ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

BBK 13: ‘ಸೌಂದರ್ಯ ಹುಚ್ಚುಹುಚ್ಚಾಗಿ ಆಡೋದು ನಂಗೆ ಇಷ್ಟ ಆಗ್ತಿರ್ಲಿಲ್ಲ’; ʻಬಿಗ್ ಬಾಸ್ʼ ಮನೆಯೊಳಗಿನ ಅಸಲಿ ಮುಖ ಬಿಚ್ಚಿಟ್ಟ ನಟಿ ವೈಷ್ಣವಿ ಕೌಂಡಿನ್ಯ!

Bigg Boss Kannada 13: ಬಿಗ್‌ ಬಾಸ್‌ ಕನ್ನಡ 13 ರಿಯಾಲಿಟಿ ಶೋನಿಂದ ಆಚೆ ಬಂದ ನಟಿ ವೈಷ್ಣವಿ ಕೌಂಡಿನ್ಯ, ಸಹಸ್ಪರ್ಧಿ ಸೌಂದರ್ಯ ಅವರ ಬಗ್ಗೆ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ. ಮನೆಯೊಳಗೆ ಅಭದ್ರತೆಗಿಂತ ಪರಸ್ಪರ ಈಗೋ ಹೆಚ್ಚಾಗಿತ್ತು ಎಂದು ಹೇಳಿರುವ ಅವರು, ಸೌಂದರ್ಯ ಅವರ ಸಹಾನುಭೂತಿ ಇಲ್ಲದ ಹುಚ್ಚು ವರ್ತನೆ ಇಷ್ಟವಾಗಲಿಲ್ಲ ಎಂದಿದ್ದಾರೆ.

ಎಲಿಮಿನೇಷನ್ ಬೆನ್ನಲ್ಲೇ ಸೌಂದರ್ಯ ವಿರುದ್ಧ ಗುಡುಗಿದ ವೈಷ್ಣವಿ ಕೌಂಡಿನ್ಯ

-

Avinash GR
Avinash GR Sep 29, 2026 3:39 PM

‘ಬಿಗ್ ಬಾಸ್’ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದಿರುವ ನಟಿ ವೈಷ್ಣವಿ ಕೌಂಡಿನ್ಯ ಸಹಸ್ಪರ್ಧಿಗಳ ವರ್ತನೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ‘ವಿಶ್ವವಾಣಿ ಟಿವಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಅವರು, ಮನೆಯೊಳಗಿನ ವಾತಾವರಣ, ಸಹಸ್ಪರ್ಧಿಗಳ ವರ್ತನೆ ಹಾಗೂ ಮುಖ್ಯವಾಗಿ ಸೌಂದರ್ಯ ಅವರ ಜೊತೆಗಿನ ಶೀತಲ ಸಮರದ ಬಗ್ಗೆ ಹಲವು ಅಚ್ಚರಿಯ ಸಂಗತಿಗಳನ್ನು ತಿಳಿಸಿದ್ದಾರೆ.

