುಜುಗರ ಅನಿಸಬಾರದು" ಎಂದು ಹೇಳಿದ್ದಾರೆ.

ಇನ್ನು, ಟಾಸ್ಕ್‌ನಲ್ಲಿ ಪ್ರಾಪರ್ಟಿ ಹಾಳುಮಾಡಿದ ಮಂಜನ ವರ್ತನೆಯನ್ನು ಪ್ರಶಾಂತ್ ಗೌಡ ಖಂಡಿಸಿದ್ದಾರೆ. "ಟಾಸ್ಕ್‌ಗಾಗಿ ರೂಪಿಸಿದ ಆ ವಸ್ತುಗಳನ್ನು ಮುರಿದು ಹಾಕಿದ್ದಾರೆ.. ನಾವು ಅದಕ್ಕೆ ನೀಡುವ ಗೌರವ ಇದಲ್ಲ" ಎಂದು ದೂರಿದ್ದಾರೆ. ಇತ್ತ ಸೌಂದರ್ಯಾ ಶೆಟ್ಟಿ, "ಇದು ಯಾವ ಮಟ್ಟಕ್ಕೆ ಹೋಗುತ್ತಿದೆ, ಎಂತಹ ಕೀಳುಮಟ್ಟಕ್ಕೆ ಇಳಿಯುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ.." ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

BBK13: ವೋಟಿಂಗ್ ಇಲ್ಲದೆ ಮಂಜು-ಕಿರಣ್ ಔಟ್? ಏನಿದು ಟ್ವಿಸ್ಟ್?

ಅಷ್ಟಕ್ಕೂ ಮಂಜ ಮಾಡಿದ್ದೇನು?

ಈ ವಾರ ಬಿಗ್ ಬಾಸ್ ಮನೆಯಲ್ಲಿ ‘ರಾಕ್ಷಸರು ವರ್ಸಸ್ ಗಂಧರ್ವರು’ ಎಂಬ ಟಾಸ್ಕ್ ನೀಡಲಾಗಿತ್ತು. ಇದರಲ್ಲಿ ರಾಕ್ಷಸನಾಗಿ ರಾಕ್ಷಸತ್ವ ತೋರಿದ್ದ ಮಂಜ, ಆನಂತರ ಗಂಧರ್ವನಾಗಿದ್ದರು. ಈ ನಡುವೆ ರಾಕ್ಷಸ ತಂಡದಲ್ಲಿದ್ದ ಯಶಸ್‌ ಜೊತೆ ಮಂಜ ಜಗಳ ಮಾಡಿಕೊಂಡಿದ್ದಾರೆ. ಆ ವೇಳೆ ಬಾಯಿಗೆ ಬಂದಂತೆ ಅಶ್ಲೀಲ ಬೈಗುಳಗಳ ಮಳೆ ಸುರಿಸಿದ್ದಾರೆ. ಯಶಸ್‌ ಅವರನ್ನು 'ಕಾಮುಕ' ಎಂದು ಕರೆದು, ಸರಣಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಆ ಕೆಟ್ಟ ಪದಗಳ ತೀವ್ರತೆ ಎಷ್ಟಿತ್ತೆಂದರೆ, ‘ಬಿಗ್ ಬಾಸ್’ ಆ ಸಂಭಾಷಣೆಯನ್ನು ಪ್ರಸಾರ ಮಾಡಲು ಸಾಧ್ಯವಾಗದೆ ದೀರ್ಘ ಸಮಯದವರೆಗೆ 'ಬೀಪ್' ಸದ್ದು ಹಾಕಬೇಕಾಯಿತು.

ಯಶಸ್‌ ವಿರುದ್ಧ ಮಂಜ ಅಸಭ್ಯ ಮತ್ತು ನಿಂದನೀಯ ಪದಗಳನ್ನು ಬಳಸುತ್ತಿರುವುದು ಮನೆಯ ವಾತಾವರಣವನ್ನೇ ಕೆಡಿಸಿದೆ. ಟಾಸ್ಕ್ ವೇಳೆ ಮಾತ್ರವಲ್ಲದೆ ಸಾಮಾನ್ಯ ಮಾತುಕತೆಯಲ್ಲೂ ಅವರು ತಾಳ್ಮೆ ಕಳೆದುಕೊಂಡು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಿಗ್ ಬಾಸ್ ನಿಯಮಗಳ ಪ್ರಕಾರ ಮನೆಯಲ್ಲಿ ಶಿಸ್ತು ಮತ್ತು ಗೌರವಯುತ ಭಾಷೆ ಅತ್ಯಗತ್ಯ. ಆದರೆ, ಮಂಜ ಬಳಸುತ್ತಿರುವ ನಿಂದನೆಗಳು ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು, "ಇಂತಹ ವರ್ತನೆಯನ್ನು ಬಿಗ್ ಬಾಸ್ ಮನೆಯಲ್ಲಿ ಸಹಿಸಲು ಸಾಧ್ಯವೇ ಇಲ್ಲ" ಎಂದು ಕಿಡಿಕಾರಿದ್ದಾರೆ.