DADA On Holiday: ಸುದೀಪ್ಗೆ ‘ಕಿಂಗ್’ ಬಿರುದು ನೀಡಿದ ‘ಜೋಗಿ’ ಪ್ರೇಮ್! ಶೋಮ್ಯಾನ್ ಮುಂದೆ ಕಿಚ್ಚ ಇಟ್ಟ ವಿಶೇಷ ಬೇಡಿಕೆ ಏನು?
DADA On Holiday Movie: ಮತ್ತೊಮ್ಮೆ ಕಿಚ್ಚ ಸುದೀಪ್ - ʻಜೋಗಿʼ ಪ್ರೇಮ್ ಒಂದಾಗಿದ್ದು, ʻದಾದಾ ಆನ್ ಹಾಲಿಡೇʼ ಸಿನಿಮಾ ಘೋಷಣೆ ಆಗಿದೆ. ಈ ಸಿನಿಮಾದಿಂದ ಸುದೀಪ್ಗೆ ‘ಕಿಂಗ್ ಕಿಚ್ಚ’ ಎಂಬ ಹೊಸ ಬಿರುದನ್ನು ಜೋಗಿ ಪ್ರೇಮ್ ನೀಡಿದ್ದಾರೆ.
-
ಸ್ಯಾಂಡಲ್ವುಡ್ನ ಬಾದ್ಷಾ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಶೋಮ್ಯಾನ್ ನಿರ್ದೇಶಕ ‘ಜೋಗಿ’ ಪ್ರೇಮ್ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ‘ದಾದಾ ಆನ್ ಹಾಲಿಡೇ’ (DADA On Holiday) ಸಿನಿಮಾ ಸದ್ಯ ಸ್ಯಾಂಡಲ್ವುಡ್ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದುವರೆಗೆ ಅಭಿಮಾನಿಗಳು ಸುದೀಪ್ ಅವರನ್ನು ‘ಬಾದ್ಷಾ’, ‘ಕಿಚ್ಚ’, ‘ಕರುನಾಡ ಚಕ್ರವರ್ತಿ’ ಎಂದು ಪ್ರೀತಿಯಿಂದ ಕರೆಯುತ್ತಿದ್ದರು.
ಇದೀಗ ನಿರ್ದೇಶಕ ಪ್ರೇಮ್ ಅವರು ಸುದೀಪ್ ಅವರಿಗೆ ‘ಕಿಂಗ್ ಕಿಚ್ಚ’ ಎಂಬ ಹೊಸ ಬಿರುದನ್ನು ನೀಡಿದ್ದು, ‘ದಾದಾ ಆನ್ ಹಾಲಿಡೇ’ ಚಿತ್ರದ ಟೈಟಲ್ ಕಾರ್ಡ್ನಲ್ಲಿ ಸುದೀಪ್ ಅವರ ಹೆಸರು ‘ಕಿಂಗ್ ಕಿಚ್ಚ ಸುದೀಪ್’ ಎಂದೇ ಮೂಡಿಬರಲಿದೆ ಎಂದು ಹೇಳಿದ್ದಾರೆ.
ವ್ಯಕ್ತಿತ್ವವನ್ನು ನೋಡಿ ಬಿರುದು ನೀಡಿದೆ
ಸುದೀಪ್ ಅವರಿಗೆ ಈ ಹೊಸ ಬಿರುದು ನೀಡಿದ ಹಿಂದಿನ ಕಾರಣವನ್ನು ವಿವರಿಸಿದ ಪ್ರೇಮ್, "ಸುದೀಪ್ ಅವರು ರಾಜ, ಮಹಾರಾಜ ಅಂತ ನಾನು ಈ ಹೆಸರು ಕೊಟ್ಟಿಲ್ಲ, ಬದಲಾಗಿ ಅವರ ವ್ಯಕ್ತಿತ್ವವನ್ನು ನೋಡಿ ನೀಡಿದ್ದೇನೆ. ಸುದೀಪ್ ಎಂದಿಗೂ ಯಾರೋ ಹೇಳಿಕೊಟ್ಟ ಮಾತು ಕೇಳುವವರಲ್ಲ ಮತ್ತು ತಮ್ಮ ಬಳಿಗೆ ಸಹಾಯ ಅಂತ ಬಂದವರನ್ನು ಬರಿಗೈಲಿ ಕಳಿಸಿದವರಲ್ಲ. ವ್ಯಕ್ತಿತ್ವ, ಸ್ವಾಭಿಮಾನ ಎಲ್ಲದರಲ್ಲೂ ಅವರದ್ದು ವಿಶೇಷವಾದ ನಿಲುವು. ಇದೇ ಕಾರಣಕ್ಕೆ ‘ಕಿಂಗ್ ಕಿಚ್ಚ’ ಎಂಬ ಬಿರುದು ನೀಡಿದ್ದೇನೆ" ಎಂದು ಹೇಳಿದ್ದಾರೆ.