ಸೌಂದರ್ಯ ನಡವಳಿಕೆಗಳು ನನಗೆ ಇಷ್ಟವಾಗುತ್ತಿರಲಿಲ್ಲ

ಬಿಗ್‌ ಬಾಸ್‌ ಮನೆಯೊಳಗಿನ ಸ್ಪರ್ಧಿಗಳ ಬಗ್ಗೆ ಮಾತನಾಡಿದ ವೈಷ್ಣವಿ, "ಅಲ್ಲಿ ಯಾರಿಗೂ ಅಭದ್ರತೆ ಇರಲಿಲ್ಲ, ಎಲ್ಲರೂ ತುಂಬಾ ಸೆಕ್ಯೂರ್ ಆಗಿಯೇ ಇದ್ದೆವು. ನನಗೂ ನನ್ನ ಬಗ್ಗೆ ಪೂರ್ಣ ಆತ್ಮವಿಶ್ವಾಸವಿತ್ತು, ಉಳಿದವರಿಗೂ ಅವರವರ ಸಾಮರ್ಥ್ಯದ ಮೇಲೆ ಭರವಸೆಯಿತ್ತು. ಆದರೆ ಅಲ್ಲಿ ಹೆಚ್ಚಾಗಿದ್ದದ್ದು ಈ ಈಗೋ ಸಮಸ್ಯೆಗಳು ಮಾತ್ರ. ನನಗೂ ಮತ್ತು ಸೌಂದರ್ಯಗೂ ಮೊದಲಿಂದಲೂ ಅಷ್ಟಾಗಿ ಹೊಂದಾಣಿಕೆ ಆಗುತ್ತಿರಲಿಲ್ಲ. ಅವರ ಕೆಲವೊಂದು ನಡವಳಿಕೆಗಳು, ಹಾವಭಾವಗಳು, ಯಾವುದೇ ಸಹಾನುಭೂತಿ ಇಲ್ಲದೆ ಹುಚ್ಚುಹುಚ್ಚಾಗಿ ವರ್ತಿಸುವುದು ನನಗೆ ಕಿಂಚಿತ್ತೂ ಇಷ್ಟವಾಗುತ್ತಿರಲಿಲ್ಲ. ಅವರದ್ದು ಒಂಥರಾ ಕ್ಲಾಸ್‌ಲೆಸ್ ಬಿಹೇವಿಯರ್ ಅನ್ನಿಸುತ್ತಿತ್ತು" ಎಂದು ನೇರವಾಗಿಯೇ ಕಿಡಿಕಾರಿದ್ದಾರೆ.

Bigg Boss Kannada 13: ‘ಬಿಗ್‌ ಬಾಸ್‌ ಸೀಸನ್‌ 13’ ಎಂಟ್ರಿಗೂ ಮುನ್ನ ನಟಿ ಆಸಿಯಾ ಫಿರ್ದೋಸ್ ಸೀರಿಯಲ್‌ ತಂಡದ ಕುರಿತು ಹೇಳಿದ್ದೇನು?

ಸೌಂದರ್ಯ ಬಗ್ಗೆ ಪಾಸಿಟಿವ್ ಎನರ್ಜಿ ಇಲ್ಲ

ಹೊರಗಿನಿಂದ ನೋಡುವಷ್ಟು ತೀವ್ರ ಜಗಳಗಳು ಒಳಗೆ ನಡೆಯದಿದ್ದರೂ, ಸೌಂದರ್ಯ ಜೊತೆಗಿನ ಸಂಘರ್ಷ ನಿರಂತರವಾಗಿತ್ತು ಎಂದು ಸ್ಪಷ್ಟಪಡಿಸಿದ ವೈಷ್ಣವಿ ಅವರು, "ಸ್ಕ್ರೀನ್ ಮೇಲೆ ಕಂಡಷ್ಟು ದೊಡ್ಡ ಜಗಳಗಳು ಸದಾ ಇರುತ್ತಿರಲಿಲ್ಲ, ಆಗಾಗ ಸಣ್ಣಪುಟ್ಟ ಮಾತಿನ ಚಕಮಕಿ ನಡೆಯುತ್ತಿತ್ತು. ಆದರೆ ನನಗೂ ಸೌಂದರ್ಯಗೂ ಮಧ್ಯೆ ತೀವ್ರವಾದ ಕೋಲ್ಡ್ ವಾರ್ ಇತ್ತು. ಇತ್ತೀಚೆಗಷ್ಟೇ ‘ನಿನ್ನ ಪ್ಲೇಟ್‌ಗೆ ನಿನಗೆ ಗೊತ್ತಿಲ್ಲದ ಹಾಗೆ ಐ ವಿಲ್ ಬಿ ಸರ್ವಿಂಗ್ ಎ ಲಾಟ್’ ಎಂದು ಸೌಂದರ್ಯ ಹೇಳಿದಾಗ, ‘ಯಾ, ಐ ನೋ ವಾಟ್ ಯು ಆರ್ ಸರ್ವಿಂಗ್’ ಎಂದು ನೇರವಾಗಿಯೇ ತಿರುಗೇಟು ನೀಡಿದ್ದೆ. ಈಗಲೂ ಅವರ ಬಗ್ಗೆ ನನಗೆ ಯಾವುದೇ ರೀತಿಯ ಪಾಸಿಟಿವ್ ಎನರ್ಜಿ ಇಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯಾರ ಜೊತೆಗೂ ಅತಿಯಾಗಿ ಬೆರೆಯಲು ಹೋಗಲಿಲ್ಲ

