ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

‘ಕೊನೆಪಕ್ಷ ನಟಿ ವಾಮಿಕಾಗೆ ಒಂದು ಸ್ಕೂಟಿಯನ್ನಾದ್ರೂ ಕೊಡಿ..’: ‘ಡಿಸಿ’ ಸಿನಿಮಾ ನಿರ್ಮಾಪಕರ ವಿರುದ್ಧ ತಿರುಗಿಬಿದ್ದ ಅಭಿಮಾನಿಗಳು, ಅಷ್ಟಕ್ಕೂ ಆಗಿದ್ದೇನು?

DC Movie Success: ʻಡಿಸಿʼ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡ ಹಿಟ್‌ ಎನಿಸಿಕೊಂಡ ಹಿನ್ನೆಲೆಯಲ್ಲಿ ನಿರ್ಮಾಪಕ ಕಲಾನಿಧಿ ಮಾರನ್ ಚಿತ್ರತಂಡಕ್ಕೆ ಐಷಾರಾಮಿ ಬಿಎಂಡಬ್ಲ್ಯು ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಆದರೆ ಚಿತ್ರದ ನಾಯಕಿ ವಾಮಿಕಾ ಗಬ್ಬಿ ಅವರನ್ನು ಸಂಪೂರ್ಣ ಕಡೆಗಣಿಸಲಾಗಿದ್ದು, ನಟಿಯರಿಗೂ ಗೌರವ ನೀಡಿ ಎಂದು ನಿರ್ಮಾಪಕರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಗರಂ ಆಗಿದ್ದಾರೆ.

ʻನಟಿ ವಾಮಿಕಾಗೆ ಸ್ಕೂಟಿಯಾದ್ರೂ ಕೊಡಿʼ; DC ನಿರ್ಮಾಪಕರ ಮೇಲೆ ಫ್ಯಾನ್ಸ್‌ ಗರಂ

-

Avinash GR
Avinash GR Sep 11, 2026 6:30 PM

ಕಾಲಿವುಡ್‌ನ ಖ್ಯಾತ ನಿರ್ದೇಶಕ ಲೋಕೇಶ್ ಕನಕರಾಜ್ ನಾಯಕನಾಗಿ ಪಾದಾರ್ಪಣೆ ಮಾಡಿರುವ ಹಾಗೂ ಅರುಣ್ ಮಾದೇಶ್ವರನ್ ನಿರ್ದೇಶನದ ‘ಡಿಸಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡಿದೆ. ಸುಮಾರು 25 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರವು ವಿಶ್ವಾದ್ಯಂತ ₹100 ಕೋಟಿಗೂ ಅಧಿಕ ಕಲೆಕ್ಷನ್ ಬಾಚಿ ಬ್ಲಾಕ್‌ಬಸ್ಟರ್ ಎನಿಸಿಕೊಂಡಿದೆ.

ಈ ಅಭೂತಪೂರ್ವ ಗೆಲುವಿನ ಹಿನ್ನೆಲೆಯಲ್ಲಿ ಚಿತ್ರದ ನಿರ್ಮಾಪಕ, ಸನ್ ಪಿಕ್ಚರ್ಸ್ ಮುಖ್ಯಸ್ಥ ಕಲಾನಿಧಿ ಮಾರನ್ ಅವರು ಚಿತ್ರತಂಡದ ಪ್ರಮುಖರಿಗೆ ದುಬಾರಿ ಬಿಎಂಡಬ್ಲ್ಯು (BMW) ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಆದರೆ ಚಿತ್ರದ ನಾಯಕಿ ವಾಮಿಕಾ ಗಬ್ಬಿ ಅವರಿಗೆ ಯಾವುದೇ ಉಡುಗೊರೆ ನೀಡದೆ ಕಡೆಗಣಿಸಿರುವುದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಮೂವರಿಗೂ ಐಷಾರಾಮಿ ಕಾರು

ಸನ್ ಪಿಕ್ಚರ್ಸ್ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ, ಕಲಾನಿಧಿ ಮಾರನ್ ಅವರು ನಾಯಕ ಲೋಕೇಶ್ ಕನಕರಾಜ್, ನಿರ್ದೇಶಕ ಅರುಣ್ ಮಾದೇಶ್ವರನ್ ಮತ್ತು ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರಿಗೆ ಹೊಚ್ಚ ಹೊಸ ಬಿಎಂಡಬ್ಲ್ಯು ಐಷಾರಾಮಿ ಕಾರುಗಳ ಕೀಲಿಕೈ ಹಸ್ತಾಂತರಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿತ್ತು.

ಈ ಪೋಸ್ಟ್‌ಗೆ, "ಬ್ಲಾಕ್‌ಬಸ್ಟರ್ #DC ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ಕಲಾನಿಧಿ ಮಾರನ್ ಅವರು ಅರುಣ್, ಲೋಕೇಶ್ ಹಾಗೂ ಅನಿರುದ್ಧ್ ಅವರಿಗೆ ಅಭಿನಂದನೆ ಸಲ್ಲಿಸಿ, ಹೊಚ್ಚ ಹೊಸ BMW ಕಾರುಗಳನ್ನು ಉಡುಗೊರೆಯಾಗಿ ನೀಡಿದರು" ಎಂದು ಬರೆದುಕೊಳ್ಳಲಾಗಿತ್ತು. ಸದ್ಯ ಈ ವಿಡಿಯೋ ಅಂತರ್ಜಾಲದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದ್ದಂತೆ, ಚಿತ್ರದ ನಾಯಕಿಯರಿಗೆ ಕನಿಷ್ಠ ಗೌರವವೂ ಸಿಕ್ಕಿಲ್ಲ ಎಂಬ ಅಸಮಾಧಾನದ ಕಿಡಿ ಹೊತ್ತಿಕೊಂಡಿದೆ.