ವರಮಹಾಲಕ್ಷ್ಮಿ ಹಬ್ಬಕ್ಕೆ ಸಿನಿಮಾ ರಿಲೀಸ್
"ಅಷ್ಟೇ ಅಲ್ಲ, ಈ ಸಿನಿಮಾದ ಕಥೆಗೂ ಅವರ ವ್ಯಕ್ತಿತ್ವವೇ ಸ್ಫೂರ್ತಿಯಾಗಿದೆ. ಅವರ ನಿಜ ಜೀವನದ ಗುಣಗಳನ್ನೇ ಪೋಣಿಸಿ ಒಂದು ಹಾಡನ್ನು ಕೂಡ ಬರೆದಿದ್ದು, ಅದು ಜನವರಿಯಲ್ಲಿ ಬಿಡುಗಡೆಯಾಗಲಿದೆ. ನಮ್ಮ ಸಿನಿಮಾದಲ್ಲಿ ಮಚ್ಚು-ಕೊಚ್ಚು ಅಥವಾ ಲವ್-ಗೋಳು ಇರುವುದಿಲ್ಲ; ಬದಲಾಗಿ ಸಂಗೀತ, ಕುಟುಂಬ ಮತ್ತು ಭಾವನೆಗಳನ್ನು ಒಳಗೊಂಡ ಮನೆ-ಮನಗಳಿಗೆ ಮುಟ್ಟುವ ಕಥೆ ಇರಲಿದೆ. ಶೀಘ್ರವೇ ಚಿತ್ರೀಕರಣ ಆರಂಭಿಸಿ, ಮುಂದಿನ ವರಮಹಾಲಕ್ಷ್ಮಿ ಹಬ್ಬಕ್ಕೆ ಸಿನಿಮಾವನ್ನು ತೆರೆಗೆ ತರುತ್ತೇವೆ" ಎಂದು ಪ್ರೇಮ್ ಭರವಸೆ ನೀಡಿದರು.
ಹೀರೋಯಿನ್ ಇರಲಿ ಎಂದು ಕಿಚ್ಚನ ಮನವಿ
ಇದೇ ವೇಳೆ ಮಾತನಾಡಿದ ಕಿಚ್ಚ ಸುದೀಪ್, ನಿರ್ದೇಶಕ ಪ್ರೇಮ್ ಮುಂದೆ ತಾವು ಇಟ್ಟಿದ್ದ ವಿಶೇಷ ಮನವಿಯೊಂದನ್ನು ಹಾಸ್ಯಮಿಶ್ರಿತವಾಗಿ ಹೇಳಿದರು. "ಈ ಸಿನಿಮಾದ ಚರ್ಚೆ ನಡೆಯುವಾಗ ಪ್ರೇಮ್ ಬಳಿ ಒಂದು ವಿಶೇಷ ಮನವಿ ಮಾಡಿದ್ದೆ, ‘ಈ ಸಿನಿಮಾದಲ್ಲಾದರೂ ನನಗೆ ಹೀರೋಯಿನ್ ಇರುವಂತೆ ಮಾಡು’ ಎಂದಿದ್ದೆ. ಏಕೆಂದರೆ ಇತ್ತೀಚೆಗೆ ನಾನು ನಟಿಸಿದ ‘ವಿಕ್ರಾಂತ್ ರೋಣ’, ‘ಮ್ಯಾಕ್ಸ್’ ಹಾಗೂ ‘ಮಾರ್ಕ್’ ಸಿನಿಮಾಗಳಲ್ಲಿ ನಾಯಕಿಯೇ ಇರಲಿಲ್ಲ, ಇದ್ದರೂ ರೊಮ್ಯಾಂಟಿಕ್ ಆಂಗಲ್ ಇರಲಿಲ್ಲ. ಹೀಗಾಗಿ ಈ ಚಿತ್ರದಲ್ಲಿ ನಾಯಕಿ ಹಾಗೂ ಒಂದಷ್ಟು ಹಾಡುಗಳನ್ನಾದರೂ ಇಡುವಂತೆ ಕೇಳಿಕೊಂಡಿದ್ದೇನೆ" ಎಂದು ನಗೆಚಟಾಕಿ ಹಾರಿಸಿದರು ಕಿಚ್ಚ.
