ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

‘ಪ್ರಧಾನಿ ಮೋದಿ ವಿಷ್ಣುವಿನ ಅವತಾರ, ಅವರ ಕಾಲು ತೊಳೆದು ನೀರು ಕುಡಿಯುವಾಸೆ’: ‘ಬಾರ್ಡರ್’ ಖ್ಯಾತಿಯ ನಟ ಸುದೇಶ್ ಬೆರ್ರಿ ಹೇಳಿಕೆ ವೈರಲ್

'ಬಾರ್ಡರ್' ಸಿನಿಮಾ ಖ್ಯಾತಿಯ ಹಿರಿಯ ನಟ ಸುದೇಶ್ ಬೆರ್ರಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು 'ವಿಷ್ಣುವಿನ ಅವತಾರ' ಎಂದು ಬಣ್ಣಿಸಿದ್ದು, ಅವರ ಕಾಲು ತೊಳೆದು ನೀರು ಕುಡಿಯುವ ಆಸೆ ಇದೆ ಎಂದು ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಜಂತರ್ ಮಂತರ್ ಪ್ರತಿಭಟನಾಕಾರರನ್ನು ನಿರುಪಯುಕ್ತರು ಎಂದು ಕರೆದಿದ್ದಾರೆ.

ʻಪ್ರಧಾನಿ ಕಾಲು ತೊಳೆದು, ಆ ನೀರು ನಾನು ಕುಡಿಯಬೇಕುʼ ಎಂದ ನಟ ಸುದೇಶ್ ಬೆರ್ರಿ

-

Avinash GR
Avinash GR Jul 30, 2026 9:59 PM

‘ಬಾರ್ಡರ್’ ಸಿನಿಮಾ ಖ್ಯಾತಿಯ ಹಿರಿಯ ನಟ ಸುದೇಶ್ ಬೆರ್ರಿ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕುರಿತು ನೀಡಿರುವ ಹೇಳಿಕೆಯೊಂದು ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪ್ರಧಾನಿ ಮೋದಿ ಅವರನ್ನು 'ವಿಷ್ಣುವಿನ ಅವತಾರ' ಎಂದು ಬಣ್ಣಿಸಿರುವ ಅವರು, ಅವಕಾಶ ಸಿಕ್ಕರೆ ಅವರ ಕಾಲು ತೊಳೆದು ಆ ನೀರನ್ನು ಕುಡಿಯುವುದಾಗಿ ಹೇಳಿದ್ದಾರೆ. ಇತ್ತೀಚೆಗೆ ಪಾಡ್‌ಕಾಸ್ಟ್‌ ಸಂದರ್ಶನವೊಂದರಲ್ಲಿ ಭಾಗವಹಿಸಿ ಮಾತನಾಡಿದ ನಟ ಸುದೇಶ್ ಬೆರ್ರಿ, ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಂತರ್ ಮಂತರ್ ಪ್ರತಿಭಟನಾಕಾರರ ವಿರುದ್ಧ ವಾಗ್ದಾಳಿ

"ನನಗೆ ಈ ಎಜಿಪಿ, ಸಿಜಿಪಿ ಗೊತ್ತಿಲ್ಲ... ನಾನು ಈ ಜನರನ್ನು ಗುರುತಿಸುವುದೂ ಇಲ್ಲ. ಇವರೆಲ್ಲರೂ ನಿರುಪಯುಕ್ತ ಜನರು, ದೇಶವನ್ನು ಹಿಂದಕ್ಕೆ ಎಳೆಯುತ್ತಿದ್ದಾರೆ. ಇವರಿಗೆ ದೇಶಕ್ಕಾಗಿ ಮಾಡಲು ಯಾವುದೇ ಕೆಲಸವಿಲ್ಲ. ನೀವು ನಿಜವಾಗಿಯೂ ಸಮಾಜ ಸೇವೆ ಮಾಡಲು ಬಯಸಿದರೆ, ಮಕ್ಕಳಿಗಾಗಿ ಉದ್ಯಾನವನಗಳನ್ನು ನಿರ್ಮಿಸಿ, ಹಿರಿಯ ನಾಗರಿಕರಿಗೆ ವೃದ್ಧಾಶ್ರಮಗಳನ್ನು ತೆರೆಯಿರಿ ಮತ್ತು ಜನರಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಿ. ಅದನ್ನು ಬಿಟ್ಟು ಸುಮ್ಮನೆ ಜಂತರ್ ಮಂತರ್‌ನಲ್ಲಿ ಕುಳಿತು ಪ್ರತಿಭಟನೆ ಮಾಡೋದ್ರಿಂದ ಏನೂ ಸಾಧನೆ ಆಗೋದಿಲ್ಲ" ಎಂದು ಸುದೇಶ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Modi-Trump Meet: 5ನೇ ಜನರೇಷನ್‌ ಜೆಟ್‌, ಮಿಷನ್‌ 500, ಮುಂಬೈ ದಾಳಿ ರೂವಾರಿಯ ಗಡಿಪಾರು; ಟ್ರಂಪ್‌-ಮೋದಿ ಒಪ್ಪಂದಗಳ ಲಿಸ್ಟ್‌ ಇಲ್ಲಿದೆ

