ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತಂದೆ ಧರ್ಮೇಂದ್ರ ಸಾವಿನ ಬಳಿಕ ಮಲ ಸಹೋದರಿಯರಿಗೆ ಹತ್ತಿರವಾದ ಬಾಬಿ ಡಿಯೋಲ್‌; ʻಅಪ್ಪನ ಜೊತೆ ಇನ್ನಷ್ಟು ಸಮಯ ಕಳೆಯಬೇಕಿತ್ತುʼ ಎಂದ ನಟ

ಹಿರಿಯ ನಟ ಧರ್ಮೇಂದ್ರ ಅವರ ಅಗಲಿಕೆಯ ನೋವು ಡಿಯೋಲ್ ಕುಟುಂಬವನ್ನು ಹತ್ತಿರ ತಂದಿದೆ. ತಂದೆ ಇಲ್ಲದ ಶೂನ್ಯದ ಬಗ್ಗೆ ಮಾತನಾಡಿರುವ ಬಾಬಿ ಡಿಯೋಲ್, ಈ ದುಃಖವು ತಮ್ಮನ್ನು ಮಲ ಸಹೋದರಿಯರಾದ ಇಶಾ ಮತ್ತು ಅಹಾನಾ ಡಿಯೋಲ್ ಅವರೊಂದಿಗೆ ಹತ್ತಿರವಾಗಿಸಿದೆ ಎಂದು ಹೇಳಿದ್ದಾರೆ.

ʻತಂದೆ ಧರ್ಮೇಂದ್ರ ಜತೆ ಇನ್ನಷ್ಟು ಸಮಯ ಕಳೆಯಬೇಕಿತ್ತುʼ ಎಂದ ಮಗ ಬಾಬಿ ಡಿಯೋಲ್

-

Avinash GR
Avinash GR Apr 15, 2026 11:29 AM

ಕೆಲ ತಿಂಗಳ ಹಿಂದಷ್ಟೇ ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ ಅವರು ಸಾವನ್ನಪ್ಪಿದ್ದರು. ಧರ್ಮೇಂದ್ರ ಅವರ ಅಗಲಿಕೆಯ ನೋವಿನಿಂದ ಇನ್ನೂ ಕೂಡ ಡಿಯೋಲ್‌ ಕುಟುಂಬ ಹೊರಬಂದಿಲ್ಲ. ಪುತ್ರ ಬಾಬಿ ಡಿಯೋಲ್‌ ಅವರು ಈಗಲೂ ತಂದೆ ಧರ್ಮೇಂದ್ರರನ್ನು ನೆನೆದು ಭಾವುಕರಾಗುತ್ತಾರೆ. ತಂದೆ ಇಲ್ಲದೆ ತಮ್ಮ ಬದುಕಿಗೆ ಶೂನ್ಯ ಆವರಿಸಿದೆ ಎನ್ನುವ ಬಾಬಿ ಡಿಯೋಲ್‌, "ತಂದೆಯ ಜೊತೆ ಇನ್ನೂ ಹೆಚ್ಚಿನ ಸಮಯ ಕಳೆಯಬೇಕಿತ್ತು ಅಂತ ಪದೇ ಪದೇ ಅನಿಸುತ್ತದೆ" ಎಂದು ಹೇಳಿಕೊಂಡಿದ್ದಾರೆ.

ಜೊತೆಗೆ ಧರ್ಮೇಂದ್ರ ಅವರ ನಿಧನದ ನಂತರ ತಮ್ಮ ಮಲ ಸಹೋದರಿಯರಾದ ಇಶಾ ಮತ್ತು ಅಹಾನಾ ಜೊತೆಗೆ ಆಪ್ತ ಒಡನಾಟ ಹೆಚ್ಚಿದೆ ಎಂಬ ಮಾಹಿತಿಯನ್ನ ಕೂಡ ಬಾಬಿ ಡಿಯೋಲ್‌ ಹೇಳಿಕೊಂಡಿದ್ದಾರೆ. ಅಂದಹಾಗೆ, ಇಶಾ ಮತ್ತು ಅಹಾನಾ ಅವರು ಧರ್ಮೇಂದ್ರ ಅವರ ಎರಡನೇ ಪತ್ನಿ ಹೇಮಾ ಮಾಲಿನಿ ಅವರ ಪುತ್ರಿಯರಾಗಿದ್ದಾರೆ.

