ಇನ್ಮುಂದೆ ಫಾಸ್ಟ್‌ಟ್ಯಾಗ್ ಬ್ಯಾಂಕ್ ಬದಲಾಯಿಸುವುದು ತೀರಾ ಸುಲಭ: 'OneTag' ವ್ಯವಸ್ಥೆ ಪರಿಚಯಿಸಿದ ನಿತಿನ್ ಗಡ್ಕರಿ!
ಫಾಸ್ಟ್‌ಟ್ಯಾಗ್ ಬಳಕೆದಾರರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. ಬ್ಯಾಂಕ್ ಸೇವೆ ಇಷ್ಟವಾಗದಿದ್ದರೆ ವಾಹನದ ಮೇಲಿರುವ ಫಾಸ್ಟ್‌ಟ್ಯಾಗ್ ಸ್ಟಿಕ್ಕರ್ ಬದಲಾಯಿಸದೇ, ಮೊಬೈಲ್ ಸಿಮ್‌ಗಳಂತೆ ಬ್ಯಾಂಕ್ ಅನ್ನು ಸುಲಭವಾಗಿ ಬದಲಾಯಿಸುವ 'OneTag' ಎಂಬ ನೂತನ ಪೋರ್ಟಬಿಲಿಟಿ ಸೌಲಭ್ಯಕ್ಕೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಚಾಲನೆ ನೀಡಿದ್ದಾರೆ.
ಸಂಗ್ರಹ ಚಿತ್ರ -
ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನ ಸವಾರರು ಮತ್ತು ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಬಳಸುವ ಗ್ರಾಹಕರ ಅನುಕೂಲಕ್ಕಾಗಿ ಕೇಂದ್ರ ಸಾರಿಗೆ ಇಲಾಖೆಯು 'OneTag' ಎಂಬ ಹೊಸ ಹೆಜ್ಜೆಯನ್ನಿಟ್ಟಿದೆ. ಇಷ್ಟು ದಿನ ಒಂದು ಬ್ಯಾಂಕ್‌ನ ಸೇವೆಯಲ್ಲಿ ತೊಂದರೆ ಎದುರಾದರೆ ಅಥವಾ ತಾಂತ್ರಿಕ ಅಡಚಣೆಗಳಿದ್ದರೆ ಗ್ರಾಹಕರಿಗೆ ಬ್ಯಾಂಕ್ ಬದಲಾಯಿಸುವುದು ಅಷ್ಟೊಂದು ಸುಲಭವಾಗಿರಲಿಲ್ಲ, ಆದರೆ ಈ ಹೊಸ ಉಪಕ್ರಮವು ಮೊಬೈಲ್ ಸಿಮ್ ಬದಲಾಯಿಸುವಷ್ಟೇ ಸುಲಭವಾದ ಪರ್ಯಾಯ ಮಾರ್ಗವನ್ನು ಪರಿಚಯಿಸಿದೆ.
ವಾಹನದ ಮೇಲೆ ಈಗಾಗಲೇ ಇರುವ ಟ್ಯಾಗ್ ಗುರುತನ್ನು ಹಾಗೆಯೇ ಉಳಿಸಿಕೊಂಡು, ʼರಾಜಮಾರ್ಗಯಾತ್ರೆʼ ಆಪ್ ಮೂಲಕವೇ ಹೊಸ ಬ್ಯಾಂಕ್‌ನ ಸೇವೆಗೆ ಪರಿವರ್ತನೆಗೊಳ್ಳುವ ಅವಕಾಶವನ್ನು ಇದು ಕಲ್ಪಿಸುತ್ತಿದೆ. ಇದರಿಂದಾಗಿ ಹಣಕಾಸಿನ ವಹಿವಾಟು ನಿರ್ವಹಣೆ ಸುಲಭವಾಗುವುದಲ್ಲದೆ, ಅನಗತ್ಯ ಹೆಚ್ಚುವರಿ ವೆಚ್ಚ ಮತ್ತು ಹೊಸ ಟ್ಯಾಗ್‌ಗಾಗಿ ಕಾಯುವ ಶ್ರಮ ಸಂಪೂರ್ಣವಾಗಿ ಶ್ರಮ ತಪ್ಪಲಿದೆ.
