ಒಡಿಶಾ ಹೈಕೋರ್ಟ್ನ ಆದೇಶ ರದ್ದುಗೊಳಿಸಿದ ಸುಪ್ರೀಂ ಕೋರ್ಟ್; ನಿಗದಿಯಂತೆ ಹಾಕಿ ಇಂಡಿಯಾ ಚುನಾವಣೆ
Hockey India elections: ನ್ಯಾಯಮೂರ್ತಿಗಳಾದ ಕೆ. ವಿ. ವಿಶ್ವನಾಥನ್ ಮತ್ತು ಅರುಣ್ ಪಲ್ಲಿ ಅವರನ್ನೊಳಗೊಂಡ ಪೀಠವು, ನವೆಂಬರ್ 6 ಮತ್ತು 18, 2026 ರಂದು ಹೈಕೋರ್ಟ್ ನೀಡಿದ ಆದೇಶಗಳನ್ನು ಪ್ರಶ್ನಿಸಿ 'ಹಾಕಿ ಇಂಡಿಯಾ' ಸಲ್ಲಿಸಿದ್ದ ವಿಶೇಷ ಅನುಮತಿ ಅರ್ಜಿಗಳನ್ನು ಇತ್ಯರ್ಥಪಡಿಸಿತು.
Supreme Court -
ನವದೆಹಲಿ, ನ.28: ಡಿಸೆಂಬರ್ 5 ರಂದು ಹಾಕಿ ಇಂಡಿಯಾ ಚುನಾವಣೆ ನಡೆಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದ್ದು, ಚುನಾವಣೆಯನ್ನು ಸ್ಥಗಿತಗೊಳಿಸಿ ಒಡಿಶಾ ಹೈಕೋರ್ಟ್ ಹೊರಡಿಸಿದ್ದ ಎರಡು ಆದೇಶಗಳನ್ನು ರದ್ದುಗೊಳಿಸಿದೆ. ಚುನಾವಣೆಗಳನ್ನು ವಿಳಂಬ ಮಾಡುವುದರಿಂದ ಎಫ್ಐಎಚ್ನ ಅಂಗಸಂಸ್ಥೆ ರದ್ದು ಸೇರಿದಂತೆ ಗಂಭೀರ ಪರಿಣಾಮಗಳನ್ನು ಎದುರಿಸಬಹುದು ಎಂದು ನ್ಯಾಯಾಲಯ ಎಚ್ಚರಿಸಿದೆ.
ನ್ಯಾಯಮೂರ್ತಿಗಳಾದ ಕೆ. ವಿ. ವಿಶ್ವನಾಥನ್ ಮತ್ತು ಅರುಣ್ ಪಲ್ಲಿ ಅವರನ್ನೊಳಗೊಂಡ ಪೀಠವು, ನವೆಂಬರ್ 6 ಮತ್ತು 18, 2026 ರಂದು ಹೈಕೋರ್ಟ್ ನೀಡಿದ ಆದೇಶಗಳನ್ನು ಪ್ರಶ್ನಿಸಿ 'ಹಾಕಿ ಇಂಡಿಯಾ' ಸಲ್ಲಿಸಿದ್ದ ವಿಶೇಷ ಅನುಮತಿ ಅರ್ಜಿಗಳನ್ನು ಇತ್ಯರ್ಥಪಡಿಸಿತು. ಅಲ್ಲದೆ, ಸುಪ್ರೀಂ ಕೋರ್ಟ್ ಬಾಕಿ ಇದ್ದ ರಿಟ್ ಅರ್ಜಿಯನ್ನೂ ಇತ್ಯರ್ಥಪಡಿಸಿದ್ದು, ಈಗಾಗಲೇ ಘೋಷಿಸಲಾದ ವೇಳಾಪಟ್ಟಿಯ ಪ್ರಕಾರವೇ ಚುನಾವಣೆಗಳು ನಡೆಯಲು ಅನುಮತಿ ನೀಡಿದೆ. ಆದಾಗ್ಯೂ, ಕೇವಲ ಒಂದು ವಾರದ ಅವಧಿಯಲ್ಲಿ ಈ ಸಂಪೂರ್ಣ ಪ್ರಕ್ರಿಯೆಯು ಹೇಗೆ ಪೂರ್ಣಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
ತನ್ನ ಹೇಳಿಕೆಯಲ್ಲಿ, ನಿಗದಿಯಾದಂತೆಯೇ ಚುನಾವಣೆಗಳನ್ನು ನಡೆಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ ಎಂದು 'ಹಾಕಿ ಇಂಡಿಯಾ' ತಿಳಿಸಿದೆ. ಕ್ರೀಡೆಯ ಹಿತಾಸಕ್ತಿಗೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳಬೇಕೆಂದು ನ್ಯಾಯಾಲಯವು ಒತ್ತಿಹೇಳಿದೆ. ಅಲ್ಲದೆ, ಚುನಾವಣೆಗಳನ್ನು ನಡೆಸಲು ವಿಫಲವಾದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಅಂತರರಾಷ್ಟ್ರೀಯ ಹಾಕಿ ಒಕ್ಕೂಟವು ಮಾನ್ಯತೆಯನ್ನು ರದ್ದುಗೊಳಿಸುವ ಸಾಧ್ಯತೆಯೂ ಇದೆ ಎಂದು ಸುಪ್ರೀಂ ಕೋರ್ಟ್ ಎಚ್ಚರಿಸಿದೆ.