Dharmendra: ಆಸ್ಕರ್​ ವೇದಿಕೆಯಲ್ಲಿ ಧರ್ಮೇಂದ್ರಗೆ ತಪ್ಪಿದ ಗೌರವ; ಅತ್ಯಂತ ನಾಚಿಕೆಗೇಡು ಎಂದ ಹೇಮಾ ಮಾಲಿನಿ

ಸಂದರ್ಶನದಲ್ಲಿ ಬಾಬಿ ಡಿಯೋಲ್‌ ಹೇಳಿದ್ದೇನು?

ಈಚೆಗೆ ಮಾಧ್ಯಮವೊಂದಕ್ಕೆ ಸಂದರ್ಶನದಲ್ಲಿ ನೀಡಿದ ಮಾತನಾಡಿರುವ ಬಾಬಿ ಡಿಯೋಲ್‌, "ತಂದೆಯ ಜೊತೆ ನಾನು ಇನ್ನಷ್ಟು ಸಮಯ ಕುಳಿತು ಮಾತನಾಡಬೇಕಿತ್ತು, ಅವರಿಂದ ಇನ್ನು ಹೆಚ್ಚಿನ ವಿಷಯಗಳನ್ನು ಕೇಳಿ ತಿಳಿಯಬೇಕಿತ್ತು ಎಂದು ದಿನವೂ ಅನಿಸುತ್ತದೆ. ಈಗ ನಾನು ನನ್ನ ಮಕ್ಕಳು, ಪತ್ನಿ ಮತ್ತು ಕುಟುಂಬದೊಂದಿಗೆ ಇರಲು ಹೆಚ್ಚು ಆದ್ಯತೆ ನೀಡುತ್ತಿದ್ದೇನೆ. ಬಾಕ್ಸ್ ಆಫೀಸ್, ವಿಮರ್ಶೆಗಳು ಅಥವಾ ಪಾತ್ರಗಳು... ಕೊನೆಗೆ ಇವಾವುದೂ ಮುಖ್ಯವಲ್ಲ. ನೀವು ಪ್ರೀತಿಸುವವರ ಜೊತೆ ಎಷ್ಟು ಸಮಯ ಕಳೆಯುತ್ತೀರಿ ಎಂಬುದರ ಮೇಲೆ ನಿಮ್ಮ ಯಶಸ್ಸು ಅಳೆಯಲ್ಪಡುತ್ತದೆ" ಎಂದು ಹೇಳಿದ್ದಾರೆ.

"ನಮ್ಮ ಜೊತೆ ಯಾರೂ ಇಲ್ಲದಿದ್ದಾಗ ಈ ಕೀರ್ತಿ ಮತ್ತು ಸಂಪತ್ತಿನಿಂದ ಏನು ಪ್ರಯೋಜನ? ನಾನು ಇಂದಿಗೂ ಇನ್‌ಸ್ಟಾಗ್ರಾಮ್‌ನಲ್ಲಿ ತಂದೆಯವರ ರೀಲ್ಸ್‌ಗಳನ್ನು ನೋಡುತ್ತಿರುತ್ತೇನೆ. ಅವರು ಎಷ್ಟು ಮುಗ್ಧರಾಗಿದ್ದರು ಮತ್ತು ಅವರಲ್ಲಿ ಎಷ್ಟು ಪ್ರೀತಿಯಿತ್ತು. ಕೆಲವೊಮ್ಮೆ ಅವರು ನೇರವಾಗಿ ನನ್ನ ಜೊತೆಗೇ ಮಾತನಾಡುತ್ತಿದ್ದಾರೆ ಅಂತ ನನಗೆ ಅನ್ನಿಸುತ್ತದೆ" ಎಂದು ಬಾಬಿ ಹೇಳಿಕೊಂಡಿದ್ದಾರೆ.