ʼOneTag' ಎಂದರೇನು ಮತ್ತು ಹೇಗೆ ಕೆಲಸ ಮಾಡುತ್ತದೆ?
ಇದು ಫೋನ್ ನಂಬರ್ ಪೋರ್ಟಬಿಲಿಟಿ (MNP) ತರಹವೇ ಕೆಲಸ ಮಾಡುವ ಸೌಲಭ್ಯವಾಗಿದೆ. ಈ ಹಿಂದೆ ಫಾಸ್ಟ್‌ಟ್ಯಾಗ್ ನೀಡಿರುವ ಬ್ಯಾಂಕ್ ಸೇವೆಯಲ್ಲಿ ಅತೃಪ್ತಿಯಿದ್ದರೆ ಅಥವಾ ಬ್ಯಾಂಕ್ ಬದಲಾಯಿಸಬೇಕೆಂದರೆ, ಹಳೆಯ ಫಾಸ್ಟ್‌ಟ್ಯಾಗ್ ಖಾತೆಯನ್ನು ಬಂದ್ ಮಾಡಿ, ವಾಹನದ ಗಾಜಿನ ಮೇಲಿರುವ ಸ್ಟಿಕ್ಕರ್ ತೆಗೆದು ಹೊಸ ಬ್ಯಾಂಕ್‌ನಿಂದ ಹೊಸ ಫಾಸ್ಟ್‌ಟ್ಯಾಗ್ ಅಂಟಿಸಬೇಕಾಗಿತ್ತು. ಈಗ ವಾಹನದ ಗಾಜಿನ ಮೇಲಿರುವ ಫಾಸ್ಟ್‌ಟ್ಯಾಗ್ ಸ್ಟಿಕ್ಕರ್ ಬದಲಾಯಿಸುವ ಅಗತ್ಯವಿಲ್ಲ. ಅದೇ ಟ್ಯಾಗ್ ಐಡಿ ಮತ್ತು ವಾಹನ ಸಂಖ್ಯೆಯೊಂದಿಗೆ ನಿಮ್ಮ ಫಾಸ್ಟ್‌ಟ್ಯಾಗ್ ಅನ್ನು ಹೊಸ ಬ್ಯಾಂಕ್‌ಗೆ ಸುಲಭವಾಗಿ ಲಿಂಕ್ ಮಾಡಿಕೊಳ್ಳಬಹುದು.
ಈ ಸೇವೆಯನ್ನು ಎಲ್ಲಿ ಮತ್ತು ಹೇಗೆ ಪಡೆಯುವುದು?
ಈ ಸೌಲಭ್ಯವು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) 'ರಾಜಮಾರ್ಗಯಾತ್ರೆ' (Rajmargyatra) ಮೊಬೈಲ್ ಆಪ್ ಮೂಲಕ ಲಭ್ಯವಿರುತ್ತದೆ. ನಿಮ್ಮ ಮೊಬೈಲ್‌ನಲ್ಲಿ 'Rajmargyatra' ಆಪ್ ಓಪನ್ ಮಾಡಿ. ಪೋರ್ಟಬಿಲಿಟಿ (Portability) ವಿಭಾಗಕ್ಕೆ ಹೋಗಿ, ಸೆಕ್ಯೂರ್ ವೆರಿಫಿಕೇಶನ್ ಪೂರ್ಣಗೊಳಿಸಿ. ನಿಯಮಗಳಿಗೆ ಒಪ್ಪಿಗೆ ನೀಡಿ, ಪಟ್ಟಿಯಲ್ಲಿ ನಿಮಗೆ ಬೇಕಾದ ಹೊಸ ಬ್ಯಾಂಕ್ ಅನ್ನು ಆಯ್ಕೆ ಮಾಡಿಕೊಳ್ಳಿ. ಹೊಸ ಬ್ಯಾಂಕ್‌ನೊಂದಿಗೆ ಪ್ರಕ್ರಿಯೆ ಮುಗಿದ ತಕ್ಷಣ ನಿಮ್ಮ ಫಾಸ್ಟ್‌ಟ್ಯಾಗ್ ಹೊಸ ಬ್ಯಾಂಕ್‌ಗೆ ವರ್ಗಾವಣೆಯಾಗುತ್ತದೆ.
