Chikkanna Movie: ‘ಲಕ್ಷ್ಮೀಪುತ್ರ’ ಚಿತ್ರದ ಅಮ್ಮನ ಹಾಡು ಬಿಡುಗಡೆ: ಹಿರಿಯ ನಟಿ ತಾರಾ ಭಾವುಕ
Lakshmiputra movie: ನಟ ಚಿಕ್ಕಣ್ಣ ನಾಯಕರಾಗಿ ನಟಿಸಿರುವ ಬಹುನಿರೀಕ್ಷಿತ 'ಲಕ್ಷ್ಮೀಪುತ್ರ' ಚಿತ್ರದ ವಿಶೇಷ 'ಅಮ್ಮನ ಹಾಡು' ಹಾಗೂ ಹೊಸ ಪೋಸ್ಟರ್ ಇತ್ತೀಚೆಗೆ ನಗರದಲ್ಲಿ ಅನಾವರಣಗೊಂಡಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಚಿತ್ರತಂಡ ಸಿನಿಮಾದ ಹುಟ್ಟು, ಶೀರ್ಷಿಕೆಯ ಹಿನ್ನೆಲೆ ಹಾಗೂ ತಾಯಿಯ ಮಹತ್ವದ ಬಗ್ಗೆ ಮನಬಿಚ್ಚಿ ಮಾತನಾಡಿತು.
ಲಕ್ಷ್ಮೀಪುತ್ರ ಸಿನಿಮಾ -
ನಟ ಚಿಕ್ಕಣ್ಣ (Chikkanna) ನಾಯಕರಾಗಿ ನಟಿಸಿರುವ ಬಹುನಿರೀಕ್ಷಿತ 'ಲಕ್ಷ್ಮೀಪುತ್ರ' (Lakshmiputra) ಚಿತ್ರದ ವಿಶೇಷ 'ಅಮ್ಮನ ಹಾಡು' ಹಾಗೂ ಹೊಸ ಪೋಸ್ಟರ್ ಇತ್ತೀಚೆಗೆ ನಗರದಲ್ಲಿ ಅನಾವರಣಗೊಂಡಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಚಿತ್ರತಂಡ ಸಿನಿಮಾದ ಹುಟ್ಟು, ಶೀರ್ಷಿಕೆಯ ಹಿನ್ನೆಲೆ ಹಾಗೂ ತಾಯಿಯ ಮಹತ್ವದ ಬಗ್ಗೆ ಮನಬಿಚ್ಚಿ ಮಾತನಾಡಿತು.
'ಲಕ್ಷ್ಮೀಪುತ್ರ’ ಶೀರ್ಷಿಕೆ ಬಂದಿದ್ದು ಹೇಗೆ?
ಚಿತ್ರದ ಶೀರ್ಷಿಕೆಯ ಬಗ್ಗೆ ಮಾತನಾಡಿದ ಚಿತ್ರಕ್ಕೆ ಸ್ಕ್ರಿಪ್ಟ್ ಜೊತೆಗೆ ಹಾಡುಗಳಿಗೆ ಸಾಹಿತ್ಯ ಬರೆದ ಎ.ಪಿ. ಅರ್ಜುನ್, "ಹಳ್ಳಿಗಾಡಿನಲ್ಲಿ ಸಾಮಾನ್ಯವಾಗಿ 'ಅವನೊಬ್ಬ ಲಕ್ಷ್ಮೀಪುತ್ರ ಕಣ್ರೋ' ಎಂದು ಕರೆಯುವುದನ್ನು ಕೇಳಿದ್ದೆವು. ಕಥೆ ರೆಡಿಯಾದಾಗ ಮೊದಲು 'ಗೌರಿಪುತ್ರ' ಎಂಬ ಹೆಸರು ಚರ್ಚೆಗೆ ಬಂತು. ಆದರೆ ಗೌರಿಪುತ್ರ ಎಂದರೆ ಗಣೇಶನಾಗುತ್ತಾನೆ ಎಂಬ ಕಾರಣಕ್ಕೆ ಕೊನೆಗೆ 'ಲಕ್ಷ್ಮೀಪುತ್ರ' ಎಂದು ಅಂತಿಮಗೊಳಿಸಿದೆವು. ಇಲ್ಲಿ ಲಕ್ಷ್ಮಿ ಎಂದರೆ ದುಡ್ಡಲ್ಲ, ಸಿನಿಮಾದಲ್ಲಿ ತಾಯಿಯ ಹೆಸರು ಲಕ್ಷ್ಮಿ. ಆ ಪಾತ್ರವನ್ನು ನಟಿ ತಾರಾ ಅವರೇ ನಿರ್ವಹಿಸಿದ್ದಾರೆ. ಅವರು ಒಪ್ಪದಿದ್ದರೆ ಈ ಪ್ರಾಜೆಕ್ಟ್ ಮಾಡುತ್ತಲೇ ಇರಲಿಲ್ಲ. ಕೊರೊನಾ ಸಮಯದಲ್ಲಿ ಚಿಕ್ಕಣ್ಣ ಜೊತೆ ಊಟಕ್ಕೆ ಕುಳಿತಾಗ ಹುಟ್ಟಿಕೊಂಡ ಲೈನ್ ಇದು. ‘ಉಪಾಧ್ಯಕ್ಷ’ ಚಿತ್ರದ ನಂತರ ಚಿಕ್ಕಣ್ಣ ಕರೆ ಮಾಡಿ ನೆನಪಿಸಿದಾಗ ಈ ಸಿನಿಮಾ ಸೆಟ್ಟೇರಿತು" ಎಂದು ತಿಳಿಸಿದರು.
ಇದನ್ನೂ ಓದಿ: Mallamma: ಬಿಗ್ ಬಾಸ್ ಮನೆಗೆ ಮಲ್ಲಮ್ಮ ಹೋಗಲು ಕಾರಣವಾಗಿದ್ದ ಫ್ಯಾಷನ್ ಡಿಸೈನರ್ ಪಲ್ಲವಿ ಇನ್ನಿಲ್ಲ
ತಾರಮ್ಮನ ಎದುರು ನಟಿಸಲು ಹೆದರಿಸಿದ್ದರು: ಚಿಕ್ಕಣ್ಣ
ನಂತರ ಮಾತನಾಡಿದ ನಟ ಚಿಕ್ಕಣ್ಣ, "ಉಪಾಧ್ಯಕ್ಷ ನಂತರ ಸುಮಾರು 20-30 ಕಥೆಗಳನ್ನು ಕೇಳಿದ್ದೆ. ಆದರೆ ಅರ್ಜುನ್ ಹೇಳಿದ ಈ ಹಳ್ಳಿ ಸೊಗಡಿನ ಅಮ್ಮ-ಮಗನ ಕಥೆ ನನಗೆ ತೃಪ್ತಿ ಕೊಟ್ಟಿತ್ತು. 'ಕಿರಾತಕ' ಚಿತ್ರದ ಬಳಿಕ ನಾನು ತಾರಮ್ಮ ಜೊತೆ ನಟಿಸಿರಲಿಲ್ಲ. ರಾಷ್ಟ್ರ ಪ್ರಶಸ್ತಿ ವಿಜೇತ ತಾರಮ್ಮನ ಮುಂದೆ ನಟಿಸುತ್ತಿದ್ದೀಯಾ, ಅವರು ನಿನ್ನನ್ನು ಆಕ್ಟಿಂಗ್‌ನಲ್ಲಿ ತಿಂದು ಹಾಕಿಬಿಡುತ್ತಾರೆ ಎಂದು ಹಲವರು ಹೆದರಿಸಿದ್ದರು. ಆದರೆ ಅವರು ತೆರೆಮೇಲೆ ಪ್ರತಿಯೊಬ್ಬ ಕಲಾವಿದನಿಗೂ ಸಮಾನ ಜಾಗ ಕೊಡುತ್ತಾರೆ. ನಮ್ಮಿಬ್ಬರ ಕಾಂಬಿನೇಷನ್ ತಾಯಿ-ಮಗನಂತೆ ಅದ್ಭುತವಾಗಿ ಮೂಡಿಬಂದಿದೆ" ಎಂದರು.
ಇದೇ ವೇಳೆ ಎ.ಪಿ. ಅರ್ಜುನ್ ಅವರ ಸಾಹಿತ್ಯವನ್ನು ಕೊಂಡಾಡಿದ ಚಿಕ್ಕಣ್ಣ, "ಅರ್ಜುನ್ ಅವರಿಗೆ ಅಮ್ಮ ಎಂದರೆ ಪ್ರಾಣ. ಆ ಅಪಾರ ಪ್ರೀತಿಯೇ ಈ ಹಾಡಿನ ಸಾಲುಗಳಾಗಿ ಹೊರಹೊಮ್ಮಿವೆ" ಎಂದರು. ಚಿತ್ರದ ಮೂಲಕ ವಂದಿತಾ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದು, ಪಾತ್ರಕ್ಕೆ ಹೇಳಿಮಾಡಿಸಿದಂತೆ ಅಭಿನಯಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹೊಸ ಬಾಳಿನ ಬಗ್ಗೆ ಚಿಕ್ಕಣ್ಣ ಕಾಲೆಳೆದ ತಾರಾ
ಇತ್ತೀಚೆಗಷ್ಟೇ ಹಸೆಮಣೆ ಏರಿರುವ ಚಿಕ್ಕಣ್ಣ ಅವರ ಕಾಲೆಳೆದ ನಟಿ ತಾರಾ, "ಸಿನಿಮಾ ಹೀರೋಯಿನ್ ಬಗ್ಗೆ ಚೆನ್ನಾಗಿ ಹೇಳ್ತೀಯಾ, ನಿನ್ನ ನಿಜ ಜೀವನದ ಹೀರೋಯಿನ್ ಪಾವನಾ ಬಗ್ಗೆ ಹೇಳು" ಎಂದು ಪೀಡಿಸಿದರು. ಇದಕ್ಕೆ ನಾಚಿ ನಕ್ಕ ಚಿಕ್ಕಣ್ಣ, "ಪಾವನಾ ನನ್ನ ಜೀವನಕ್ಕೆ ಬಂದ್ಮೇಲೆ ಸಿನಿಮಾ ರಿಲೀಸ್ ಆಗುತ್ತಿದೆ, ಆಕೆ ನನಗೆ ನಿಜವಾಗಿಯೂ ಲಕ್ಕಿ. ಸದ್ಯ ಅತ್ತೆಗೆ ಹುಷಾರಿಲ್ಲದ ಕಾರಣ ಆಕೆ ಕಾರ್ಯಕ್ರಮಕ್ಕೆ ಬಂದಿಲ್ಲ, ಮುಂದಿನ ಇವೆಂಟ್‌ಗೆ ಕರೆದುಕೊಂಡು ಬರುತ್ತೇನೆ" ಎಂದು ವೇದಿಕೆಯಲ್ಲೇ ಪತ್ನಿಗೆ ಪ್ರೀತಿಯಿಂದ 'ಐ ಲವ್ ಯು' ಹೇಳಿದರು.
ತಾಯಿಯ ನೆನೆದು ಕಣ್ಣೀರಾದ ತಾರಾ
ಕಾರ್ಯಕ್ರಮದಲ್ಲಿ ಅಮ್ಮನ ಹಾಡು ವೀಕ್ಷಿಸಿದ ಬಳಿಕ ಹಿರಿಯ ನಟಿ ತಾರಾ ಭಾವುಕರಾದರು. "ನನ್ನ ತಾಯಿ ಪುಷ್ಪಮ್ಮ ಹಾಗೂ ದೊಡ್ಡಮ್ಮ ಲೀಲಮ್ಮ ನನ್ನ ಬದುಕಿನ ಶಕ್ತಿ. ಎಷ್ಟೇ ವಯಸ್ಸಾದರೂ ತಾಯಿಗೆ ನಾವೆಲ್ಲ ಮಕ್ಕಳೇ. ಹೊರಗಡೆ ಎಷ್ಟೇ ನೋವು, ಕೋಪ, ಅವಮಾನಗಳಾದರೂ ನಾವು ಮನೆಗೆ ಬಂದು ಕೂಗಾಡುವುದು ಅಮ್ಮನ ಮೇಲೆಯೇ. ಆದರೆ ತಾಯಿ ಅದನ್ನೆಲ್ಲ ಮನಸ್ಸಿನಲ್ಲಿಟ್ಟುಕೊಳ್ಳದೆ ಪ್ರೀತಿಯಿಂದ ಊಟ ಬಡಿಸುತ್ತಾಳೆ. ಆ ತಾಯಿಯ ಪ್ರೀತಿಗೆ ಯಾವುದೂ ಸಾಟಿಯಿಲ್ಲ" ಎಂದು ಸ್ಮರಿಸಿಕೊಂಡರು.
ಇದನ್ನೂ ಓದಿ: Kannada New Movie: ʻರುದ್ರಾಭಿಷೇಕಂ' ಟ್ರೈಲರ್ ಬಿಡುಗಡೆ
ಹಾಡಿನಲ್ಲಿ ಹಿರಿಯ ನಟರಾದ ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್ ಹಾಗೂ ಅನಂತ್ ನಾಗ್ ಅವರ ತಾಯಂದಿರ ಅಪರೂಪದ ಭಾವಚಿತ್ರಗಳನ್ನು ಬಳಸಿಕೊಳ್ಳಲಾಗಿದ್ದು, ಕಾರ್ಯಕ್ರಮದಲ್ಲಿ ಪೋಸ್ಟರ್ ಅನಾವರಣಗೊಳಿಸಲಾಯಿತು. ಈ ಚಿತ್ರವನ್ನು ಅನ್ನಪೂರ್ಣ ಎ ಪಿ ಅರ್ಜುನ್ ನಿರ್ಮಾಣ ಮಾಡಿದ್ದಾರೆ ಮತ್ತು ರವಿಕಿರಣ್ ಎಂ. ಗೌಡ ಅವರು ಸಹ ನಿರ್ಮಾಪಕರಾಗಿದ್ದಾರೆ. ಚಿತ್ರವು ನವೆಂಬರ್ 27ರಂದು ರಾಜ್ಯಾದ್ಯಂತ ತೆರೆಕಾಣಲಿದೆ.