Dharmendra: ಹಿರಿಯ ನಟನನ್ನೇ ಆಸ್ಕರ್ ಮರೆತುಬಿಟ್ಟಿತೇ? ನಟ ಧರ್ಮೇಂದ್ರ ಫ್ಯಾನ್ಸ್‌ ಬೇಸರ

ಸಹೋದರಿಯರಿಗೆ ಹತ್ತಿರವಾದ ಬಾಬಿ

"ನಮ್ಮ ತಂದೆಯ ಅಗಲಿಕೆಯು ನಮಗೆ ಒಂದು ರೀತಿಯ ಪಕ್ವತೆಯನ್ನು ತಂದಿದೆ ಮತ್ತು ಜೀವನವು ಎಷ್ಟು ಅಸ್ಥಿರ ಎಂಬ ಅರಿವು ಮೂಡಿದೆ. ಈಗ ಇಡೀ ಕುಟುಂಬವು ಪ್ರಜ್ಞಾಪೂರ್ವಕವಾಗಿ ಹೆಚ್ಚು ಸಮಯವನ್ನು ಒಟ್ಟಿಗೆ ಕಳೆಯುತ್ತಿದೆ. ದುಃಖವು ನಮ್ಮನ್ನೆಲ್ಲಾ ಹತ್ತಿರ ತಂದಿದೆ. ನಾವೆಲ್ಲರೂ ನಮ್ಮದೇ ಆದ ರೀತಿಯಲ್ಲಿ ಈ ನೋವನ್ನು ಎದುರಿಸುತ್ತಿದ್ದೇವೆ. ಕೆಲವೊಮ್ಮೆ ಪರಸ್ಪರ ತಪ್ಪು ತಿಳುವಳಿಕೆಗಳು ಉಂಟಾಗುತ್ತವೆ, ಪ್ರತಿಯೊಬ್ಬರಿಗೂ ತಮ್ಮ ನೋವೇ ಹೆಚ್ಚು ಎಂದು ಅನಿಸುತ್ತದೆ. ಆದರೆ ಕಾಲಾವಕಾಶ ನೀಡಿದಾಗ ಎಲ್ಲವೂ ಗುಣವಾಗುತ್ತದೆ. ಕುಟುಂಬವನ್ನು ಹತ್ತಿರ ತರಲು ಇಂತಹ ನೋವಿಗೂ ತನ್ನದೇ ಆದ ದಾರಿಯಿದೆ" ಎಂದು ಬಾಬಿ ಹೇಳಿದ್ದಾರೆ.

ಅಂದಹಾಗೆ, ಧರ್ಮೇಂದ್ರ ಅವರು 2025ರ ನವೆಂಬರ್ 24 ರಂದು ಮುಂಬೈನ ತಮ್ಮ ನಿವಾಸದಲ್ಲಿ ನಿಧನರಾದರು. ಅವರಿಗೆ 89 ವರ್ಷ ವಯಸ್ಸಾಗಿತ್ತು. ಧರ್ಮೇಂದ್ರ ಅವರಿಗೆ ಮರಣೋತ್ತರವಾಗಿ 'ಪದ್ಮವಿಭೂಷಣ' ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದ್ದು, ಬ್ರಿಟಿಷ್ ಅಕಾಡೆಮಿ ಫಿಲ್ಮ್ ಅವಾರ್ಡ್ಸ್ (BAFTA) ಸಹ ಧರ್ಮೇಂದ್ರ ಅವರಿಗೆ ವಿಶೇಷ ಗೌರವ ಸಲ್ಲಿಸಿದೆ. ಧರ್ಮೇಂದ್ರಗೆ ಇಬ್ಬರು ಪತ್ನಿಯರು. 1954ರಲ್ಲಿ ಪ್ರಕಾಶ್ ಕೌರ್ ಅವರನ್ನು ವಿವಾಹವಾಗಿದ್ದ ಧರ್ಮೇಂದ್ರಗೆ ಸನ್ನಿ ಡಿಯೋಲ್ ಮತ್ತು ಬಾಬಿ ಡಿಯೋಲ್ ಸೇರಿದಂತೆ ನಾಲ್ವರು ಮಕ್ಕಳಿದ್ದಾರೆ. ಬಳಿಕ 1980ರಲ್ಲಿ ಹೇಮಾ ಮಾಲಿನಿಯನ್ನು ವಿವಾಹವಾದ ಧರ್ಮೇಂದ್ರಗೆ ಇಶಾ ಮತ್ತು ಅಹಾನಾ ಡಿಯೋಲ್ ಎಂಬ ಇಬ್ಬರು ಪುತ್ರಿಯರಿದ್ದಾರೆ.