ಬ್ಯಾಂಕ್‌ಗಳ ಜವಾಬ್ದಾರಿ
ನೀವು ಬ್ಯಾಂಕ್ ಬದಲಾಯಿಸುವಾಗ ಹಳೆಯ ಅಕೌಂಟ್‌ನಲ್ಲಿರುವ ವಾಲೆಟ್ ಬ್ಯಾಲೆನ್ಸ್, ಮರುಪಾವತಿ ಮತ್ತು ಬಾಕಿ ಇರುವ ವಹಿವಾಟುಗಳನ್ನು ಬ್ಯಾಂಕ್ ಕ್ಲಿಯರ್ ಮಾಡುತ್ತದೆ. ಪೋರ್ಟಬಿಲಿಟಿ ಪೂರ್ಣಗೊಂಡ ನಂತರ ಗ್ರಾಹಕರನ್ನು ತನ್ನ ವ್ಯವಸ್ಥೆಗೆ ಸೇರಿಸಿಕೊಂಡು, ಮುಂದಿನ ಫಾಸ್ಟ್‌ಟ್ಯಾಗ್ ಸೇವೆಗಳನ್ನು ಒದಗಿಸುತ್ತದೆ. 'ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ' (NPCI) ಮತ್ತು IHMCL ಜಂಟಿಯಾಗಿ ಈ ತಾಂತ್ರಿಕ ಸೌಲಭ್ಯವನ್ನು ಅಭಿವೃದ್ಧಿಪಡಿಸಿ ನಿರ್ವಹಿಸುತ್ತಿವೆ.
ವಾಹನ ಸವಾರರಿಗೆ ಸಿಗುವ ಪ್ರಯೋಜನಗಳೇನು?
ವಾಹನ ಸವಾರರು ಇನ್ನುಮುಂದೆ ತಮ್ಮ ವಾಹನದ ಮೇಲಿರುವ ಸ್ಟಿಕರ್ ತೆಗೆಯುವ ಕಿರಿಕಿರಿ ಇರುವುದಿಲ್ಲ. ವಾಹನದ ಗಾಜಿಗೆ ಪದೇ ಪದೇ ಹೊಸ ಸ್ಟಿಕ್ಕರ್ ಅಂಟಿಸುವ ಗೊಂದಲ ಮತ್ತು ಶ್ರಮ ಉಳಿಯುತ್ತದೆ. ಉತ್ತಮ ಆಫರ್, ಕಡಿಮೆ ಶುಲ್ಕ ಮತ್ತು ಉತ್ತಮ ಸೇವೆ ನೀಡುವ ಬ್ಯಾಂಕ್‌ಗೆ ಗ್ರಾಹಕರು ಯಾವಾಗ ಬೇಕಾದರೂ ಬದಲಾಗಬಹುದು. ಹೊಸ ಟ್ಯಾಗ್ ಖರೀದಿಸುವ ವೆಚ್ಚ ಮತ್ತು ಅದಕ್ಕಾಗಿ ಕಾಯುವ ಸಮಯ ಸಂಪೂರ್ಣ ಉಳಿಯುತ್ತದೆ.
ಮತ್ತೊಂದೆಡೆ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ದೇಶಾದ್ಯಂತ 121 ಟೋಲ್ ಪ್ಲಾಜಾಗಳಿಗೆ ಫಾಸ್ಟ್‌ಟ್ಯಾಗ್ ʼಲೋಕಲ್ ಪಾಸ್ʼ ಸೌಲಭ್ಯವನ್ನು ವಿಸ್ತರಿಸಿದೆ. ಅರ್ಹ ವಾಹನ ಸವಾರರು ʼರಾಜಮಾರ್ಗ ಯಾತ್ರೆʼ ಮೊಬೈಲ್ ಆಪ್ ಮೂಲಕ ಆನ್‌ಲೈನ್‌ಲ್ಲೇ ಮಾಸಿಕ ಲೋಕಲ್ ಪಾಸ್‌ಗೆ ನೋಂದಾಯಿಸಿಕೊಳ್ಳಬಹುದು.