Chowkidar Movie: ಅಪ್ಪ-ಮಗನ ಬಾಂಧವ್ಯ ಸಾರುವ ಗೀತೆಯ ಮೂಲಕ ಮೋಡಿ ಮಾಡಿದ ʼಚೌಕಿದಾರ್ʼ
ತನ್ನ ಕಂಟೆಂಟ್ ಮೂಲಕ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿಸಿದ ʼಚೌಕಿದಾರ್ʼ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ಅಪ್ಪ-ಮಗನ ಬಾಂಧವ್ಯದ ಮಹತ್ವ ಸಾರುವ ಈ ಗೀತೆಯಲ್ಲಿ ಸಾಯಿ ಕುಮಾರ್ ಹಾಗೂ ಪೃಥ್ವಿ ಅಂಬಾರ್ ಕಾನಿಸಿಕೊಂಡಿದ್ದಾರೆ. ಸಚಿನ್ ಬಸ್ರೂರ್ ಸಂಗೀತ, ವಿಜಯ್ ಪ್ರಕಾಶ್ ಅವರ ಧ್ವನಿ ಹಾಡಿನ ತೂಕ ಹೆಚ್ಚಿಸಿದೆ.


ಬೆಂಗಳೂರು: ʼಚೌಕಿದಾರ್ʼ ಸಿನಿಮಾ (Chowkidar Movie) ತನ್ನ ಕಂಟೆಂಟ್ ಮೂಲಕ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಇತ್ತೀಚೆಗೆ ಟೀಸರ್ ಮೂಲಕ ಗಮನ ಸೆಳೆದಿರುವ ಚಿತ್ರವೀಗ ಹಾಡಿನ ಮೂಲಕ ಸಿನಿರಸಿಕರಿಗೆ ಆಮಂತ್ರಣ ಕೊಟ್ಟಿದೆ. 'ಚೌಕಿದಾರ್' ಸಿನಿಮಾದ ಮೊದಲ ಹಾಡು ಎಂಆರ್ಟಿ ಮ್ಯೂಸಿಕ್ ಯುಟ್ಯೂಬ್ನಲ್ಲಿ ಅನಾವರಣಗೊಂಡಿದೆ. ಅಪ್ಪ-ಮಗನ ಬಾಂಧವ್ಯದ ಮಹತ್ವ ಸಾರುವ ಈ ಗೀತೆಯಲ್ಲಿ ಸಾಯಿ ಕುಮಾರ್ ಹಾಗೂ ಪೃಥ್ವಿ ಅಂಬಾರ್ ಕಾಣಿಸಿಕೊಂಡಿದ್ದಾರೆ. ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಪೋಣಿಸಿರುವ ಹಾಡಿಗೆ ಸಚಿನ್ ಬಸ್ರೂರ್ ಸಂಗೀತ, ವಿಜಯ್ ಪ್ರಕಾಶ್ ಅವರ ಧ್ವನಿ ಹಾಡಿನ ತೂಕ ಹೆಚ್ಚಿಸಿದೆ.
ಅಪ್ಪ ಮಗನ ಬಾಂಧವ್ಯದ ʼಚೌಕಿದಾರ್ʼ ಸಿನಿಮಾದ ಹಾಡಿಗೆ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ʼಚೌಕಿದಾರ್ʼ ಸಿನಿಮಾದಲ್ಲಿ ಧನ್ಯಾ ರಾಮ್ಕುಮಾರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ʼದಿಯಾʼ ಚಿತ್ರ ಖ್ಯಾತಿಯ ನಟ ಪೃಥ್ವಿ ಅಂಬಾರ್ ಇಲ್ಲಿ ವಿಭಿನ್ನವಾಗಿಯೇ ಕಾಣಿಸುತ್ತಿದ್ದಾರೆ. ರಗಡ್ ರೋಲ್ ಮೂಲಕವೇ ಎಲ್ಲರ ಗಮನ ಸೆಳೆಯಲಿದ್ದಾರೆ. ʼಚೈತ್ರದ ಪ್ರೇಮಾಂಜಲಿʼ ಚಿತ್ರದ ನಾಯಕಿ ಶ್ವೇತಾ, ಡೈಲಾಗ್ ಕಿಂಗ್ ಸಾಯಿಕುಮಾರ್ ಕೂಡ ಈ ಸಿನಿಮಾದಲ್ಲಿದ್ದಾರೆ. ಸುಧಾರಾಣಿ ಈ ಚಿತ್ರದಲ್ಲಿ ಪೊಲೀಸ್ ಆಫೀಸರ್ ಪಾತ್ರ ಮಾಡಿದ್ದಾರೆ.
ಪ್ರತಿ ಸಿನಿಮಾಗಳಲ್ಲಿನ ಕಥೆಗೆ ಸಂಶೋಧನೆ ಮಾಡುವ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ʼಚೌಕಿದಾರ್ʼಗೂ ಸಾಕಷ್ಟು ವರ್ಕೌಟ್ ಮಾಡಿದ್ದಾರೆ. ಪ್ರತಿ ಬಾರಿಯೂ ಹೊಸ ಕಥೆಯನ್ನು ಹೆಕ್ಕಿ ತರುವ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ, ಈ ಬಾರಿ ಕೂಡ ಫ್ರೆಶ್ ಕಥೆಯೊಂದಿಗೆ ಹಾಜರಾಗಿದ್ದಾರೆ.
ʼಚೌಕಿದಾರ್ʼ ಸಿನಿಮಾವನ್ನು ಕಲ್ಲಹಳ್ಳಿ ಚಂದ್ರಶೇಖರ್ ನಿರ್ಮಾಣ ಮಾಡುತ್ತಿದ್ದು, ವಿದ್ಯಾದೇವಿ ಸಹ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಸಚಿನ್ ಬಸ್ರೂರು ಸಂಗೀತವಿದ್ದರೆ, ವಿ. ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ ಸಾಹಿತ್ಯ ಬರೆಯುತ್ತಿದ್ದಾರೆ. 'ಚೌಕಿದಾರ್' ಬಹುಭಾಷೆಯಲ್ಲಿ ಮೂಡಿ ಬರುತ್ತಿದ್ದು, ಲವರ್ ಬಾಯ್ ಆಗಿದ್ದ ಪೃಥ್ವಿ ಅಂಬಾರ್ ಮಾಸ್ ಲುಕ್ನಲ್ಲಿ ಎಂಟ್ರಿ ಕೊಡಲಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಪೂರ್ತಿಯಾಗಿದೆ.
ʼಚೌಕಿದಾರ್ʼ ಟೀಸರ್ ರಿಲೀಸ್ ಔಟ್
ಇತ್ತೀಚೆಗೆ ʼಚೌಕಿದಾರ್ʼ ಸಿನಿಮಾದ ಟೀಸರ್ ಎಂಆರ್ಟಿ ಮ್ಯೂಸಿಕ್ ಯುಟ್ಯೂಬ್ ಚಾನಲ್ನಲ್ಲಿ ಬಿಡುಗಡೆಯಾಗಿದೆ. ರಕ್ತಸಿಕ್ತ ಅವತಾರವೆತ್ತಿರುವ ಪೃಥ್ವಿ ಹೊಸ ಲುಕ್ ಸಿನಿರಸಿಕರಿಗೆ ಕಿಕ್ ಕೊಟ್ಟಿದ್ದಾರೆ. ನಾಯಕಿ ಧನ್ಯಾ ರಾಮ್ ಕುಮಾರ್ ಡಿಗ್ಲಾಮರ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್ನಲ್ಲಿ ಎಲ್ಲ ಪಾತ್ರಗಳನ್ನು ತೋರಿಸಿರುವ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಕಥೆಯ ಗುಟ್ಟನ್ನು ಎಲ್ಲಿಯೂ ಬಿಟ್ಟು ಕೊಟ್ಟಿಲ್ಲ. ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಟೀಸರ್ ಬಿಡುಗಡೆ ಮಾಡಲಾಗಿದ್ದು, ಖಾಕಿ ಲುಕ್ನಲ್ಲಿ ಹಿರಿಯ ನಟಿ ಸುಧಾರಾಣಿ ಖದರ್ ತೋರಿಸಿದ್ದಾರೆ. ಜತೆಗೆ ನಟ ಸಾಯಿ ಕುಮಾರ್ ಅವರು ಪೃಥ್ವಿಯ ತಂದೆ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ. 'ಚೌಕಿದಾರ್’ ಬಹುಭಾಷೆಯಲ್ಲಿ ಮೂಡಿ ಬರುತ್ತಿದ್ದು, ಟೀಸರ್ ನೋಡುತ್ತಿದ್ದರೆ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಹೊಸ ಮಾದರಿಯ ಕಥೆಯನ್ನು ತೆರೆದಿಡಲು ಹೊರಟಿರುವ ಸೂಚನೆ ಸಿಕ್ಕಿದೆ.