ಭಾರತದ ಕಳಪೆ ಫೀಲ್ಡಿಂಗ್ ಕಂಡು ಸುನಿಲ್ ಗವಾಸ್ಕರ್ ಕೆಂಡಾಮಂಡಲ; ವಿಡಿಯೊ ವೈರಲ್
"ಗೌರವಾನ್ವಿತ ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಮತ್ತು ಗೌರವಾನ್ವಿತ ನ್ಯಾಯಮೂರ್ತಿ ಅರುಣ್ ಪಲ್ಲಿ ಅವರನ್ನು ಒಳಗೊಂಡ ಗೌರವಾನ್ವಿತ ಸುಪ್ರೀಂ ಕೋರ್ಟ್, 'ಹಾಕಿ ಇಂಡಿಯಾ'ದ ಚುನಾವಣಾ ಪ್ರಕ್ರಿಯೆಗೆ ತಡೆ ನೀಡಿದ್ದ ಕಟಕ್ನ ಗೌರವಾನ್ವಿತ ಒಡಿಶಾ ಹೈಕೋರ್ಟ್ನ 06.11.2026 ಮತ್ತು 18.11.2026 ದಿನಾಂಕದ ಆದೇಶಗಳನ್ನು ಪ್ರಶ್ನಿಸಿ 'ಹಾಕಿ ಇಂಡಿಯಾ' ಸಲ್ಲಿಸಿದ್ದ ಎಸ್ಎಲ್ಪಿ (ಸಿ) ಸಂಖ್ಯೆಗಳು 40972–40974/2026 ಅನ್ನು ಇಂದು ಇತ್ಯರ್ಥಪಡಿಸಿದೆ" ಎಂದು ಹಾಕಿ ಇಂಡಿಯಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
"ಹಾಕಿ ಇಂಡಿಯಾ ಚುನಾವಣೆಗಳು ನಿಗದಿಯಾದಂತೆ 2026ರ ಡಿಸೆಂಬರ್ 5ರಂದು ನಡೆಯಲು ಗೌರವಾನ್ವಿತ ಸುಪ್ರೀಂ ಕೋರ್ಟ್ ದಾರಿ ಮಾಡಿಕೊಟ್ಟಿದೆ," ಎಂದು ಹಾಕಿ ಇಂಡಿಯಾದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ನಿರ್ಧಾರವು ಡಿಸೆಂಬರ್ 5 ರಂದು ನಡೆಯಲಿರುವ ಚುನಾವಣೆಗಳ ಸುತ್ತ ಇದ್ದ ಅನಿಶ್ಚಿತತೆಗೆ ತೆರೆ ಎಳೆದಿದೆ. 'ಹಾಕಿ ಇಂಡಿಯಾ'ದಲ್ಲಿನ ಆಂತರಿಕ ವಿವಾದದಿಂದಾಗಿ ಈ ಚುನಾವಣೆಗಳು ಗೊಂದಲಕ್ಕೆ ಸಿಲುಕಿದ್ದವು.