ಮುಂದುವರಿದು ಪ್ರೇಮ್ ಅವರ ಸಿನಿಮಾ ಪ್ರೀತಿಯನ್ನು ಕೊಂಡಾಡಿದ ಸುದೀಪ್, "ಪ್ರೇಮ್ ಅವರಿಗೆ ಅಪಾರ ಶಕ್ತಿ, ಸಾಮರ್ಥ್ಯ ಮತ್ತು ಪ್ರತಿಭೆಯಿದೆ. ಅವರಂತೆ ಸಿನಿಮಾವನ್ನು ಪ್ರೀತಿಸುವವರು ಬಹಳ ಕಡಿಮೆ. ಸೆಟ್ನಲ್ಲಿದ್ದಾಗ ಸಿನಿಮಾ ಬಿಟ್ಟು ಬೇರೆ ಯಾವ ವಿಷಯವನ್ನೂ ಮಾತನಾಡದೆ ಬಹಳ ಶ್ರಮ ಹಾಕಿ ಕೆಲಸ ಮಾಡುತ್ತಾರೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ʻಜೋಗಿʼ ಪ್ರೇಮ್ - ʻಕಿಚ್ಚʼ ಸುದೀಪ್ ಕಾಂಬಿನೇಷನ್ನ ಹೊಸ ಸಿನಿಮಾ ಅನೌನ್ಸ್; ಟೈಟಲ್ ಏನ್ ಗೊತ್ತಾ?
ಸಿನಿಮಾ ನನಗೆ ದೇವಸ್ಥಾನ ಇದ್ದಂತೆ
ತಾವು ಸಿನಿಮಾದಿಂದ ದೂರ ಸರಿಯುತ್ತಿದ್ದಾರೆಯೇ ಎಂಬ ವದಂತಿಗಳಿಗೂ ಇದೇ ವೇದಿಕೆಯಲ್ಲಿ ಸುದೀಪ್ ಸ್ಪಷ್ಟನೆ ನೀಡಿದರು. "ಇತ್ತೀಚೆಗೆ ಒಬ್ಬರು ನನ್ನ ಬಳಿ ಬಂದು, ನೀವು ಸಿನಿಮಾ ಮಾಡುತ್ತಿದ್ದಿರಿ, ನಂತರ ಕ್ರಿಕೆಟ್, ಬಿಗ್ಬಾಸ್, ಅಡುಗೆ, ಈಗ ಕಾರ್ ರೇಸ್ ಎನ್ನುತ್ತಿದ್ದೀರಿ, ಸಿನಿಮಾದಿಂದ ದೂರವಾಗುತ್ತೀರಾ? ಎಂದು ಪ್ರಶ್ನಿಸಿದರು. ಅಂತಹ ಅನುಮಾನ ಇರುವವರಿಗೆ ನಾನು ಹೇಳುವುದಿಷ್ಟೇ. ಕ್ರಿಕೆಟ್, ಬಿಗ್ಬಾಸ್, ಅಡುಗೆ, ಕಿರುತೆರೆ, ಕಾರ್ ರೇಸ್ ಇವೆಲ್ಲವೂ ನನ್ನ ಹವ್ಯಾಸಗಳು ಮಾತ್ರ. ಆದರೆ ನನಗೆ ಸಮಾಜದಲ್ಲಿ ಒಂದು ಗುರುತು ತಂದುಕೊಟ್ಟಿದ್ದು ಸಿನಿಮಾ. ಸಿನಿಮಾ ನನಗೆ ದೇವಸ್ಥಾನವಿದ್ದಂತೆ, ಅದಕ್ಕೆ ನಾನು ಎಂದಿಗೂ ದ್ರೋಹ ಬಗೆಯುವುದಿಲ್ಲ" ಎಂದು ಸುದೀಪ್ ತಮ್ಮ ಸಿನಿಮಾ ಬದ್ಧತೆಯನ್ನು ಸಾರಿದರು.
ಭಾರಿ ನಿರೀಕ್ಷೆ ಹುಟ್ಟಿಸಿರುವ ‘ದಾದಾ ಆನ್ ಹಾಲಿಡೇ’ ಚಿತ್ರವನ್ನು ಆರುದ್ರ ಸಿನಿಮಾಸ್ ಮತ್ತು ಫೀನಿಕ್ಸ್ ಪ್ರೇಮ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ರೂಪೇಶ್ ಕುಮಾರ್ ಜಿ., ಶಶಿಕಿರಣ್ ಆರ್. ಮತ್ತು ರಕ್ಷಿತಾ ಪ್ರೇಮ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನವಿದ್ದು, ಈಗಾಗಲೇ ಬಿಡುಗಡೆಯಾಗಿರುವ ಟೈಟಲ್ ಟೀಸರ್ ಹಾಡಿಗೆ ಸ್ವತಃ ಪ್ರೇಮ್ ಅವರೇ ಸಾಹಿತ್ಯ ಬರೆದಿದ್ದಾರೆ. ಶೇಖರ್ ಚಂದ್ರು ಅವರ ಛಾಯಾಗ್ರಹಣ, ಶಿವಕುಮಾರ್ ಜೆ. ಅವರ ಕಲಾನಿರ್ದೇಶನ ಹಾಗೂ ಅಭಿಜಿತ್ ಮಹೇಶ್ ಅವರ ಸಂಭಾಷಣೆ ಈ ಚಿತ್ರಕ್ಕಿದೆ.