ಇನ್ನು, ಮನೆಯವರೊಂದಿಗೆ ಅಷ್ಟಾಗಿ ಬೆರೆಯದಿರುವ ಬಗ್ಗೆ ಪ್ರತಿಕ್ರಿಯಿಸಿದ ನಟಿ ವೈಷ್ಣವಿ, "ನಾನು ಮೊದಲೇ ಮಾನಸಿಕವಾಗಿ ನಿರ್ಧರಿಸಿದ್ದೆ. ಯಾರೊಂದಿಗೂ ಅತಿಯಾಗಿ ಹತ್ತಿರವಾಗಬಾರದು ಎಂದು. ಹಾಗಾಗಿ ಯಾರ ಜೊತೆಗೂ ಅತಿಯಾಗಿ ಬೆರೆಯಲು ಹೋಗಲಿಲ್ಲ. ಆದರೆ ಅಂಥ ಸಂದರ್ಭದಲ್ಲೂ ಆಸಿಯಾ ನನ್ನೊಂದಿಗೆ ಉತ್ತಮವಾಗಿದ್ದರು ಮತ್ತು ಕೆಲವು ವಿಚಾರಗಳಲ್ಲಿ ನನ್ನ ಬೆಂಬಲಕ್ಕೆ ನಿಂತಿದ್ದರು. ಅದೇ ರೀತಿ ಪ್ರಥಮಾ ಅಕ್ಕನ ಜೊತೆ ಬೇಗನೆ ಹೊಂದಾಣಿಕೆ ಸಾಧ್ಯವಾಯಿತು. ಇಂಡಸ್ಟ್ರಿಯಲ್ಲಿ ನಾವಿಬ್ಬರೂ ಪರಸ್ಪರ ಗೊತ್ತಿದ್ದರೂ ಮುಖಾಮುಖಿ ಮಾತನಾಡಿರಲಿಲ್ಲ. ಆದರೂ ಮನೆಯಲ್ಲಿ ಅವರ ಜೊತೆ ಚೆನ್ನಾಗಿ ಹೊಂದಿಕೊಂಡೆ" ಎಂದಿದ್ದಾರೆ.

ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಮನೆ ಪ್ರವೇಶಿಸಿರುವ ಸ್ಪರ್ಧಿಗಳ ಬಗ್ಗೆ ಮಾತನಾಡಿರುವ ವೈಷ್ಣವಿ, ತಮಗೆ ಅವರ ಬಗ್ಗೆ ಯಾವುದೇ ನಿರೀಕ್ಷೆಗಳಿಲ್ಲ ಎಂದು ಹೇಳಿದ್ದಾರೆ. "ಆರಂಭದಲ್ಲಿ ಅಬ್ಬರ ಇರುತ್ತದೆ. ಮುಂದೆ ಇದೇ ರೀತಿ ಹೋಗುವುದು ಅನುಮಾನ. ಕೇವಲ ಜಗಳ ಮತ್ತು ಗಲಾಟೆಯನ್ನೇ ತೋರಿಸುತ್ತಾ ಹೋದರೆ ಜನ ಹೇಗೆ ನೋಡುತ್ತಾರೆ?" ಎಂದು ವೈಷ್ಣವಿ ಪ್ರಶ್ನೆ ಮಾಡಿದ್ದಾರೆ.