ರಾಜಕೀಯ ಮೀರಿದ ಮನುಷ್ಯ ಮೋದಿಜಿ

ಪ್ರಧಾನಿ ಮೋದಿಯವರನ್ನು ಮುಕ್ತಕಂಠದಿಂದ ಪ್ರಶಂಸಿಸಿದ ಸುದೇಶ್, "ನರೇಂದ್ರ ಮೋದಿ ಅವರು ಏನು ತಪ್ಪು ಮಾಡಿದ್ದಾರೆ? ಅವರು ಚಹಾ ಮಾರುತ್ತಲೇ ಪ್ರಪಂಚದಾದ್ಯಂತ ಸಂಚರಿಸಿದ್ದಾರೆ. ನನಗೆ ಮೋದಿಜಿಯವರ ಕಾಲು ತೊಳೆದು ಆ ನೀರನ್ನು ಕುಡಿಯುವ ಆಸೆಯಿದೆ. ಯಾರಾದರೂ ಅವರೊಂದಿಗೆ ನನ್ನ ಭೇಟಿಯನ್ನು ಏರ್ಪಡಿಸಿದರೆ ಆಭಾರಿಯಾಗಿರುತ್ತೇನೆ. ನಾನು ಅವರನ್ನು ವೈಯಕ್ತಿಕವಾಗಿ ಎಂದಿಗೂ ಭೇಟಿಯಾಗಿಲ್ಲ. ನಾವು ದೇವರನ್ನು ನೋಡದಿದ್ದರೂ ಹೇಗೆ ಪೂಜಿಸುತ್ತೇವೆಯೋ, ಅದೇ ರೀತಿಯಲ್ಲಿ ನಾನು ಮೋದಿಜಿಯವರನ್ನು ಗೌರವಿಸುತ್ತೇನೆ" ಎಂದು ಹೇಳಿದ್ದಾರೆ.

ಭಾರತದಲ್ಲಿ 'ರಾಮರಾಜ್ಯ' ಬಂದಿದೆ

"ಇದರಲ್ಲಿ ತಪ್ಪೇನೂ ಇಲ್ಲ. ಪಕ್ಷ ಮತ್ತು ರಾಜಕೀಯವನ್ನು ಮೀರಿದ ಒಬ್ಬ ಮಹಾನ್ ಮನುಷ್ಯನಾಗಿ ನಾನು ಅವರನ್ನು ಗೌರವಿಸುತ್ತೇನೆ. ಪ್ರಸ್ತುತ ಭಾರತದಲ್ಲಿ 'ರಾಮರಾಜ್ಯ' ಬಂದಿದೆ, ಅದನ್ನು ವಿವರಿಸುವುದಕ್ಕಿಂತ ಅನುಭವಿಸಬೇಕು. ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ದೇಶದ ಪ್ರಗತಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ" ಎಂದು ನಟ ಸುದೇಶ್ ಬೆರ್ರಿ ಹೇಳಿದ್ದಾರೆ. ಸುದೇಶ್ ಬೆರ್ರಿ ಅವರ ಈ ಹೇಳಿಕೆಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಪರ ಮತ್ತು ವಿರೋಧದ ಚರ್ಚೆಗಳಿಗೆ ಕಾರಣವಾಗಿವೆ.