2027ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ವೈಭವ್ ಸೂರ್ಯವಂಶಿಗೆ ಸ್ಥಾನ ನೀಡಬೇಕೆಂದ ಕೆ ಶ್ರೀಕಾಂತ್!
ಯುಎಇ ವಿರುದ್ಧ 53 ಎಸೆತಗಳಲ್ಲಿ 204 ರನ್ ಸಿಡಿಸಿದ 15ರ ವಯಸ್ಸಿನ ವೈಭವ್ ಸೂರ್ಯವಂಶಿಗೆ ಕೃಷ್ಣಮಾಚಾರಿ ಶ್ರೀಕಾಂತ್ ಬೆಂಬಲ ವ್ಯಕ್ತಪಡಿಸಿದ್ದಾರೆ. 2027ರ ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡುವಂತೆ ಆಯ್ಕೆ ಸಮಿತಿಯನ್ನು ಒತ್ತಾಯಿಸಿರುವ ಅವರು, ಸೂರ್ಯವಂಶಿ ಭವಿಷ್ಯದಲ್ಲಿ ಏಕಾಂಗಿಯಾಗಿ ಪಂದ್ಯಗಳನ್ನು ಗೆಲ್ಲಿಸಬಲ್ಲ ಪ್ರತಿಭಾವಂತ ಆಟಗಾರ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಏಕದಿನ ವಿಶ್ವಕಪ್ ಭಾರತ ತಂಡದಲ್ಲಿ ವೈಭವ್ಗೆ ಚಾನ್ಸ್ ನೀಡಿ ಎಂದ ಶ್ರೀಕಾಂತ್. -
ನವದೆಹಲಿ: ತಮ್ಮ ಅಬ್ಬರದ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿರುವ 15ರ ಚಿರ ಯುವಕ ವೈಭವ್ ಸೂರ್ಯವಂಶಿ (Vaibhav Sooryavanshi) ಅವರಗೆ 2027ರ ಐಸಿಸಿ ಏಕದಿನ ವಿಶ್ವಕಪ್ (ODI World Cup 2027) ಭಾರತ ತಂಡದಲ್ಲಿ ಸ್ಥಾನ ಕಲ್ಪಿಸಬೇಕೆಂದು ಮಾಜಿ ಬಿಸಿಸಿಐ ಸೆಲೆಕ್ಟರ್ ಕೃಷ್ಣಮಾಚಾರಿ ಶ್ರೀಕಾಂತ್ (K Srikkanth) ಆಗ್ರಹಿಸಿದ್ದಾರೆ. ನವೆಂಬರ್ 24ರಂದು ನಡೆದಿದ್ದ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯ ಯುಎಇ ವಿರುದ್ಧದ ಪಂದ್ಯದಲ್ಲಿ ಸೂರ್ಯವಂಶಿ ಕೇವಲ 53 ಎಸೆತಗಳಲ್ಲಿ 204 ರನ್ ಸಿಡಿಸಿ ಹೊಸ ದಾಖಲೆ ನಿರ್ಮಿಸಿದ್ದರು. ಈ ಇನಿಂಗ್ಸ್ನಲ್ಲಿ ಅವರು ಬರೋಬ್ಬರಿ 28 ಸಿಕ್ಸರ್ ಹಾಗೂ 7 ಬೌಂಡರಿಗಳನ್ನು ಬಾರಿಸಿದ್ದರು.
ವೈಭವ್ ಸೂರ್ಯವಂಶಿ ಅವರ ಈ ಸ್ಫೋಟಕ ಆಟಕ್ಕೆ ಭಾರತದ ಮಾಜಿ ಆರಂಭಿಕ ಆಟಗಾರ ಹಾಗೂ 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ ಕೃಷ್ಣಮಾಚಾರಿ ಶ್ರೀಕಾಂತ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಯುವ ಆಟಗಾರನನ್ನು ಭಾರತ ತಂಡದ ಎಲ್ಲಾ ಮೂರು ಮಾದರಿಗಳಲ್ಲೂ ಪರಿಗಣಿಸಬೇಕು ಎಂದು ಆಯ್ಕೆ ಸಮಿತಿಗೆ ಸಲಹೆ ನೀಡಿದ್ದಾರೆ. ವಿಶೇಷವಾಗಿ 2027ರ ಏಕದಿನ ವಿಶ್ವಕಪ್ ಟೂರ್ನಿಯ ಭಾರತ ತಂಡದ 15 ಸದಸ್ಯರ ಬಳಗದಲ್ಲಿ ವೈಭವ್ ಸೂರ್ಯವಂಶಿಗೆ ಸ್ಥಾನ ನೀಡಬೇಕು ಎಂದು ಶ್ರೀಕಾಂತ್ ಒತ್ತಾಯಿಸಿದ್ದಾರೆ.
ʻಹೋಲಿಕೆ ಮಾಡಬೇಡಿʼ: ವೈಭವ್ ಸೂರ್ಯವಂಶಿ ದ್ವಿಶತಕ ಬಾರಿಸಿದ ಬಳಿಕ ಸೌರವ್ ಗಂಗೂಲಿ ಎಚ್ಚರಿಕೆ!
ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ವೈಭವ್ಗೆ ಸ್ಥಾನ ನೀಡಿ
ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ಶ್ರೀಕಾಂತ್, "ಅವರು ಎಲ್ಲಾ ಮಾದರಿಗಳಲ್ಲೂ ಆಡಬಲ್ಲ ಆಟಗಾರ. ಟೆಸ್ಟ್ ಕ್ರಿಕೆಟ್ನಲ್ಲಿ ಆಡಿಸುವುದು ಬೇಡ ಎಂದಾದರೂ ಪರವಾಗಿಲ್ಲ. ಕನಿಷ್ಠ 15 ಸದಸ್ಯರ ತಂಡದಲ್ಲಾದರೂ ಸ್ಥಾನ ನೀಡಿ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಆಡುವ ಅವಕಾಶ ಕಲ್ಪಿಸಿ. ಸೂರ್ಯವಂಶಿಯನ್ನು ನಿಜವಾಗಿಯೂ ಬೆಳೆಸಬೇಕೆಂದಿದ್ದರೆ 2027ರ ವಿಶ್ವಕಪ್ ಟೂರ್ನಿಗೆ ಕರೆದುಕೊಂಡು ಹೋಗಿ. ಒಂದು ದಿನ ಅವರು ಏಕಾಂಗಿಯಾಗಿ ಪಂದ್ಯಗಳನ್ನು ಗೆಲ್ಲಿಸಿಕೊಡುತ್ತಾರೆ," ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಸೂರ್ಯವಂಶಿ ಮೇಲೆ ಶ್ರೀಕಾಂತ್ಗೆ ಇಷ್ಟೊಂದು ವಿಶ್ವಾಸವೇಕೆ?
ಯುಎಇ ವಿರುದ್ಧದ ಪಂದ್ಯದಲ್ಲಿ ಸೂರ್ಯವಂಶಿ ತೋರಿದ ಅಸಾಧಾರಣ ಬ್ಯಾಟಿಂಗ್ ಪ್ರದರ್ಶನವೇ ಶ್ರೀಕಾಂತ್ ಅವರ ವಿಶ್ವಾಸಕ್ಕೆ ಪ್ರಮುಖ ಕಾರಣ. ಕೇವಲ 28 ಎಸೆತಗಳಲ್ಲಿ ಶತಕ ಪೂರೈಸಿದ ಅವರು, ಲಿಸ್ಟ್ ಎ ಕ್ರಿಕೆಟ್ನಲ್ಲಿ ಅತ್ಯಂತ ವೇಗದ ಶತಕ ದಾಖಲಿಸಿದರು. ಬಳಿಕ ಕೇವಲ 52 ಎಸೆತಗಳಲ್ಲಿ ದ್ವಿಶತಕ ಪೂರೈಸುವ ಮೂಲಕ ಮತ್ತೊಂದು ಐತಿಹಾಸಿಕ ದಾಖಲೆ ಬರೆದರು.
ಸೂರ್ಯವಂಶಿ ಅವರ ಬ್ಯಾಟಿಂಗ್ನಲ್ಲಿ ಕೇವಲ ಹೊಡೆತಗಳ ಬಲ ಮಾತ್ರವಲ್ಲ, ಸಮಯಪ್ರಜ್ಞೆ, ಆತ್ಮವಿಶ್ವಾಸ ಮತ್ತು ಸ್ಥಿರತೆಯೂ ಕಾಣಿಸಿತು ಎಂದು ಶ್ರೀಕಾಂತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ʻಮುಂದಿನ 5 ವರ್ಷಗಳಲ್ಲಿ ಟೆಸ್ಟ್ನಲ್ಲಿ 500 ರನ್ʼ: ವೈಭವ್ ಸೂರ್ಯವಂಶಿ ಬಗ್ಗೆ ಕೆವಿನ್ ಪೀಟರ್ಸನ್ ದೊಡ್ಡ ಭವಿಷ್ಯ!
"ಬ್ಯಾಟಿಂಗ್ನಲ್ಲಿ ಕೇವಲ ಬಲವಿದ್ದರೆ ಸಾಲದು, ಸಮಯಪ್ರಜ್ಞೆಯೂ ಇರಬೇಕು. ಅವರಲ್ಲಿ ಎರಡೂ ಗುಣಗಳಿವೆ. ಅವರು ತುಂಬಾ ಶಾಂತವಾಗಿ ಮತ್ತು ಆತ್ಮವಿಶ್ವಾಸದಿಂದ ಆಡುತ್ತಾರೆ. ತಾನು ಏನು ಮಾಡುತ್ತಿದ್ದೇನೆ ಎಂಬ ಸ್ಪಷ್ಟ ಅರಿವು ಅವರಿಗಿದೆ. ಇದು ನಿಜವಾದ ಪ್ರತಿಭೆ. ಮೊದಲು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಬಂದರು, ನಂತರ ಕಿಂಗ್ ವಿರಾಟ್ ಕೊಹ್ಲಿ ಬಂದರು. ಈಗ ಕ್ರಿಕೆಟ್ ದೇವರ ಮಗ ಬಂದಿದ್ದಾನೆ. ಇಂತಹ ಆಟಗಾರನನ್ನು ಪ್ರೋತ್ಸಾಹಿಸದೆ, ಇನ್ನೂ ತರಬೇತಿ ನೀಡಬೇಕು ಎಂದು ಹೇಳುವುದು ಸರಿಯಲ್ಲ. ಹೀಗೆ ಮಾಡಿದರೆ ಒಬ್ಬ ಪ್ರತಿಭಾವಂತ ಕ್ರಿಕೆಟಿಗನನ್ನು ನಾವೇ ಹಾಳು ಮಾಡಿದಂತಾಗುತ್ತದೆ. ತಂಡದ ಆಡಳಿತ ಮಂಡಳಿ ಮತ್ತು ಆಯ್ಕೆ ಸಮಿತಿ ಎಚ್ಚೆತ್ತುಕೊಳ್ಳಬೇಕು," ಎಂದು ಕೆ ಶ್ರೀಕಾಂತ್ ಹೇಳಿದ್ದಾರೆ.