ಸಂಜನಾಗೆ ಸೈಕಲ್‌ ಕೊಡಿ

‘ಡಿಸಿ’ ಚಿತ್ರದಲ್ಲಿ ನಾಯಕಿ ವಾಮಿಕಾ ಗಬ್ಬಿ ತಮ್ಮ ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರ ಹಾಗೂ ವಿಮರ್ಶಕರ ಅಪಾರ ಮೆಚ್ಚುಗೆ ಗಳಿಸಿದ್ದರು. ಚಿತ್ರದ ಬೆನ್ನೆಲುಬಾಗಿ ನಿಂತು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರೂ ಅವರಿಗೆ ಯಾವುದೇ ಉಡುಗೊರೆ ನೀಡದಿರುವುದಕ್ಕೆ ಅಭಿಮಾನಿಗಳು ನಿರ್ಮಾಪಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಅಟ್ಲೀ, ಲೋಕೇಶ್‌ ಕನಕರಾಜ್‌ ನಂತರ ಮಲಯಾಳಂನ ಬೇಸಿಲ್ ಜೋಸೆಫ್ ಜೊತೆ ಕೈಜೋಡಿಸಿದ ಅಲ್ಲು ಅರ್ಜುನ್;‌ ಆ ಒಂದು ಪೋಸ್ಟ್‌ನಿಂದ ಎಲ್ಲವೂ ಬಯಲು

ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ವಿಡಿಯೋ ಹಂಚಿಕೊಂಡ ಅಭಿಮಾನಿಯೊಬ್ಬರು, "ಹೀರೋ, ಡೈರೆಕ್ಟರ್‌ಗೆ ಕಾರು ಕೊಟ್ಟಿದ್ದೀರಿ, ಕೊನೆಪಕ್ಷ ನಟಿ ವಾಮಿಕಾಗೆ ಒಂದು ಸ್ಕೂಟಿಯನ್ನಾದ್ರೂ ಕೊಡಿ.." ಎಂದು ವ್ಯಂಗ್ಯವಾಡಿದ್ದಾರೆ. ಚಿತ್ರದಲ್ಲಿ ನಟಿಸಿದ ಮತ್ತೊಬ್ಬ ನಟಿ ಸಂಜನಾ ಕೃಷ್ಣಮೂರ್ತಿ ಅವರಿಗೂ ಗಿಫ್ಟ್ ಸಿಗದ ಬಗ್ಗೆ ಪ್ರಸ್ತಾಪಿಸಿದ ಮತ್ತೊಬ್ಬ ಬಳಕೆದಾರರು, "ಹಾಗಾದರೆ ಸಂಜನಾಗೆ ಸೈಕಲ್ ಕೊಡಬೇಕಿತ್ತಾ? ಚಿತ್ರರಂಗದಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣಬೇಕು" ಎಂದು ಕಿಡಿಕಾರಿದ್ದಾರೆ.

ನಟಿಯರಿಗೆ ಗೌರವ ಸಿಗುವುದಿಲ್ಲ

ರೆಡ್ಡಿಟ್ ಹಾಗೂ ಟ್ವಿಟರ್‌ನಲ್ಲಿ ನೆಟ್ಟಿಗರು ಸಾಲು ಸಾಲು ಕಾಮೆಂಟ್‌ಗಳ ಮೂಲಕ ಚಿತ್ರತಂಡದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. "ದಕ್ಷಿಣ ಭಾರತದಲ್ಲಿ ಸಿನಿಮಾ ಹಿಟ್ ಆದ ಬಳಿಕ ಕಾರುಗಳನ್ನು ಉಡುಗೊರೆಯಾಗಿ ನೀಡುವುದು ಒಂದು ಫ್ಯಾಷನ್ ಆಗಿದೆ. ಆದರೆ ಹೀಗೆ ಸಿಗುವ ಇಷ್ಟೊಂದು ಕಾರುಗಳನ್ನು ಇವರು ಏನು ಮಾಡುತ್ತಾರೆ? ಏನೇ ಇರಲಿ, ಈ ಸಿನಿಮಾದ ಜೀವಾಳವಾಗಿದ್ದ ವಾಮಿಕಾ ಗಬ್ಬಿ ಅವರಿಗೆ ಕನಿಷ್ಠ ಮನ್ನಣೆಯೂ ಸಿಗದಿರುವುದು ತೀರಾ ನಿರಾಸೆ ತಂದಿದೆ" ಎಂದು ಹಲವರು ಬರೆದುಕೊಂಡಿದ್ದಾರೆ.

ಇನ್ನೂ ಕೆಲವರು "ಇದು ಕಾಲಿವುಡ್, ಇಲ್ಲಿ ಮಹಿಳಾ ಕಲಾವಿದರಿಗೆ ಅರ್ಹ ಗೌರವ ಸಿಗುವುದಿಲ್ಲ. ಇಡೀ ಸಿನಿಮಾವನ್ನು ಹೆಗಲ ಮೇಲೆ ಹೊತ್ತು ಸಾಗಿಸಿದ್ದು ವಾಮಿಕಾ, ಅವರ ಪಾತ್ರವೇ ಅತ್ಯುತ್ತಮವಾಗಿತ್ತು" ಎಂದು ಅಭಿಪ್ರಾಯಪಟ್ಟಿದ್ದಾರೆ. ನಾಯಕಿಯರ ಕಡೆಗಣನೆಗೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದ್ದರೂ, ಸನ್ ಪಿಕ್ಚರ್ಸ್ ಸಂಸ್ಥೆಯಾಗಲಿ ಅಥವಾ ಚಿತ್ರತಂಡವಾಗಲಿ ಈವರೆಗೆ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ.